Site icon Vistara News

Lok Sabha Election 2024: ಅಸ್ಸಾಂನಲ್ಲಿ ಕಾಂಗ್ರೆಸ್‌ಗೆ ಆಘಾತ; ಮೂವರು ನಾಯಕರು ಬಿಜೆಪಿ ಸೇರ್ಪಡೆ

Lok Sabha Election 2024

Lok Sabha Election 2024

ಗುವಾಹಟಿ: ಲೋಕಸಭಾ ಚುನಾವಣೆ (Lok Sabha Election 2024)ಗೆ ಬೆರಳೆಣಿಕೆಯಷ್ಟೆ ದಿನಗಳು ಬಾಕಿ ಉಳಿದ್ದಿದ್ದು, ದೇಶಾದ್ಯಂತ ಪ್ರಚಾರದ ಭರಾಟೆ ಜೋರಾಗಿದೆ. ಜತೆಗೆ ಪಕ್ಷಾಂತರವೂ ಎಗ್ಗಿಲ್ಲದೆ ನಡೆದಿದೆ. ತೀರಾ ಇತ್ತೀಚಿನ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್‌ (Congress)ನ ಪ್ರಮುಖ ನಾಯಕರು ಬಿಜೆಪಿ (BJP) ಸೇರ್ಪಡೆಗೊಂಡಿದ್ದಾರೆ. ಅಸ್ಸಾಂ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಮೂವರು ಕಾಂಗ್ರೆಸ್ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿ ಆಡಳಿತಾರೂಢ ಬಿಜೆಪಿಗೆ ಸೇರಿದ್ದಾರೆ.

ಈ ಮೂವರ ಪೈಕಿ ಇಬ್ಬರು ಜೋರ್ಹತ್‌ನ ನಾಯಕ ಗೌರವ್ ಗೊಗೊಯ್ ಅವರ ನಿಕಟ ಸಹವರ್ತಿಗಳು. ಮೂರನೆಯವರು ಚರೈಡಿಯೋ ಜಿಲ್ಲಾ ಘಟಕದ ಉನ್ನತ ನಾಯಕ. ಈ ಪೈಕಿ ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿ (APCC) ಪ್ರಧಾನ ಕಾರ್ಯದರ್ಶಿ ಮಾನಶ್ ಬೋರಾ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ಹೊಸ ಅವಕಾಶಗಳನ್ನು ಅನ್ವೇಷಿಸಲು ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ.

“ಜನರು ಮತ್ತು ನಾನು ಪ್ರತಿನಿಧಿಸುವ ರಾಜ್ಯದ ಕಲ್ಯಾಣಕ್ಕಾಗಿ ಹೊಸ ಅವಕಾಶಗಳು ಮತ್ತು ಮಾರ್ಗಗಳನ್ನು ಅನ್ವೇಷಿಸುವ ಸಮಯ ಇದು ಎನ್ನುವುದಾಗಿ ನಂಬುತ್ತೇನೆ” ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ (All India Congress Committee)ಯ ಸದಸ್ಯರೂ ಆಗಿದ್ದ ಮಾನಶ್ ಬೋರಾ ತಿಳಿಸಿದ್ದಾರೆ.

ಎಪಿಸಿಸಿ ಕಾರ್ಯದರ್ಶಿ ಗೌರವ್ ಸೋಮಾನಿ ಅವರು ರಾಜ್ಯ ಪಕ್ಷದ ಮುಖ್ಯಸ್ಥರಿಗೆ ನೀಡಿದ ರಾಜೀನಾಮೆಯಲ್ಲಿ, “ಪ್ರಸ್ತುತ ಅಸ್ಸಾಂ ಕಾಂಗ್ರೆಸ್‌ನಲ್ಲಿ ಅಸಾಮಾಧಾನವಿದೆ. ಇದು ರಾಜ್ಯದ ಜನರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ವಿಫಲವಾಗಿದೆ” ಎಂದು ಹೇಳಿದ್ದಾರೆ. ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡವರಲ್ಲಿ ಚರೈಡಿಯೋ ಜಿಲ್ಲಾ ಕಾಂಗ್ರೆಸ್ ಸಮಿತಿಯ ನಾಯಕ ಅನುಜ್ ಬರ್ಕಟಕಿ ಕೂಡ ಸೇರಿದ್ದಾರೆ.

ವಿಶೇಷ ಎಂದರೆ, ಮಾನಶ್ ಬೋರಾ ಮತ್ತು ಅನುಜ್ ಬರ್ಕಟಕಿ ರಾಜ್ಯದ ಮಾಜಿ ಕಾಂಗ್ರೆಸ್ ಸಚಿವರ ಪುತ್ರರು. ರಾಜ್ಯ ಬಿಜೆಪಿ ಅಧ್ಯಕ್ಷ ಭಬೇಶ್ ಕಲಿಯಾ, ಕ್ಯಾಬಿನೆಟ್ ಸಚಿವರಾದ ಪಿಜುಶ್ ಹಜಾರಿಕಾ ಮತ್ತು ಜಯಂತ ಮಲ್ಲಬರುವಾ ಮತ್ತು ಪಕ್ಷದ ಇತರ ಹಿರಿಯ ಮುಖಂಡರು ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಸೇರ್ಪಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮನಶ್ ಬೋರಾ, ʼʼಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ನಾಯಕತ್ವವು ನನ್ನನ್ನು ಪಕ್ಷಕ್ಕೆ ಆಕರ್ಷಿಸಿದೆʼʼ ಎಂದು ಹೇಳಿದ್ದಾರೆ.

“ನಾವು ಜನರಿಗಾಗಿ ಕೆಲಸ ಮಾಡಲು ಬಯಸುತ್ತೇವೆ. ಆದ್ದರಿಂದ ಜನರೊಂದಿಗೆ ಸಂಪರ್ಕ ಹೊಂದಿರುವ ಪಕ್ಷಕ್ಕೆ ಸೇರಲು ನಿರ್ಧರಿಸಿದ್ದೇವೆ” ಎಂದು 2014ರ ಲೋಕಸಭಾ ಚುನಾವಣೆಯಲ್ಲಿ ಗುವಾಹಟಿಯಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದ ಮಾನಶ್ ಬೋರಾ ಅಭಿಪ್ರಾಯಪಟ್ಟರು.

ಇದನ್ನೂ ಓದಿ: Tejaswini Gowda: ಕಾಂಗ್ರೆಸ್‌ ಸೇರಿದ ತೇಜಸ್ವಿನಿ ಗೌಡ; ಬಿಜೆಪಿಯಲ್ಲಿ ಬುದ್ಧಿವಂತರಿಗೆ ಜಾಗವಿಲ್ಲ ಎಂದಿದ್ದು ಯಾಕೆ?

ಈತನ್ಮಧ್ಯೆ ಮತ್ತೊಬ್ಬ ಹಿರಿಯ ಕಾಂಗ್ರೆಸ್ ಮುಖಂಡ ಕಿಶೋರ್ ಭಟ್ಟಾಚಾರ್ಯ ಕೂಡ ಪಕ್ಷವನ್ನು ತೊರೆದಿದ್ದಾರೆ ಮತ್ತು ಶೀಘ್ರದಲ್ಲೇ ಬಿಜೆಪಿಗೆ ಸೇರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಸಾರ್ವತ್ರಿಕ ಚುನಾವಣೆಗೆ ಮುನ್ನ ಹಲವು ಪ್ರಮುಖ ಕಾಂಗ್ರೆಸ್ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version