Site icon Vistara News

Loka sabha election-2024: ಮೋದಿ ಗೆದ್ದಿದ್ದ ವಡೋದರ ಕ್ಷೇತ್ರದಲ್ಲಿ ಬಿಜೆಪಿಯಿಂದ ಅಚ್ಚರಿಯ ಅಭ್ಯರ್ಥಿ!

Loka sabha election-2024

ವಡೋದರಾ: ಪ್ರಧಾನಿ (PM) ನರೇಂದ್ರ ಮೋದಿ (narendra modi) ಅವರ ಕ್ಷೇತ್ರವಾಗಿದ್ದ ಗುಜರಾತ್‌ನ (gujarath) ವಡೋದರಾ (Vadodara) ಲೋಕಸಭಾ ಸ್ಥಾನಕ್ಕೆ (Loka sabha election-2024) ಬಿಜೆಪಿಯಿಂದ (bjp) ಅತ್ಯಂತ ಕಿರಿಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗಿದೆ. ಸಂಸದ ರಂಜನ್ ಭಟ್ ಅವರು ಅನಿರೀಕ್ಷಿತವಾಗಿ ಚುನಾವಣೆ ಕಣದಿಂದ ಹಿಂದೆ ಸರಿದಿರುವುದರಿಂದ ಅವರ ಸ್ಥಾನಕ್ಕೆ 33 ವರ್ಷದ ಹೇಮಂಗ್ ಜೋಶಿ ಅವರನ್ನು ಆಯ್ಕೆ ಮಾಡಲಾಗಿದೆ. ಜೋಶಿ ಅವರ ವಿರುದ್ಧ ಕಾಂಗ್ರೆಸ್‌ನ ಪದ್ರಾದ ಮಾಜಿ ಶಾಸಕ ಜಸ್ಪಾಲ್‌ಸಿನ್ಹ್ ಪಾಧಿಯಾರ್ ಕಣಕ್ಕೆ ಇಳಿದಿದ್ದಾರೆ.

ವಡೋದರಾ ಕ್ಷೇತ್ರದಲ್ಲಿ ಸಂಸದ ರಂಜನ್ ಭಟ್ ಅವರು ಮರುನಾಮನಿರ್ದೇಶನಗೊಂಡಿದ್ದರೂ ಅನಿರೀಕ್ಷಿತವಾಗಿ ಅವರು ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಆಗ ಲೋಕಸಭಾ ಅಭ್ಯರ್ಥಿಯಾಗಿ ತನ್ನ ಹೆಸರು ಸೂಚನೆಯಾಗಬಹುದು ಎನ್ನುವ ಕಲ್ಪನೆಯೂ ಹೇಮಂಗ್ ಜೋಶಿ ಅವರಿಗೆ ಇರಲಿಲ್ಲ.

ಜೋಶಿ ಮತ್ತು ಅವರ ಪತ್ನಿ ಹೋಳಿಯ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಅವರಿಗೆ ಅನೇಕ ಅಭಿನಂದನಾ ಕರೆಗಳು ಬಂದಿವೆ. ಆಗ ಜೋಶಿ ಅವರಿಗೆ ಬಿಜೆಪಿ ತನ್ನನ್ನು ವಡೋದರಾ ಸ್ಥಾನಕ್ಕೆ ಅಭ್ಯರ್ಥಿಯನ್ನಾಗಿ ಘೋಷಿಸಿದೆ ಎಂದು ತಿಳಿಯಿತು.

ಇದನ್ನೂ ಓದಿ: Lok Sabha Election: ನಿನ್ನೆ ಈ ಗ್ರಾಮದ ಒಬ್ಬರೂ ಮತ ಹಾಕಲಿಲ್ಲ; ಇದ್ದಿದ್ದು ಯಾರ ಭಯ?

