ಬೆಂಗಳೂರು: ಕೋಟ್ಯಧಿಪತಿಯಾಗಬೇಕು (Crorepati) ಎನ್ನುವುದು ಪ್ರತಿಯೊಬ್ಬರ ಕನಸು. ಆದರೆ ಈ ಕನಸು ನನಸಾಗುವುದು ಕೆಲವರಿಗೆ ಮಾತ್ರ. ಇದಕ್ಕಾಗಿ ಲಾಟರಿ ಹೊಡಿಯಲೇಬೇಕು ಎಂದೇನಿಲ್ಲ. ಉತ್ತಮ ಹೂಡಿಕೆ ಮಾಡುವ ಮೂಲಕ ಈ ಗುರಿಯನ್ನು ಸಾಧಿಸಬಹುದು. ನಿಖರವಾದ ಯೋಜನೆಯೊಂದಿಗೆ ದೀರ್ಘಕಾಲೀನ ಹೂಡಿಕೆಗಳು ನಿಮ್ಮ ಕೋಟ್ಯಧಿಪತಿ ಕನಸನ್ನು ನನಸು ಮಾಡಲಿದೆ ಎನ್ನುವುದು ನಿಮಗೆ ಗೊತ್ತೆ? ಈ ಬಗ್ಗೆ ವಿವರ ಇಂದಿನ ಮನಿಗೈಡ್ (Money Guide)ನಲ್ಲಿದೆ.
ಅತ್ಯಂತ ಜನಪ್ರಿಯ ದೀರ್ಘಾವಧಿ ಉಳಿತಾಯ ಯೋಜನೆಗಳಲ್ಲಿ ಒಂದಾದ ಸಾರ್ವಜನಿಕ ಭವಿಷ್ಯ ನಿಧಿ (Public Provident Fund-PPF)ಯಲ್ಲಿ ಹೂಡಿಕೆ ಮಾಡುವುದರಿಂದ ನೀವು ಉತ್ತಮ ಆದಾಯವನ್ನು ಗಳಿಸಬಹುದು. ನಿಮ್ಮ ಉದ್ಯೋಗದ ಆರಂಭಿಕ ಹಂತದಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸುವುದು ಉತ್ತಮ. ಹೆಚ್ಚು ಕಾಲ ಹೂಡಿಕೆ ಮಾಡಿದಷ್ಟು ನೀವು ಉತ್ತಮ ಆದಾಯವನ್ನು ನಿರೀಕ್ಷಿಸಬಹುದು. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
ಏನಿದು ಸಾರ್ವಜನಿಕ ಭವಿಷ್ಯ ನಿಧಿ?
ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ ನಿಮ್ಮ ಹಣವನ್ನು ಸುರಕ್ಷಿತವಾಗಿ ಇಡುವುದಷ್ಟೇ ಅಲ್ಲದೆ ಸಾಂಪ್ರದಾಯಿಕ ಉಳಿತಾಯ ವಿಧಾನಗಳಿಗೆ ಹೋಲಿಸಿದರೆ ಇನ್ನ ಹೆಚ್ಚಿನ ಬಡ್ಡಿದರವನ್ನೂ ಒದಗಿಸುತ್ತದೆ. ಪಿಪಿಎಫ್ ಯಾಕೆ ಉತ್ತಮ ಹೂಡಿಕೆ ಆಯ್ಕೆ ಎಂದರೆ, ನೀವು ಠೇವಣಿ ಇಡುವ ಹಣ, ಗಳಿಸಿದ ಬಡ್ಡಿ ಮತ್ತು ಮೆಚ್ಯುರಿಟಿ ಮೊತ್ತ ಎಲ್ಲವೂ ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ. ಇದು ಸರ್ಕಾರದ ಬೆಂಬಲಿತ ಯೋಜನೆಯಾಗಿರುವುದರಿಂದ ಸುರಕ್ಷಿತವೂ ಹೌದು. ಯಾವುದೇ ಬ್ಯಾಂಕ್ ಶಾಖೆ ಅಥವಾ ಅಂಚೆ ಕಚೇರಿಯಲ್ಲಿ ಪಿಪಿಎಫ್ ಖಾತೆಯನ್ನು ತೆರೆಯಬಹುದು.
