Site icon Vistara News

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Tejaswini Gowda resigns from BJP Council Impact on BJP

ಬೆಂಗಳೂರು: ಒಂದು ಕಾಲದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನೇ (HD Devegowda) ಮಣಿಸಿದ್ದ, ಹಾಲಿ ಬಿಜೆಪಿ ಪರಿಷತ್ ಸದಸ್ಯೆ ಡಾ. ತೇಜಸ್ವಿನಿ ಗೌಡ (Tejaswini Gowda) ಅವರು ಅವಧಿಗೆ ಮುಂಚೆಯೇ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ಜೂನ್‌ವರೆಗೆ ಅವರ ಅವಧಿ ಇತ್ತು. ಆದರೆ, ಮೂರು ತಿಂಗಳ ಮುಂಚೆಯೇ ಅವರು ರಾಜೀನಾಮೆಯನ್ನು ನೀಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಈ ಬೆಳವಣಿಗೆ ನಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.

ವಿಧಾನ ಪರಿಷತ್‌ ಸಭಾಪತಿ ಬಸವರಾಜ್‌ ಹೊರಟ್ಟಿ ಅವರಿಗೆ ರಾಜಿನಾಮೆ ನೀಡಿದ್ದು, ಅವರು ಅಂಗೀಕರಿಸಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಬಿಜೆಪಿ ಎಂಎಲ್‌ಸಿ ತೇಜಸ್ವಿನಿ ಗೌಡ ಅವರು ಇಂದು ರಾಜೀನಾಮೆ ಕೊಟ್ಟಿದ್ದಾರೆ. ಅವರ ರಾಜೀನಾಮೆಯನ್ನು ಅಂಗೀಕಾರ ಮಾಡಿದ್ದೇನೆ. ಸ್ವ – ಇಚ್ಚೆಯಿಂದ ರಾಜೀನಾಮೆ ಕೊಟ್ಟಿದ್ದೇನೆ ಅಂದಿದ್ದಾರೆ. ಅವರ ಅವಧಿ ಜೂನ್ ವರೆಗೆ ಇತ್ತು. ನಮ್ಮ ನಿಯಮ ಪ್ರಕಾರ ರಾಜೀನಾಮೆ ಕೊಡಬಹುದು. ಆದರೆ, ಕಾರಣ ಕೊಡಲೇಬೇಕು ಅಂತೇನಿಲ್ಲ ಎಂದು ಹೇಳಿದ್ದಾರೆ.

ಬರಗಾಲದಲ್ಲಿ ರಾಜೀನಾಮೆ ನೀಡಿದ್ದಾರೆ: ಆರ್.‌ ಅಶೋಕ್‌ ವ್ಯಂಗ್ಯ

ತೇಜಸ್ವಿನಿ ಗೌಡ ರಾಜೀನಾಮೆ ಬಗ್ಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.‌ ಅಶೋಕ್, ಮೊದಲು ಕಾಂಗ್ರೆಸ್‌ನಲ್ಲಿ ಇದ್ದರು. ಬಳಿಕ ಅವರು ನಮ್ಮ ಬಿಜೆಪಿಯನ್ನು ಸೇರ್ಪಡೆಯಾಗಿದ್ದರು. ನಾವು ಅವರನ್ನು ಎಂಎಲ್‌ಸಿ ಮಾಡಿದ್ದೆವು. ಈಗ ಅವಧಿ ಮುಗಿಯುತ್ತಾ ಬಂದಿದೆ. ಬರಗಾಲ ಬೇರೆ. ಹೀಗಾಗಿ ರಾಜೀನಾಮೆ ನೀಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಟಿಕೆಟ್‌ ಸಿಗದಿದ್ದಕ್ಕೆ ಬೇಸರ?

