ಬೆಂಗಳೂರು: ಹೊಸ ಮನೆ ನಿರ್ಮಿಸಬೇಕು ಅಥವಾ ಕೊಂಡುಕೊಳ್ಳಬೇಕು ಎನ್ನುವುದು ಬಹುತೇಕ ಭಾರತೀಯರ ಕನಸು. ಆದರೆ ಈ ದುಬಾರಿ ಜಗತ್ತಿನಲ್ಲಿ ಇದು ಸುಲಭದ ಮಾತಲ್ಲ. ಇದಕ್ಕಾಗಿ ಅನೇಕರು ಗೃಹಸಾಲ(Home loan)ದ ಮೊರೆ ಹೋಗುತ್ತಾರೆ. ಆದರೆ ಈ ಸಾಲಗಳ ಬಡ್ಡಿದರವೂ ದುಬಾರಿಯಾಗಿರುತ್ತದೆ. ಈ ಮಧ್ಯೆ ಸಾಲ ಪಡೆದುಕೊಂಡವರು ಆಕಸ್ಮಿಕವಾಗಿ ಮರಣ ಹೊಂದಿದರೆ ಏನು ಮಾಡಬೇಕು? ಆಗ ಬ್ಯಾಂಕ್‌ಗಳು ಯಾವ ಕ್ರಮ ಕೈಗೊಳ್ಳುತ್ತವೆ? ಹೋಮ್‌ಲೋನ್ ಇನ್ಶೂರೆನ್ಸ್ (Home Loan Insurance) ಎಂದರೇನು? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ? ಇದರ ಪ್ರಾಧಾನ್ಯತೆ ಏನು? ಮುಂತಾದ ನಿಮ್ಮನ್ನು ಕಾಡುವ ಪ್ರಶ್ನೆಗಳಿಗೆ ಉತ್ತರ ಇಂದಿನ ಮನಿಗೈಡ್ ಮನಿಗೈಡ್ (Money Guide)ನಲ್ಲಿದೆ.
ಸಾಲದಾತ ಮರಣ ಹೊಂದಿದರೆ ಬ್ಯಾಂಕ್ ಏನು ಮಾಡುತ್ತದೆ?
ಒಂದು ವೇಳೆ ಗೃಹಸಾಲ ಪಡೆದುಕೊಂಡಾತ ಸಾಲ ಮುಗಿಯುವ ಮೊದಲೇ ಮರಣ ಹೊಂದಿದರೆ ಬ್ಯಾಂಕ್‌ಗಳು 2 ರೀತಿಯಲ್ಲಿ ಕ್ರಮ ಕೈಗೊಳ್ಳುತ್ತವೆ. ಸಾಲವನ್ನು ಮರುಪಾವತಿಸಲು ಕುಟುಂಬದ ಮೇಲೆ ಒತ್ತಡ ಹೇರಬಹುದು ಅಥವಾ ಗೃಹ ಸಾಲವನ್ನು ತೆಗೆದುಕೊಂಡ ಆಸ್ತಿಯನ್ನು ಮಾರಾಟ ಮಾಡಬಹುದು. ಆ ಕುಟುಂಬ ಸಾಲ ಮರು ಪಾವತಿಸಲು ಶಕ್ತವಾಗಿರುವುದಿಲ್ಲ. ಜತೆಗೆ ಆ ಆಸ್ತಿಯನ್ನೂ ಉಳಿಸಿಕೊಳ್ಳಬೇಕು ಎಂದಿದ್ದರೆ ಏನು ಮಾಡಬೇಕು? ಆಗ ನೆರವಿಗೆ ಬರುತ್ತದೆ ಹೋಮ್‌ಲೋನ್ ಇನ್ಶೂರೆನ್ಸ್.
ಏನಿದು ಹೋಮ್‌ಲೋನ್ ಇನ್ಶೂರೆನ್ಸ್?
