ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ 292 ಸ್ಥಾನಗಳನ್ನು ಪಡೆದುಕೊಳ್ಳುವ ಮೂಲಕ ಬಿಜೆಪಿ ನೇತೃತ್ವದ ಎನ್‌ಡಿಎ (National Democratic Alliance) ಸತತ ಮೂರನೇ ಬಾರಿಗೆ ಅಧಿಕಾರದ ಗದ್ದುಗೆಗೆ ಏರಿದೆ. ಈಗಾಗಲೇ ಎನ್‌ಡಿಎ ಮಿತ್ರಪಕ್ಷಗಳು ಬೆಂಬಲ ಸೂಚಿಸಿದ್ದು, ಸರ್ಕಾರ ರಚನೆಗೆ ಸಿದ್ಧತೆ ಆರಂಭಿಸಿವೆ (NDA 3.0). ಇಂದು (ಜೂನ್ 7) ಎನ್‌ಡಿಎ ನಾಯಕರು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರನ್ನು ಭೇಟಿಯಾಗಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸರ್ಕಾರ ರಚನೆಯ ಹಕ್ಕು ಮಂಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಿಹಾರ ಮುಖ್ಯಮಂತ್ರಿ, ಜೆಡಿಯು ನಾಯಕ ನಿತೀಶ್ ಕುಮಾರ್ ಮತ್ತು ಆಂಧ್ರ ಪ್ರದೇಶದ ತೆಲುಗು ದೇಶಮ್ ಪಾರ್ಟಿ (TDP) ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಆದಷ್ಟು ಬೇಗ ಸರ್ಕಾರ ರಚಿಸುವಂತೆ ಆಗ್ರಹಿಸಿದ್ದರು.
ಜೂನ್ 6ರಂದು ದೆಹಲಿಯಲ್ಲಿ ನಡೆದ ಎನ್‌ಡಿಎ ಸಭೆಯಲ್ಲಿ ಭಾಗವಹಿಸಿದ್ದ ನಿತೀಶ್ ಕುಮಾರ್, ʼʼಸರ್ಕಾರ ರಚನೆಯಲ್ಲಿ ಯಾವುದೇ ವಿಳಂಬವಾಗಬಾರದು. ನಾವು ಅದನ್ನು ಆದಷ್ಟು ಬೇಗ ಕಾರ್ಯ ಪ್ರವೃತ್ತರಾಗಬೇಕು” ಎಂದು ಸೂಚಿಸಿದ್ದರು. ಈ ವೇಳೆ ಎನ್‌ಡಿಎ ನಾಯಕರು ಪ್ರಧಾನ ಮಂತ್ರಿಯನ್ನಾಗಿ ನರೇಂದ್ರ ಮೋದಿ ಅವರನ್ನೇ ಸರ್ವಾನುಮತದಿಂದ ಆಯ್ಕೆ ಮಾಡಿದ್ದರು. ನರೇಂದ್ರ ಮೋದಿ, ಅಮಿತ್ ಶಾ, ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್, ಜೆಡಿಯು ನಾಯಕ ಲಲ್ಲನ್ ಸಿಂಗ್, ಸಂಜಯ್ ಝಾ ಸೇರಿದಂತೆ ಹಲವು ನಾಯಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಜೂನ್ 9ರಂದು ಪ್ರಮಾಣ ವಚನ?
ಈ ಹಿಂದೆ ನರೇಂದ್ರ ಮೋದಿ ಪ್ರಧಾನಿಯಾಗಿ ಜೂನ್ 8ರಂದು ಪ್ರಮಾನ ವಚನ ಸ್ವೀಕರಿಸುತ್ತಾರೆ ಎನ್ನಲಾಗಿತ್ತು. ಆದರೆ ಈ ಕಾರ್ಯಕ್ರಮದಲ್ಲಿ ಕೊಂಚ ಬದಲಾವಣೆಯಾಗಿದ್ದು, ಪ್ರಮಾಣ ವಚನ ಸ್ವೀಕಾರ ಸಮಾರಂಭ ಜೂನ್ 9ಕ್ಕೆ ಮುಂದೂಡಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಅಂತಿಮ ದಿನಾಂಕವನ್ನು ಇನ್ನೂ ಬಹಿರಂಗಗೊಂಡಿಲ್ಲ. ಆದರೂ ಈಗಾಗಲೇ ರಾಷ್ಟ್ರಪತಿ ಭವನದಲ್ಲಿ ನೂತನ ಪ್ರಧಾನ ಮಂತ್ರಿಯ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆಗಳು ಆರಂಭವಾಗಿದೆ. ಇಂದು ಮತ್ತೊಮ್ಮೆ ಎನ್‌ಡಿಎ ನಾಯಕರು ಸಭೆ ಸೇರಲಿದ್ದು, ಮೋದಿ ಜತೆಗೆ ಯಾರೆಲ್ಲ ಪ್ರಮಾಣ ವಚನ ಸ್ವೀಕರಿಸಬೇಕು ಎನ್ನುವುದನ್ನು ನಿರ್ಧರಿಸಲಿದ್ದಾರೆ ಎನ್ನಲಾಗಿದೆ.
ಬೇಡಿಕೆಗಳ ಪಟ್ಟಿ
ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿಯು ಕೇಂದ್ರ ಸಚಿವ ಸಂಪುಟದಲ್ಲಿ ಕನಿಷ್ಠ 3-4 ಸ್ಥಾನಗಳನ್ನು ಕೇಳುವ ಸಾಧ್ಯತೆ ಇದೆ ಎನ್ನಲಾಗಿದೆ. ಕಳೆದ ಸರ್ಕಾರಕ್ಕೆ ತಮ್ಮ 16 ಸ್ಥಾನಗಳೊಂದಿಗೆ ಬೆಂಬಲ ನೀಡಿದ್ದ ಟಿಡಿಪಿ ಒಂದು ಕೇಂದ್ರ ಸಚಿವ ಸ್ಥಾನ ಹಾಗೂ ಒಂದು ರಾಜ್ಯ ಖಾತೆ ಸಚಿವ ಸ್ಥಾನ ಗಿಟ್ಟಿಸಿಕೊಂಡಿತ್ತು. 2018 ರಲ್ಲಿ ಪಕ್ಷವು ಎನ್‌ಡಿಎ ಸರ್ಕಾರದಿಂದ ಹೊರಬರುವವರೆಗೂ ನಾಗರಿಕ ವಿಮಾನಯಾನ ಸಚಿವರು ಮತ್ತು ರಾಜ್ಯ ಐಟಿ ಸಚಿವರು ಟಿಡಿಪಿ ಪಕ್ಷದವರಾಗಿದ್ದರು. ಈ ಬಾರಿ ಹಣಕಾಸು ರಾಜ್ಯ ಖಾತೆಯನ್ನು ಕೇಳುವ ಸಾಧ್ಯತೆ ಇದೆ. ಜತೆಗೆ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂಬುದು ಟಿಡಿಪಿಯ ಮತ್ತೊಂದು ಬೇಡಿಕೆ ಇಡಲಿದೆ.
ಈ ಬಾರಿ ಜೆಡಿಯು ಮೂರು ಕ್ಯಾಬಿನೆಟ್ ಸ್ಥಾನಗಳು ಮತ್ತು ರಾಜ್ಯ ಖಾತೆ ಸಚಿವಾಲಯಗಳ ಮೇಲೆ ಕಣ್ಣಿಟ್ಟಿದೆ. ಕೃಷಿ, ಗ್ರಾಮೀಣಾಭಿವೃದ್ಧಿ ಮತ್ತು ಜಲಶಕ್ತಿ ಖಾತೆಗಳನ್ನು ಕೇಳುವ ಸಾಧ್ಯತೆ ಇದೆ. ಎಲ್‌ಜೆಪಿಯ ಚಿರಾಗ್ ಪಾಸ್ವಾನ್ ಅವರು ತಮ್ಮ ತಂದೆ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರಂತೆ ಪೂರ್ಣ ಸಮಯದ ಸಚಿವರಾಗುವ ನಿರೀಕ್ಷೆಯಿದೆ.
ಇದನ್ನೂ ಓದಿ: Election Results 2024: ರಾಮನೂರಿನಲ್ಲೇ ಬಿಜೆಪಿ ಹಿನ್ನಡೆ; ಹೀನಾಯ ಸೋಲಿಗೆ ಕಾರಣ ಏನು?