ಕುಳಿತು ಉಣ್ಣುವವನಿಗೆ ಕುಡಿಕೆ ಹೊನ್ನು ಸಾಲದು ಎಂಬ ಗಾದೆ ಮಾತು ಇದೆ. ನಿವೃತ್ತಿ (retirement) ಬಳಿಕದ ಜೀವನ ಒಂದು ರೀತಿಯಲ್ಲಿ ಕುಳಿತು ಉಣ್ಣುವಂತೆಯೇ ಸರಿ. ಆದರೆ ಈ ಜೀವನ (retirement life) ಚೆನ್ನಾಗಿ ಇರಬೇಕು ಎಂದರೆ ಒಂದಷ್ಟು ಹಣ (money) ಕೂಡಿ ಇಡಲೇ ಬೇಕು. ಇದಕ್ಕಾಗಿ ನಮಗೆ ಸಹಾಯ ಮಾಡುವುದು ಪಿಂಚಣಿ (Pension Scheme) ಯೋಜನೆಗಳು.
ನಿವೃತ್ತಿ ಬಳಿಕದ ಜೀವನಕ್ಕಾಗಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (Employees’ Provident Fund Organization-EPFO) ಉಳಿತಾಯವನ್ನು ಉತ್ತೇಜಿಸಿ ಉದ್ಯೋಗಿಗಳ ಆರ್ಥಿಕ ಭವಿಷ್ಯವನ್ನು ಭದ್ರಪಡಿಸುತ್ತದೆ. ಆದರೆ ಇದು ನೀಡುವ ಪಿಂಚಣಿಗಳ ಮೇಲೆ ಹಲವಾರು ನಿಯಮಗಳಿವೆ. ಇದನ್ನು ಸರಿಯಾಗಿ ಗಮನಿಸದೇ ಇದ್ದರೆ ಸುಮ್ಮನೆ ಗೊಂದಲಕ್ಕೆ ಈಡಾಗಬೇಕಾಗುತ್ತದೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ ಇದೀಗ ತನ್ನ ಪಿಂಚಣಿ ನಿಯಮಗಳನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಚಂದಾದಾರರಿಂದ ಪಡೆದ ಪಿಂಚಣಿ ಮೊತ್ತದ ಮೇಲೆ ಪರಿಣಾಮ ಬೀರುವ ಕೆಲವೊಂದು ಅಂಶಗಳ ಮೇಲೆ ಅದು ಬೆಳಕು ಚೆಲ್ಲಿದೆ.
ಇದನ್ನೂ ಓದಿ: Old Pension Scheme: ಹಳೆಯ ಪಿಂಚಣಿ ಬೇಕಿದ್ದರೆ ಯೋಚಿಸಿ ನಿರ್ಧಾರ ಮಾಡಿ! ಏನಿದು ರಾಜ್ಯ ಸರ್ಕಾರದ ಆದೇಶ?
ನಿಯಮದಲ್ಲಿ ಏನಿದೆ?
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ ನಿಯಮಾವಳಿಗಳ ಪ್ರಕಾರ ಕನಿಷ್ಠ 10 ವರ್ಷ ಇಪಿಎಫ್‌ಒಗೆ ಕೊಡುಗೆ ನೀಡಿದ ಉದ್ಯೋಗಿಯು 58 ವರ್ಷ ತಲುಪಿದ ಬಳಿಕ ಮಾಸಿಕ ಪಿಂಚಣಿಗೆ ಅರ್ಹನಾಗಿರುತ್ತಾನೆ. ಆದರೂ ಆತ 60 ವರ್ಷ ವಯಸ್ಸಿನವರೆಗೆ ಪಿಂಚಣಿ ವಿಳಂಬವನ್ನು ಆಯ್ಕೆ ಮಾಡಿಕೊಳ್ಳಬಹುದು. ಇದರಿಂದ ಪಿಂಚಣಿ ಮೊತ್ತವು ಸರಿಸುಮಾರು ಶೇ. 8 ರಷ್ಟು ಹೆಚ್ಚಳವಾಗುತ್ತದೆ.
