Site icon Vistara News

Lok Sabha Election 2024: ಬಸ್‌ನಲ್ಲಿ ಪ್ರಯಾಣಿಸುವಾಗ ಲಗೇಜ್‌ನಲ್ಲಿ ಇವುಗಳನ್ನು ಕೊಂಡೊಯ್ಯುವಂತಿಲ್ಲ!

code of conduct Condition for carrying luggage while travelling in govt bus

ಬೆಂಗಳೂರು: ನಾಲ್ಕು ನಿಗಮದ ಬಸ್‌ಗಳಲ್ಲಿ ಪ್ರಯಾಣಿಸುವವರು ಇನ್ಮುಂದೆ ಲಗೇಜ್‌ಗಳಲ್ಲಿ ಕೆಲವು ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ (Lok Sabha Election 2024) ನೀತಿ ಸಂಹಿತೆ (Code of Conduct) ಜಾರಿಯಾಗಿದೆ. ಹೆಜ್ಜೆ ಹೆಜ್ಜೆಗೂ ಪೊಲೀಸರ ಸರ್ಪಗಾವಲು ಹಾಕಲಾಗಿದೆ. ಇದರ ಬೆನ್ನಲ್ಲೇ ರಾಜ್ಯ ಸಾರಿಗೆ ಬಸ್‌ಗಳಲ್ಲಿ ಲಗೇಜ್ ಸಾಗಿಸಲು ಪ್ರಯಾಣಿಕರಿಗೆ ಕೆಲವು ಕಟ್ಟಪ್ಪಣೆ ಹಾಕಲಾಗಿದೆ.

ರಾಜ್ಯದಲ್ಲಿ ಲೋಕಸಭಾ ಚುನಾವಣೆಯು ಕಾವೇರುತ್ತಿದೆ. ರಾಜಕೀಯ ಪಕ್ಷಗಳ ನಾಯಕರು ಮತದಾರರನ್ನು ಸೆಳೆಯಲು ಸರ್ಕಸ್ ಶುರು ಮಾಡಿದ್ದಾರೆ. ಇದರ ನಡುವೆ ನಾಲ್ಕು ನಿಗಮಗಳಿಗೆ ಹೊಸ ನಿಯಮ ಜಾರಿಯಾಗಿದೆ. ಸೂಕ್ತ ದಾಖಲೆ ಅಥವಾ ನೀತಿ ಸಂಹಿತೆಗೆ ಧಕ್ಕೆ ಬರುವ ವಸ್ತುಗಳ ಸಾಗಾಟ ಮಾಡುವಂತಿಲ್ಲ. ಈ ಬಗ್ಗೆ ಚಾಲಕ ಹಾಗೂ ನಿರ್ವಾಹಕರಿಗೆ ನಿಗಮದ ಭದ್ರತಾ ಮತ್ತು ಜಾಗೃತ ವಿಭಾಗದ ಹಿರಿಯ ಅಧಿಕಾರಿಗಳು ಸೂಚನೆ ಕೊಟ್ಟಿದ್ದಾರೆ.

ಇದನ್ನೂ ಓದಿ:R Ashok : ಡಿ.ವಿ ಸದಾನಂದ ಗೌಡ್ರು ಎಲ್ಲೂ ಹೋಗಲ್ಲ ಎಂದ ಆರ್‌ ಅಶೋಕ್‌

ಪ್ರಯಾಣಿಕರು ಯಾವುದೇ ದಾಖಲೆ ಇಲ್ಲದ ಬೆಲೆ ಬಾಳುವ ವಸ್ತುಗಳನ್ನು ಬಸ್‌ನಲ್ಲಿ ತೆಗೆದುಕೊಂಡು ಹೋಗುವಂತಿಲ್ಲ. ಪ್ರಯಾಣಿಕರ ಸಹಿತ ಲಗೇಜ್‌ನಲ್ಲಿ ರಾಜಕೀಯ ಪಕ್ಷ ಅಥವಾ ವ್ಯಕ್ತಿಗೆ ಸಂಬಂಧಿಸಿದ ಕರಪತ್ರ, ಬ್ಯಾನರ್‌ ಸಾಗಣೆ ಮಾಡುತ್ತಿದ್ದಲ್ಲಿ, ಸಂಬಂಧಪಟ್ಟ ದಾಖಲಾತಿ ಸಲ್ಲಿಸಬೇಕು. ರಾಜಕೀಯ ಪ್ರಚಾರದ ವಸ್ತುಗಳನ್ನು ಬಸ್ಸಿನಲ್ಲಿ ಪ್ರದರ್ಶಿಸುವಂತಿಲ್ಲ. ಜತೆಗೆ ಇತರೆ ಪ್ರಯಾಣಿಕರಿಗೆ ಹಂಚುವಂತಿಲ್ಲ.

ಲಗೇಜ್‌ ಸಾಗಿಸುವಾಗ ಲಗೇಜ್‌ ಹಾಕುವ ವ್ಯಕ್ತಿ ಹಾಗೂ ಲಗೇಜ್‌ ಸ್ವೀಕರಿಸುವ ವ್ಯಕ್ತಿಗಳ ವಿವರಗಳನ್ನು ಬಸ್ಸಿನ ಸಿಬ್ಬಂದಿ ಪಡೆಯಬೇಕು. ಲಗೇಜ್‌ಗಳನ್ನು ಪರಿಶೀಲಿಸಿ ಭದ್ರತೆಯನ್ನು ಖಾತ್ರಿಪಡಿಕೊಳ್ಳಬೇಕು. ನಿಷೇಧಿತ ವಸ್ತುಗಳನ್ನು ಹಾಗೂ ಹಣ, ಚಿನ್ನ, ಬೆಳ್ಳಿ ಇತ್ಯಾದಿಗಳನ್ನು ಸಾಗಿಸುವಂತಿಲ್ಲ.

ಇದರ ಹೊರತಾಗಿ ಪ್ರಯಾಣಿಕರ ಲಗೇಜ್‌ಗಳಲ್ಲಿ ಅನುಮಾನಾಸ್ಪದವಾಗಿ ಕಂಡು ಬರುವ ವಸ್ತುಗಳನ್ನು ಚುನಾವಣಾ ನೀತಿ ಸಂಹಿತೆ ಸಂಬಂಧ ಸಿಬ್ಬಂದಿ ಪರಿಶೀಲನೆ ಮಾಡಬೇಕು. ಒಂದು ವೇಳೆ ಪ್ರಯಾಣಿಕರು ತಕರಾರು ಮಾಡಿದ್ದಲ್ಲಿ, ಲಗೇಜ್‌ಗಳನ್ನು ಸಮೀಪದ ಪೊಲೀಸ್‌ ಠಾಣೆಗೆ ಒಪ್ಪಿಸಬೇಕು ಎಂದು ಸೂಚಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version