ಬೆಂಗಳೂರು: ಪಿಎಫ್ (PF) ಎಂದೂ ಕರೆಯಲ್ಪಡುವ ನೌಕರರ ಭವಿಷ್ಯ ನಿಧಿ (Employees Provident Fund-EPF) ಉದ್ಯೋಗಿಗಳ ಪಾಲಿನ ವರದಾನ ಎಂದೇ ಪರಿಗಣಿಸಲಾಗುತ್ತದೆ. ಇದು ಉದ್ಯೋಗಿಗಳ ಕಡ್ಡಾಯ ಉಳಿತಾಯ ಯೋಜನೆ. ಪ್ರತಿ ತಿಂಗಳು ತಮ್ಮ ಮೂಲ ವೇತನದ ಶೇ. 12ರಷ್ಟು ಕೊಡುಗೆ ನೀಡುವ ಉದ್ಯೋಗಿಗಳಿಗೆ ಈ ಯೋಜನೆಯು ಶೇ. 8.15 ಬಡ್ಡಿದರವನ್ನು ನೀಡುತ್ತದೆ. ಉದ್ಯೋಗಿಗಳು ನಿವೃತ್ತರಾದ ನಂತರ ತಮ್ಮ ಪಿಎಫ್ ಖಾತೆಯಲ್ಲಿ ಸಂಗ್ರಹವಾದ ಸಂಪೂರ್ಣ ಮೊತ್ತವನ್ನು ಹಿಂಪಡೆಯಬಹುದು. ಅದಾಗ್ಯೂ ಅನಾರೋಗ್ಯದಂತಹ ತುರ್ತು ಸಂದರ್ಭಗಳಲ್ಲಿ ಪಿಎಫ್ ಅಕೌಂಟ್‌ನಿಂದ ಒಂದಷ್ಟು ದುಡ್ಡು ಹಿಂಪಡೆಯಬಹುದು. ಹಾಗಾದರೆ ಆನ್‌ಲೈನ್ ಮೂಲಕ ಹೇಗೆ ಪಿಎಫ್ ಹಣವನ್ನು ಹೇಗೆ ಪಡೆಯಬಹುದು ಎನ್ನುವುದನ್ನು ಇಂದಿನ ಮನಿಗೈಡ್ (Money Guide)ನಲ್ಲಿ ನೋಡೋಣ.
ಎಷ್ಟು ಮೊತ್ತ ಹಿಂಪಡೆಯಬಹುದು?
ನಿವೃತ್ತಿ ಹೊಂದುವಾಗಷ್ಟೇ ಪಿಎಫ್‌ನ ಸಂಪೂರ್ಣ ಮೊತ್ತ ನಿಮ್ಮದಾಗುತ್ತದೆ. ಅದಾಗ್ಯೂ ತುರ್ತು ಸಂದರ್ಭದಲ್ಲಿ ನೀವು ಪಿಎಫ್ ಅಕೌಂಟ್‌ನಿಂದ ನಿರ್ದಿಷ್ಟ ಮೊತ್ತವನ್ನಷ್ಟೇ ಹಿಂಪಡೆಯಲು ಅವಕಾಶ ಒದಗಿಸಲಾಗಿದೆ. ಜತೆಗೆ ಖಾತೆ ಹೊಂದಿರುವ ವ್ಯಕ್ತಿ ಒಂದು ತಿಂಗಳಿಗಿಂತ ಹೆಚ್ಚು ಕಾಲ ನಿರುದ್ಯೋಗಿಯಾಗಿದ್ದಾಗ ಒಟ್ಟು ಸಂಗ್ರಹವಾದ ಮೊತ್ತದ ಶೇ. 75ರಷ್ಟನ್ನು ಹಿಂಪಡೆಯಬಹುದು ಮತ್ತು ನಿರುದ್ಯೋಗ ಅವಧಿಯು ಎರಡು ತಿಂಗಳಿಗಿಂತ ಹೆಚ್ಚು ವಿಸ್ತರಿಸಿದರೆ ಉಳಿದ ಶೇ. 25ರಷ್ಟನ್ನು ಹಿಂಪಡೆಯಬಹುದು.
ಯಾವೆಲ್ಲ ಸಂದರ್ಭಗಳಲ್ಲಿ ಪಿಎಫ್ ಅಕೌಂಟ್‌ನಿಂದ ಹಣ ಹಿಂಪಡೆಯಬಹುದು?
