ನವದೆಹಲಿ: ಲೋಕಸಭಾ ಚುನಾವಣೆ (Lok Sabha Election 2024)ಯ ಮೊದಲ ಹಂತದ ಮತದಾನ ಪೂರ್ಣಗೊಂಡಿದೆ. ಮೊದಲ ಹಂತದಲ್ಲಿ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 102 ಕ್ಷೇತ್ರಗಳಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಬಹುತೇಕ ಎಲ್ಲ ಕಡೆ ಜನರು ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ತಮ್ಮ ಕರ್ತವ್ಯ ಪೂರೈಸಿದ್ದಾರೆ. ಆದರೆ ಇದಕ್ಕೆ ತದ್ವಿರುದ್ಧ ಎನ್ನುವಂತೆ ನಾಗಾಲ್ಯಾಂಡ್‌ನ ಪೂರ್ವ ಭಾಗದ ಆರು ಜಿಲ್ಲೆಗಳಲ್ಲಿ ಬಹುತೇಕ ಶೂನ್ಯ ಮತದಾನವಾಗಿದೆ. ಇಲ್ಲಿನ ಸಾರ್ವಜನಿಕರು ಮತದಾನವನ್ನೇ ಬಹಿಷ್ಕರಿಸಿದ್ದಾರೆ.
ಹೆಚ್ಚಿನ ಆರ್ಥಿಕ ಸ್ವಾಯತ್ತತೆಯೊಂದಿಗೆ ಪ್ರತ್ಯೇಕ ಆಡಳಿತಕ್ಕೆ ಆಗ್ರಹಿಸುತ್ತಿರುವ ಈಸ್ಟರ್ನ್ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಷನ್ (ENPO)ಈ ಚುನಾವಣೆಯನ್ನು ಬಹಿಷ್ಕರಿಸುವಂತೆ ಸ್ಥಳೀಯರಿಗೆ ಕರೆ ನೀಡಿತ್ತು. ಅದು ಪರಿಣಾಮ ಬೀರಿದೆ ಎಂದು ಮೂಲಗಳು ತಿಳಿಸಿವೆ. ಇದೀಗ ಚುನಾವಣಾ ಪ್ರಕ್ರಿಯೆಗೆ ಅಡ್ಡಿಪಡಿಸಿದ್ದಕ್ಕಾಗಿ ಈಶಾನ್ಯ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಇಎನ್‌ಪಿಒಗೆ ನೋಟಿಸ್ ಜಾರಿ ಮಾಡಿದ್ದಾರೆ.
ಅಧಿಕಾರಿಗಳು ಹೇಳಿದ್ದೇನು?
ನಾಗಾಲ್ಯಾಂಡ್‌ನ ಹೆಚ್ಚುವರಿ ಮುಖ್ಯ ಚುನಾವಣಾ ಅಧಿಕಾರಿ ಅವಾ ಲೋರಿಂಗ್ ಈ ಬಗ್ಗೆ ಮಾತನಾಡಿ, ʼʼಈ ಪ್ರದೇಶದ 20 ವಿಧಾನಸಭಾ ಕ್ಷೇತ್ರಗಳಲ್ಲಿ ಹರಡಿರುವ 738 ಮತಗಟ್ಟೆಗಳಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಿಬ್ಬಂದಿಯನ್ನೂ ನಿಯೋಜಿಸಲಾಗಿತ್ತು. ಬೆಳಿಗ್ಗೆ 7ರಿಂದ ಸಂಜೆ 4ರವರೆಗೆ ಯಾವುದೇ ಮತದಾರ ಬರಲಿಲ್ಲ. ಅಚ್ಚರಿ ಎಂದರೆ 20 ಶಾಸಕರು ಸಹ ಮತ ಚಲಾಯಿಸಲಿಲ್ಲʼʼ ಎಂದು ತಿಳಿಸಿದ್ದಾರೆ.
