ಬೆಂಗಳೂರು: ಪ್ರಸ್ತುತ ದಿನಗಳಲ್ಲಿ ಬರುವ ಸಂಬಳದಲ್ಲಿ ಉಳಿತಾಯ ಮಾಡುವುದು ಮುಖ್ಯವಾಗುತ್ತದೆ. ಸರಿಯಾದ ಪ್ಲ್ಯಾನ್‌ನಿಂದ ಉತ್ತಮ ಉಳಿತಾಯ ಮಾಡಬಹುದು. ಜತೆಗೆ ಭವಿಷ್ಯಕ್ಕಾಗಿ ಹೂಡಿಕೆಯನ್ನೂ ಮಾಡಬಹುದು. ಹಾಗಾದರೆ 25 ಸಾವಿರ ರೂ. ಸಂಬಳದಲ್ಲಿ ಪ್ರತಿ ತಿಂಗಳು 9,500 ರೂ. ಉಳಿಸುವುದು ಹೇಗೆ? ಹೂಡಿಕೆ ಮಾಡುವುದು ಹೇಗೆ? ಎನ್ನುವುದನ್ನು ಮನಿ ಗೈಡ್ (Money Guide)ನಲ್ಲಿ ವಿಸ್ತಾರ ನ್ಯೂಸ್‌ನ ಎಕ್ಸಿಕ್ಯುಟಿವ್ ಎಡಿಟರ್ ಶರತ್ ಎಂ.ಎಸ್. ವಿವರಿಸುತ್ತಾರೆ.
ತಯಾರಿ ಅಗತ್ಯ
25 ಸಾವಿರ ರೂ. ಸಂಬಳದಲ್ಲಿ ಪ್ರತಿ ತಿಂಗಳು 9,500 ರೂ. ಉಳಿಸಲು ಉತ್ತಮ ಯೋಜನೆ ಹಾಕಿಕೊಳ್ಳುವುದು ಅಗತ್ಯ. ಯಾರೇ ಆಗಲಿ ಉದ್ಯೋಗಕ್ಕೆ ಸೇರಿದ ತಕ್ಷಣ ಮಾಡಬೇಕಾದ ಮುಖ್ಯ ಕೆಲಸ ಎಂದರೆ ಹೆಲ್ತ್ ಇನ್ಶೂರೆನ್ಸ್‌ನ ಖರೀದಿ. ಪ್ರತಿ ವರ್ಷ ಆರೋಗ್ಯ ಕ್ಷೇತ್ರದಲ್ಲಿ ಸುಮಾರು 14% ಬೆಲೆ ಏರಿಕೆ ದಾಖಲಾಗುತ್ತದೆ. ಅನಾರೋಗ್ಯ ಕಾಡಿದರೆ ಬಹಳಷ್ಟು ದೊಡ್ಡ ಮೊತ್ತದ ಹಣವನ್ನು ಇದಕ್ಕಾಗಿ ಖರ್ಚು ಮಾಡಬೇಕಾಗುತ್ತದೆ. ಇದರಿಂದ ಕಷ್ಟಪಟ್ಟು ದುಡಿದು ಕೂಡಿಟ್ಟ ಹಣದಲ್ಲಿ ಬಹುತೇಕ ಭಾಗ ಖರ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಹೆಲ್ತ್ ಇನ್ಶೂರೆನ್ಸ್ ಮಾಡಿಸುವುದು ಬಹಳ ಮುಖ್ಯ. ಜತೆಗೆ ಕುಟುಂಬದವರ ರಕ್ಷಣೆಗಾಗಿ ಟರ್ಮ್ ಇನ್ಶೂರೆನ್ಸ್ ಮಾಡಿಸುವತ್ತಲೂ ಗಮನ ಹರಿಸಬೇಕು. ಅಕಾಲಿಕವಾಗಿ ಮೃತಪಟ್ಟರೆ ಅವರ ಕುಟುಂಬಕ್ಕೆ ಟರ್ಮ್ ಇನ್ಶೂರೆನ್ಸ್ ಮೊತ್ತ ಸಿಗುತ್ತದೆ. ಇದರಿಂದ ಕುಟುಂಬ ಬೀದಿಗೆ ಬರುವುದು ತಪ್ಪುತ್ತದೆ. ಮಾತ್ರವಲ್ಲ ನಮ್ಮ ಬ್ಯಾಂಕ್ ಅಕೌಂಟ್ ಎಮರ್ಜೆನ್ಸಿ ಫಂಡ್ ಹೊಂದಿರಬೇಕು. ಅಂದರೆ 4-5 ತಿಂಗಳ ಸಂಬಳದಷ್ಟು ಹಣ ನಮ್ಮ ಸೇವಿಂಗ್ ಅಕೌಂಟ್‌ನಲ್ಲಿ ಇರಬೇಕು. ಅನಿರೀಕ್ಷಿತ ಅಗತ್ಯಗಳಿಗೆ ಇದು ನೆರವಾಗುತ್ತದೆ. ತಕ್ಷಣ ದುಡ್ಡು ಕೈಗೆ ಬರುವಂತಿರಬೇಕು. ಈ 3 ಕಾರ್ಯಗಳನ್ನು ಮೊದಲು ಕೈಗೊಳ್ಳಬೇಕು ಎಂದು ಶರತ್ ತಿಳಿಸುತ್ತಾರೆ.
