ಚಿತ್ರದುರ್ಗ: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರದಲ್ಲಿರುವ ಸಚಿವ ಜಮೀರ್ ಅಹಮದ್ ಖಾನ್ (Zameer Ahmed Khan) ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದೆ. ಎದೆ ಮತ್ತು ಬೆನ್ನು ನೋವಿನಿಂದ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ತುರ್ತು ಪರೀಕ್ಷೆ ನಡೆಸಿದ ವೈದ್ಯರು ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದಾರೆ. ಕೆಲವು ಸಮಯಗಳ ಕಾಲ ಅವರನ್ನು ತಪಾಸಣೆ ಮಾಡಿದ ಬಳಿಕ ಅವರನ್ನು ಡಿಸ್ಚಾರ್ಚ್ ಮಾಡಲಾಗಿದೆ.
ದಿಢೀರ್ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವೈದ್ಯರು ಇಸಿಜಿ, ಎಕೋ ಪರೀಕ್ಷೆ ನಡೆಸಿದ್ದಾರೆ. ಬಳಿಕ ಆರೋಗ್ಯ ಸ್ಥಿರವಾಗಿರುವುದಾಗಿ ತಿಳಿಸಿದ್ದಾರೆ.
ಜಮೀರ್ ಅಹಮದ್ ಖಾನ್ ಅವರು ತುಮಕೂರಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಮುಗಿಸಿ ಚಿತ್ರದುರ್ಗ ಕಾಂಗ್ರೆಸ್ ಸಭೆಗೆ ಆಗಮಿಸುತ್ತಿದ್ದಾಗ ದಿಢೀರ್ ಅನಾರೋಗ್ಯಕ್ಕೆ ತುತ್ತಾಗಿದ್ದರು. ಕೂಡಲೇ ಅವರನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಎರಡು ವಡೆ ಜಾಸ್ತಿ ತಿಂದಿದ್ದಕ್ಕೆ ಗ್ಯಾಸ್ಟ್ರಿಕ್ ಆಯಿತು
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಜಮೀರ್ ಅಹಮದ್ ಖಾನ್, ಬೆಳಗ್ಗೆ ತಿಂಡಿ ವೇಳೆ ವಡೆ ಚೆನ್ನಾಗಿತ್ತು, ಎರಡು ಜಾಸ್ತಿ ತಿಂದಿದ್ದೆ. ಗ್ಯಾಸ್ಟ್ರಿಕ್ ಆಗಿದ್ದು, ಎದೆ ನೋವು ಕಾಣಿಸಿಕೊಂಡಿತು. ಹೀಗಾಗಿ ಆಸ್ಪತ್ರೆಗೆ ಬಂದು ಟೆಸ್ಟ್ ಮಾಡಿಸಿದ್ದೇನೆ. ಇಸಿಜಿ ಮತ್ತು ಎಕೋ, ರಕ್ತ ಪರೀಕ್ಷೆ ಮಾಡಿದ್ದಾರೆ. ಎದೆ ನೋವು ಬಂದಿತ್ತು, ರಿಸ್ಕ್ ಬೇಡ ಅಂತ ನಾನು ಆಸ್ಪತ್ರೆಗೆ ಬಂದೆ. ಎಲ್ಲವೂ ನಾರ್ಮಲ್ ಇದೆ ಎಂದು ಡಾಕ್ಟರ್ ಹೇಳಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: DK Shivakumar: ದೆಹಲಿಯಲ್ಲಿ ಎಲ್ಲವೂ ತೀರ್ಮಾನವಾಗಿದೆ; ಸಿಎಂ ಬದಲಾವಣೆ ಸುಳಿವು ನೀಡಿದ ಡಿಕೆಶಿ!
ಚಿತ್ರದುರ್ಗಕ್ಕೆ ಬರುವ ವೇಳೆ ಮಾರ್ಗ ಮಧ್ಯೆ ನನಗೆ ಎದೆನೋವು ಕಾಣಿಸಿಕೊಂಡಿತು. ಕಾರ್ಯಕ್ರಮದಲ್ಲಿ ನಾನು ಭಾಗವಹಿಸುವೆ. ದೇವರ ದಯೆಯಿಂದ ಎಲ್ಲವೂ ನಾರ್ಮಲ್ ಬಂದಿದೆ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದರು.