Site icon Vistara News

Money Guide : ಹಣದ ಬಗ್ಗೆ ಈಗ ಮಧ್ಯಮ ವರ್ಗದ ಜನ ಹೇಗೆ ಯೋಚಿಸಬೇಕು?

Mutual Fund

ಹಣದ ಬಗ್ಗೆ ಒಂದು ಸಲ ನಿರ್ಧಾರ ತೆಗೆದುಕೊಂಡರೆ ಸಾಕು ಎಂಬ ಗ್ರಹಿಕೆಯನ್ನು ಮಧ್ಯಮ ವರ್ಗದ ಜನ ಬಿಟ್ಟು ಬಿಡಬೇಕು. ಆಗಿಂದಾಗ್ಗೆ ಹಣದ ಬಗ್ಗೆ ವಿಮರ್ಶೆ ಮಾಡುತ್ತಿರಬೇಕು. ( Money Guide ) ಅಗತ್ಯವಿದ್ದಾಗ ನಿರ್ಧಾರಗಳನ್ನೂ ಮರು ಪರಿಶೀಲಿಸಬೇಕು. ಏಕೆಂದರೆ ಹಣ, ಹಣದ ಗಳಿಕೆ, ಉಳಿತಾಯ ಮತ್ತು ಹೂಡಿಕೆಯ ಬಗ್ಗೆ ಪರಿಕಲ್ಪನೆಗಳು ಬದಲಾಗುತ್ತಿರುತ್ತವೆ. ಟ್ರೆಂಡ್‌ ಬದಲಾಗುತ್ತಿರುತ್ತದೆ. ಹೀಗಾಗಿ ಜೀವನ ಪೂರ್ತಿ ತಿಳಿಯಬೇಕಾದ ವಿಚಾರಗಳು ಇವೆ.

ಈ ಹಿಂದೆ ಜನರೆಲ್ಲ ಏಕಾಂಗಿಯಾಗಿಯೇ ಹಣಕಾಸು ಹೂಡಿಕೆಯ ಕುರಿತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ, ಯಾವುದೇ ಹೂಡಿಕೆಯನ್ನು ಇಡೀ ಕುಟುಂಬದ ಹಿತಾಸಕ್ತಿಯ ಹಲವು ಆಯಾಮಗಳನ್ನು ಪರಿಗಣಿಸಿಯೇ ನಿರ್ಧರಿಸಬೇಕಾಗುತ್ತದೆ. ಆದ್ದರಿಂದ ಕುಟುಂಬದ ಇತರ ಸದಸ್ಯರ ಸಲಹೆ ಪಡೆಯಬೇಕು. ಸೂಕ್ತ ಹಣಕಾಸು ಸಲಹೆಗಾರರ ಅಭಿಪ್ರಾಯವನ್ನೂ ಕೇಳಬೇಕು.

ಎರಡನೆಯದಾಗಿ, ನೀವು ಕೇವಲ ದೀರ್ಘಕಾಲೀನ ಹಣಕಾಸು ಪ್ಲಾನಿಂಗ್‌ ಅನ್ನು ಮಾತ್ರ ಹೊಂದಿದ್ದರೆ ಸಾಕಾಗುವುದಿಲ್ಲ. ತುರ್ತು ಅಗತ್ಯಗಳನ್ನೂ ನೋಡಿಕೊಳ್ಳಬೇಕಾಗುತ್ತದೆ. ಗೃಹ ಸಾಲ ಇಎಂಐ, ಡೌನ್‌ ಪೇಮೆಂಟ್‌, ಆಪತ್ಕಾಲಕ್ಕೆ ಅಗತ್ಯದ ಫಂಡ್‌ ಬೇಕಾಗುತ್ತದೆ. ತಕ್ಷಣದ ಖರ್ಚು ವೆಚ್ಚಗಳು, ಅಲ್ವಾವಧಿಯ ವೆಚ್ಚಗಳು, ಮಧ್ಯಮ ಮತ್ತು ದೀರ್ಘಾವಧಿಯ ಅಗತ್ಯಗಳನ್ನು ನೀವು ಪರಿಗಣಿಸಬೇಕಾಗುತ್ತದೆ. ಮ್ಯೂಚುವಲ್‌ ಫಂಡ್‌ಗಳಲ್ಲಿ ಈ ಅಗತ್ಯಗಳನ್ನು ಈಡೇರಿಸಬಹುದು.

