Site icon Vistara News

Lok Sabha Election 2024: ಕೋಲಾರ ಬೆನ್ನಲ್ಲೇ ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲೂ ಭಿನ್ನಮತ; ರಕ್ಷಾ ರಾಮಯ್ಯಗೆ ಟಿಕೆಟ್‌ ನೀಡದಂತೆ ಆಗ್ರಹ

Raksha ramaiah

ಬೆಂಗಳೂರು: ಕೋಲಾರ ಕಾಂಗ್ರೆಸ್‌ ಟಿಕೆಟ್‌ ಕಗ್ಗಂಟು ಬೆನ್ನಲ್ಲೇ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲೂ (Lok Sabha Election 2024) ಕಾಂಗ್ರೆಸ್ ಪಕ್ಷದ ನಾಯಕರಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ರಕ್ಷಾ ರಾಮಯ್ಯಗೆ ಬಹುತೇಕ ಟಿಕೆಟ್ ಖಚಿತ ಎಂಬ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರಿಗೆ ಬಾಗೇಪಲ್ಲಿ ಶಾಸಕ ಎಸ್‌.ಎನ್‌. ಸುಬ್ಬಾರೆಡ್ಡಿ ಪತ್ರ ಬರೆದು ಅಸಮಾಧಾನ ಹೊರಹಾಕಿದ್ದಾರೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಉಸ್ತುವಾರಿಯಾಗಿ ಸಚಿವ ಜಮೀರ್ ಅಹ್ಮದ್ ಅವರನ್ನು ನೇಮಿಸಲಾಗಿತ್ತು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರು, ಮಾಜಿ ಶಾಸಕರೆಲ್ಲಾ ತೀರ್ಮಾನಿಸಿ, ಮಾಜಿ ಸಿಎಂ ವೀರಪ್ಪ ಮೊಯ್ಲಿ ಹಾಗೂ ಮಾಜಿ ಸಚಿವ ಶಿವಶಂಕರ ರೆಡ್ಡಿ ಹೆಸರನ್ನು ಶಿಫಾರಸು ಮಾಡಿದ್ದೆವು. ಯಾರೊಬ್ಬರೂ ಕೂಡ ಎಂ.ಆರ್ ಸೀತಾರಂ ಪುತ್ರ ರಕ್ಷಾ ರಾಮಯ್ಯ ಹೆಸರನ್ನು ಸೂಚಿಸಿಲ್ಲ. ಅಲ್ಲದೇ ಕಳೆದ ಮೂರು ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರಕ್ಕೆ ಎಂ.ಆರ್ ಸೀತಾರಾಂ ಹಾಗೂ ರಕ್ಷಾ ರಾಮಯ್ಯ ಅವರ ಕೊಡುಗೆ ಶೂನ್ಯ ಎಂದು ಕಿಡಿಕಾರಿದ್ದಾರೆ.

ರಕ್ಷಾ ರಾಮಯ್ಯ ಅವರು ಬೆಂಗಳೂರು ಉತ್ತರಕ್ಕೆ ಸೂಕ್ತ ಅಭ್ಯರ್ಥಿ. ಯಾಕೆಂದರೆ ಅವರ ಶಿಕ್ಷಣ ಸಂಸ್ಥೆಗಳು ಅಲ್ಲೇ ಇವೆ. ಜೊತೆಗೆ ಲಕ್ಷಾಂತರ ಉದ್ಯೋಗಿಗಳು ಬೆಂಗಳೂರು ಉತ್ತರ ಕ್ಷೇತ್ರದಲ್ಲೇ ಇದ್ದಾರೆ. ಹೀಗಾಗಿ ನಾವು ಸೂಚಿಸಿರುವ ಇಬ್ಬರು ಆಕಾಂಕ್ಷಿಗಳ ಹೆಸರಿನಲ್ಲಿ ಅಂತಿಮಗೊಳಿಸುವುದು ಸೂಕ್ತ. ಪಕ್ಷದ ಹಿತದೃಷ್ಟಿಯಿಂದ ವೀರಪ್ಪ ಮೊಯ್ಲಿ ಹಾಗೂ ಶಿವಶಂಕರ ರೆಡ್ಡಿ ಇಬ್ಬರಲ್ಲಿ ಅಭ್ಯರ್ಥಿ ಅಂತಿಮಗೊಳಿಸಿ ಎಂದು ಕಾಂಗ್ರೆಸ್‌ ಹಿರಿಯ ನಾಯಕರಿಗೆ ಶಾಸಕ ಸುಬ್ಬಾರೆಡ್ಡಿ ಒತ್ತಾಯಿಸಿದ್ದಾರೆ.