ಲೆಕ್ಕಾಚಾರ
ತಿಂಗಳಿಗೆ 25 ಸಾವಿರ ರೂ. ಸಂಬಳ ಪಡೆಯುವ ವ್ಯಕ್ತಿ ಉಳಿತಾಯ, ಹೂಡಿಕೆ ಹೇಗೆ ಮಾಡಬಹುದು ಎನ್ನುವುದಕ್ಕೆ ಈ ಉದಾಹರಣೆಯನ್ನು ನೋಡೋಣ.
- ತಿಂಗಳ ಸಂಬಳ-25,000 ರೂ.
- ಪಿಜಿ ಅಥವಾ ರೂಂ ವೆಚ್ಚ-7,000 ರೂ.
- ಸಾರಿಗೆ ವೆಚ್ಚ-2,500 ರೂ.
- ಆಹಾರ ಮತ್ತು ಇತರ ಖರ್ಚು-6,000 ರೂ.
- ತಿಂಗಳ ಒಟ್ಟು ಖರ್ಚು-15,500 ರೂ.
- ಖರ್ಚಿನ ನಂತರ ಉಳಿತಾಯದ ಮೊತ್ತ- 9,500 ರೂ.
- ಹೆಲ್ತ್ ಇನ್ಶೂರೆನ್ಸ್-700 ರೂ.
- ಟರ್ಮ್ ಇನ್ಶೂರೆನ್ಸ್-600 ರೂ.
- ಎಮರ್ಜೆನ್ಸಿ ಫಂಡ್-3,200 ರೂ.
- ಇಂಡಕ್ಸ್ ಮ್ಯೂಚುಯಲ್ ಫಂಡ್-1,000 ರೂ.
- ಲಾರ್ಜ್ ಕ್ಯಾಪ್ ಮ್ಯೂಚುಯಲ್ ಫಂಡ್-1,000 ರೂ.
- ಮಿಡ್ ಕ್ಯಾಪ್ ಮ್ಯೂಚುಯಲ್ ಫಂಡ್-1,000 ರೂ.
- ಸ್ಮಾಲ್ ಕ್ಯಾಪ್ ಮ್ಯೂಚುಯಲ್ ಫಂಡ್-1,000 ರೂ.
- ಮಲ್ಟಿ ಕ್ಯಾಪ್ ಮ್ಯೂಚುಯಲ್ ಫಂಡ್-1,000 ರೂ.
ಹೂಡಿಕೆ ವಿಧಾನ
ನಾವು ಯಾವತ್ತೂ ಒಂದೇ ವಿಧದಲ್ಲಿ ಹೂಡಿಕೆ ಮಾಡಬಾರದು. ಹೀಗಾಗಿ 5 ಫಂಡ್‌ನಲ್ಲಿ ಹೂಡಿಕೆ ಮಾಡಲು ಶಿಫಾರಸ್ಸು ಮಾಡಲಾಗುತ್ತದೆ. ಹೀಗೆ ವಿವಿಧ ಫಂಡ್‌ಗಳಲ್ಲಿ ಪ್ರತಿ ತಿಂಗಳು 5 ಸಾವಿರ ರೂ. ಹೂಡಿಕೆ ಮಾಡಿ ಎಂದು ಶರತ್ ಸಲಹೆ ನೀಡುತ್ತಾರೆ.
ಲಾಭ ಎಷ್ಟು?
ಪ್ರತಿ ತಿಂಗಳು 5 ಸಾವಿರ ರೂ. ಹೂಡಿಕೆ ಮಾಡಿದರೆ 5 ವರ್ಷಗಳ ಬಳಿಕ ಸಿಗುವ ಲಾಭ ಎಷ್ಟು ಎನ್ನುವುದನ್ನು ನೋಡೋಣ.
- ನಿರೀಕ್ಷಿತ ಲಾಭಾಂಶ- ಶೇ. 12 (ವಾರ್ಷಿಕ ಸರಾಸರಿ)
- 5 ವರ್ಷಗಳಲ್ಲಿ ಹೂಡಿಕೆ ಮಾಡುವ ಮೊತ್ತ-3 ಲಕ್ಷ ರೂ.
- ಹೂಡಿಕೆ ಮೇಲೆ ಬರುವ ಲಾಭ-1.13 ಲಕ್ಷ ರೂ.
- ಹೂಡಿಕೆ ಮೊತ್ತ ಪ್ಲಸ್ ಲಾಭಾಂಶ ಮೊತ್ತ-4.13 ಲಕ್ಷ ರೂ.
ನಾವು ಇಲ್ಲಿ ಚಿಕ್ಕ ಉದಾಹರಣೆಯನ್ನಷ್ಟೇ ನೀಡಿದ್ದೇವೆ. ನಿಮ್ಮ ಆದಾಯಕ್ಕೆ ಅನುಗುಣವಾಗಿ ಫಂಡ್‌ಗಳಲ್ಲಿ ಹೆಚ್ಚು ಹಣ ಹೂಡಿಕೆ ಮಾಡಬಹುದು. ಸಮಯ ಸಿಕ್ಕಾಗ ಪಾರ್ಟ್ ಟೈಮ್ ಉದ್ಯೋಗದಂತಹ ವಿಧಾನಗಳಿಂದ ಆದಾಯವನ್ನು ಹೆಚ್ಚಿಸಬಹುದು ಎನ್ನುತ್ತಾರೆ ಶರತ್.
ಇದನ್ನೂ ಓದಿ: Money Guide: 20 ವರ್ಷಗಳ ಮನೆ ಸಾಲವನ್ನು 10 ವರ್ಷಗಳಲ್ಲೇ ತೀರಿಸಬಹುದು! ಹೀಗೆ ಮಾಡಿ…