Site icon Vistara News

Money Guide: ಬ್ಯಾಂಕ್‌ ದಿವಾಳಿಯಾದರೆ ಠೇವಣಿ ಹಣ ಏನಾಗುತ್ತದೆ? ಹಣ ಮರಳಿ ಪಡೆಯುವುದು ಹೇಗೆ?

bank account new

bank account new

ಬೆಂಗಳೂರು: ಕೆಲವೊಮ್ಮೆ ಬ್ಯಾಂಕ್‌ಗಳು ದಿವಾಳಿಯಾಗುವ ಸುದ್ದಿಗಳನ್ನು ಕೇಳಿರುತ್ತೇವೆ. ಅಂತಹ ಸಂದರ್ಭದಲ್ಲಿ ಸಹಜವಾಗಿಯೇ ನಮಗೂ ಆತಂಕ ಕಾಡುತ್ತದೆ. ನಾವು ಠೇವಣಿ ಇಟ್ಟಿರುವ ಬ್ಯಾಂಕ್‌ ದಿವಾಳಿಯಾದರೆ ಏನಪ್ಪ ಗತಿ? ಎನ್ನುವ ಪ್ರಶ್ನೆ ಹಲವರ ನೆಮ್ಮದಿಯನ್ನೇ ಕಸಿದು ಬಿಡುತ್ತದೆ. ನಿಮಗೂ ಇಂತಹ ಅನುಮಾನ ಕಾಡ್ತಿದ್ಯಾ? ಹಾಗಾದರೆ ಇಂದಿನ ಮನಿಗೈಡ್‌ (Money Guide)ನಲ್ಲಿ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡೋಣ. ಬ್ಯಾಂಕ್‌ ದಿವಾಳಿಯಾದರೆ ಠೇವಣಿ ಇಟ್ಟಿರುವ ಹಣಕ್ಕೆ ಏನಾಗುತ್ತದೆ? ಅದನ್ನು ಮರಳಿ ಪಡೆಯುವುದು ಹೇಗೆ? ಈ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India)ನ ನಿಯಮ ಏನು ಹೇಳುತ್ತದೆ? ಮುಂತಾದ ಅನುಮಾನಗಳಿಗೆ ಇಲ್ಲಿದೆ ಉತ್ತರ.

ನಿಯಮಗಳ ಪ್ರಕಾರ ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ 5 ಲಕ್ಷ ರೂ.ಗಿಂತ ಅಧಿಕ ಹಣ ಇಟ್ಟಿದ್ದು, ಬ್ಯಾಂಕ್‌ ದಿವಾಳಿಯಾದರೆ ನಮಗೆ ಸಿಗುವುದು ಕೇವಲ 5 ಲಕ್ಷ ರೂ. ಮಾತ್ರ. ಉದಾಹರಣೆಗೆ ನಾವು 20 ಲಕ್ಷ ರೂ. ಇಟ್ಟಿದ್ದರೂ ಸರ್ಕಾರ ಅಥವಾ ಆರ್‌ಬಿಐ ವಾಗ್ದಾನ ಮಾಡುವ ಮೊತ್ತ 5 ಲಕ್ಷ ರೂ. ಮಾತ್ರ. ಅಂದರೆ ಉಳಿದ 15 ಲಕ್ಷ ರೂ. ಅನ್ನು ಕಳೆದುಕೊಳ್ಳಬೇಕಾಗುತ್ತದೆ. 