ನಾಗಾಲ್ಯಾಂಡ್‌ನ ಒಟ್ಟು 13.25 ಲಕ್ಷ ಮತದಾರರ ಪೈಕಿ ಪೂರ್ವ ನಾಗಾಲ್ಯಾಂಡ್‌ನ ಈ ಆರು ಜಿಲ್ಲೆಗಳಲ್ಲಿ 4,00,632 ಮತದಾರರಿದ್ದಾರೆ. ನಾಗಾಲ್ಯಾಂಡ್‌ನ 16 ಜಿಲ್ಲೆಗಳಲ್ಲಿ ಪೂರ್ವ ಭಾಗದ 6 ಜಿಲ್ಲೆಗಳು ಹೆಚ್ಚಿನ ಸ್ವಾಯತ್ತತೆ ಮತ್ತು ಪ್ರತ್ಯೇಕ ಭಾಗಕ್ಕೆ ಒತ್ತಾಯಿಸುತ್ತಿವೆ. ಇಲ್ಲಿ 20 ಶಾಸಕರಿದ್ದಾರೆ. ಕಳೆದ ವರ್ಷದ ವಿಧಾನಸಭೆ ಚುನಾವಣೆಯ ಮೊದಲೂ ಇಎನ್‌ಪಿಒ ಇದೇ ರೀತಿಯ ಕರೆ ನೀಡಿತ್ತು. ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭರವಸೆಯ ನಂತರ ಇದನ್ನು ಹಿಂಪಡೆಯಲಾಗಿತ್ತು. ನಾಗಾಲ್ಯಾಂಡ್ ಏಕೈಕ ಲೋಕಸಭಾ ಸ್ಥಾನವನ್ನು ಹೊಂದಿದೆ.
ಮೃತಪಟ್ಟ ಪ್ಯಾರಾ ಮಿಲಿಟರಿ ಪಡೆಯ ಸಿಬ್ಬಂದಿ
ಪಶ್ಚಿಮ ಬಂಗಾಳದ ಕೂಚ್‌ಬೆಹರ್‌ನ ಮಥಭಂಗ ಮತದಾನ ಕೇಂದ್ರದಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಪ್ಯಾರಾ ಮಿಲಿಟರಿ ಪಡೆಯ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ. ಶೌಚಾಲಯದಲ್ಲಿ ಕಾಲು ಜಾರಿ ಬಿದ್ದು ಅವರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಇದರ ಹಿಂದೆ ಯಾವುದೇ ಅಪರಾಧದ ಆಯಾಮ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಇದನ್ನೂ ಓದಿ: Lok Sabha Election 2024: ಹಕ್ಕು ಚಲಾಯಿಸಿ ಮಾದರಿಯಾದ ವಿಶ್ವದ ಅತ್ಯಂತ ಕುಬ್ಜ ಮಹಿಳೆ ಜ್ಯೋತಿ ಆಮ್ಗೆ
ಸಾರ್ವತ್ರಿಕ ಚುನಾವಣೆ ದೇಶಾದ್ಯಂತ ಏಳು ಹಂತಗಳಲ್ಲಿ ನಡೆಯಲಿದ್ದು, ಜೂನ್ 1ರಂದು ಕೊನೆಗೊಳ್ಳಲಿದೆ. ಲೋಕಸಭೆ ಚುನಾವಣೆಯ ಮತಗಳ ಎಣಿಕೆ ಮತ್ತು ಫಲಿತಾಂಶ ಘೋಷಣೆ ಜೂನ್ 4ರಂದು ನಡೆಯಲಿದೆ. ಇಂದು ಮತದಾನ ನಡೆದ 102 ಕ್ಷೇತ್ರದ ಕಣದಲ್ಲಿ 1,625 ಅಭ್ಯರ್ಥಿಗಳು, 1,491 ಪುರುಷ, 134 ಮಹಿಳಾ ಅಭ್ಯರ್ಥಿಗಳು ಇದ್ದಾರೆ. 41 ಹೆಲಿಕಾಪ್ಟರ್, 84 ವಿಶೇಷ ರೈಲು ಹಾಗೂ 1 ಲಕ್ಷ ವಾಹನಗಳು ಚುನಾವಣಾ ಕಾರ್ಯಕ್ಕೆ ಬಳಸಲಾಗಿದೆ.