ಇದನ್ನೂ ಓದಿ | Lok Sabha Election 2024: ಪ್ರಲ್ಹಾದ್‌ ಜೋಶಿ ಬದಲಿಸಲ್ಲ: ವೀರಶೈವ ಸ್ವಾಮೀಜಿಗಳಿಗೆ ಬಿಎಸ್‌ವೈ ಸ್ಪಷ್ಟ ಸಂದೇಶ

ಟಿಕೆಟ್‌ ವಿಚಾರವಾಗಿ ಪಕ್ಷದಲ್ಲಿ ಅಸಮಾಧಾನ ಉಂಟಾಗಿರುವ ಹಿನ್ನೆಲೆ ರಾಜ್ಯದ ಬಳ್ಳಾರಿ, ಚಾಮರಾಜನಗರ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಇನ್ನೂ ಅಭ್ಯರ್ಥಿಗಳನ್ನು ಪ್ರಕಟಿಸಿಲ್ಲ. ಈ 4 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಿಸಿದರೆ ಕಾಂಗ್ರೆಸ್ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿದಂತಾಗುತ್ತದೆ.

ಬಳ್ಳಾರಿ, ಕೋಲಾರ, ಚಾಮರಾಜನಗರ 3 ಕ್ಷೇತ್ರದಲ್ಲಿ ಸಚಿವರ ಸ್ಪರ್ಧೆಗೆ ತಂತ್ರಗಾರಿಕೆ ರೂಪಿಸಿತ್ತು. ಆದರೆ ಮೂವರು ಸಚಿವರು ತಮ್ಮ ಸಂಬಂಧಿಕರಿಗೆ ಟಿಕೆಟ್ ಬೇಡಿಕೆ ಇಟ್ಟಿದ್ದರು. ತಮ್ಮ ಕುಟುಂಬಕ್ಕೆ ಟಿಕೆಟ್ ನೀಡಲು ಬಳ್ಳಾರಿಯ ಸಚಿವ ನಾಗೇಂದ್ರ, ಕೋಲಾರದಲ್ಲಿ ಸಚಿವ ಮುನಿಯಪ್ಪ, ಚಾಮರಾಜನಗರದಲ್ಲಿ ಎಚ್.ಸಿ.ಮಹದೇವಪ್ಪ ಪುತ್ರ ಸುನಿಲ್ ಬೋಸ್‌ಗೆ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಆದರೆ, ಸಚಿವರ ಕುಟುಂಬಸ್ಥರಿಗೆ ಟಿಕೆಟ್‌ ನೀಡಲು ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕಾಂಗ್ರೆಸ್‌ ಹೈಕಮಾಂಡ್‌ಗೆ ತಲೆನೋವಾಗಿದೆ.

ಕೋಲಾರದಲ್ಲಿ ಮುನಿಯಪ್ಪ ಅಳಿಯನಿಗೆ ಟಿಕೆಟ್? ಕೆರಳಿದ ರಮೇಶ್ ಕುಮಾರ್ ಬಣ, ರಾಜೀನಾಮೆ ಬೆದರಿಕೆ

ಕೋಲಾರ: ಕೋಲಾರ ಲೋಕಸಭೆ ಕ್ಷೇತ್ರದಲ್ಲಿ (Kolar constituency) ಕಾಂಗ್ರೆಸ್‌ ಪಕ್ಷದಿಂದ (Congress) ಸ್ಪರ್ಧಿಸುವ (Lok Sabha Election) ಅಭ್ಯರ್ಥಿಯ ಹೆಸರು ಫೈನಲ್‌ ಆಗಿದ್ದು, ವರಿಷ್ಠರು ಅಳೆದು ತೂಗಿ ಕೆ.ಎಚ್.‌ ಮುನಿಯಪ್ಪ (K.H. Muniyappa) ಅವರ ಅಳಿಯ ಚಿಕ್ಕಪೆದ್ದಣ್ಣಗೆ ಕೋಲಾರ ಟಿಕೆಟ್ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇದರ ಹಿಂದೆಯೇ ಪಕ್ಷದೊಳಗೆ ಅಸಮಾಧಾನ ಭುಗಿಲೆದ್ದಿದ್ದು, ರಮೇಶ್ ಕುಮಾರ್ (Ramesh Kumar) ಟೀಮ್ ಕೆರಳಿದೆ.