- ಶಿಕ್ಷಣ
- ವೈದ್ಯಕೀಯ ಅಗತ್ಯ
- ಮದುವೆ
- ಜಾಗ ಖರೀದಿ/ಮನೆ ನಿರ್ಮಾಣ ಅಥವಾ ಮನೆ ಖರೀದಿ
- ಗೃಹ ಸಾಲ ಮರುಪಾವತಿ
- ಮನೆ ನವೀಕರಣ
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು
- ಯೂನಿವರ್ಸಲ್ ಅಕೌಂಟ್ ನಂಬರ್ (Universal Account Number-UAN)
- ಆಧಾರ್ ನಂಬರ್ ಯುಎಎನ್ ಜತೆ ಲಿಂಕ್ ಆಗಿರುವುದು ಕಡ್ಡಾಯ
- ನಿಮ್ಮ ಹಣವನ್ನು ಸ್ವೀಕರಿಸಬೇಕಾದ ಬ್ಯಾಂಕ್ ಖಾತೆಯು ಆಧಾರ್ ನಂಬರ್ ಜತೆ ಲಿಂಕ್ ಆಗಿರಬೇಕು
- ಬದಲಾವಣೆ ಅಗತ್ಯವಿದ್ದರೆ ಅರ್ಜಿ ಸಲ್ಲಿಕೆ ಮುನ್ನವೇ ಇಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿ
ಇದನ್ನೂ ಓದಿ: Money Guide: 8 ಕೋಟಿ ರೈತರ ಖಾತೆಗೆ ಇಂದು 2 ಸಾವಿರ ರೂ. ಜಮೆ; ಹೀಗೆ ಪರಿಶೀಲಿಸಿ
ಹೀಗೆ ಹಿಂಪಡೆಯಿರಿ
- EPFO e-SEWA ಪೋರ್ಟಲ್ಗೆ ಲಾಗಿನ್ ಆಗಿ
- Online claims ಆಯ್ಕೆ ಮೇಲೆ ಕ್ಲಿಕ್ ಮಾಡಿ
- ಬ್ಯಾಂಕ್ ಖಾತೆಯ ವಿವರಗಳನ್ನು ನಮೂದಿಸಿ
- ನಿಯಮಗಳು ಮತ್ತು ಷರತ್ತುಗಳನ್ನು ದೃಢಪಡಿಸಿ
- ಹಣ ಹಿಂಪಡೆಯಲಿರುವ ಕಾರಣವನ್ನು ನಮೂದಿಸಿ
- ವಿವರಗಳನ್ನು ನೀಡಿ ಅಗತ್ಯವಾದ ಡಾಕ್ಯುಮೆಂಟ್ಗಳನ್ನು ಅಪ್ಲೋಡ್ ಮಾಡಿ
- ರಿಜಿಸ್ಟರ್ ಮೊಬೈಲ್ ನಂಬರ್ಗೆ OTP ಬರುತ್ತದೆ. ಅದನ್ನು ನಮೂದಿಸಿದರೆ ನಿಮ್ಮ ಅರ್ಜಿ ಸಲ್ಲಿಕೆಯಾಗುತ್ತದೆ
ಪಿಎಫ್ ಕ್ಲೈಮ್ ಫಾರ್ಮ್ ಅನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ 15ರಿಂದ 20 ದಿನಗಳ ಒಳಗೆ ಹಣ ಮರುಪಾವತಿಸಲಾಗುತ್ತದೆ. ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ, ಪಿಎಫ್ ಕ್ಲೈಮ್ ಹಣವನ್ನು ಒಂದು ಗಂಟೆಯೊಳಗೆ ಕಳುಹಿಸುವ ವ್ಯವಸ್ಥೆ ಇದೆ. ಹಣ ಹಿಂಪಡೆದ ಬಳಿಕ ನಿಮ್ಮ ಖಾತೆಯ ಬ್ಯಾಲೆನ್ಸ್ ತಿಳಿದುಕೊಳ್ಳಬಹುದು. ಅದಕ್ಕಾಗಿ ನೀವು ಮಾಡಬೇಕಾದುದು ಇಷ್ಟೇ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 011-22901406ಕ್ಕೆ ಮಿಸ್ಡ್ ಕಾಲ್ ನೀಡಿದರೆ ಸಾಕು. ಎಸ್‌ಎಂಎಸ್ ಮೂಲಕ ಬ್ಯಾಲೆನ್ಸ್ ನಿಮಗೆ ತಿಳಿಯುತ್ತದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