ತೇಜಸ್ವಿನಿ ಗೌಡ ಅವರು ಬೆಂಗಳೂರು ಗ್ರಾಮಾಂತರ ಇಲ್ಲವೇ ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಬೆಂಗಳೂರು ಗ್ರಾಮಾಂತರದಲ್ಲಿ ಸೂಕ್ತ ಅಭ್ಯರ್ಥಿ ಇಲ್ಲದ ಕಾರಣ ತಮಗೆ ಟಿಕೆಟ್‌ ಸಿಗಬಹುದು ಎಂಬ ಭಾರಿ ನಿರೀಕ್ಷೆಯಲ್ಲಿ ತೇಜಸ್ವಿನಿ ಇದ್ದರು. ಆದರೆ, ಮಹತ್ತರವಾದ ಬೆಳವಣಿಗೆಯೊಂದರಲ್ಲಿ ಖ್ಯಾತ ಹೃದ್ರೋಗ ತಜ್ಞ ಡಾ. ಸಿ.ಎನ್.‌ ಮಂಜುನಾಥ್‌ ಅವರನ್ನು ಬಿಜೆಪಿ ಅಖಾಡಕ್ಕೆ ಇಳಿಸಿತ್ತು. ಇದು ತೇಜಸ್ವಿನಿ ಅವರನ್ನು ಹೆಚ್ಚು ಭ್ರಮನಿರಸನ ಮಾಡಿತ್ತು.

ಇನ್ನು ಕೊನೇ ಆಯ್ಕೆಯಾಗಿದ್ದ ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಹೇಗೂ ಹಾಲಿ ಸಂಸದ ಪ್ರತಾಪ್‌ ಸಿಂಹ ಅವರನ್ನು ಬದಲಾವಣೆ ಮಾಡುತ್ತಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಹಾಗಾಗಿ ಅಲ್ಲಿಯಾದರೂ ತಮಗೆ ಸಿಗಬಹುದು ಎಂಬ ಲೆಕ್ಕಾಚಾರದಲ್ಲಿ ತೇಜಸ್ವಿನಿ ಗೌಡ ಇದ್ದರು. ಇಲ್ಲಿಯೂ ಸಹ ಮಹಾರಾಜ ಯದುವೀರ್ ಒಡೆಯರ್ ಅವರಿಗೆ ಟಿಕೆಟ್ ನೀಡಿದ್ದು ಅವರು ಅಸಮಾಧಾನ ಹೆಚ್ಚಲು ಕಾರಣವಾಗಿತ್ತು. ಹೀಗಾಗಿ ಅವರು ತಮ್ಮ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ತಮ್ಮ ಪ್ರತಿಭಟನೆಯನ್ನು ದಾಖಲು ಮಾಡಿದ್ದಾರೆ.

ಇದನ್ನೂ ಓದಿ: Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

ಕಾಂಗ್ರೆಸ್‌ ಸೇರ್ಪಡೆ?

ಸದ್ಯ ತೇಜಸ್ವಿನಿ ಗೌಡ ಅವರು ಪರಿಷತ್‌ ಸದಸ್ಯತ್ವಕ್ಕೆ ಮಾತ್ರವೇ ರಾಜೀನಾಮೆ ನೀಡಿದ್ದಾರೆ. ಬಿಜೆಪಿಯ ಪ್ರಾಥಮಿಕ ಸದಸ್ಯತ್ವವನ್ನು ಇನ್ನೂ ತೊರೆದಿಲ್ಲ. ಆದರೆ, ಅವರು ಶೀಘ್ರದಲ್ಲಿಯೇ ಕಾಂಗ್ರೆಸ್‌ ಸೇರ್ಪಡೆಯಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ. ಇಲ್ಲಿಯವರೆಗೂ ತೇಜಸ್ವಿನಿ ಅವರು ತಾವು ಏಕೆ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂಬುದರ ಬಗ್ಗೆ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ‌

ಬಿಜೆಪಿ ಮೇಲೆ ಪರಿಣಾಮ?

ತೇಜಸ್ವಿನಿ ಗೌಡ ಅವರಿಗೆ ಬಿಜೆಪಿಯಲ್ಲಿಯೂ ಸೂಕ್ತ ಸ್ಥಾನಮಾನವನ್ನು ನೀಡಲಾಗಿತ್ತು. ಬಿಜೆಪಿ ವಕ್ತಾರರಾಗಿದ್ದ ಅವರು ಪಕ್ಷದ ನಿಲುವುಗಳನ್ನು ಸಮರ್ಥನೆ ಮಾಡಿಕೊಳ್ಳುತ್ತಾ ಬರುತ್ತಿದ್ದರು. ನೇರವಾಗಿ ಹಾಗೂ ಹರಿತವಾಗಿ ಮಾತನಾಡುತ್ತಿದ್ದ ತೇಜಸ್ವಿನಿ ಅವರ ರಾಜೀನಾಮೆ ಲೋಕಸಭಾ ಚುನಾವಣೆಯ ಈ ಹೊತ್ತಿನಲ್ಲಿ ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿದುಬರಬೇಕಿದೆ.

Exit mobile version