ಹಿಂದೆ 1 ಲಕ್ಷ ರೂ. ಸಿಗುತ್ತಿತ್ತು

ಈ ಹಿಂದೆ ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ (Deposit Insurance and Credit Guarantee Corporation-DICGC) ಕಾಯ್ದೆಯಡಿ ಬ್ಯಾಂಕ್‌ಗಳ ಠೇವಣಿಗಳ ಗ್ಯಾರಂಟಿ 1 ಲಕ್ಷ ರೂ.ಗಳಾಗಿತ್ತು. ಅಂದರೆ ಬ್ಯಾಂಕ್‌ ದಿವಾಳಿಯಾದರೆ ಖಾತೆ ಹೊಂದಿದವರಿಗೆ 1 ಲಕ್ಷ ರೂ. ಮಾತ್ರ ಸಿಗುತ್ತಿತ್ತು. 2020ರಲ್ಲಿ ಕೇಂದ್ರ ಸರ್ಕಾರವು ಈ ಕಾನೂನನ್ನು ಬದಲಾಯಿಸಿ ಅದರ ಮೊತ್ತವನ್ನು 5 ಲಕ್ಷ ರೂ.ಗೆ ಹೆಚ್ಚಿಸಿತು.

ಅದಾಗ್ಯೂ ಆರ್ಥಿಕ ಬಿಕ್ಕಟ್ಟಿನ ಕಾರಣದಿಂದ ಯಾವುದೇ ಬ್ಯಾಂಕ್ ಅನ್ನು ಮುಳುಗಲು ಸರ್ಕಾರ ಬಿಡುವುದಿಲ್ಲ. ಇದಕ್ಕಾಗಿ ದಿವಾಳಿಯಾಗುತ್ತಿರುವ ಬ್ಯಾಂಕ್ ಅನ್ನು ಬೇರೊಂದು ದೊಡ್ಡ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸಲಾಗುತ್ತದೆ. ಬಳಿಕವೂ ಬ್ಯಾಂಕ್ ದಿವಾಳಿಯಾದರೆ ಎಲ್ಲ ಖಾತೆದಾರರಿಗೆ ಹಣ ಪಾವತಿ ಮಾಡುವ ಜವಾಬ್ದಾರಿ ಡಿಐಸಿಜಿಸಿ ಮೇಲಿರುತ್ತದೆ. ಈ ಮೊತ್ತವನ್ನು ಖಾತರಿಪಡಿಸಲು ಡಿಐಸಿಜಿಸಿ ಬ್ಯಾಂಕ್‌ಗಳಿಂದ ಮೊದಲೇ ಪ್ರೀಮಿಯಂ ಪಡೆದುಕೊಳ್ಳುತ್ತದೆ.

ನಿಯಮ ಏನು ಹೇಳುತ್ತದೆ?

ಆರ್‌ಬಿಐ ನಿಯಮಗಳ ಪ್ರಕಾರ, ಬ್ಯಾಂಕ್ ಕುಸಿತದ ಸಂದರ್ಭದಲ್ಲಿ ಎಲ್ಲ ಗ್ರಾಹಕರ ಠೇವಣಿಗಳು ಮತ್ತು ಸಾಲಗಳ ಮಾಹಿತಿಯನ್ನು ಲಭ್ಯವಾಗುವಂತೆ ಮಾಡಬೇಕು. ಇದರ ನಂತರ ಡಿಐಸಿಜಿಸಿ ಗ್ರಾಹಕರ ಹಣವನ್ನು 90 ದಿನಗಳಲ್ಲಿ ಹಿಂದಿರುಗಿಸಬೇಕು. 2022ರ ಆಗಸ್ಟ್ ವೇಳೆಗೆ ದೇಶದಲ್ಲಿ ಒಟ್ಟು 2,035 ಬ್ಯಾಂಕ್‌ಗಳಿಗೆ ವಿಮೆ ಮಾಡಲಾಗಿದೆ ಎಂದು ಡಿಐಸಿಜಿಸಿ ತಿಳಿಸಿದೆ. ನಿಮ್ಮ ಬ್ಯಾಂಕ್ ವಿಮೆ ಹೊಂದಿದೆಯೇ ಅಥವಾ ಇಲ್ಲವೇ ಎಂದು ಪರಿಶೀಲಿಸಬಹುದು. ಅದಕ್ಕಾಗಿ ಅಧಿಕೃತ ವೆಬ್‌ಸೈಟ್‌ https://www.dicgc.org.in/FD_ListOfInsuredBanks.htmlಗೆ ಭೇಟಿ ನೀಡಬಹುದು.

