Site icon Vistara News

Money Guide: ಹೋಮ್‌ಲೋನ್‌ ಪಡೆಯಲು ಬೇಕಾದ ಅರ್ಹತೆಗಳೇನು? ಇಲ್ಲಿದೆ ವಿವರ

home loan

home loan

ಬೆಂಗಳೂರು: ಸ್ವಂತದ್ದೊಂದು ಮನೆ ಹೊಂದಿರಬೇಕು ಎನ್ನುವ ಕನಸು ಯಾರಿಗೆ ಇಲ್ಲ ಹೇಳಿ? ಆದರೆ ಈ ದುಬಾರಿ ದುನಿಯಾದಲ್ಲಿ ಈ ಕನಸನ್ನು ನನಸು ಮಾಡುವುದು ಮಧ್ಯಮ ವರ್ಗದ ಜನರಿಗೆ ಅಷ್ಟು ಸುಲಭವಲ್ಲ. ಇದಕ್ಕಾಗಿ ಹೋಮ್‌ ಲೋನ್‌ಗಳ ಮೊರೆ ಹೋಗಬೇಕಾಗುತ್ತದೆ. ಆದರೆ ಕೆಲವೊಮ್ಮ ಈ ಹೋಮ್‌ಲೋನ್‌ (Home loan) ಎನ್ನುವುದು ಹೊರೆಯಾಗಿ ಬದಲಾಗುವ ಸಾಧ್ಯತೆ ಇರುತ್ತದೆ. ಇದನ್ನು ತಪ್ಪಿಸಲು ಯಾವೆಲ್ಲ ಮಾರ್ಗಗಳನ್ನು ಕೈಗೊಳ್ಳಬೇಕು? ಗೃಹ ಸಾಲ ಪಡೆಯಲು ಯಾವೆಲ್ಲ ಅರ್ಹತೆಗಳು ಬೇಕು? ಎನ್ನುವುದರ ವಿವರ ಇಂದಿನ ಮನಿಗೈಡ್‌ (Money Guide)ನಲ್ಲಿ ತಜ್ಞರಾದ ವಿಶ್ವನಾಥ್‌ ಕಾಮತ್‌ ವಿವರಿಸಲಿದ್ದಾರೆ.

ಹೋಮ್‌ ಲೋನ್‌ ಪಡೆಯಲು ಬೇಕಾದ ಅರ್ಹತೆಗಳೇನು?

ಸ್ಯಾಲರಿಡ್‌ ಕ್ಲಾಸ್‌ (Salaried class) ಅಂದರೆ ಉದ್ಯೋಗಿಗಳು ಕೆಲಸಕ್ಕೆ ಸೇರಿದ ಮೂರು ವರ್ಷಗಳ ಬಳಿಕ ಹೋಮ್‌ ಲೋನ್‌ಗೆ ಅರ್ಜಿ ಸಲ್ಲಿಸಬಹುದು. ಒಂದು ವೇಳೆ ಇಎಂಐ ತುಂಬಲು ಅವರ ಆದಾಯ ಸಾಕಾಗುತ್ತಿಲ್ಲ ಎಂದಾದರೆ ಕುಟುಂಬದ ಇತರ ಸದಸ್ಯರ ಹೆಸರನ್ನು ಸೇರಿಸಬಹುದು. ಎಲ್ಲರ ಆದಾಯವನ್ನು ಗಣನೆಗೆ ತೆಗೆದುಕೊಂಡು ಸಾಲ ಮಂಜೂರಾಗುತ್ತದೆ. ಉದಾಹರಣೆಗೆ ಒಬ್ಬ ವ್ಯಕ್ತಿಗೆ ವಾರ್ಷಿಕ 10 ಲಕ್ಷ ರೂ. ಆದಾಯ ಇದ್ದರೆ ಅದರ 75% ಸಾಲ ಸಿಗುತ್ತದೆ. ಇಎಂಐ ನಿರ್ಧರಿಸುವುದು ಮಾಸಿಕ ಆದಾಯದ ಆಧಾರದಲ್ಲಿ ಎಂದು ವಿಶ್ವನಾಥ್‌ ತಿಳಿಸುತ್ತಾರೆ.

