Site icon Vistara News

Lok Sabha Election 2024: ಬಿಜೆಪಿ, ಕಾಂಗ್ರೆಸ್‌ ನಾಯಕರಿಗೆ ಚುನಾವಣಾ ಆಯೋಗದಿಂದ ನೋಟಿಸ್‌; ಕಾರಣವೇನು?

Lok Sabha Election 2024

Lok Sabha Election 2024

ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ (Mamata Banerjee) ಮತ್ತು ಹಿಮಾಚಲ ಪ್ರದೇಶದ ಮಂಡಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್‌ (Kangana Ranaut) ಅವರ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಕ್ರಮವಾಗಿ ಬಿಜೆಪಿ ಮುಖಂಡ ದಿಲೀಪ್ ಘೋಷ್ (Dilip Ghosh) ಮತ್ತು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನಾಟೆ (Supriya Shrinate) ಅವರಿಗೆ ಚುನಾವಣಾ ಆಯೋಗ (Election Commission of India) ಬುಧವಾರ ಶೋಕಾಸ್ ನೋಟಿಸ್ ನೀಡಿದೆ (Lok Sabha Election 2024).

ಮಮತಾ ಬ್ಯಾನರ್ಜಿ ವಿರುದ್ಧದ ದಿಲೀಪ್ ಘೋಷ್ ಮತ್ತು ಕಂಗನಾ ರಣಾವತ್‌ ವಿರುದ್ಧದ ಸುಪ್ರಿಯಾ ಶ್ರಿನಾಟೆ ಅವರ ಹೇಳಿಕೆಗಳು ‘ಅಮಾನವೀಯ ಮತ್ತು ಕೆಟ್ಟ ಅಭಿರುಚಿ’ ಎಂದು ಕರೆದಿರುವ ಚುನಾವಣಾ ಆಯೋಗ ಮಾರ್ಚ್ 29ರ ಸಂಜೆ 5 ಗಂಟೆಯೊಳಗೆ ಉತ್ತರಿಸುವಂತೆ ಸೂಚಿಸಿದೆ.

ನೀತಿ ಸಂಹಿತೆಯ ಉಲ್ಲಂಘನೆ

ʼʼಈ ಎರಡೂ ಪ್ರಕರಣಗಳಲ್ಲಿ ನಾಯಕರು ನೀಡಿದ ಹೇಳಿಕೆಗಳು ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಮಾದರಿ ನೀತಿ ಸಂಹಿತೆ (MCC)ಯ ಉಲ್ಲಂಘನೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ಉತ್ತರಿಸುವಂತೆ ಸೂಚಿಸಿ ನೋಟಿಸ್‌ ಜಾರಿ ಮಾಡಲಾಗಿದೆʼʼ ಎಂದು ಚುನಾವಣಾ ಆಯೋಗ ತಿಳಿಸಿದೆ.

ಮಾದರಿ ನೀತಿ ಸಂಹಿತೆಯ ಭಾಗ 1ರ ‘ಸಾಮಾನ್ಯ ನಡವಳಿಕೆ’ಯ ಕಲಂ (2)ರ ಪ್ರಕಾರ, ಇತರ ರಾಜಕೀಯ ಪಕ್ಷಗಳನ್ನು ಟೀಕಿಸುವಾಗ ಅದು ಅವರ ನೀತಿಗಳು, ಕಾರ್ಯಕ್ರಮ, ದಾಖಲೆ ಮತ್ತು ಕೆಲಸಕ್ಕೆ ಸೀಮಿತವಾಗಿರಬೇಕು. ಪಕ್ಷಗಳು ಮತ್ತು ಅಭ್ಯರ್ಥಿಗಳ ಖಾಸಗಿ ಜೀವನವನ್ನು ಟೀಕಿಸಬಾರದು. ಆದರೆ ಈ ಎರಡೂ ಪ್ರಕರಣದಲ್ಲಿ ಈ ನಿಯಮದ ಉಲ್ಲಂಘನೆ ಕಂಡು ಬಂದಿದೆ ಎಂದು ಮೂಲಗಳು ತಿಳಿಸಿವೆ.

ದಿಲೀಪ್ ಘೋಷ್ ಹೇಳಿದ್ದೇನು?

