Site icon Vistara News

Lok Sabha Election: ಪ.ಬಂಗಾಳದ ಕೃಷ್ಣಾನಗರ ಬಿಜೆಪಿ ಅಭ್ಯರ್ಥಿಗೆ ಕರೆ ಮಾಡಿದ ಮೋದಿ; ಇ.ಡಿ ಕಾರ್ಯಾಚರಣೆ ಬಗ್ಗೆ ಹೇಳಿದ್ದೇನು?

loksabha election

loksabha election

ಕೋಲ್ಕತ್ತಾ: ಲೋಕಸಭಾ ಚುನಾವಣೆ (Lok Sabha Election)ಗೆ ದಿನಗಣನೆ ಆರಂಭವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಚಟುವಟಿಕೆ ಗರಿಗೆದರಿದೆ. ಪಕ್ಷಗಳ ಟಿಕೆಟ್‌ ಹಂಚಿಕೆ ಬಹುತೇಕ ಪೂರ್ಣಗೊಂಡಿದೆ. ಹೀಗಾಗಿ ಚುನಾವಣಾ ಕಣದ ಸ್ಪಷ್ಟ ಚಿತ್ರಣ ಗೋಚರಿಸತೊಡಗಿದೆ. ಈ ಮಧ್ಯೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narenda Modi) ಅವರು ಪಶ್ಚಿಮ ಬಂಗಾಳದ ಕೃಷ್ಣಾನಗರ (Krishnanagar) ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿ ರಾಜಮಾತಾ ಅಮೃತಾ ರಾಯ್ (Rajmata Amrita Roy) ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಇಲ್ಲಿ ತೃಣಮೂಲ ಕಾಂಗ್ರೆಸ್‌ನಿಂದ​​​​​ ಮಹುವಾ ಮೊಯಿತ್ರಾ (Mahua Moitra) ಕಣಕ್ಕಿಳಿದಿದ್ದಾರೆ. ಹೀಗಾಗಿ ಈ ಕ್ಷೇತ್ರ ದೇಶದ ಗಮನ ಸೆಳೆದಿದೆ.

ಮೋದಿ ಹೇಳಿದ್ದೇನು?

”ಜಾರಿ ನಿರ್ದೇಶನಾಲಯ (Enforcement Directorat)ದ ಅಧಿಕಾರಿಗಳು ರಾಜ್ಯದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಡವರಿಂದ ಲೂಟಿ ಮಾಡಿದ ಹಣ ಮತ್ತು ಆಸ್ತಿಯನ್ನು ಇಡಿ ವಶಪಡಿಸಿಕೊಂಡು ಮತ್ತೆ ಬಡವರಿಗೆ ನೀಡುತ್ತಿದೆ. ಒಂದು ಕಡೆ ದೇಶದಲ್ಲಿ ಭ್ರಷ್ಟಾಚಾರವನ್ನು ಬೇರು ಸಮೇತ ಕಿತ್ತೆಸೆಯಲು ಬಿಜೆಪಿ ಬದ್ಧವಾಗಿದೆ. ಮತ್ತೊಂದೆಡೆ ಎಲ್ಲ ಭ್ರಷ್ಟರನ್ನು ರಕ್ಷಿಸಲು ಕೆಲವರು ಒಗ್ಗೂಡುತ್ತಿದ್ದಾರೆʼʼ ಎಂದು ಮೋದಿ ಅವರು ಪರೋಕ್ಷವಾಗಿ ʼಇಂಡಿಯಾʼ ಮೈತ್ರಿ ಒಕ್ಕೂಟಕ್ಕೆ ತಿರುಗೇಟು ನೀಡಿದರು.

ʼʼರಾಜ್ಯದ ಜನರು ಈ ಬಾರಿ ಬದಲಾವಣೆಗಾಗಿ ವೋಟು ಚಲಾಯಿಸುವುದಾಗಿ ಹೇಳುತ್ತಿದ್ದಾರೆ. ರಾಜ್ಯದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ನಾಯಕರ ಭ್ರಷ್ಟಾಚಾರವನ್ನು ಜನರ ಮುಂದೆ ಇಡುವುದೇ ಬಿಜೆಪಿಯ ಪ್ರಮುಖ ಉದ್ದೇಶ. ಈಗಾಗಲೇ ಮಾಜಿ ಸಚಿವ ಪಾರ್ಥ ಚಟರ್ಜಿ ಸೇರಿದಂತೆ ಕೆಲವರ ಬಂಧನ ಮತ್ತು ದೊಡ್ಡ ಮೊತ್ತದ ಹಣ ಹಾಗೂ ಆಸ್ತಿಗಳನ್ನು ಮುಟ್ಟುಗೋಲು ಹಾಕಿರುವುದನ್ನು ಜನರು ಗಮನಿಸುತ್ತಿದ್ದಾರೆʼʼ ಎಂದು ಪ್ರಧಾನಿ ತಿಳಿಸಿದರು.

