ಬೆಂಗಳೂರು: ಈಗ ನಾವು ದುಡಿಯುವ ಜತೆಗೆ ಭವಿಷ್ಯಕ್ಕಾಗಿ ಒಂದಷ್ಟು ಹಣ ಉಳಿತಾಯ ಮಾಡಿಡುವುದು ಕೂಡ ಅತ್ಯಗತ್ಯ. ನಿವೃತ್ತ ಜೀವನವನ್ನು ನೆಮ್ಮದಿಯಿಂದ ಕಳೆಯಲು ಇದು ಅನಿವಾರ್ಯ ಕೂಡ ಹೌದು. ಆದರೆ ಈಗ ಗಳಿಸಿದ್ದೆಲ್ಲ ಖರ್ಚಾಗಿ ಹೋಗುತ್ತದೆ, ಕೈಯಲ್ಲಿ ಹಣ ನಿಲ್ಲುವುದೇ ಇಲ್ಲ ಎಂದು ಕೊರಗುವವರಿಗೆ ಉತ್ತಮ ನಿವೃತ್ತಿ ಪಿಂಚಣಿ ಯೋಜನೆಯ ಮಾಹಿತಿ ಇಲ್ಲಿದೆ (Money Guide). ಅಟಲ್ ಪಿಂಚಣಿ ಯೋಜನೆ (Atal Pension Yojana-APY) ಮೂಲಕ ನೀವು ತಿಂಗಳಿಗೆ 5,000 ರೂ.ಗಳವರೆಗೆ ಖಾತರಿ ಪಿಂಚಣಿಯನ್ನು ಪಡೆಯಬಹುದು.
ಏನಿದು ಯೋಜನೆ?
2015-16ರ ಬಜೆಟ್‌ನಲ್ಲಿ ಕೇಂದ್ರ ಘೋಷಿಸಿದ್ದ ಅಟಲ್ ಪಿಂಚಣಿ ಯೋಜನೆ ವೃದ್ಧಾಪ್ಯದಲ್ಲಿ ಆದಾಯ ಭದ್ರತೆಯನ್ನು ಖಾತರಿಪಡಿಸುತ್ತದೆ. ಇದು ಅಸಂಘಟಿತ ವಲಯದ ಎಲ್ಲ ನಾಗರಿಕರನ್ನು ಒಳಗೊಂಡ ಯೋಜನೆಯಾಗಿದೆ. ನಿವೃತ್ತಿಗಾಗಿ ಉಳಿತಾಯ ಮಾಡುವಂತೆ ಸಾರ್ವಜನಿಕರನ್ನು ಪ್ರೋತ್ಸಾಹಿಸುವ ಪ್ರಯತ್ನಗಳನ್ನು ಸರ್ಕಾರ ಈ ಮೂಲಕ ಮಾಡುತ್ತಿದೆ. ಅಸಂಘಟಿತ ವಲಯದ ಕಾರ್ಮಿಕರು ತಮ್ಮ ನಿವೃತ್ತಿಗಾಗಿ ಸ್ವಯಂಪ್ರೇರಣೆಯಿಂದ ಉಳಿತಾಯ ಮಾಡುವುದನ್ನು ಪ್ರೋತ್ಸಾಹಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಈ ಯೋಜನೆಯನ್ನು ಪೆನ್‌ಷನ್ ಫಂಡ್ ರೆಗ್ಯುಲೇಟರಿ & ಡೆವಲಪ್‌ಮೆಂಟ್ ಅಥಾರಟಿ (PFRDA) ಮೂಲಕ ನ್ಯಾಷನಲ್ ಪೆನ್ಶನ್ ಸಿಸ್ಟಮ್ (NPS) ನಿರ್ವಹಿಸುತ್ತಿದೆ.
ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ ಗ್ರಾಹಕರಿಗೆ ತಿಂಗಳಿಗೆ 1,000 ರೂ.ಯಿಂದ 5,000 ರೂ.ಗಳವರೆಗೆ ಕನಿಷ್ಠ ಮಾಸಿಕ ಪಿಂಚಣಿ ದೊರೆಯಲಿದೆ. ಕೇಂದ್ರವು ಚಂದಾದಾರರ ಕೊಡುಗೆಯ ಶೇ. 50ರಷ್ಟು ಅಥವಾ ವರ್ಷಕ್ಕೆ 1,000 ರೂ. ಪಾವತಿಸಲಿದೆ. ಯಾವುದೇ ಶಾಸನಬದ್ಧ ಸಾಮಾಜಿಕ ಭದ್ರತಾ ಯೋಜನೆಗಳ ವ್ಯಾಪ್ತಿಗೆ ಒಳಪಡದ ಮತ್ತು ಆದಾಯ ತೆರಿಗೆ ಪಾವತಿಸದವರಿಗೆ ಸರ್ಕಾರದ ಕೊಡುಗೆ ಲಭ್ಯವಿದೆ.
ಅರ್ಹರು ಯಾರು?
18ರಿಂದ 40 ವರ್ಷದೊಳಗಿನ ಎಲ್ಲ ಭಾರತೀಯ ನಾಗರಿಕರು ಅಟಲ್ ಪಿಂಚಣಿ ಯೋಜನೆಯ ಫಲಾನುಭವಿಗಳಾಗಬಹುದು.
