ಬೆಂಗಳೂರು: ಲೋಕಸಭೆ ಚುನಾವಣೆಯ (Lok Sabha Election 2024) ನೀತಿ ಸಂಹಿತೆ ಎಫೆಕ್ಟ್‌ನಿಂದಾಗಿ (Code Of Conduct) ಅಮ್ಮ ಪಕ್ಕದಲ್ಲಿದ್ದಾಗಲೇ ಮಕ್ಕಳು ಬಿಯರ್ ಬಾಟಲಿನೊಂದಿಗೆ ಸಿಕ್ಕಿಬಿದ್ದಿದ್ದಾರೆ. ಅಮ್ಮನನ್ನು ಯಮಾರಿಸಿ ಮಕ್ಕಳು ಬಿಯರ್ ಬಾಟಲ್‌ಗಳನ್ನು ಬಚ್ಚಿಟ್ಟು, ಕಾರಲ್ಲಿ ಹೋಗುತ್ತಿದ್ದರು. ಇವರಿಗೆ ನಗರ ಪೊಲೀಸರು ಶಾಕ್ ಕೊಟ್ಟಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೇ ಪೊಲೀಸರು ರಸ್ತೆಗಿಳಿದು ತಪಾಸಣೆಗೆ ಮುಂದಾಗಿದ್ದಾರೆ. ಭಾನುವಾರ ಬೆಳಗ್ಗೆ ರೆಸಿಡೆನ್ಸಿ ರಸ್ತೆಯ ಚೆಕ್‌ಪೋಸ್ಟ್‌ನಲ್ಲಿ ಬರುತ್ತಿದ್ದ ಕಾರಿಗೆ ಪೊಲೀಸರು ಅಡ್ಡಗಟ್ಟಿದ್ದರು. ಕಾರನ್ನು ತಪಾಸಣೆ ಮಾಡುವಾಗ ಬಿಯರ್ ಬಾಟಲ್‌ಗಳು ಪತ್ತೆಯಾಗಿದ್ದವು.
ಬಿಯರ್ ಬಾಟೆಲ್‌ಗಳನ್ನು ಕಂಡೊಡನೆ ಮಕ್ಕಳಿಗೆ ಕುಡಿಯದೇ ಇದ್ದರೂ ಕಿಕ್ ಇಳಿದಂತಾಗಿತ್ತು. ಬಿಯರ್ ಬಾಟಲ್ ನೋಡಿ ಅಮ್ಮನಿಗೆ ಶಾಕ್ ಆದರೆ ಪೊಲೀಸರು ರಾಕ್ ಆಗಿದ್ದರು. ಅಮ್ಮನಿಗೆ ತಿಳಿಯದಂತೆ ಮಕ್ಕಳು ಕಾರಲ್ಲಿ ಬಿಯರ್ ಬಾಟಲ್‌ಗಳನ್ನು ಬಚ್ಚಿಟ್ಟಿದ್ದರು. ಮಕ್ಕಳು ಅಮ್ಮನ ಕಣ್ಣಿಂದ ತಪ್ಪಿಸಿಕೊಂಡಿದ್ದರು. ಆದರೆ ಪೊಲೀಸರ ಹದ್ದಿನ ಕಣ್ಣಿನಿಂದ ಸಿಕ್ಕಿ ಬಿದ್ದಿದ್ದರು. ಬಿಯರ್ ಬಾಟಲ್ ನೋಡಿದಾಕ್ಷಣ ತಾಯಿ ಮಕ್ಕಳ ಮೇಲೆ ಕೆಂಡಾಮಂಡಲವಾದರು. ಅಧಿಕಾರಿಗಳ ಮುಂದೆಯೇ ಮಕ್ಕಳನ್ನು ತರಾಟೆಗೆ ತೆಗೆದುಕೊಂಡು ಬೆಂಡೆತ್ತಿದ್ದರು.
ಚುನಾವಣೆ ಘೋಷಣೆ ಬೆನ್ನಲ್ಲೇ ಕುರುಡು ಕಾಂಚಾಣದ ಕುಣಿತ
ಬೆಂಗಳೂರು: ಲೋಕಸಭೆ ಚುನಾವಣೆ (Lok Sabha Election) ದಿನಾಂಕ ಘೋಷಣೆಯಾಗಿದೆ. ಶನಿವಾರದಿಂದಲೇ (ಮಾರ್ಚ್ 16) ಮಾದರಿ ನೀತಿ ಸಂಹಿತೆ (Code Of Conduct) ಜಾರಿಯಾಗಿದೆ. ಇದರ ಮಧ್ಯೆಯೇ, ಕರ್ನಾಟಕದಲ್ಲಿ ಹಣದ ಹೊಳೆ ಹರಿಯಲು ಶುರುವಾಗಿದೆ. ಇದಕ್ಕೆ ನಿದರ್ಶನ ಎಂಬಂತೆ, ಬೆಂಗಳೂರಿನಲ್ಲಿ (Bengaluru) ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13 ಲಕ್ಷ ರೂಪಾಯಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಶಾಂತಿ ನಗರದ ಚೆಕ್‌ಪೋಸ್ಟ್‌ನಲ್ಲಿ ಶನಿವಾರ (ಮಾರ್ಚ್ 16) ರಾತ್ರಿ ಕಬ್ಬನ್ ಪಾರ್ಕ್ ಪೊಲೀಸರು ಸುಮಾರು 13 ಲಕ್ಷ ರೂಪಾಯಿಯನ್ನು ಜಪ್ತಿ ಮಾಡಿದ್ದಾರೆ. ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಚೆಕ್‌ಪೋಸ್ಟ್‌ನಲ್ಲಿ ಕಾರಿನಲ್ಲಿ ಹಣ ಸಾಗಿಸಲಾಗುತ್ತಿತ್ತು. ಕಾರನ್ನು ತಡೆದ ಪೊಲೀಸರು ಪರಿಶೀಲನೆ ನಡೆಸಿದಾಗ 13 ಲಕ್ಷ ರೂ. ಸಿಕ್ಕಿದೆ. ಇದಕ್ಕೆ ದಾಖಲೆ ಇಲ್ಲದ ಕಾರಣ ಪೊಲೀಸರು ಹಣವನ್ನು ಜಪ್ತಿ ಮಾಡಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಇನ್ನೂ ನೆಲಮಂಗಲ ಜಾಸ್ ಟೋಲ್‌ನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 7 ಲಕ್ಷ ರೂ.ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಕಾರಿನಲ್ಲಿದ್ದ ತಮಿಳುನಾಡಿನ ಮೂಲದ ಉದ್ಯಮಿ ರಘುಪತಿ ಎಂಬವರನ್ನು ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನಿಂದ ತುಮಕೂರು ಮಾರ್ಗದಲ್ಲಿ ತೆರಳುತ್ತಿದ್ದರು. ನೆಲಮಂಗಲ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