Site icon Vistara News

Lok Sabha Election 2024: ಹಕ್ಕು ಚಲಾಯಿಸಿ ಮಾದರಿಯಾದ ವಿಶ್ವದ ಅತ್ಯಂತ ಕುಬ್ಜ ಮಹಿಳೆ ಜ್ಯೋತಿ ಆಮ್ಗೆ

Lok Sabha Election 2024

Lok Sabha Election 2024

ಮುಂಬೈ: ಲೋಕಸಭಾ ಚುನಾವಣೆ (Lok Sabha Election 2024)ಯ ಮೊದಲ ಹಂತದ ಮತದಾನ ನಡೆಯುತ್ತಿದೆ. ಮೊದಲ ಹಂತದಲ್ಲಿ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ನಡೆಯುತ್ತಿದ್ದು, ಬೆಳಗ್ಗೆ 7 ಗಂಟೆಗೆ ಆರಂಭವಾದ ವೋಟಿಂಗ್‌ಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಮಧ್ಯೆ ಮಹಾರಾಷ್ಟ್ರದ ನಾಗ್ಪುರದ ಮತಗಟ್ಟೆಯೊಂದರಲ್ಲಿ ವಿಶಿಷ್ಟ ಮಹಿಳೆಯೊಬ್ಬರು ತಮ್ಮ ಹಕ್ಕನ್ನು ಚಲಾಯಿಸಿ ಗಮನ ಸೆಳೆದಿದ್ದಾರೆ. ಅವರೇ ವಿಶ್ವದ ಅತ್ಯಂತ ಕುಬ್ಜ ಮಹಿಳೆ ಎನಿಸಿಕೊಂಡಿರುವ ಜ್ಯೋತಿ ಆಮ್ಗೆ (Jyoti Amge).

30 ವರ್ಷದ ಜ್ಯೋತಿ 62.8 ಸೆಂ.ಮೀ. ಎತ್ತರ ಇದ್ದಾರೆ. ನಾಗ್ಪುರದ ನಿವಾಸಿಯಾಗಿರುವ ಅವರು ತಮ್ಮ ಪೋಷಕರ ಜತೆಗೆ ಮನೆ ಸಮೀಪದ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿದರು. ಹೊಳೆಯುವ ಕೆಂಪು ಬಾರ್ಬಿ ಶೈಲಿಯ ಉಡುಪನ್ನು ಧರಿಸಿ ಆಗಮಿಸಿದ್ದ ಅವರು ಎಲ್ಲರ ಗಮನ ಸೆಳೆದರು. ಅಧಿಕಾರಿಗಳು ಕೂಡ ಕರ್ತವ್ಯ ಮರೆಯದ ಜ್ಯೋತಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ʼʼಇದು ನನ್ನ ಎರಡನೇ ಲೋಕಸಭಾ ಚುನಾವಣೆಯ ಮತದಾನ. ನಾನು ಈಗಾಗಲೇ ಎರಡು ಬಾರಿ ಮತ ಚಲಾಯಿಸಿದ್ದೇನೆ. ಈ ಹಿಂದೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿಯೂ ಮತದಾನ ಮಾಡಿದ್ದೇನೆ. ನಾನು ಯಾವಾಗಲೂ ನನ್ನ ಮತದಾನದ ಹಕ್ಕನ್ನು ಚಲಾಯಿಸುತ್ತೇನೆ ಮತ್ತು ಅದು ನನ್ನ ಕರ್ತವ್ಯವೂ ಹೌದು” ಎಂದು ಜ್ಯೋತಿ ಹಕ್ಕು ಚಲಾಯಿಸಿದ ನಂತರ ಹೆಮ್ಮೆಯಿಂದ ಮಾಧ್ಯಮಗಳಿಗೆ ತನ್ನ ಶಾಯಿ ಮೆತ್ತಿದ ಬೆರಳನ್ನು ಪ್ರದರ್ಶಿಸಿದರು. 2011ರಲ್ಲಿ ಜ್ಯೋತಿ ಅವರನ್ನು ವಿಶ್ವದ ಕುಬ್ಜ ಮಹಿಳೆ ಎಂಬುದಾಗಿ ಗಿನ್ನಿಸ್ ಸಂಸ್ಥೆ ಪ್ರಕಟಿಸಿದೆ.