ಪಶ್ಚಿಮ ಬಂಗಾಳದ ಮೇದಿನಿಪುರದ ಬಿಜೆಪಿ ಸಂಸದ ದಿಲೀಪ್ ಘೋಷ್ ಅವರು ಇತ್ತೀಚೆಗೆ ಮಮತಾ ಬ್ಯಾನರ್ಜಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಈ ಬಾರಿ ಬರ್ಧಮಾನ್-ದುರ್ಗಾಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಘೋಷ್ ಮಾತನಾಡಿ, ಮಮತಾ ಅವರ “ಬಾಂಗ್ಲಾ ನಿಜೇರ್ ಮೇಯೆ ಕೆ ಚಾಯ್ (ಬಂಗಾಳಕ್ಕೆ ತನ್ನದೇ ಆದ ಮಗಳು ಬೇಕು)” ಎಂಬ ಘೋಷಣೆಯನ್ನು ಅಣಕಿಸಿದ್ದರು. “ಮಮತಾ ಗೋವಾಕ್ಕೆ ಹೋದಾಗ ಗೋವಾದ ಮಗಳು ಎಂದು ಹೇಳುತ್ತಾರೆ. ತ್ರಿಪುರಾದಲ್ಲಿ ಅವರು ತ್ರಿಪುರಾದ ಮಗಳು ಎಂದು ಪರಿಚಯಿಸಿಕೊಳ್ಳುತ್ತಾರೆ. ಮೊದಲು ಅವರು ತಮ್ಮ ತಂದೆ ಯಾರೆಂಬುದಕ್ಕೆ ಸ್ಪಷ್ಟನೆ ನೀಡಲಿʼʼ ಎಂದು ನಾಲಿಗೆ ಹರಿಯಬಿಟ್ಟಿದ್ದರು.

ಈ ಹೇಳಿಕೆ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ. ಘೋಷ್‌ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಟಿಎಂಸಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತ್ತು. ಜತೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೂ ಘೋಷ್‌ಗೆ ನೋಟಿಸ್‌ ನೀಡಿ ಸ್ಪಷ್ಟನೆ ಕೇಳಿದ್ದರು.

ಸುಪ್ರಿಯಾ ಶ್ರಿನಾಟೆ ಹೇಳಿದ್ದೇನು?

ಹಿಮಾಚಲ ಪ್ರದೇಶದ ಮಂಡಿಯ ಅಭ್ಯರ್ಥಿಯಾಗಿ ನಟಿ ಕಂಗನಾ ರಣಾವತ್‌ ಅವರಿಗೆ ಬಿಜೆಪಿ ಟಿಕೆಟ್‌ ಘೋಷಿಸುತ್ತಿದ್ದಂತೆ ಕಾಂಗ್ರೆಸ್‌ ನಾಯಕಿ ಸುಪ್ರಿಯಾ ಶ್ರಿನಾಟೆ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವಿವಾದಾತ್ಮಕ ಪೋಸ್ಟ್‌ ಶೇರ್‌ ಮಾಡಿದ್ದರು. ಕಂಗನಾ ಅವರ ಫೋಟೊ ಹಾಕಿ, “ಮಂಡಿಯಲ್ಲಿ (ಮಾರುಕಟ್ಟೆ) ಪ್ರಸ್ತುತ ದರ ಎಷ್ಟು ಎಂದು ಯಾರಾದರೂ ಹೇಳಬಹುದೇ?” ಎಂದು ಬರೆದುಕೊಂಡಿದ್ದರು. ಇದು ವಿವಾದದ ಕಿಡಿ ಹಚ್ಚುತ್ತಿದ್ದಂತೆ ಪೋಸ್ಟ್‌ ಅನ್ನು ಡಿಲೀಡ್‌ ಮಾಡಿದ್ದರು.

ಇದನ್ನೂ ಓದಿ: Lok Sabha Election: ಪ.ಬಂಗಾಳದ ಕೃಷ್ಣಾನಗರ ಬಿಜೆಪಿ ಅಭ್ಯರ್ಥಿಗೆ ಕರೆ ಮಾಡಿದ ಮೋದಿ; ಇ.ಡಿ ಕಾರ್ಯಾಚರಣೆ ಬಗ್ಗೆ ಹೇಳಿದ್ದೇನು?

ಈ ಬಗ್ಗೆ ಬಿಜೆಪಿ ಭಾರೀ ವಿರೋಧ ವ್ಯಕ್ತಪಡಿಸಿತ್ತು. ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯನ್ನು ಹ್ಯಾಕ್‌ ಮಾಡಲಾಗಿದೆ. ಕಿಡಿಗೇಡಿಗಳು ತನ್ನ ಖಾತೆಯಿಂದ ಈ ಪೋಸ್ಟ್‌ ಶೇರ್‌ ಮಾಡಿದ್ದಾರೆ ಎಂದು ಬಳಿಕ ಸುಪ್ರಿಯಾ ಶ್ರಿನಾಟೆ ಹೇಳಿಕೆ ನೀಡಿದ್ದರು. ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಎಂದು ಕೇಸರಿ ಪಾಳಯ ದೂರು ನೀಡಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version