ಕಿರಿಯ ಅಭ್ಯರ್ಥಿ ಜೋಶಿ

ಗುಜರಾತ್ ನಲ್ಲಿ ಒಟ್ಟು 26 ಲೋಕಸಭಾ ಕ್ಷೇತ್ರಗಳಿದ್ದು, ಈ 26 ಕ್ಷೇತ್ರಗಳಲ್ಲಿ ಕಣಕ್ಕೆ ಇಳಿದಿರುವ ಅಭ್ಯರ್ಥಿಗಳಲ್ಲಿ ಅತ್ಯಂತ ಕಿರಿಯ ಅಭ್ಯರ್ಥಿ ಹೇಮಂಗ್ ಜೋಶಿ. ರಾಜ್ಯದ ಇತರ ಕ್ಷೇತ್ರಗಳಲ್ಲಿ ಗೆಲುವಿನ ಅಂತರದ ಗುರಿ 5 ಲಕ್ಷವಾಗಿದೆ. ಆದರೆ ವಡೋದರಾದಲ್ಲಿ ರಾಜ್ಯ ಮುಖ್ಯಸ್ಥ ಸಿ.ಆರ್. ಪಾಟೀಲ್ ಅದನ್ನು 10 ಲಕ್ಷಕ್ಕೆ ಏರಿಸಿದ್ದಾರೆ. 40 ವರ್ಷದೊಳಗಿನ ಭಾರತದ 40 ಯುವ ನಾಯಕರ ಪಟ್ಟಿಯಲ್ಲಿ ಜೋಶಿ ಅವರ ಹೆಸರೂ ಇದೆ.


ಪ್ರಧಾನಿ ಅವರ ಕ್ಷೇತ್ರ

ವಡೋದರಾ ಕ್ಷೇತ್ರವು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕ್ಷೇತ್ರವಾಗಿತ್ತು. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಗೆ ತೆರಳಿ ಕಣಕ್ಕೆ ಇಳಿದರು. ಅದಕ್ಕೂ ಮೊದಲು ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಹೆಸರುವಾಸಿಯಾಗಿದ್ದ ವಡೋದರಾದಲ್ಲಿ ಅವರು ಗೆದ್ದಿದ್ದರು.

ಯಾವಾಗ ಮತದಾನ?

ಬಿಜೆಪಿಯ ಯುವ ಅಭ್ಯರ್ಥಿಯಾಗಿರುವ ಜೋಶಿ ಅವರು ಇಲ್ಲಿ 10 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಲು ಶ್ರಮಿಸುತ್ತಿದ್ದಾರೆ. ಇದು ಅವರ ರಾಜ್ಯ ಮುಖ್ಯಸ್ಥ ಸಿ.ಆರ್. ಪಾಟೀಲ್ ಅವರ ಗುರಿಯಾಗಿದೆ. ದೇಶದಾದ್ಯಂತ ನಡೆಯಲಿರುವ ಮೂರನೇ ಹಂತದ ಚುನಾವಣೆ ವೇಳೆ ಗುಜರಾತ್ ರಾಜ್ಯದ ಎಲ್ಲ ಸಂಸದ ಕ್ಷೇತ್ರಗಳಿಗೂ ಮೇ 7ರಂದು ಮತದಾನ ನಡೆಯಲಿದೆ.

ಟಿಕೆಟ್ ಸಿಕ್ಕಿದ್ದಕ್ಕೆ ಆಶ್ಚರ್ಯ

ವಡೋದರಾ ಕ್ಷೇತ್ರದಿಂದ ಟಿಕೆಟ್ ಪಡೆದಿರುವ ಜೋಶಿ ಅವರಿಗೆ ಇಲ್ಲಿ ತಮಗೆ ಟಿಕೆಟ್ ಸಿಗುತ್ತೆ ಎನ್ನುವುದನ್ನು ಅವರು ಕನಸಿನಲ್ಲಿಯೂ ಯೋಚಿಸಿರಲಿಲ್ಲ. ಟಿಕೆಟ್ ಸಿಕ್ಕಿರುವುದು ಅವರಿಗೆ ಆಶ್ಚರ್ಯ ತಂದಿದೆ ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿಕೊಂಡಿದ್ದಾರೆ.

ರಂಜನ್ ಭಟ್ ಕಣದಿಂದ ಹಿಂದೆ ಸರಿದದ್ದು ಯಾಕೆ?

2014ರಲ್ಲಿ ವಡೋದರಾ ಉಪಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರು ಕ್ಷೇತ್ರವನ್ನು ಬಿಟ್ಟುಕೊಟ್ಟ ಬಳಿಕ ರಂಜನ್ ಭಟ್ ಅವರು ಇಲ್ಲಿ ಗೆದ್ದಿದ್ದರು. 2019ರಲ್ಲೂ ಅವರು ತಮ್ಮ ಸ್ಥಾನವನ್ನು ಉಳಿಸಿಕೊಂಡರು. ಮತ್ತೆ ಮೂರನೇ ಅವಧಿಗೆ ಅವರು ಕಣಕ್ಕೆ ಇಳಿಯಲು ಸಜ್ಜಾಗುತ್ತಿದ್ದಾಗ ಸ್ಥಳೀಯ ಬಿಜೆಪಿ ಘಟಕದಲ್ಲಿ ಆಂತರಿಕ ಬಂಡಾಯವೆದ್ದಿತ್ತು. ಇದು ಅವರ ವಿಶ್ವಾಸವನ್ನು ಹಾಳುಮಾಡಿತು. ಹೀಗಾಗಿ ಅವರು ಮಾರ್ಚ್ ನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಇಷ್ಟವಿಲ್ಲ ಎಂದು ಘೋಷಿಸಿದರು. ಹೀಗಾಗಿ ಜೋಶಿ ಅವರನ್ನು ಮರುದಿನವೇ ಅಭ್ಯರ್ಥಿಯನ್ನಾಗಿ ಘೋಷಿಸಲಾಯಿತು.

ಫೋನ್ ಕರೆ ಕೂಡ ಬಂದಿಲ್ಲ!

ನನ್ನನ್ನು ಅಭ್ಯರ್ಥಿಯನ್ನಾಗಿ ಅಧಿಕೃತವಾಗಿ ಘೋಷಿಸುವವರೆಗೂ ಪಕ್ಷದ ಅಭ್ಯರ್ಥಿ ಎಂದು ಪರಿಗಣಿಸಲಾಗಿದೆ ಎಂದು ಯಾರೂ ಕೂಡ ಫೋನ್ ಕರೆ ಮಾಡಿಲ್ಲ. ಹೆಸರು ಅಧಿಕೃತವಾದ ತಕ್ಷಣ ಪಕ್ಷದ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಕರೆ ಮಾಡಿ ತಿಳಿಸಿದ್ದಾರೆ ಎಂದು ಜೋಶಿ ಹೇಳಿದ್ದಾರೆ.

ನನ್ನಂತಹ ವ್ಯಕ್ತಿಗೆ ಅಂತಹ ದೊಡ್ಡ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದು ಮತ್ತು ಅದಕ್ಕೆ ಎಲ್ಲಾ ರೀತಿಯ ಬೆಂಬಲವನ್ನು ನೀಡುವುದು ನನಗೆ ಅಗಾಧವಾಗಿದೆ. ಕ್ಷೇತ್ರದ ಯುವ ಮತದಾರರಿಂದ ಹೆಚ್ಚಿನ ಬೆಂಬಲ ಸಿಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಶಿಕ್ಷಣ ರಾಜಧಾನಿ

ವಡೋದರಾ ಪ್ರದೇಶವು ಗುಜರಾತ್‌ನ ಶಿಕ್ಷಣ ರಾಜಧಾನಿಯಾಗಿದೆ. ಎಂಎಸ್ ವಿಶ್ವವಿದ್ಯಾಲಯ, ಕೇಂದ್ರೀಯ ವಿಶ್ವವಿದ್ಯಾಲಯ, ಕ್ರೀಡಾ ವಿಶ್ವವಿದ್ಯಾಲಯ, ಗತಿ ಶಕ್ತಿ ವಿಶ್ವವಿದ್ಯಾಲಯಗಳು ಇಲ್ಲಿದ್ದು ಎರಡು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದೆ. ಇಲ್ಲಿ ಶೇ. 30- 35 ರಷ್ಟು ಯುವ ಮತದಾರರಿದ್ದಾರೆ.

ಮತದಾರರಿಗೆ ಜೋಶಿ ಭರವಸೆ

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ದೇಶದ ಯುವ ಜನತೆಯನ್ನು ಸಜ್ಜುಗೊಳಿಸುವ ಮೋದಿ ಸರ್ಕಾರದ ಪ್ರಯತ್ನಗಳನ್ನು ಜಾರಿಗೊಳಿಸಲು ಅವರ ಪ್ರತಿನಿಧಿಯಾಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ ಜೋಶಿ.