ಪಶ್ಚಿಮ ಬಂಗಾಳದ ಸಂದೇಶ್‌ಖಾಲಿ ಹಿಂಸಾಚಾರದ ಸಂತ್ರಸ್ತೆ ರೇಖಾ ಪಾತ್ರಾ ಅವರು ಬಸಿರ್‌ಹಾತ್‌ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದು, ಅವರಿಗೆ ಮೋದಿ ಮಂಗಳವಾರ (ಮಾರ್ಚ್‌ 26) ಕರೆ ಮಾಡಿದ್ದರು. ಅದಾಗಿ ಒಂದು ದಿನದ ನಂತರ ಮೋದಿ ಅವರು ಅಮೃತಾ ರಾಯ್ ಜತೆ ಮಾತನಾಡಿದರು.

‘ಶಕ್ತಿ ಸ್ವರೂಪ’ ಎಂದು ಕರೆದ ಮೋದಿ

ಸಂಭಾಷಣೆ ವೇಳೆ ಪ್ರಧಾನಿ ಮೋದಿ ಅವರು ರೇಖಾ ಅವರನ್ನು ‘ಶಕ್ತಿ ಸ್ವರೂಪ’ ಎಂದು ಕರೆದಿದ್ದರು. ಈ ವೇಳೆ ಸಂದೇಶ್​ಖಾಲಿಯ ಮಹಿಳೆಯರಿಗಾಗಿ ಹೋರಾಡುವುದನ್ನು ಮುಂದುವರಿಸುವುದಾಗಿ ರೇಖಾ ಭರವಸೆ ನೀಡಿದ್ದರು. “ನನಗೆ ಟಿಕೆಟ್ ನೀಡಿದ ನರೇಂದ್ರ ಮೋದಿ ಮತ್ತು ಬಿಜೆಪಿಗೆ ನಾನು ಕೃತಜ್ಞಳಾಗಿದ್ದೇನೆ. ನಾನು ಯಾವಾಗಲೂ ಸಂದೇಶ್​​ಖಾಲಿಯ ಮಹಿಳೆಯರೊಂದಿಗೆ ನಿಲ್ಲುತ್ತೇನೆ ಮತ್ತು ಅವರಿಗಾಗಿ ಪ್ರತಿಭಟನೆ ನಡೆಸುತ್ತೇನೆ. ನಾನು ಅವರ ಧ್ವನಿಯಾಗುತ್ತೇನೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Rekha Patra: ಸಂದೇಶ್‌ಖಾಲಿ ಸಂತ್ರಸ್ತೆಗೆ ಟಿಕೆಟ್‌ ನೀಡಿದ ಬಿಜೆಪಿ; ಯಾರಿವರು ರೇಖಾ ಪಾತ್ರಾ?

ಮತದಾನ ಸಂಬಂಧಿತ ಹಿಂಸಾಚಾರಕ್ಕೆ ಕುಖ್ಯಾತವಾಗಿರುವ ಪಶ್ಚಿಮ ಬಂಗಾಳದಲ್ಲಿ ಲೋಕಸಭಾ ಚುನಾವಣೆಯ ಎಲ್ಲ ಏಳು ಹಂತಗಳಲ್ಲಿ ಏಪ್ರಿಲ್ 19, 26, ಮೇ 7, 13, 20, 25 ಮತ್ತು ಜೂನ್ 1ರಂದು ನಡೆಯಲಿದೆ. 2021ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಎಂಟು ಹಂತಗಳಲ್ಲಿ ನಡೆದಿತ್ತು. ಇನ್ನು 2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 42 ಸ್ಥಾನಗಳ ಪೈಕಿ ಬಿಜೆಪಿ 18 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಟಿಎಂಸಿ 22 ಕಡೆ ಜಯ ಗಳಿಸಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version