ಸಾರ್ವಜನಿಕ ಭವಿಷ್ಯ ನಿಧಿಯ ಬಡ್ಡಿದರ
ಪಿಪಿಎಫ್ ಯೋಜನೆಯಲ್ಲಿ ನೀವು ವಾರ್ಷಿಕವಾಗಿ ಕನಿಷ್ಠ 500 ರೂ. ಮತ್ತು ಗರಿಷ್ಠ 1.5 ಲಕ್ಷ ರೂ. ಹೂಡಿಕೆ ಮಾಡಬಹುದು. ಪಿಪಿಎಫ್ ಖಾತೆಯು 15 ವರ್ಷಗಳ ಮೆಚ್ಯುರಿಟಿ ಅವಧಿಯನ್ನು ಹೊಂದಿದೆ. ಬ್ಯಾಂಕ್‌ಗಳು ಮತ್ತು ಅಂಚೆ ಕಚೇರಿಗಳಲ್ಲಿನ ಸ್ಥಿರ ಠೇವಣಿಗಳಿಗೆ ಹೋಲಿಸಿದರೆ ಪಿಪಿಎಫ್ ಹೆಚ್ಚಿನ ಬಡ್ಡಿದರವನ್ನು ನೀಡುತ್ತದೆ. ಇದೀಗ ಪಿಪಿಎಫ್‌ನಲ್ಲಿ 7.1% ಬಡ್ಡಿದರ ಲಭಿಸುತ್ತಿದೆ. ಅವಧಿ ಮುಕ್ತಾಯದ ನಂತರವೂ ನೀವು ಅದನ್ನು ಮುಂದುವರಿಸಲು ಬಯಸಿದರೆ ವಿಸ್ತರಿಸಬಹುದಾದ ಆಯ್ಕೆಯೂ ಇದೆ.
ಇದನ್ನೂ ಓದಿ: Money Guide: ಹೋಮ್‌ಲೋನ್ ಪಡೆಯುವ ಮುನ್ನ ಈ ಅಂಶಗಳನ್ನು ಗಮನಿಸಿ
1 ಕೋಟಿ ರೂ. ಆದಾಯ ಗಳಿಸುವುದು ಹೇಗೆ?
ಸಾಧಾರಣ ಮಾಸಿಕ ಹೂಡಿಕೆಯೂ ನಿಮ್ಮನ್ನು ಕೋಟ್ಯಧಿಪತಿಯನ್ನಾಗಿಸಬಹುದು. ಪ್ರತಿ ತಿಂಗಳು ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಕೇವಲ 12,500 ರೂ.ಗಳನ್ನು ಠೇವಣಿ ಹೂಡಿದರೆ ವಾರ್ಷಿಕವಾಗಿ 1.5 ಲಕ್ಷ ರೂ. ಸಂಗ್ರಹವಾಗುತ್ತದೆ. ಪ್ರಸ್ತುತ ಇರುವ 7.1% ಬಡ್ಡಿದರವನ್ನು ಪರಿಗಣಿಸಿದರೆ, ಹೀಗೆ 25 ವರ್ಷಗಳವರೆಗೆ ನಿಯಮಿತವಾಗಿ ಹೂಡಿಕೆ ಮಾಡಿದರೆ 1.03 ಕೋಟಿ ರೂ. ಗಳಿಸಬಹುದು. 25 ವರ್ಷಗಳವರೆಗೆ ನಿಮ್ಮ ಒಟ್ಟು ಹೂಡಿಕೆ ಸುಮಾರು 37.5 ಲಕ್ಷ ರೂ.ಗಳಾಗಿದ್ದರೆ, ಬಡ್ಡಿ ಅಂಶವು ಸುಮಾರು 65.58 ಲಕ್ಷ ರೂ. ಆಗುತ್ತದೆ. ಅಂದರೆ ನಿಮ್ಮ ಹೂಡಿಕೆಗಿಂತ ದುಪ್ಪಟ್ಟು. ಹೀಗೆ ಇಂದಿನಿಂದಲೇ ಉಳಿತಾಯ ಮಾಡಲು ಆರಂಭಿಸಿದರೆ ಕೋಟ್ಯಧಿಪತಿಯಾಗುವ ನಿಮ್ಮ ಕನಸು ಅಸಾಧ್ಯವೇನಲ್ಲ ಎನ್ನುತ್ತಾರೆ ಆರ್ಥಿಕ ತಜ್ಞರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