ಪ್ರಧಾನಿ ಮೋದಿ ಅವರು ಬಿಡುಗಡೆ ಮಾಡಿರುವ ‘ಸಂಕಲ್ಪ ಪತ್ರ’ ಪ್ರಣಾಳಿಕೆ ದೇಶದ ಯುವಕರ ಆಕಾಂಕ್ಷೆಗಳು ಮತ್ತು ನಿರೀಕ್ಷೆಗಳ ಪ್ರತಿಬಿಂಬವಾಗಿದೆ. ಇನ್ನೂ ಒಂದು ಶತಮಾನದ ಅನಂತರ ನಮ್ಮನ್ನು ಮುಟ್ಟುವ ಹಲವು ಅಂಶಗಳನ್ನು ಹೊಂದಿದೆ. ನಾಲ್ಕು ಪ್ರಮುಖ ಅಂಶಗಳಲ್ಲಿ ಗರೀಬ್, ಯುವ, ಅನ್ನದಾತ ಮತ್ತು ನಾರಿ (ಗ್ಯಾನ್) – ಯುವ ದೊಡ್ಡ ಪಾತ್ರವನ್ನು ವಹಿಸುತ್ತದೆ. ಪ್ರಧಾನಿ ಮೋದಿ ಅವರು ಬಹಳಷ್ಟು ಹೇಳುತ್ತಾರೆ ಅದನ್ನು ಸಾಧಿಸುವುದು ಯುವಕರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಜೋಶಿ ತಿಳಿಸಿದರು.

1998 ರಿಂದ ಬಿಜಿಪಿಯ ಭದ್ರಕೋಟೆ

ವಡೋದರಾದಲ್ಲಿ ಬಿಜೆಪಿ 1998 ರಿಂದ ಲೋಕಸಭೆ ಚುನಾವಣೆಯನ್ನು ಗೆಲ್ಲುತ್ತಲೇ ಇದೆ. ಈ ಕ್ಷೇತ್ರದಲ್ಲಿ 1991 ರಿಂದ ಮೂರು ಮಹಿಳಾ ಸಂಸದರನ್ನು ಆಯ್ಕೆ ಮಾಡಿದೆ.

ವಡೋದರಾ ಸಾಂಪ್ರದಾಯಿಕವಾಗಿ ಬಿಜೆಪಿ ಭದ್ರಕೋಟೆಯಾಗಿದೆ. ವರ್ಗ ಮತ್ತು ಜಾತಿಯ ರೇಖೆಗಳನ್ನು ಮೀರಿ ಜನರು ಬಿಜೆಪಿಯನ್ನು ಇಷ್ಟಪಟ್ಟಿದ್ದಾರೆ. ವಡೋದರಾ ಪ್ರಧಾನಿ ಮೋದಿಯವರ ಕರ್ಮಭೂಮಿಯಾಗಿಯೂ ಕಾರ್ಯನಿರ್ವಹಿಸಿದೆ. ಆದ್ದರಿಂದ ಇಲ್ಲಿ ನಾವು ಪಕ್ಷಕ್ಕಾಗಿ ಪ್ರಚಾರ ಮಾಡುವ ಅಗತ್ಯವಿಲ್ಲ. ಆದರೆ ಪಕ್ಷದೊಂದಿಗಿನ ಜನರ ಅಸ್ತಿತ್ವದಲ್ಲಿರುವ ಸಂಪರ್ಕವನ್ನು ಪುನರುಜ್ಜೀವನಗೊಳಿಸಲು ಮತ್ತು ಪುನಶ್ಚೇತನಗೊಳಿಸಲು ಶ್ರಮಿಸಬೇಕಿದೆ ಎನ್ನುತ್ತಾರೆ ಜೋಶಿ.

ಅನುಭವ

ಜೋಶಿ ಅವರು ಮುನ್ಸಿಪಲ್ ಪ್ರಾಥಮಿಕ ಶಾಲಾ ಮಂಡಳಿಯ ಉಪಾಧ್ಯಕ್ಷರಾಗಿದ್ದು, ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಆರ್‌ಎಸ್‌ಎಸ್‌ನ ವಿದ್ಯಾರ್ಥಿ ವಿಭಾಗವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಸದಸ್ಯರಾಗಿದ್ದರು.

ಐಐಎಂ ಅಹಮದಾಬಾದ್‌ನಿಂದ ಶಿಕ್ಷಣದಲ್ಲಿ ನಾಯಕತ್ವದ ಕುರಿತು ಕೋರ್ಸ್ ಮಾಡಿದ್ದು, ಪ್ರಸ್ತುತ ನಾಯಕತ್ವದಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ. ಇವರ ಪತ್ನಿ ವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದಾರೆ.

Exit mobile version