Site icon Vistara News

Money Guide: ಎಫ್‌ಡಿಯಲ್ಲಿ ಹೂಡಿಕೆ ಮಾಡುವ ಯೋಜನೆಯಲ್ಲಿದ್ದೀರಾ? ಈ ತಂತ್ರ ಅನುಸರಿಸಿ

fixed deposit

fixed deposit

ಬೆಂಗಳೂರು: ಪ್ರಸ್ತುತ ಯಾವಾಗ, ಏನು ಸಂಭವಿಸುತ್ತದೆ ಎನ್ನುವುದನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಉಳಿತಾಯ ಮಾಡುವತ್ತ ಗಮನ ಹರಿಸುವುದು ಅನಿವಾರ್ಯ ಎನಿಸಿಕೊಂಡಿದೆ. ತಮ್ಮ ಠೇವಣಿಗೆ ಅತ್ಯುತ್ತಮ ಬಡ್ಡಿ ದರ ದೊರೆಯಬೇಕು ಎಂದು ಪ್ರತಿಯೊಬ್ಬರೂ ಆಗ್ರಹಿಸುವುದು ತಪ್ಪಲ್ಲ. ಅಂತಹವರಿಗೆ ನಿಶ್ಚಿತ ಠೇವಣಿ (Fixed deposit-FD) ಉತ್ತಮ ಆಯ್ಕೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇಂದಿನ ಮನಿಗೈಡ್‌ (Money Guide) ಫಿಕ್ಸೆಡ್ ಡೆಪಾಸಿಟ್‌ನ ಸಮಗ್ರ ಮಾಹಿತಿಯನ್ನು ನಿಮ್ಮ ಮುಂದೆ ಇಡಲಿದೆ.

ಫಿಕ್ಸೆಡ್ ಡೆಪಾಸಿಟ್ ಅಪಾಯವನ್ನು ಇಷ್ಟಪಡದ ಹೂಡಿಕೆದಾರರ ಮೊದಲ ಆಯ್ಕೆ ಎಂದೇ ಪರಿಗಣಿಸಲಾಗುತ್ತದೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಎಫ್‌ಡಿ ಮೇಲಿನ ಬಡ್ಡಿದರ ಸಹ ಉತ್ತಮವಾಗಿವೆ. ಉತ್ತಮ ಆದಾಯ ಮತ್ತು ಕಡಿಮೆ ಅಪಾಯ ಹೊಂದಿರುವುದರಿಂದಲೇ ಇದು ಹಲವರ ನೆಚ್ಚಿನ ಆಯ್ಕೆಯಾಗಿದೆ. ನಿಶ್ಚಿತ ಠೇವಣಿಯಲ್ಲಿ ಹೂಡಿಕೆಯ ಅವಧಿ ಮತ್ತು ಬಡ್ಡಿದರವನ್ನು ಮೊದಲೇ ನಿಗದಿಪಡಿಸಲಾಗಿರುತ್ತದೆ. ಸಾಮಾನ್ಯವಾಗಿ 7 ದಿನಗಳಿಂದ 10 ವರ್ಷಗಳವರೆಗಿನ ಅವಧಿಯಲ್ಲಿ ನೀವು ಒಂದು ಬಾರಿ ಹೂಡಿಕೆ ಮಾಡಬಹುದು. ಇದರ ಮೇಲಿನ ಬಡ್ಡಿಯನ್ನು ನಿಯಮಿತ ಮಧ್ಯಂತರಗಳಲ್ಲಿ ಪಡೆಯಬಹುದು ಅಥವಾ ನೀವು ಮುಕ್ತಾಯದ ಸಮಯದಲ್ಲಿ ಅದನ್ನು ಸ್ವೀಕರಿಸುವ ಆಯ್ಕೆಯನ್ನು ಆಯ್ದುಕೊಳ್ಳಬಹುದು. ಇದರ ಬಡ್ಡಿದರಗಳು ಮಾರುಕಟ್ಟೆಯ ಏರಿಳಿತಗಳಿಂದ ಪ್ರಭಾವಿತವಾಗುವುದಿಲ್ಲ. ಹೂಡಿಕೆ ಆಯ್ಕೆಗಳ ರಿಟರ್ನ್ಸ್ ಅಥವಾ ಮೆಚ್ಯೂರಿಟಿ ಆದಾಯವನ್ನು ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳು ಖಾತರಿಪಡಿಸುತ್ತವೆ.

ಬಡ್ಡಿ ನಷ್ಟ ತುಂಬ ಬೇಕಾಗುತ್ತದೆ ಎಚ್ಚರ

ಇಷ್ಟಲ್ಲ ಅನುಕೂಲತೆಗಳನ್ನು ಹೊಂದಿರುವ ಎಫ್‌ಡಿಯಲ್ಲಿ ಕೆಲವೊಂದು ನ್ಯೂನತೆಗಳಿವೆ. ಹೂಡಿಕೆ ಮಾಡುವ ಮುನ್ನ ಇದನ್ನು ಗಮನಿಸಿವುದು ಒಳಿತು. ಅವಧಿ ಮುಕ್ತಾಯದ ಮೊದಲು ಹಣವನ್ನು ಹಿಂತೆಗೆದುಕೊಂಡರೆ ಬಡ್ಡಿ ನಷ್ಟ ಮತ್ತು ದಂಡವನ್ನು ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ. ಚಿಂತೆ ಬೇಡ. ಕೆಲವು ಸ್ಮಾರ್ಟ್ ಹೂಡಿಕೆದಾರರು ಇದಕ್ಕೆ ಪರಿಹಾರವನ್ನೂ ಕಂಡುಕೊಂಡಿದ್ದಾರೆ. ಅವರು ಎಫ್‌ಡಿಯಲ್ಲಿ ಹೂಡಿಕೆ ಮಾಡುವ ವಿಧಾನವನ್ನೇ ಬದಲಾಯಿಸಿದ್ದಾರೆ.