ಮೂರನೆಯದಾಗಿ ವಿಮೆ ಮತ್ತು ಹೂಡಿಕೆಯ ಪ್ಲಾನ್‌ ಅನ್ನು ಒಳಗೊಂಡಿರುವ ವಿಮೆ ಉತ್ಪನ್ನಗಳನ್ನು ಖರೀದಿಸದಿರಿ. ಇಂಥ ಉತ್ಪನ್ನಗಳು ಒಂದು ಕಡೆ ಬೇಕಾದಷ್ಟು ವಿಮೆ ಕವರೇಜ್‌ ಅನ್ನೂ ಕೊಡುವುದಿಲ್ಲ, ಮತ್ತೊಂದು ಕಡೆ ಒಳ್ಳೆಯ ರಿಟರ್ನ್‌ ಅನ್ನೂ ನೀಡುವುದಿಲ್ಲ. ಮಾತ್ರವಲ್ಲದೆ ಇವುಗಳು 15-20 ವರ್ಷಗಳ ದೀರ್ಘಕಾಲೀನ ಹೂಡಿಕೆಯಾದ್ದರಿಂದ ದೊಡ್ಡ ಮೊತ್ತದ ಹೂಡಿಕೆಯನ್ನೂ ಬಯಸುತ್ತದೆ. ಹೀಗಾಗಿ ವಾಸ್ತವವಾಗಿ ಇವುಗಳು ನಿಮಗೆ ನಷ್ಟ ಉಂಟು ಮಾಡಬಲ್ಲುದು.

ಇದನ್ನೂ ಓದಿ: ELSS Funds : ತೆರಿಗೆ ಉಳಿತಾಯದ ಜತೆಗೆ ಶ್ರೀಮಂತರಾಗಲು ಸಹಕರಿಸುವ ಮ್ಯೂಚುವಲ್‌ ಫಂಡ್‌ ಯಾವುದು?

ದೀರ್ಘಕಾಲೀನವಾಗಿ ರಿಯಲ್‌ ಎಸ್ಟೇಟ್‌ ಬೆಸ್ಟ್‌ ಹೂಡಿಕೆ ಎಂದು ಭಾವಿಸದಿರಿ. ಇದರಲ್ಲಿನ ಸವಾಲುಗಳ ಬಗ್ಗೆಯೂ ಯೋಚಿಸಿ. ಏಕೆಂದರೆ ಇದರ ಲಿಕ್ವಿಡಿಟಿ ಕಡಿಮೆ. ಅಂದರೆ ನಿಮಗೆ ಬೇಕೆಂದಾಗ ಮಾರಾಟ ಮಾಡಿ ನಗದೀಕರಿಸಲು ಆಗುವುದಿಲ್ಲ. ಐದನೆಯದಾಗಿ ಮ್ಯೂಚುವಲ್‌ ಫಂಡ್‌ (Mutual Fund) ಹಾಗೂ ಸ್ಟಾಕ್‌ ಇನ್ವೆಸ್ಟ್‌ ಮೆಂಟ್‌ ಎನ್ನುವುದು ಜೂಜಿಗೆ ಸಮ ಎಂಬ ತಪ್ಪು ಗ್ರಹಿಕೆ ಬಿಟ್ಟು ಬಿಡಿ. ಹಾಗಂತ ಹೂಡಿಕೆ ಮತ್ತು ಟ್ರೇಡಿಂಗ್‌ ಬಗ್ಗೆ ಸಾಕಷ್ಟು ಅರಿತು ಇನ್ವೆಸ್ಟ್‌ ಮಾಡುವುದನ್ನು ಮರೆಯದಿರಿ. ಭಾರತದಲ್ಲಿ ಮ್ಯೂಚುವಲ್‌ ಫಂಡ್‌ ವಲಯದ ನಿಯಂತ್ರಣಕ್ಕೆ ಸೆಬಿ ಇದೆ. ಹೀಗಾಗಿ ಹೂಡಿಕೆದಾರರು ರಿಸ್ಕ್‌ ತೆಗೆದುಕೊಂಡು ಹೂಡಿಕೆ ಮುಂದುವರಿಸಬಹುದು.

ಹಣಕಾಸು ಸಾಕ್ಷರತೆ ಬಗ್ಗೆ ಮಕ್ಕಳಿಗೆ ಚಿಕ್ಕಂದಿನಲ್ಲೇ ಸಾಕಷ್ಟು ತಿಳುವಳಿಕೆ ನೀಡಬೇಕು. ಶಾಲಾ ಕಾಲೇಜುಗಳಲ್ಲಿ ಇದರ ಬಗ್ಗೆ ಮಾಹಿತಿ ಸಿಗದಿದ್ದರೂ, ಹಣಕಾಸು ಸಲಹೆಗಾರರ ನೆರವು ಪಡೆಯಬಹುದು. ಪುಸ್ತಕಗಳು, ನಿಯತಕಾಲಿಕೆಗಳು, ಪರ್ಸನಲ್‌ ಫೈನಾನ್ಸ್‌ ಕುರಿತ ಯೂಟ್ಯೂಬ್‌ ಚಾನೆಲ್‌ ಗಳನ್ನು ನೋಡಿಯೂ ವಿಚಾರಗಳನ್ನು ತಿಳಿದುಕೊಳ್ಳಬಹುದು. ಆದರೆ ಎಲ್ಲವನ್ನೂ ಕುರುಡಾಗಿ ನಂಬ ಕೂಡದು. ಆಳವಾಗಿ ವಿಮರ್ಶಿಸಿ ಮನನ ಮಾಡಿಕೊಳ್ಳಬೇಕು.

Exit mobile version