ಹೋಮ್ ಲೋನ್ ಪ್ರೊಟೆಕ್ಷನ್ ಪ್ಲಾನ್ (Home Loan Protection Plan-HLPP) ಎಂದೂ ಕರೆಯಲ್ಪಡುವ ಹೋಮ್ ಲೋನ್ ಇನ್ಶೂರೆನ್ಸ್ ಒಂದು ವಿಮಾ ಪಾಲಿಸಿಯಾಗಿದ್ದು, ಸಾಲ ಹೊಂದಿದಾತ ಆಕಸ್ಮಿಕವಾಗಿ ಮರಣ ಹೊಂದಿದರೆ ಗೃಹ ಸಾಲವನ್ನು ಮರುಪಾವತಿಸಲು ಆತನ ಕುಟುಂಬಕ್ಕೆ ಸಹಾಯ ಮಾಡುತ್ತದೆ. ʼʼಗೃಹ ಸಾಲವನ್ನು ಪಾವತಿಸುವ ವ್ಯಕ್ತಿಯು ದುರದೃಷ್ಟವಶಾತ್ ಮೃತಪಟ್ಟರೆ ಬಾಕಿ ಇರುವ ಇಎಂಐಯನ್ನು ವಿಮೆ ನೋಡಿಕೊಳ್ಳುತ್ತದೆ. ಇದರಿಂದ ಮನೆ ಸುರಕ್ಷಿತವಾಗಿರುತ್ತದೆʼʼ ಎಂದು ತಜ್ಞರು ಹೇಳುತ್ತಾರೆ.
ಎಚ್ಎಲ್‌ಪಿಪಿಯನ್ನು ನಿರ್ದಿಷ್ಟವಾಗಿ ಗೃಹ ವಿಮಾ ರಕ್ಷಣೆಗಾಗಿ ವಿನ್ಯಾಸಗೊಳಿಸಲಾಗಿದ್ದರೂ ಅದನ್ನು ಟರ್ಮ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿಯೂ ಕೊಂಡುಕೊಳ್ಳಬಹುದು. ಟರ್ಮ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ ಹೆಚ್ಚುವರಿ ಪ್ರೀಮಿಯಂಗಳನ್ನು ಪಾವತಿಸುವ ಮೂಲಕ ಗೃಹ ವಿಮೆಯನ್ನು ಸಹ ಕವರ್ ಮಾಡಬಹುದು. ಅದಾಗ್ಯೂ ಹೋಮ್‌ಲೋನ್ ಇನ್ಶೂರೆನ್ಸ್‌ನ ನಿಯಮಗಳು ಮತ್ತು ಷರತ್ತುಗಳು ನೀವು ತೆಗೆದುಕೊಂಡ ಪಾಲಿಸಿಯನ್ನು ಅವಲಂಬಿಸಿರುತ್ತದೆ. ಇನ್ನೊಂದು ಮುಖ್ಯ ವಿಚಾರ ಎಂದರೆ ಗೃಹ ವಿಮೆ ಮತ್ತು ಗೃಹ ಸಾಲ ವಿಮೆ ಎರಡು ಬೇರೆ ಬೇರೆ. ಗೃಹ ವಿಮೆ ಪ್ರತಿಕೂಲ ಪರಿಸ್ಥಿತಿಯ ಸಂದರ್ಭದಲ್ಲಿ ನಿಮ್ಮ ಮನೆಯನ್ನು ರಕ್ಷಿಸಿದರೆ, ಕೆಲವು ಆಕಸ್ಮಿಕ ಘಟನೆಗಳಿಂದ ಮರುಪಾವತಿ ಸಾಧ್ಯವಾಗದಿದ್ದರೆ ಅದರ ಜವಾಬ್ದಾರಿಯನ್ನು ಗೃಹ ಸಾಲ ವಿಮೆ ನೋಡಿಕೊಳ್ಳುತ್ತದೆ. ಆಸ್ತಿ ಮಾಲಕರು ಗೃಹ ಸಾಲದ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ಅರ್ಹರು.
ಕಡ್ಡಾಯವಲ್ಲ
ಎಚ್ಎಲ್‌ಪಿಪಿಯಲ್ಲಿ ಹೆಚ್ಚುವರಿ ಪ್ಲ್ಯಾನ್ ಖರೀದಿಸಿದರೆ ಅಂಗವೈಕಲ್ಯಗಳು, ಮಾರಣಾಂತಿಕ ಕಾಯಿಲೆಗಳು, ಬೆಂಕಿ ಅಪಘಾತಗಳು ಮತ್ತು ಮಾನವ ನಿರ್ಮಿತ ಅಪಾಯಗಳನ್ನು ಸಹ ಕವರ್ ಮಾಡಬಹುದು. ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಪ್ರಕಾರ, ಗೃಹ ಸಾಲದೊಂದಿಗೆ ಗೃಹ ಸಾಲ ವಿಮಾ ಪಾಲಿಸಿಯನ್ನು ಖರೀದಿಸುವುದು ಕಡ್ಡಾಯವಲ್ಲ.