ಚಿಕ್ಕಪೆದ್ದಣ್ಣ ಮುನ್ನಡೆಯಿಂದ ಕೆರಳಿರುವ ರಮೇಶ್ ಕುಮಾರ್ ಟೀಮ್ ರಾಜೀನಾಮೆ ಬೆದರಿಕೆ ಅಸ್ತ್ರ ಪ್ರಯೋಗ ಮಾಡಿದೆ. ಹಾಲಿ ಎಂಎಲ್‌ಸಿ, ಹಾಲಿ ಶಾಸಕರು ರಾಜೀನಾಮೆ ಎಚ್ಚರಿಕೆ ನೀಡಿದ್ದಾರೆ. ತಮ್ಮ ಬೇಡಿಕೆಗೆ ಹೈಕಮಾಂಡ್ ಮಣಿಯದಿದ್ದರೆ ರಾಜೀನಾಮೆ ಕೊಡುತ್ತೇವೆ ಎಂದು ಕೋಲಾರ ಶಾಸಕರು ಹೇಳಿದ್ದಾರೆ.

ಎಂಎಲ್‌ಸಿಗಳಾದ ಅನಿಲ್ ಕುಮಾರ್, ನಜೀರ್ ಅಹ್ಮದ್, ಮಾಲೂರು ಶಾಸಕ ನಂಜೇಗೌಡ, ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಸೇರಿ ಪ್ರಮುಖ ಶಾಸಕರು, ಮುನಿಯಪ್ಪ ಅಳಿಯನಿಗೆ ಟಿಕೇಟ್ ನೀಡಿದರೆ ರಾಜೀನಾಮೆ ಕೊಡುವುದಾಗಿ ಬೆದರಿಕೆ ಒಡ್ಡಿದ್ದಾರೆ.

ಬಿಜೆಪಿ- ಜೆಡಿಎಸ್‌ ಸೀಟು ಹಂಚಿಕೆ ಪ್ರಕಾರ ಕೋಲಾರವನ್ನು ಜೆಡಿಎಸ್‌ ಪಡೆದುಕೊಂಡಿದ್ದು, ಮಲ್ಲೇಶ್‌ ಬಾಬು ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್‌ ಈಗಾಗಲೇ ಪ್ರಚಾರ ಆರಂಭಿಸಿವೆ.

ಈ ನಡುವೆ ನಾಲ್ಕು ಕ್ಷೇತ್ರಗಳ ಟಿಕೆಟ್ ಬಾಕಿ ವಿಚಾರ ಇಟ್ಟುಕೊಂಡು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೆಹಲಿಗೆ ತೆರಳಿದ್ದಾರೆ. ದೆಹಲಿಗೆ ತೆರಳುವ ಮುನ್ನ ಕೋಲಾರದ ಕುರಿತು ಪ್ರಶ್ನಿಸಿದ ಸುದ್ದಿಗಾರರಿಗೆ, “ಅರೇ ಎಲ್ಲ ಆಗಿದೆಯಲ್ಲ, ಮುನಿಯಪ್ಪ ಇಲ್ಲೇ ಇದ್ದಾರೆ ನೋಡಿ, ಆಗಿದೆ. ಕೇಳಿ ಅವರನ್ನೇ” ಎಂದು ಖರ್ಗೆ ಉತ್ತರಿಸಿದ್ದಾರೆ. ತೀರ್ಮಾನ ಮುನಿಯಪ್ಪ ಪರವಾಗಿ ಆಗಿದೆ ಎಂದು ಇದರಿಂದ ಊಹಿಸಲಾಗಿದೆ.

ಸಚಿವ ಕೆ.ಎಚ್.ಮುನಿಯಪ್ಪ‌ ಕೂಡ ಈ ಬಗ್ಗೆ ಹೇಳಿಕೆ ನೀಡಿದ್ದು, “ಟಿಕೆಟ್ ಸಂಜೆ ಕ್ಲಿಯರ್ ಆಗಬಹುದು. ಟಿಕೆಟ್‌ಗೆ ಮನವಿ ಮಾಡಿದ್ದೇವೆ,” ಎಂದಿದ್ದಾರೆ. “ನಾನು‌ 7 ಬಾರಿ ಸಂಸದನಾಗಿದ್ದೆ. ಜಿಲ್ಲೆಯ ಎಲ್ಲಾ ಶಾಸಕರು, ಸಚಿವರು, ಮಾಜಿ ಶಾಸಕರು ಎಲ್ಲರಿಗೂ ಮನವಿ ಮಾಡಿದ್ದೇವೆ. ಅವರೂ ಕೇಳಿದ್ದಾರೆ, ನಾವೂ ಕೇಳಿದ್ದೇವೆ. ಹೈಕಮಾಂಡ್ ಯಾರಿಗೆ ಟಿಕೆಟ್ ಕೊಟ್ಟರೂ ಗೆಲ್ಲಿಸುತ್ತೇವೆ. ರಾಜ್ಯದ 28ಕ್ಕೆ 28 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲಬೇಕು. ಚಿಕ್ಕಬಳ್ಳಾಪುರ ಹಾಗೂ ಕೋಲಾರದಲ್ಲಿ ಎಲ್ಲರೂ ಸೇರಿ ಕೆಲಸ ಮಾಡಿ ಎರಡೂ ಕ್ಷೇತ್ರ ಗೆಲ್ಲಿಸಬೇಕು.‌ ರಮೇಶ್ ಕುಮಾರ್ ಹಾಗೂ ನಾವು ಎಲ್ಲಾ ಒಟ್ಟಿಗೆ ಸೇರಿ‌ ಮಾತನಾಡಿದ್ದೇವೆ. ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರ ಸಮ್ಮುಖದಲ್ಲಿ ತೀರ್ಮಾನ ಆಗಿದ್ದು, ಯಾರಿಗೆ ಟಿಕೆಟ್ ಕೊಟ್ಟರೂ ಒಗ್ಗಟ್ಟಾಗಿ ಕೆಲಸ ಮಾಡಿ‌ ಗೆಲ್ಲಿಸಬೇಕು,” ಎಂದು ಹೇಳಿದ್ದಾರೆ.

ಶಾಸಕರ ರಾಜೀನಾಮೆ ಬೆದರಿಕೆ ವಿಚಾರದಲ್ಲಿ ಮುನಿಯಪ್ಪ, “ಎಲ್ಲಾ ಅವರನ್ನೇ ಕೇಳಬೇಕು,” ಎಂದು ಉತ್ತರಿಸಿದ್ದಾರೆ.

ಇದನ್ನೂ ಓದಿ: Lok Sabha Election 2024: ಕೋಲಾರ ಟಿಕೆಟ್‌ ಮಿಸ್‌; ಸಿಟ್ಟೆದ್ದು ದೆಹಲಿಗೆ ದೌಡಾಯಿಸಿದ ಮುನಿಸ್ವಾಮಿ!

ಇನ್ನೂ ಕೋಲಾರ ಟಿಕೆಟ್ ಅನೌನ್ಸ್ ಆಗಿಲ್ಲ ಎಂದ ಸಿಎಂ

ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಟಿಕೆಟ್ ವಿಚಾರದಲ್ಲಿ ಅಸಮಾಧಾನ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಇನ್ನೂ ಕೋಲಾರ ಟಿಕೆಟ್ ಅನೌನ್ಸ್ ಆಗಿಲ್ಲ ಎಂದು ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರು ಆಕಾಂಕ್ಷಿಗಳ ಜತೆ ಮತ್ತೊಂದು ಸುತ್ತಿನ ಸಭೆ ನಡೆಸಿದ ಬಳಿಕ ಟಿಕೆಟ್‌ ಫೈನಲ್‌ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

Exit mobile version