Site icon Vistara News

Lok Sabha Election 2024: ಚುನಾವಣಾ ಆಯೋಗದ ಕಚೇರಿ ಮುಂದೆ ಟಿಎಂಸಿ ನಾಯಕರ ಪ್ರತಿಭಟನೆ; ಏನಿವರ ಬೇಡಿಕೆ?

Lok Sabha Election 2024

Lok Sabha Election 2024

ಕೋಲ್ಕತ್ತಾ: ದೇಶದಲ್ಲಿ ಲೋಕಸಭಾ ಚುನಾವಣೆ (Lok Sabha Election 2024)ಗೆ ದಿನಗಣನೆ ಆರಂಭವಾಗಿದೆ. ಒಟ್ಟು 7 ಹಂತಗಳಲ್ಲಿ ನಡೆಯುವ ಮತದಾನಕ್ಕೆ ಏಪ್ರಿಲ್‌ 19ರಂದು ಚಾಲನೆ ಸಿಗಲಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ರಾಜಕೀಯ ಚಟುವಟಿಕೆ ಗರಿಗೆದರಿದೆ. ಈ ಮಧ್ಯೆ ತೃಣಮೂಲ ಕಾಂಗ್ರೆಸ್‌ (Trinamool Congress)ನ 10 ಸದಸ್ಯರ ನಿಯೋಗವು ಸೋಮವಾರ (ಏಪ್ರಿಲ್‌ 8) ದೆಹಲಿಯ ಚುನಾವಣಾ ಆಯೋಗ (Election Commission)ದ ಕಚೇರಿಯ ಹೊರಗೆ 24 ಗಂಟೆಗಳ ಧರಣಿಯನ್ನು ಪ್ರಾರಂಭಿಸಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸಿಬಿಐ, ಆದಾಯ ತೆರಿಗೆ ಇಲಾಖೆ, ಎನ್ಐಎ ಮತ್ತು ಇ.ಡಿಯನ್ನು ಬಳಸಿಕೊಂಡು ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಈ ತನಿಖಾ ಏಜೆನ್ಸಿಗಳ ಮುಖ್ಯಸ್ಥರನ್ನು ಬದಲಾಯಿಸುವಂತೆ ಟಿಎಂಸಿ ನಾಯಕರು ಆಗ್ರಹಿಸಿದ್ದಾರೆ.

ಸಂಸದರ ನಿಯೋಗದ ನೇತೃತ್ವವನ್ನು ಪಕ್ಷದ ರಾಜ್ಯಸಭಾ ನಾಯಕ ಡೆರೆಕ್ ಒ’ಬ್ರಿಯಾನ್ ವಹಿಸಿದ್ದಾರೆ. ಪ್ರತಿಭಟನ ನಿರತ ಸಂಸದರಲ್ಲಿ ಡೋಲಾ ಸೇನ್, ಸಾಗರಿಕಾ ಘೋಷ್, ಸಾಕೇತ್ ಗೋಖಲೆ ಮತ್ತು ಶಂತನು ಸೇನ್ ಸೇರಿದ್ದಾರೆ. ಚುನಾವಣೆಗೆ ಮುಂಚಿತವಾಗಿ ಕೇಂದ್ರ ಏಜೆನ್ಸಿಗಳು ವಿರೋಧ ಪಕ್ಷದ ನಾಯಕರನ್ನೇ ಗುರಿಯಾಗಿಸಿ ದಾಳಿ ನಡೆಸುತ್ತಿವೆ ಮತ್ತು ನಾಯಕರನ್ನು ಬಂಧಿಸುತ್ತಿವೆ ಎಂದು ಪ್ರತಿಭಟನಾನಿರತ ನಾಯಕರು ಆರೋಪಿಸಿದ್ದಾರೆ.

