Site icon Vistara News

Lok Sabha Election 2024: ಮತದಾನಕ್ಕೆ ಬಂದು ಇವಿಎಂಗೆ ಬೆಂಕಿ ಹಾಕಿದ ಯುವಕ; ಸುರಪುರದಲ್ಲಿ ಕಲ್ಲು ತೂರಾಟ

Lok sabha Election 2024

ಯಾದಗಿರಿ/ಬೆಳಗಾವಿ: ಯಾದಗಿರಿಯ ಸುರಪುರ ಉಪಚುನಾವಣೆ ಮತದಾನದ (Lok Sabha Election 2024) ವೇಳೆ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಗಲಾಟೆ ಶುರುವಾಗಿದ್ದು, ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬಾದ್ಯಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಕಲ್ಲು ತೂರಾಟದ ವೇಳೆ ಓರ್ವನ ತಲೆಗೆ ಗಂಭೀರ ಗಾಯವಾಗಿದೆ.

ಮತದಾನದ ವೇಳೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳವು ವಿಕೋಪಕ್ಕೆ ತಿರುಗಿದೆ. ಈ ವೇಳೆ ಕೈ-ಕಮಲ ಕಾರ್ಯಕರ್ತರು ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ತೂರಾಟ ಹಿನ್ನೆಲೆ ಗ್ರಾಮದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ‌ ದೌಡಾಯಿಸಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು. ಸುರಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇವಿಎಂಗೆ ಬೆಂಕಿ ಹಾಕಿದ ಯುವಕ

ನೆರೆಯ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಸಾಂಗೋಲಾ ತಾಲೂಕಿನ ಬಾಗಲವಾಡಿ ಗ್ರಾಮದಲ್ಲಿ ಯುವಕನೊಬ್ಬ ಇವಿಎಂಗೆ ಬೆಂಕಿ ಹಚ್ಚಿದ್ದಾನೆ. ಇದರಿಂದಾಗಿ ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಅಲ್ಲಿದ್ದ ಸಿಬ್ಬಂದಿ ನೀರು ಹಾಕಿ ಬೆಂಕಿ ಹರಿಸಿದ್ದಾರೆ. ಮರಾಠಾ ಆಕರ್ಷಣ ವಿಚಾರಕ್ಕೆ ಆಕ್ರೋಶಗೊಂಡಿದ್ದ ಎನ್ನಲಾಗಿದೆ. ಇನ್ನೂ ಈ ಮತಗಟ್ಟೆಯಲ್ಲಿ ಸುಮಾರು 1300 ಮತದಾರರಿರುವ ಕೇಂದ್ರವಾಗಿದೆ. ಸದ್ಯ ಯುವಕನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Lok Sabha Election 2024: ಕುಸಿದು ಬಿದ್ದ ಚುನಾವಣಾ ಸಿಬ್ಬಂದಿ; ಮತದಾನಕ್ಕೆ ಬಂದು ಟ್ರೀಟ್‌ ಮಾಡಿದ ಡಾಕ್ಟರ್‌

ವಿಜಯನಗರದಲ್ಲಿ ಮತದಾನ ಬಹಿಷ್ಕಾರ

ವಿಜಯನಗರ: ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಚಿಲಕನಹಟ್ಟಿ ಗ್ರಾಮದಲ್ಲಿ ಪ್ರತ್ಯೇಕ ಮತಗಟ್ಟೆ ವಿಂಗಡಣೆ ಮಾಡಿದ್ದಕ್ಕೆ ಮತದಾನ ಬಹಿಷ್ಕಾರ ಹಾಕಲಾಯಿತು. ಹಾರುವನಹಳ್ಳಿ ಗ್ರಾಮದ ಮತಗಟ್ಟೆ ಸಂಖ್ಯೆ 78ರಲ್ಲಿ, ಚಿಲಕನಹಟ್ಟಿಯ ಮಾರುತಿ ನಗರದಲ್ಲಿ ಪ್ರತ್ಯೇಕ ಮತದಾನ ಕೇಂದ್ರ ಮಾಡುವಂತೆ ಮತದಾರರು ಪಟ್ಟು ಹಿಡಿದರು. ಕಳೆದ ಹಲವು ವರ್ಷದಿಂದ ಪ್ರತ್ಯೇಕ ಮತಗಟ್ಟೆಗೆ ಒತ್ತಾಯವಿತ್ತು. ಚಿಲಕನಹಟ್ಟಿಯಿಂದ ಹಾರುವನಹಳ್ಳಿ ಗ್ರಾಮಕ್ಕೆ 3 ಕಿ.ಮೀ ಅಂತರವಿದೆ. ಅದಕ್ಕೆ ರಾಷ್ಟ್ರೀಯ ಹೆದ್ದಾರಿ 50 ದಾಟಬೇಕಿದ್ದು, ಅಪಘಾತ ಸಂಭವಿಸಿದರೆ ಯಾರು ಹೊಣೆ ಎಂಬ ಪ್ರಶ್ನೆ ಗ್ರಾಮಸ್ಥರದ್ದು.

ದಾವಣಗೆರೆಯಲ್ಲಿ ಗೌಪ್ಯ ಮತದಾನ ವೈರಲ್‌

ದಾವಣಗೆರೆ: ಎಷ್ಟೇ ಕಟ್ಟುನಿಟ್ಟಾಗಿ ಗೌಪ್ಯ ಮತದಾನ ಮಾಡಿದರೂ ಫೋಟೋ ತೆಗೆದುಕೊಂಡು ಪಬ್ಲಿಕ್‌ ಮಾಡುತ್ತಿರುವವರು ಕಂಡುಬಂದಿದ್ದಾರೆ. ದಾವಣಗೆರೆಯ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್‌ಗೆ ಮತ ಹಾಕಿದ್ದನ್ನು ಬಿಜೆಪಿ ಕಾರ್ಯಕರ್ತನೊಬ್ಬ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಅದನ್ನು ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಮತಗಟ್ಟೆಗೆ ಮೊಬೈಲ್ ನಿಷೇಧ ಮಾಡಿದರೂ ಮೊಬೈಲ್ ತೆಗೆದುಕೊಂಡು ಹೋಗಲಾಗಿದೆ.

ಬೆಳಗಾವಿಯಲ್ಲಿ ಬಿಜೆಪಿ- ಕಾಂಗ್ರೆಸ್‌ ಕಾರ್ಯಕರ್ತ ವಾಗ್ವಾದ

ಬೆಳಗಾವಿ: ಕೆಲವೆಡೆ ಬಿಜಪಿ- ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಬೆಳಗಾವಿಯ ಹನುಮಾನ್ ನಗರದಲ್ಲಿರುವ ಸರ್ಕಾರಿ ಕನ್ನಡ ಹಿರಿಯ ಶಾಲೆಯಲ್ಲಿರುವ ಮತಗಟ್ಟೆಯಲ್ಲಿ ಮತಗಟ್ಟೆಯಲ್ಲೇ ನಿಂತು ಮತದಾರರು ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಪ್ರಭಾವ ಬೀರುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದರು. ಈ ವೇಳೆ ಕಾಂಗ್ರೆಸ್ ‌ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version