ಉದ್ಯೋಗದಾತರ ಸಮಾನ ಕೊಡುಗೆಯೊಂದಿಗೆ ಉದ್ಯೋಗಿಯ ಮೂಲ ವೇತನದ ಶೇ. 12ರಷ್ಟು ಮೊತ್ತ ಭವಿಷ್ಯ ನಿಧಿಗೆ ನಿಗದಿಪಡಿಸಲಾಗಿರುತ್ತದೆ. ಎಂದು ಇಪಿಎಫ್ ಒನ ಕಡಿತ ನಿಯಮವು ಕಡ್ಡಾಯಗೊಳಿಸುತ್ತದೆ. ಉದ್ಯೋಗದಾತರ ಕೊಡುಗೆಯಲ್ಲಿ,ಶೇ. 8.33ರಷ್ಟನ್ನು ನೌಕರರ ಪಿಂಚಣಿ ಯೋಜನೆಗೆ (ಇಪಿಎಸ್) ಸೇರಿಸಿದರೆ ಉಳಿದ ಶೇ. 3.67ರಷ್ಟನ್ನು ಭವಿಷ್ಯ ನಿಧಿಗೆ ನೀಡಲಾಗುತ್ತದೆ.
ಉದ್ಯೋಗಿಗಳು 58 ವರ್ಷಕ್ಕೆ ಪಿಂಚಣಿ ಯೋಜನೆಗೆ ಅರ್ಹರಾಗಿದ್ದರೂ ಇಪಿಎಫ್‌ಒ ಚಂದಾದಾರರನ್ನು 60 ವರ್ಷಕ್ಕೆ ಪಿಂಚಣಿಯನ್ನು ಮುಂದೂಡಲು ಪ್ರೋತ್ಸಾಹಿಸುತ್ತದೆ. ಯಾಕೆಂದರೆ ಇದು ಹೆಚ್ಚಿನ ಕೊಡುಗೆಗಳೊಂದಿಗೆ ಹೆಚ್ಚು ಲಾಭವನ್ನೂ ಕೊಡುತ್ತದೆ.
ಪಿಂಚಣಿ ಮಾಡಿಸಿಕೊಂಡಿರುವ ಉದ್ಯೋಗಿಗಳು 50 ವರ್ಷದಿಂದಲೇ ಪ್ರಾರಂಭವಾಗುವ ಆರಂಭಿಕ ಪಿಂಚಣಿಗಾಗಿ ಅರ್ಜಿ ಸಲ್ಲಿಸುವ ಆಯ್ಕೆಯನ್ನು ಹೊಂದಿರುತ್ತಾರೆ. ಅವರು ಬಳಿಕ ಕನಿಷ್ಠ 10 ವರ್ಷಗಳನ್ನು ಪೂರೈಸಿದರೂ ಆರಂಭಿಕ ಪಿಂಚಣಿ ಆಯ್ಕೆಯು ಕಡಿಮೆ ಪಿಂಚಣಿ ಮೊತ್ತಕ್ಕೆ ಕಾರಣವಾಗುತ್ತದೆ.
ಪಿಂಚಣಿ ಹೊಂದಿರುವ ಉದ್ಯೋಗಿಗಳು 58 ವರ್ಷ ತುಂಬುವ ಮೊದಲು ಪಿಂಚಣಿ ಹಿಂಪಡೆದರೆ ಪ್ರತಿ ವರ್ಷಕ್ಕೆ ಪಿಂಚಣಿಯಲ್ಲಿ ಶೇ. 4ರಷ್ಟು ಕಡಿತ ಮಾಡಲಾಗುತ್ತದೆ. ಉದಾಹರಣೆಗೆ ಚಂದಾದಾರರು 56 ನೇ ವಯಸ್ಸಿನಲ್ಲಿ ಪಿಂಚಣಿ ಹಿಂಪಡೆಯುವುದನ್ನು ಆಯ್ಕೆ ಮಾಡಿದರೆ ಅವರು ಮೂಲ ಪಿಂಚಣಿ ಮೊತ್ತದ ಶೇ. 92 ರಷ್ಟನ್ನು ಮಾತ್ರ ಪಡೆಯುತ್ತಾರೆ.
10 ವರ್ಷಗಳ ಸೇವೆಯನ್ನು ಪೂರ್ಣಗೊಳಿಸದ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಚಂದಾದಾರರು ಪಿಂಚಣಿ ಪ್ರಯೋಜನಗಳಿಗೆ ಅನರ್ಹರಾಗಿರುತ್ತಾರೆ. ನಿವೃತ್ತಿಯ ಅನಂತರ ಅವರು ತಮ್ಮ ಇಪಿಎಫ್ ಖಾತೆಯಲ್ಲಿ ಠೇವಣಿ ಮಾಡಿದ ಹಣವನ್ನು ಮಾತ್ರ ಸ್ವೀಕರಿಸುತ್ತಾರೆ.