Site icon Vistara News

Lok Sabha Election 2024 : ಜೆಡಿಎಸ್‌ಗೆ ವೋಟ್‌ ಹಾಕಿದ್ದಕ್ಕೆ ಕಾಂಗ್ರೆಸ್‌ ಕಾರ್ಯಕರ್ತರ ಮಚ್ಚೇಟು!

Lok sabha election 2024

ಚಿಕ್ಕಬಳ್ಳಾಪುರ: ಕೋಲಾರ ಲೋಕಸಭಾ ಕ್ಷೇತ್ರದಲ್ಲಿ (Lok Sabha Election 2024) ನಿನ್ನೆ ಶುಕ್ರವಾರ ಸಂಜೆ ಮತದಾನದ ವೇಳೆ ಮಾರಾಮಾರಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮತದಾನ ಮುಕ್ತಾಯ ನಂತರ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರ ನಡುವೆ ಜಗಳ ನಡೆದಿದೆ. ಜೆಡಿಎಸ್‌ಗೆ ಮತ ಹಾಕಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಕಣಿಶೆಟ್ಟಿಹಳ್ಳಿ ಗ್ರಾಮದಲ್ಲಿ ಕಾರ್ಯಕರ್ತರ ಜಗಳದಲ್ಲಿ ಜೆಡಿಎಸ್ ಕಾರ್ಯಕರ್ತರಿಗೆ ಗಂಭೀರ ಗಾಯಗಳಾಗಿದೆ. ಗಾಯಾಳುಗಳನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಲಾಟೆಯಲ್ಲಿ ಜೆಡಿಎಸ್ ಕಾರ್ಯಕರ್ತ ಗೋವರ್ಧನ ಎಂಬುವವರ ಬೆರಳುಗಳು ಕಟ್ ಆಗಿದ್ದು, ತಲೆಗೆ ಗಂಭೀರ ಗಾಯವಾಗಿದೆ.

ಕಾಂಗ್ರೆಸ್ ಕಾರ್ಯಕರ್ತರಾದ ನರೇಂದ್ರ ಮಂಜುನಾಥ, ಗಣೇಶ, ಮಹೇಶ್ ಎಂಬುವವರು ಹಲ್ಲೆ ನಡೆಸಿದ್ದಾರೆ. ಸದ್ಯ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಆಸ್ಪತ್ರೆಗೆ ಜೆಕೆ ಕೃಷ್ಣಾರೆಡ್ಡಿ ಭೇಟಿ

ಜೆಡಿಎಸ್ ಮಾಜಿ ಶಾಸಕ ಜೆ.ಕೆ ಕೃಷ್ಣಾರೆಡ್ಡಿ ಶನಿವಾರ ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿದರು. ಗಂಭೀರ ಗಾಯಗೊಂಡಿದ್ದ ಕಾರ್ಯಕರ್ತರ ಯೋಗಕ್ಷೇಮ ವಿಚಾರಿಸಿದರು.

ಇದನ್ನೂ ಓದಿ: Assault Case : ಕುಡಿದ ನಶೆಯಲ್ಲಿ ಸ್ನೇಹಿತನಿಗೆ ಬೆಂಕಿ ಹಚ್ಚಿದ ಮಿತ್ರ ದ್ರೋಹಿಗಳು ಅರೆಸ್ಟ್‌

ಚಿಕ್ಕಮಗಳೂರಲ್ಲಿ ಬಿಜೆಪಿ ಕಾರ್ಯಕರ್ತರ ಮಧ್ಯೆಯೇ ಮಾರಾಮಾರಿ; ಮುಖಂಡನ ತಲೆಗೆ ಏಟು!

ಚಿಕ್ಕಮಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಶುಕ್ರವಾರ (ಏಪ್ರಿಲ್‌ 26) ಮೊದಲ ಹಂತದ ಮತದಾನ (First phase of polling) ಮುಕ್ತಾಯಗೊಂಡಿದೆ. ಆದರೆ, ಚಿಕ್ಕಮಗಳೂರು ತಾಲೂಕಿನ ಉಜ್ಜಿನಿ ಗ್ರಾಮದ ಬಳಿ ಬಿಜೆಪಿ ಕಾರ್ಯಕರ್ತರ ನಡುವೆಯೇ ಮಾರಾಮಾರಿಯಾಗಿದೆ. ಬಿಜೆಪಿ ಮುಖಂಡ ಪ್ರವೀಣ್ ಖಾಂಡ್ಯಾ ಎಂಬುವವರ ಮೇಲೆ ಹಲ್ಲೆಯಾದ ವರದಿಯಾಗಿದೆ.

ಮತದಾನದ ವೇಳೆ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿಯಾಗಿದ್ದು, ಕೆಲ ಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಿಜೆಪಿ ಕಾರ್ಯಕರ್ತರಿಂದಲೇ ಪ್ರವೀಣ್ ಖಾಂಡ್ಯ ಮೇಲೆ ಹಿಗ್ಗಾಮುಗ್ಗ ಥಳಿತವಾಗಿದೆ. ಪ್ರವೀಣ್‌ ತಲೆಗೆ ಏಟಾಗಿದ್ದು, ರಕ್ತ ಸುರಿದಿದೆ. ಕೂಡಲೇ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಏಕೆ ಗಲಾಟೆ?

ಚಿಕ್ಕಮಗಳೂರು ತಾಲೂಕಿನ ಉಜ್ಜಿನಿ ಗ್ರಾಮದ ಬಳಿ ಘಟನೆ ನಡೆದಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಪ್ರವೀಣ್ ಖಾಂಡ್ಯ ಕಾಂಗ್ರೆಸ್‌ನಿಂದ ಬಿಜೆಪಿ ಸೇರ್ಪಡೆಯಾಗಿದ್ದರು. ಆದರೆ, ಲೋಕಸಭಾ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಪರ ಮತ ಚಲಾಯಿಸಲು ಮತದಾರರಿಗೆ ಪ್ರೇರೇಪಿಸಿದ್ದಾರೆ ಎಂಬ ವಿಷಯವು ಗಲಾಟೆಗೆ ಕಾರಣವಾಗಿದೆ. ಬಿಜೆಪಿ ಕಾರ್ಯಕರ್ತರು ಹಾಗೂ ಬಿಜೆಪಿ ಮುಖಂಡರು ಆಕ್ರೋಶಗೊಂಡು ಪ್ರವೀಣ್‌ ಬಳಿ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಹೊಡೆದಾಟ ಆಗಿದೆ.

ಬಾಳೆಹೊನ್ನೂರು ವ್ಯಾಪ್ತಿಯ ಬೂತ್ ಮಟ್ಟದಲ್ಲಿ ಖಾಂಡ್ಯ ಪ್ರವೀಣ್ ಕಾಂಗ್ರೆಸ್‌ ಪರ ಪ್ರಚಾರ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಿಜೆಪಿ ಕಾರ್ಯಕರ್ತರಾದ ಸೃಜನ್, ಸಚಿನ್, ಅಭಿ, ಶಂಕರ್‌ ಹಲ್ಲೆ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version