15 ತಿಂಗಳ ಅವಧಿಯಲ್ಲಿ ದೇಶದ 35 ಬ್ಯಾಂಕ್‌ಗಳ 3 ಲಕ್ಷ ಗ್ರಾಹಕರು ಇಂತಹ ಪರಿಸ್ಥಿತಿಗಳನ್ನು ಎದುರಿಸಬೇಕಾಯಿತು. ನಿಯಮ ಪ್ರಕಾರ ಸರ್ಕಾರವು ಸುಮಾರು 4 ಸಾವಿರ ಕೋಟಿ ರೂ.ಗಳನ್ನು ಜನರಿಗೆ ಹಿಂದಿರುಗಿಸಿದೆ. ಡಿಐಸಿಜಿಸಿ ಕಾಯ್ದೆಯಡಿ ದೇಶದ 35 ಬ್ಯಾಂಕ್‌ಗಳ ಸುಮಾರು 3,06,146 ಗ್ರಾಹಕರು ತಮ್ಮ ಹಣಕ್ಕೆ ಕ್ಲೈಮ್ ಮಾಡಿದ್ದಾರೆ ಎಂದು ಹಣಕಾಸು ರಾಜ್ಯ ಸಚಿವ ಡಾ.ಭಗವತ್ ಕಿಶನ್ ರಾವ್ ಕಳೆದ ವರ್ಷ ಲೋಕಸಭೆಗೆ ತಿಳಿಸಿದ್ದರು.

ಇದನ್ನೂ ಓದಿ: Money Guide: ಯಶಸ್ವಿ ಜೀವನಕ್ಕೆ 6 ಆರ್ಥಿಕ ಸೂತ್ರಗಳು, ಪಾಲಿಸಿ ನೋಡಿ!

ಏನು ಮಾಡಬೇಕು?

ಒಂದು ವೇಳೆ ಹೆಚ್ಚಿನ ಮೊತ್ತ ಇದ್ದರೆ ಅದನ್ನು ಹೇಗೆ ಕಾಪಾಡಿಕೊಳ್ಳಬಹುದು? ಎನ್ನುವ ಪ್ರಶ್ನೆಗೆ ಸಹಜವಾಗಿ ಎಲ್ಲರಲ್ಲೂ ಮೂಡುತ್ತದೆ. ನೀವು ಒಂದಕ್ಕಿಂತ ಹೆಚ್ಚು ಖಾತೆಗಳನ್ನು ತೆರೆದು ಅಲ್ಲಿ ಹಣವನ್ನು ಹಂಚಿಕೊಂಡು ಠೇವಣಿ ಇಡುವುದು ಇದಕ್ಕಿರುವ ಪರಿಹಾರ ಮಾರ್ಗ. ಉದಾಹರಣೆಗೆ ನಿಮ್ಮ ಬಳಿ 20 ಲಕ್ಷ ರೂ. ಇದೆ ಎಂದಿಟ್ಟುಕೊಳ್ಳೋಣ. ನೀವು 4 ಬ್ಯಾಂಕ್‌ ಅಕೌಂಟ್‌ ಕ್ರಿಯೇಟ್‌ ಮಾಡಿ ತಲಾ 5 ಲಕ್ಷ ರೂ.ನಂತೆ ಡೆಪಾಸಿಟ್‌ ಇಟ್ಟರೆ ಅಷ್ಟೂ ಹಣ ಸುರಕ್ಷಿತವಾಗಿರುತ್ತದೆ. ಇನ್ನೂ ಅಧಿಕ ಮೊತ್ತದ ಹಣ ಇದ್ದರೆ ಮನೆಯವರ ಹೆಸರಿನಲ್ಲಿ ಅಕೌಂಟ್‌ ಓಪನ್‌ ಮಾಡಿ ಅದರಲ್ಲಿ ಇಡಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.

Exit mobile version