ಸಾಲವನ್ನು ಸಂಪೂರ್ಣವಾಗಿ ಪಾವತಿಸಿದ ನಂತರ ವಿಮೆಯ ಅವಧಿ ಕೊನೆಗೊಳ್ಳುತ್ತದೆ. ಗೃಹ ಸಾಲವನ್ನು ಮರುಪಾವತಿಸಿದಂತೆ ಹೋಮ್ ಲೋನ್ ಇನ್ಶೂರೆನ್ಸ್ ಪ್ಲಾನ್ ಕವರೇಜ್ ಕಡಿಮೆಯಾಗುತ್ತದೆ. ಉದಾಹರಣೆಗೆ ಈಗಾಗಲೇ 30 ಲಕ್ಷ ರೂ.ಗಳ ಗೃಹ ಸಾಲದಲ್ಲಿ 10 ಲಕ್ಷ ರೂ.ಗಳನ್ನು ಪಾವತಿಸಿದಾಗ ಅಪಘಾತ ಸಂಭವಿಸಿದಲ್ಲಿ ರಕ್ಷಣಾ ಯೋಜನೆಯು ಕೇವಲ 20 ಲಕ್ಷ ರೂ. ಅನ್ನು ಒಳಗೊಳ್ಳುತ್ತದೆ.
ಪ್ರೀಮಿಯಂ ಪಾವತಿ ವಿಧಾನ
ಹೆಚ್ಚಿನ ಇನ್ಶೂರೆನ್ಸ್ ಪಾಲಿಸಿಗಳಲ್ಲಿ ವಿಮಾ ಕಂಪನಿಗೆ ಒಂದು ಬಾರಿ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಆದಾಗ್ಯೂ ಕೆಲವು ಕಂತುಗಳಲ್ಲಿ ಪಾಲಿಸಿ ಪ್ರೀಮಿಯಂ ಅನ್ನು ಪಾವತಿಸಬಹುದಾದ ಯೋಜನೆಗಳೂ ಇವೆ. ವಯಸ್ಸು ಮತ್ತು ವೈದ್ಯಕೀಯ ದಾಖಲೆಗಳು ಗೃಹ ಸಾಲದ ವಿಮಾ ಪಾಲಿಸಿಯ ಪ್ರೀಮಿಯಂ ಮೊತ್ತದ ಮೇಲೆ ಪರಿಣಾಮ ಬೀರುತ್ತವೆ. ವಯಸ್ಸಾದವರಿಗೆ ಪ್ರೀಮಿಯಂ ಮೊತ್ತ ಹೆಚ್ಚಾಗಿರುತ್ತದೆ ಮತ್ತು ದೈಹಿಕವಾಗಿ ಸದೃಢರಾಗಿದ್ದವರಿಗೆ ಪ್ರೀಮಿಯಂ ಕಡಿಮೆಯಾಗಿರುತ್ತದೆ ಎಂದು ತಜ್ಞರು ವಿವರಿಸುತ್ತಾರೆ.
ಇದನ್ನೂ ಓದಿ: Money Guide: ಆಪತ್ಕಾಲದಲ್ಲಿ ನೆರವಾಗುವ ಆಪ್ತಮಿತ್ರ ಟರ್ಮ್ ಇನ್ಶೂರೆನ್ಸ್; ಏನಿದರ ವೈಶಿಷ್ಟ್ಯ?
ಒಟ್ಟಿನಲ್ಲಿ ನಿಮ್ಮ ಹೋಮ್ ಲೋನ್ ಅನ್ನು ಕವರ್ ಮಾಡಲು ಎಚ್ಎಲ್‌ಪಿಪಿ ಮತ್ತು ಟರ್ಮ್ ಇನ್ಶೂರೆನ್ಸ್ ಎಂಬ ಎರಡು ಆಯ್ಕೆಗಳಾಗಿವೆ. ಎರಡೂ ತಮ್ಮದೇ ಆದ ಸಾಧಕ-ಬಾಧಕಗಳನ್ನು ಹೊಂದಿವೆ. ಅವುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಿ. ಆದರೆ ನಿಮ್ಮ ಹೋಮ್ ಲೋನ್ ಅನ್ನು ವಿಮೆ ಮಾಡಿಸುವುದನ್ನು ಮಾತ್ರ ಮರೆಯಬೇಡಿ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