ಬೆಂಗಳೂರು: ಬೆಂಗಳೂರಿನ ಜಯನಗರದ ಕೌಂಟಿಂಗ್ ಸೆಂಟರ್‌ಗೆ ಆಗಮಿಸಿದ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಅವರು ಪೊಲೀಸರ ನಡೆಗೆ ಕೆಂಡಾಮಂಡಲರಾದರು. ಎಸ್ಎಸ್ಎಂಆರ್‌ವಿ ಕಾಲೇಜಿನಲ್ಲಿ ಲೋಕಸಭೆ ಚುನಾವಣೆ 2024ರ (Lok Sabha Election 2024) ಮತ ಎಣಿಕೆ (Election Results 2024) ನಡೆಯುತ್ತಿದೆ. ಹೀಗಾಗಿ ತುಷಾರ್ ಗಿರಿನಾಥ್ (Tushar Girinath) ಪರಿಶೀಲನೆಗಾಗಿ ಮತ ಎಣಿಕೆ ಕೇಂದ್ರಕ್ಕೆ ಬಂದಾಗ ಪೊಲೀಸರು ಬ್ಯಾರಿಕೇಡ್ ತೆಗೆಯದ್ದಕ್ಕೆ ಕಿಡಿಕಾರಿದರು.
ಕಾರಿನ ಹಿಂಭಾಗ ಕುಳಿತಿದ್ದ ತುಷಾರ್ ಗಿರಿನಾಥ್ ಕಿಟಿಕಿ ಗ್ಲಾಸ್ ಇಳಿಸಿ ಪೊಲೀಸರಿಗೆ ಅವಾಜ್ ಹಾಕಿದ್ದರು. ಹುಚ್ಚ.. ನಾನು ಯಾರೆಂದು ಗೊತ್ತಾಗಲ್ವಾ ಎಂದು ಪೊಲೀಸರಿಗೆ ಪ್ರಶ್ನೆ ಮಾಡಿದರು. ಯಾವ ರೀತಿಯಲ್ಲಿ ಹ್ಯಾಂಡಲ್ ಮಾಡುತ್ತಿದ್ದೀರಿ ಎಂದು ಸಿಟ್ಟಾದರು. ಬಳಿಕ ಪೊಲೀಸರು ತಿಳಿಯದೆ ಹೀಗಾಯಿತು ಎಂದಾಗ ಕೋಪದಲ್ಲೇ ಒಳಹೋದರು.
ಟಿವಿ ನೋಡುತ್ತಿದ್ದ ಸಿಬ್ಬಂದಿಗೆ ರೇಗಾಡಿದ ತುಷಾರ್ ಗಿರಿನಾಥ್
ಮತ ಎಣಿಕೆ ಕೇಂದ್ರ ಒಳಗೆ ಬಂದ ತುಷಾರ್ ಗಿರಿನಾಥ್ ಮೀಡಿಯಾ ಸೆಂಟರ್ ಬಳಿ ಬಂದು ಅಲ್ಲೂ ಗರಂ ಆದರು. ಮೀಡಿಯಾ ಸೆಂಟರ್ ಒಳಗೆ ಟಿವಿ ನೋಡುತ್ತಾ ನಿಂತಿದ್ದ ಚುನಾವಣಾ ಕರ್ತವ್ಯ ನಿರತ ಪೊಲೀಸ್ ಹಾಗೂ ಇತರ ಸಿಬ್ಬಂದಿ ಮೇಲೆ ರೇಗಾಡಿದರು. ನಿಮ್ಮ ಕೆಲಸ ನೋಡಿ ಅದು ಬಿಟ್ಟು ಟಿವಿ ನೋಡುತ್ತಾ ನಿಲ್ಲಬೇಡಿ. ಎಲ್ಲರ ಮೇಲೆ ಆ್ಯಕ್ಷನ್ ತೆಗೆದುಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: Election Results 2024: ಜಯನಗರ ಮತ ಎಣಿಕೆ ಕೇಂದ್ರದಲ್ಲಿ ಟಿ ಶರ್ಟ್ ಕಿರಿಕ್; ಕೆಆರ್‌ಎಸ್ ಪಾರ್ಟಿಯ ಅಭ್ಯರ್ಥಿ ಔಟ್
ಬೆಳಗಾವಿಯಲ್ಲಿ ಕಾಂಗ್ರೆಸ್ ಏಜೆಂಟ್ ಹಾಗೂ ಪೊಲೀಸರ ನಡುವೆ ವಾಗ್ವಾದ