ಇದನ್ನೂ ಓದಿ: Money Guide: EPF ಹಿಂತೆಗೆದುಕೊಂಡರೆ ಟ್ಯಾಕ್ಸ್ ಬೀಳುತ್ತಾ? ಈ ವಿವರ ನಿಮಗೆ ಗೊತ್ತಿರಲಿ
5 ಸಾವಿರ ರೂ. ಪಿಂಚಣಿ ಪಡೆಯುವ ಬಗೆ ಹೇಗೆ?
ವಯಸ್ಸಿಗನುಗುಣವಾಗಿ ಮಾಸಿಕ ಪಾವತಿಯಲ್ಲಿ ವ್ಯತ್ಯಾಸವಿರುತ್ತದೆ. ಉದಾಹರಣೆಗೆ 18ನೇ ವಯಸ್ಸಿನಲ್ಲಿ ಈ ಯೋಜನೆಗೆ ಸೇರುವ ಯಾರಾದರೂ ಮಾಸಿಕ 5,000 ರೂ.ಗಳ ಪಿಂಚಣಿ ಪಡೆಯಲು ತಿಂಗಳಿಗೆ ಕೇವಲ 210 ರೂ. ಪಾವತಿಸಿದರೆ ಸಾಕಾಗುತ್ತದೆ. 40 ವರ್ಷ ವಯಸ್ಸಿನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸುವವರು 60 ವರ್ಷದವರೆಗೆ ತಿಂಗಳಿಗೆ 1,454 ರೂ. ಹೂಡಿಕೆ ಮಾಡಬೇಕಾಗುತ್ತದೆ. ಇನ್ನು ತಿಂಗಳಿಗೆ 1,454 ರೂ.ಗಳನ್ನು ಹೂಡಿಕೆ ಮಾಡಲು ಸಾಧ್ಯವಾಗದಿದ್ದರೆ ಇತರ ಆಯ್ಕೆಗಳೂ ಇವೆ. 40ನೇ ವಯಸ್ಸಿನಲ್ಲಿ ತಿಂಗಳಿಗೆ 291 ರೂ.ಗಳ ಹೂಡಿಕೆ ಮಾಡಿದರೆ ತಿಂಗಳಿಗೆ 1,000 ರೂ.ಗಳ ಪಿಂಚಣಿ ಪಡೆಯಬಹುದು, 582 ರೂ.ಗಳ ಪಾವತಿ ಮೇಲೆ ಮಾಸಿಕ 2,000 ರೂ. ಪಿಂಚಣಿ ಪಡೆಯಬಹುದು. ಮಾತ್ರವಲ್ಲ 3,000 ರೂ.ಗಳ ಪಿಂಚಣಿ ಹೊಂದಬೇಕು ಎಂದುಕೊಂಡಿದ್ದರೆ ನೀವು 60 ವರ್ಷದವರೆಗೆ ತಿಂಗಳಿಗೆ 873 ರೂ. ಹೂಡಿಕೆ ಮಾಡಿದರೆ ಸಾಕು. ಮಾಸಿಕ 1,164 ರೂ.ಗಳ ಪಾವತಿಯ ಮೂಲಕ ನೀವು 20 ವರ್ಷಗಳ ಬಳಿಕ ತಿಂಗಳಿಗೆ 4,000 ರೂ. ಪಿಂಚಣಿ ಪಡೆಯಬಹುದು.
60 ವರ್ಷಗಳ ಬಳಿಕ ಹಿಂಪಡೆಯಿರಿ
60 ವರ್ಷ ವಯಸ್ಸಾದ ನಂತರ ನೀವು ಅಟಲ್ ಪಿಂಚಣಿ ಯೋಜನೆಯಿಂದ ನಿರ್ಗಮಿಸಬಹುದು. ಬಳಿಕ ನಿಮಗೆ ತಿಂಗಳು ತಿಂಗಳು ಪಿಂಚಣಿ ಹಣ ಲಭಿಸುತ್ತದೆ. ಗಮನಿಸಿ 60 ವರ್ಷದ ಮೊದಲು ಯೋಜನೆಯನ್ನು ಸ್ಥಗಿತಗೊಳಿಸಲು ಸಾಧ್ಯವಿಲ್ಲ.
ಮರಣ ಹೊಂದಿದರೆ…
ಯಾವುದೇ ಕಾರಣದಿಂದ ಚಂದಾದಾರರು ಮರಣ ಹೊಂದಿದರೆ ಪಿಂಚಣಿ ಸಂಗಾತಿಗೆ ಲಭ್ಯವಿವಾಗುತ್ತದೆ. ಒಂದು ವೇಳೆ ಇಬ್ಬರೂ (ಚಂದಾದಾರರು ಮತ್ತು ಸಂಗಾತಿ) ಮರಣದ ಹೊಂದಿದರೆ ಪಿಂಚಣಿ ಹಣ ಅವರ ನಾಮಿನಿಗೆ ಹಿಂದಿರುಗಿಸಲಾಗುತ್ತದೆ.