ಐಎಂಜಿಸಿ ಯೋಜನೆ

ಇತ್ತೀಚೆಗೆ ಬ್ಯಾಂಕ್‌ಗಳು ಐಎಂಜಿಸಿ (IMGC) ಎನ್ನುವ ಹೊಸ ಯೋಜನೆಯನ್ನು ಜಾರಿಗೊಳಿಸಿದ್ದು, ಅದರ ಪ್ರಕಾರ ಸಾಲದ ಪ್ರಮಾಣ ಹೆಚ್ಚು ಸಿಗುತ್ತದೆ. ಸಾಮಾನ್ಯವಾಗಿ 5-8 ಲಕ್ಷ ರೂ. ಆದಾಯ ಇದ್ದವರಿಗೆ 60% ಸಾಲ ಸಿಕ್ಕರೆ ಐಎಂಜಿಸಿ ಮೂಲಕ ಸುಮಾರು 80% ಲಭಿಸುತ್ತದೆ. ಆದರೆ ಇದಕ್ಕೆ ಹೆಚ್ಚುವರಿ ಶುಲ್ಕ ಅನ್ವಯವಾಗುತ್ತದೆ. 1.15% ಶುಲ್ಕ ಪಾವತಿಸಬೇಕು. ಇದರಲ್ಲಿ ಕನಿಷ್ಠ 20 ಲಕ್ಷ ರೂ. ಮತ್ತು ಗರಿಷ್ಠ 5 ಕೋಟಿ ರೂ.ವರೆಗೆ ಸಾಲ ಪಡೆಯಬಹುದು. ಬಡ್ಡಿದರವನ್ನು ಸಿಬಿಲ್‌ ಸ್ಕೋರ್‌ ಮೂಲಕ ನಿರ್ಧರಿಸುವುದರಿಂದ ಇದರಲ್ಲಿ ಯಾವುದೇ ವ್ಯತ್ಯಾಸವಿಲ್ಲ.

ಸೈಟ್‌ ಇದ್ದರೆ ಮನೆ ನಿರ್ಮಿಸಲು ಎಷ್ಟು ಸಾಲ ಲಭ್ಯ?

ಒಬ್ಬ ವ್ಯಕ್ತಿಯ ಬಳಿ ಸೈಟ್‌ ಇದ್ದು, ಅಲ್ಲಿ ಮನೆ ನಿರ್ಮಿಸಲು ಬ್ಯಾಂಕ್‌ಗಳು ಎಷ್ಟು ಪ್ರಮಾಣದ ಸಾಲ ಮಂಜೂರು ಮಾಡುತ್ತವೆ ಎನ್ನುವುದನ್ನು ನೋಡೋಣ. ಮೊದಲು ಸ್ಯಾಂಕ್ಷನ್‌ ಪ್ಲ್ಯಾನ್‌ (Sanction plan) ಮಾಡಿಸಬೇಕು. ಮನೆಯನ್ನು ಎಷ್ಟು ಚದರ ಅಡಿಯಲ್ಲಿ ನಿರ್ಮಿಸಲಾಗುತ್ತದೆ? ಎಷ್ಟು ಫ್ಲೋರ್‌ ಕಟ್ಟಲು ಉದ್ದೇಶಿಸಲಾಗಿದೆ? ಮುಂತಾದ ವಿವರಗಳನ್ನು ಮೊದಲು ಬ್ಯಾಂಕ್‌ನವರು ಪರಿಶೀಲಿಸುತ್ತಾರೆ. ಸಾಮಾನ್ಯವಾಗಿ ಚದರ ಅಡಿಗೆ 2,500-3,000 ರೂ. ಒದಗಿಸಲಾಗುತ್ತದೆ. ಜತೆಗೆ ಒಳಾಂಗಣ ವಿನ್ಯಾಸಕ್ಕೂ ಪ್ರತ್ಯೇಕ ಲೋನ್‌ ಸಿಗುತ್ತದೆ. ಈ ಲೆಕ್ಕಾಚಾರ ಗ್ರಾಮೀಣ, ನಗರ ಪ್ರದೇಶ ಎನ್ನುವ ವ್ಯತ್ಯಾಸವಿಲ್ಲದೆ ಒಂದೇ ರೀತಿಯಲ್ಲಿ ನಡೆಯುತ್ತದೆ.

ಇದನ್ನೂ ಓದಿ: Money Guide: ಹೋಮ್‌ಲೋನ್‌ ಪಡೆಯುವ ಮುನ್ನ ಈ ಅಂಶಗಳನ್ನು ಗಮನಿಸಿ

ಹೋಮ್‌ ಲೋನ್‌ ಬಡ್ಡಿದರ ಹೆಚ್ಚಳ

ಸದ್ಯ ಹೋಮ್‌ ಲೋನ್‌ನ ಬಡ್ಡಿದರ 2.5% ಹೆಚ್ಚಾಗಿದೆ. ಇದಕ್ಕಾಗಿ ಬ್ಯಾಂಕ್‌ಗಳು ಸಾಲ ತೀರಿಸುವ ಅವಧಿಯನ್ನು ಹೆಚ್ಚಿಸುವ ಅವಕಾಶ ನೀಡಿವೆ. ಬೇಕಿದ್ದರೆ ಆದಾಯ ಹೆಚ್ಚಾದಾಗ ಇಎಂಐಯನ್ನು ಹೆಚ್ಚು ಪಾವತಿಸುವ ಆಯ್ಕೆಯೂ ಲಭ್ಯ. ಸಾಲವನ್ನು ಆದಷ್ಟೂ ದೀರ್ಘ ಅವಧಿಗೆ ಪಡೆದುಕೊಳ್ಳಬೇಕು. ಇದನ್ನೂ ಅವಧಿಗೂ ಮುನ್ನವೇ ಮುಗಿಸುವ ಅವಕಾಶವೂ ಇದೆ ಎಂದು ವಿಶ್ವನಾಥ್‌ ಸಲಹೆ ನೀಡುತ್ತಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿ

Exit mobile version