ಇತ್ತ ಬೆಳಗಾವಿಯಲ್ಲಿ ಕಾಂಗ್ರೆಸ್ ಏಜೆಂಟ್ ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಕಾಂಗ್ರೆಸ್ ಏಜೆಂಟ್‌ಗೆ ಮೊಬೈಲ್ ಕೊಂಡೊಯ್ಯಲು ಹೋಗಲು ಅನುಮತಿ ಇದ್ದರೂ ಪೊಲೀಸರು ಆಕ್ಷೇಪಿಸಿದ್ದಕ್ಕೆ ಆಕ್ರೋಶಿಸಿದರು. ವಿಷಯ ತಿಳಿದು ಜಿಲ್ಲಾಧಿಕಾರಿ ನಿತೇಶ ಪಾಟೀಲ್, ನಗರ ಪೊಲೀಸ್ ಆಯುಕ್ತ ಸ್ಥಳಕ್ಕೆ ಭೇಟಿ ನೀಡಿ ಮನವೊಲಿಸಿ ಕಾಂಗ್ರೆಸ್ ಏಜೆಂಟ್ ಮೋಹನ್ ರೆಡ್ಡಿಯನ್ನು ಕರೆದುಕೊಂಡು ಹೋಗಿ, ಏಜೆಂಟ್ ಸಮ್ಮುಖದಲ್ಲಿ ಸ್ಟ್ರಾಂಗ್ ರೂಮ್‌ಗಳನ್ನು ತೆರಯಲಾಯಿತು.
ವಿಜಯಪುರದಲ್ಲಿ ಸಿಬ್ಬಂದಿ ಮೇಲೆ ಗರಂ ಆದ ಪಿಎಸ್ಐ
ವಿಜಯಪುರ ಎಸ್‌ಸಿ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಮತ ಎಣಿಕಾ ಕೇಂದ್ರದತ್ತ ಸಿಬ್ಬಂದಿ ಆಗಮಿಸುತ್ತಿದ್ದರು. ಈ ವೇಳೆ ಮೊಬೈಲ್ ಪರಿಶೀಲನೆ ವೇಳೆ ಸರಿಯಾಗಿ ಪರಿಶೀಲಿಸದ ಪೊಲೀಸ್ ಸಿಬ್ಬಂದಿ ಮೇಲೆ ಪಿಎಸ್ಐ ಗರಂ ಆದರು. ಸಿಬ್ಬಂದಿ ಮೊಬೈಲ್‌ನೊಂದಿಗೆ ಮತ ಎಣಿಕ ಕೇಂದ್ರದೊಳಗೆ ತೆರಳುತ್ತಿದ್ದರು. ಹೀಗಾಗಿ ಮೊಬೈಲ್ ತೆಗೆದುಕೊಂಡು ಹೋಗುತ್ತಿದ್ದ ಸಿಬ್ಬಂದಿಗೆ ಪೊಲೀಸ್ ತರಾಟೆ ತೆಗೆದುಕೊಂಡು ಕೇಂದ್ರದಿಂದ ಹೊರಗೆ ಕಳುಹಿಸಿದರು.
ಮತ ಎಣಿಕೆ ಕೇಂದ್ರದಲ್ಲಿ ಪೊಲೀಸರ ಜತೆಗೆ ಏಜೆಂಟ್‌ರ ವಾಗ್ವಾದ ನಡೆದಿದೆ. ಏಜೆಂಟ್‌ನನ್ನು ಒಳಗೆ ಬಿಡದಿದ್ದಕ್ಕೆ ಗಲಾಟೆ ನಡೆದಿದೆ. ನಾನು ಏಜೆಂಟ್ ನಾನು ಎಲ್ಲಿ ಬೇಕಾದರೂ ಓಡಾಡಬಹುದು ನನ್ನ ಯಾಕೆ ಒಳಗೆ ಬಿಡುವುದಿಲ್ಲ ಎಂದು ಬಿಜೆಪಿ ಏಜೆಂಟ್ ರಾಜು ಮಗಿಮಠ ಪೊಲೀಸರ ಜತೆ ವಾಗ್ವಾದ ನಡೆಸಿದರು. ಇದೇ ವೇಳೆ ನಿಮಗೆ ಸೂಚಿಸಿದ ಸದನದಲ್ಲಿ ಮಾತ್ರ ನೀವು ಹೋಗಿ ಎಂದು ಪೊಲೀಸರು ಸೂಚಿಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