ಈ ವಿಧಾನ ಪ್ರಯತ್ನಿಸಿ

ಎಫ್‌ಡಿಯಲ್ಲಿ ಹೂಡಿಕೆ ಮಾಡಬೇಕಾದ ಮೊತ್ತವನ್ನು ವಿಂಗಡಿಸಬೇಕು. ಅಂದರೆ ಹೂಡಿಕೆ ಮಾಡಲು ನಿಶ್ಚಯಿಸಿರುವ ಎಲ್ಲ ಹಣವನ್ನು ಒಂದೇ ನಿಶ್ಚಿತ ಠೇವಣಿಯಲ್ಲಿ ಹೂಡಿಕೆ ಮಾಡುವ ಬದಲು ಆ ಹಣವನ್ನು ಮೂರು ಭಾಗಗಳಾಗಿ ವಿಂಗಡಿಸಿ. ನಂತರ ಅದನ್ನು 1 ವರ್ಷ, 3 ವರ್ಷ ಮತ್ತು 5 ವರ್ಷಗಳ ಅವಧಿಯೊಂದಿಗೆ ಸ್ಥಿರ ಠೇವಣಿಗಳಲ್ಲಿ ಸಮಾನವಾಗಿ ಹೂಡಿಕೆ ಮಾಡಿ. 1 ವರ್ಷದ ಎಫ್‌ಡಿಯ ಅವಧಿ ಮುಗಿದ ತಕ್ಷಣ ಅದನ್ನು 3 ವರ್ಷಗಳ ಎಫ್‌ಡಿಯಲ್ಲಿ ಮರುಹೂಡಿಕೆ ಮಾಡಿ. ಅಂತೆಯೇ ಅದು ಅವಧಿ ಮುಗಿದಾಗ ವಿಸ್ತರಿಸುತ್ತಲೇ ಇರಿ.

ಇದನ್ನೂ ಓದಿ: Money Guide: ಮಕ್ಕಳಲ್ಲೂ ಇರಲಿ ಆರ್ಥಿಕ ಸಾಕ್ಷರತೆ; ಮಕ್ಕಳ ದಿನಾಚರಣೆಯಂದೇ ಇದು ಆರಂಭವಾಗಲಿ

ಅನುಕೂಲಗಳೇನು?

ಈ ರೀತಿ ಮಾಡುವುದರಿಂದ ದೊರೆಯುವ ಪ್ರಯೋಜನಗಳೇನು ಎನ್ನುವುದನ್ನು ನೋಡೋಣ. ಈ ವಿಧಾನ ಅನುಸರಿಸುವುದರಿಂದ ಹೆಚ್ಚಿನ ಬಡ್ಡಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಬ್ಯಾಂಕ್‌ಗಳು ಎಫ್‌ಡಿಗೆ 3 ವರ್ಷಗಳವರೆಗೆ ಹೆಚ್ಚಿನ ಬಡ್ಡಿ ದರ ಒದಗಿಸುತ್ತವೆ. ಹೀಗಾಗಿ ನೀವು ಠೇವಣಿ ಮೇಲೆ ಮೂರು ರೀತಿಯ ಬಡ್ಡಿಯನ್ನು ಪಡೆಯುವಂತಾಗುತ್ತದೆ. ಇದು ನಿಗದಿತ ಅವಧಿಯ ಎಫ್‌ಡಿಯಲ್ಲಿ ಮಾಡಿದ ಹೂಡಿಕೆಯಿಂದ ಪಡೆಯುವ ಬಡ್ಡಿಗಿಂತ ಹೆಚ್ಚಾಗಿರುತ್ತದೆ. ಅಲ್ಲದೆ ಇದ್ದಕ್ಕಿದ್ದಂತೆ ಹಣದ ಅಗತ್ಯವಿದ್ದಾಗ ಎಫ್‌ಡಿಯನ್ನು ಅರ್ಧದಲ್ಲೇ ಹಿಂಪಡೆದು ದಂಡ ಕಟ್ಟುವ ಪ್ರಮೇಯ ತಪ್ಪುತ್ತದೆ. ನೀವು ಅನೇಕ ಅವಧಿಯ ಎಫ್‌ಡಿಯಲ್ಲಿ ಹಣವನ್ನು ಹೂಡಿಕೆ ಮಾಡಿರುವುದರಿಂದ ಇದರಿಂದ ಹಣ ಹೊಂದಿಸಿಕೊಳ್ಳಬಹುದು ಎಂದು ಸಲಹೆ ನೀಡುತ್ತಾರೆ ಆರ್ಥಿಕ ತಜ್ಞರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version