ರಾಜ್ಯದ 14 ಕ್ಷೇತ್ರಗಳಲ್ಲಿ ಎರಡನೇ ಹಂತದ ಲೋಕಸಭಾ ಚುನಾವಣೆಯ (Lok Sabha Election 2024) ಮತದಾನ ಇಂದು ಬೆಳಗ್ಗೆ 7ರಿಂದ ಆರಂಭವಾಯಿತು. ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದ್ದು, ಎಲ್ಲ ಬಗೆಯ ಸಿದ್ಧತೆ ಹಾಗೂ ಭದ್ರತಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕಾಂಗ್ರೆಸ್, ಬಿಜೆಪಿ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸಿದ್ದರೆ, ಬಿಎಸ್‌ಪಿ 9, ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳು 23, ಸ್ವತಂತ್ರ ಅಭ್ಯರ್ಥಿಗಳು 117 ಸೇರಿ ಒಟ್ಟು 227 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ. ಇದರಲ್ಲಿ 206 ಪುರುಷ, 21 ಮಹಿಳಾ ಅಭ್ಯರ್ಥಿಗಳಿದ್ದಾರೆ.
ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮತದಾನ ಮಾಡಿ, ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಸಂದೇಶ ನೀಡಿದರು.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಶಂಕ್ರಿಕೊಪ್ಪ ಗ್ರಾಮದಲ್ಲಿ ನಿನ್ನೆ ಸಂಜೆ ಮೃತಪಟ್ಟ ವಾಟರ್ ಮ್ಯಾನ್ ನಾಗಪ್ಪ ಕಾಳಂಗಿ ಅವರ ಅಂತ್ಯಕ್ರಿಯೆಯ ನಡುವೆಯೇ ಕುಟುಂಬ ಸದಸ್ಯರು ಬಂದು ಮತ ಹಾಕಿ ಕರ್ತವ್ಯಪ್ರಜ್ಞೆ ಮೆರೆದರು.
ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಧರ್ಮಪತ್ನಿ ಶೃತಿ ಖರ್ಗೆ ಹಾಗೂ ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಚಿತ್ತಾಪುರ ವಿಧಾನಸಭಾ ಮತಕ್ಷೇತ್ರದ ಗುಂಡಗುರ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೂತ್ ನಂಬರ್ 26 ರಲ್ಲಿ ಹಕ್ಕು ಚಲಾವಣೆ ಮಾಡಿದರು.
ಶಿವಮೊಗ್ಗ ಜಿಲ್ಲಾ ಪಂಚಾಯತ್ ಮತಗಟ್ಟೆಯಲ್ಲಿ ಮತದಾರರನ್ನು ಸೆಳೆಯಲು ಸಿಂಹಾಸನ ಹಾಗೂ ಕಿರೀಟದ ಪ್ರಯೋಗ ಮಾಡಲಾಗಿದೆ. ವೋಟ್ ಮಾಡಲು ಬರುವವರಿಗೆ ರೆಡ್ ಕಾರ್ಪೆಟ್ ಹಾಕಲಾಗಿದೆ. ಮತಗಟ್ಟೆ ಬಳಿ ಸಿಂಹಾಸನ ಹಾಗೂ ಕಿರೀಟ ಇರಿಸಲಾಗಿದ್ದು, “ರಾಜನಂತೆ ಮತ ಹಾಕಿ” ಎಂದು ಪ್ರೋತ್ಸಾಹಿಸಲಾಗುತ್ತಿದೆ.
ವಿಜಯಪುರದ ದರ್ಬಾರ್ ಹೈಸ್ಕೂಲ್‌ನ ಆವರಣದ ಪಿಂಕ್ ಬೂತ್‌ನಲ್ಲಿ ದೃಷ್ಟಿವಿಕಲಚೇತನ ಯುವತಿ ಕೃತಿಕಾ ಮೊದಲಿಗರಾಗಿ ಮತದಾನ ಮಾಡಿ ಕರ್ತವ್ಯಪ್ರಜ್ಞೆ ಮೆರೆದರು. ಇದೇ ಅವರ ಮೊದಲ ಲೋಕಸಭೆಗೆ ಮತದಾನವೂ ಹೌದು.