ಬೆಂಗಳೂರು: ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ (Bangalore Rural Constituency) ಡಾ. ಸಿ.ಎನ್. ಮಂಜುನಾಥ್ ಗೆದ್ದು ನರೇಂದ್ರ ಮೋದಿಯವರ (PM Narendra Modi) ತಂಡ ಸೇರಲಿದ್ದಾರೆ. ಈ ಭಾಗದಲ್ಲಿ ದೊಡ್ಡ ಸಂಚಲನ ಉಂಟಾಗಲಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್ (Dr CN Ashwathnarayan) ವಿಶ್ವಾಸ ವ್ಯಕ್ತಪಡಿಸಿದರು. ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಚಾರದಲ್ಲಿ ನಿರತರಾಗಿರುವ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಪುನಃ ಸರ್ಕಾರ ರಚನೆಯಾದಲ್ಲಿ ಯಾವೆಲ್ಲ ವಿಷನ್ ಅನ್ನು ಹಾಕಿಕೊಳ್ಳಲಾಗಿದೆ ಎಂಬುದನ್ನು ವಿವರಿಸಿದ್ದಾರೆ.
ರಾಮನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅಶ್ವತ್ಥನಾರಾಯಣ್, ಬಡವರು, ಮಹಿಳೆಯರು, ಯುವಜನತೆ, ರೈತರ ಪರವಾಗಿ 4 ಪ್ರಮುಖ ಶಕ್ತಿಗಳನ್ನು ವಿಂಗಡಣೆ ಮಾಡಿದ್ದಾರೆ. ರೈತರ ಪರವಾಗಿ ಕಿಸಾನ್ ಸಮ್ಮಾನ್ ಮುಂದುವರಿಸುವಿಕೆ ಜತೆಗೆ ಬೆಂಬಲ ಬೆಲೆ ಕಾಲಕಾಲಕ್ಕೆ ಕೊಡುವುದಲ್ಲದೆ, ಅದನ್ನು ಹೆಚ್ಚಿಸಲು ಮೋದಿಜೀ ಅವರು ಸಂಕಲ್ಪ ಮಾಡಿದ್ದಾರೆ ಎಂದು ವಿವರಿಸಿದರು.
ಉಪಗ್ರಹ ಬಳಸಿ ಬೆಳೆಗಳ ಮಾಹಿತಿ ಸಂಗ್ರಹಿಸಿ ನೀಡುವುದು, ಹವಾಮಾನದ ಮುನ್ಸೂಚನೆ ನೀಡಲಿದ್ದಾರೆ. ಕೃಷಿ ಮೂಲ ಸೌಕರ್ಯಕ್ಕೆ ಒತ್ತು ಕೊಡಲು ಸರ್ಕಾರ ಮುಂದಾಗಲಿದೆ. ವ್ಯವಸಾಯದಲ್ಲಿ ದೊಡ್ಡ ಕ್ರಾಂತಿ ಆಗಲಿದೆ ಎಂದು ಅಶ್ವತ್ಥನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದರು.
ಲಕ್ಷಪತಿಯಾಗಲಿದ್ದಾರೆ 3 ಕೋಟಿ ಮಹಿಳೆಯರು
ಮಹಿಳಾ ಸಬಲೀಕರಣ ಮಾಡಲು ಎಲ್ಲ ಸೌಕರ್ಯಗಳನ್ನು ನೀಡಲಾಗುವುದು. 3 ಕೋಟಿ ಮಹಿಳೆಯರನ್ನು ಲಕ್ಷಪತಿ ಮಾಡಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಿದೆ. 4 ಕೋಟಿ ಮನೆಗಳ ನಿರ್ಮಾಣ ಆಗಲಿದೆ. ಶೌಚಾಲಯ, ನೀರು ಮತ್ತಿತರ ಮೂಲಭೂತ ಸೌಲಭ್ಯ ಕೊಡಲಾಗುವುದು ಎಂದು ಅಶ್ವತ್ಥನಾರಾಯಣ್ ತಿಳಿಸಿದರು.
ಸಮಾನ ನಾಗರಿಕ ಸಂಹಿತೆ ಜಾರಿ ಗ್ಯಾರಂಟಿ
ಸಮಾನ ನಾಗರಿಕ ಸಂಹಿತೆಯನ್ನು ಗ್ಯಾರಂಟಿಯಾಗಿ ಜಾರಿಗೊಳಿಸಲಾಗುವುದು. ಮಹಿಳಾ ಮೀಸಲಾತಿಯನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ಪಡಿತರ ವಿಸ್ತರಣೆ ಸೇರಿದಂತೆ ಬಡವರಿಗೆ ಬೇಕಾದ ಎಲ್ಲ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ಸಂಕಲ್ಪ ಪತ್ರವು ಬದ್ಧತೆಯನ್ನು ತೋರಿದೆ ಎಂದು ಅಶ್ವತ್ಥನಾರಾಯಣ್ ಹೇಳಿದರು.
ಇದನ್ನೂ ಓದಿ: Lok Sabha Election 2024: ಡಾ. ಮಂಜುನಾಥ್ ಬೆಂಬಲಿಸಿದ ರೈತನ ಜಮೀನಿಗೆ ಬೆಂಕಿ; ಇದು ಕೈ ಕಾರ್ಯಕರ್ತರ ಕೃತ್ಯ ಎಂದ ಬಿಜೆಪಿ!
ಈಗಾಗಲೇ 7 ಕೋಟಿ ಉದ್ಯೋಗ ಸೃಷ್ಟಿ ಆಗಿದೆ
ಅಟಲ್ ಪಿಂಚಣಿ, ಆರೋಗ್ಯ ವಿಮೆ ಮೊದಲಾದವುಗಳನ್ನು ಇನ್ನಷ್ಟು ವಿಸ್ತರಿಸಲು ಮುಂದಾಗಿದೆ. ಯುವಕರು ನಮ್ಮ ಆಶಾಕಿರಣ. ಅವರಿಗೆ ಹೆಚ್ಚಿನ ಒತ್ತು ಕೊಡಲು ತಂತ್ರಜ್ಞಾನ, ಕೌಶಲ್ಯಕ್ಕೆ ಒತ್ತು ಕೊಡಲಾಗುವುದು. ಮುದ್ರಾ ಯೋಜನೆಯಡಿ ಇನ್ನಷ್ಟು ಜನರಿಗೆ ಪ್ರಯೋಜನ ಸಿಗಲಿದೆ. ಉದ್ಯೋಗ ಸೃಷ್ಟಿಗೆ ಆದ್ಯತೆ ಕೊಡಲಾಗುವುದು. ಈಗಾಗಲೇ 7 ಕೋಟಿ ಉದ್ಯೋಗ ಸೃಷ್ಟಿ ಆಗಿದೆ ಎಂದು ವಿವರ ನೀಡಿದರು. ಮನೆಬಾಗಿಲಿಗೆ ಸರ್ಕಾರದ ಎಲ್ಲ ಸೇವೆಗಳು ದೊರಕಲಿವೆ ಎಂದು ಅಶ್ವತ್ಥನಾರಾಯಣ್ ಹೇಳಿದರು.