“ಮತದಾನ ನಮ್ಮ ಕರ್ತವ್ಯ ಮತ್ತು ಹಕ್ಕು. ನಮ್ಮ ಮತದೊಂದಿಗೆ, ನಮ್ಮನ್ನು ಪ್ರತಿನಿಧಿಸಲು ಉತ್ತಮ ನಾಯಕನನ್ನು ಆಯ್ಕೆ ಮಾಡುವುದನ್ನು ನಾವು ಖಚಿತಪಡಿಸಬಹುದು” ಎಂದು ಮಿಷನ್ಸ್ಕಿ ಇಂಡಿಯಾ ಹ್ಯೂಮನ್ ರೈಟ್ಸ್ ಅಸೋಸಿಯೇಷನ್‌ (Missionsky India Human Rights Association)ನ ಬ್ರ್ಯಾಂಡ್‌ ಅಂಬಾಸಿಡರ್ ಆಗಿರುವ ಜ್ಯೋತಿ ಹೇಳಿದರು.

‘Primordial Dwarfism’ (ಪ್ರಿಮೊರ್ಡಿಯಲ್ ಡ್ವಾರ್ಫಿಸಂ) ಎಂಬ ಕಾರಣದಿಂದ ಜ್ಯೋತಿ ಅವರ ಬೆಳವಣಿಗೆ ಕುಂಠಿತಗೊಂಡಿದೆ. ಅವರು ಭಾರತೀಯ ಮತ್ತು ಹಾಲಿವುಡ್ ಚಲನಚಿತ್ರಗಳು ಮತ್ತು ದೂರದರ್ಶನ ಕಾರ್ಯಕ್ರಮಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಜ್ಯೋತಿ ಅಮ್ಗೆ ಅವರು 1993ರ 16 ಡಿಸೆಂಬರ್ ಮಹಾರಾಷ್ಟ್ರದ ನಾಗ್ಪುರದಲ್ಲಿ ಜನಿಸಿದ್ದರು.

ಇದನ್ನೂ ಓದಿ: Lok Sabha Election: ಚುನಾವಣೆಗೆ ಸ್ಪರ್ಧಿಸಿದವರಲ್ಲಿ ಡಿಕೆಸು ನಂ.1 ಶ್ರೀಮಂತ; ಟಾಪ್‌ 10 ಪಟ್ಟಿ ಇಲ್ಲಿದೆ

ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಮತದಾನದ ಪ್ರಮಾಣ ಗಮನಾರ್ಹವಾಗಿ ಏರಿಕೆ ಕಂಡಿದೆ. ಮಧ್ಯಾಹ್ನ 1 ಗಂಟೆಯ ವೇಳೆಗೆ ತ್ರಿಪುರಾದಲ್ಲಿ ಶೇ. 53.04 ಹಕ್ಕು ಚಲಾವಣೆಯಾಗಿದೆ. ಮೇಘಾಲಯ ಮತ್ತು ಮಣಿಪುರ ನಂತರದ ಸ್ಥಾನದಲ್ಲಿವೆ. ಪಶ್ಚಿಮ ಬಂಗಾಳದಲ್ಲಿ ಶೇ. 50.96ರಷ್ಟು ಮತದಾನವಾಗಿದ್ದರೆ, ಲಕ್ಷದ್ವೀಪದಲ್ಲಿ ಕಡಿಮೆ ಶೇ. 29.91ರಷ್ಟು ಮಂದಿ ಹಕ್ಕು ಚಲಾಯಿಸಿದ್ದಾರೆ. ಮೊದಲ ಹಂತದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ. 43.11, ಅಸ್ಸಾಂನಲ್ಲಿ ಶೇ. 45.12 ಮತ್ತು ಮಧ್ಯಪ್ರದೇಶದಲ್ಲಿ ಶೇ. 44.43, ಶೇ. 40.05ರಷ್ಟು ಮತದಾನವಾಗಿದೆ.

Exit mobile version