“2022ರ ಪ್ರಕರಣಕ್ಕೆ ಸಂಬಂಧಪಟ್ಟು ಎನ್ಐಎ 2024ರಲ್ಲಿ ಬಂಧಿಸುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆ ರಾಜ್ಯದ ವ್ಯಾಪ್ತಿಗೆ ಬರುತ್ತಿದ್ದು, ಯಾವುದೇ ಕ್ರಮ ಕೈಗೊಳ್ಳುವ ಮುನ್ನ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು. ಆದರೆ ಇದನ್ನು ಪಾಲಿಸುತ್ತಿಲ್ಲ. ಹೀಗಾಗಿ ನಾಲ್ಕು ಕೇಂದ್ರ ಏಜೆನ್ಸಿಗಳ ಮುಖ್ಯಸ್ಥರನ್ನು ಬದಲಾಯಿಸಬೇಕು” ಎಂದು ತೃಣಮೂಲ ಕಾಂಗ್ರೆಸ್‌ ಸಂಸದ ಡೋಲಾ ಸೇನ್ ಹೇಳಿದ್ದಾರೆ.

“ಈ ವಿಚಾರವಾಗಿ ನಾವು ಏಪ್ರಿಲ್ 1ರಂದು ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿಯಾಗಿದ್ದೆವುʼʼ ಎಂದು ಎಂದು ಸಾಗರಿಕಾ ಘೋಷ್ ತಿಳಿಸಿದ್ದಾರೆ. “ಸಿಬಿಐ, ಎನ್ಐಎ, ಇ.ಡಿ ಮತ್ತು ಆದಾಯ ತೆರಿಗೆ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿರುವ ರೀತಿಯನ್ನು ನೋಡಿದರೆ ಅವರು ಬಿಜೆಪಿಯ ಸದಸ್ಯರಂತೆ ಕಾಣುತ್ತಾರೆ. ಇದು ವಿರೋಧ ಪಕ್ಷದ ನಾಯಕರಿಗೆ ಸಂಕಷ್ಟವನ್ನು ತಂದಿಟ್ಟಿದೆ. ಬಿಜೆಪಿಯ ಸದಸ್ಯರೊಬ್ಬರು ಎನ್ಐಎ ಅಧಿಕಾರಿಯೊಬ್ಬರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದರು” ಎಂದು ಅವರು ಆರೋಪಿಸಿದ್ದಾರೆ.

ಉದಾಹರಣೆಗಳನ್ನು ನೀಡಿದ ಅವರು, ”ಏಪ್ರಿಲ್ 5 ಮತ್ತು 6ರ ಮಧ್ಯರಾತ್ರಿ ಪಶ್ಚಿಮ ಬಂಗಾಳದಲ್ಲಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ವಿರೋಧ ಪಕ್ಷಗಳ ನಾಯಕರ ಮನೆ ಮೇಲೆ ದಾಳಿ ನಡೆಸಲಾಯಿತು. ಈ ಬಾರಿ, ಎರಡು ವರ್ಷಗಳ ಹಿಂದಿನ ಪ್ರಕರಣದಲ್ಲಿ ಎನ್ಐಎ ಕೈಗೆತ್ತಿಕೊಂಡಿದೆ. ಮುಂಜಾನೆ 3 ಗಂಟೆಗೆ ಮನೆಗಳ ಮೇಲೆ ದಾಳಿ ನಡೆಸಲಾಯಿತು. ಅಲ್ಲಿ ಅಧಿಕಾರಿಗಳು ಮಹಿಳೆಯರಿಗೆ ಕಿರುಕುಳ ನೀಡಿದರು” ಎಂದು ಅವರು ಹೇಳಿದ್ದಾರೆ. ಹೀಗಾಗಿ ಎನ್ಐಎ, ಇಡಿ, ಸಿಬಿಐ ಮತ್ತು ಆದಾಯ ತೆರಿಗೆ ಮುಖ್ಯಸ್ಥರನ್ನು ಬದಲಾಯಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Madhavi Lata: ಹೈದರಾಬಾದ್‌ನಲ್ಲಿ ಓವೈಸಿ ವಿರುದ್ಧ ಸ್ಪರ್ಧಿಸುತ್ತಿರುವ ಬಿಜೆಪಿಯ ಮಾಧವಿ ಲತಾಗೆ ವೈ+ಭದ್ರತೆ ಒದಗಿಸಿದ ಕೇಂದ್ರ

ಚುನಾವಣಾ ಆಯೋಗದ ದೆಹಲಿ ಪ್ರಧಾನ ಕಚೇರಿಯ ಹೊರಗೆ ಧರಣಿ ಕುಳಿತಿರುವ ಟಿಎಂಸಿಯ 10 ಸದಸ್ಯರ ನಿಯೋಗವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version