ಬೆಂಗಳೂರು: ಈ ಬಾರಿಯ ನವರಾತ್ರಿ ಹಬ್ಬ ಆರಂಭವಾಗಿದೆ. ಹಲವು ಸಮಯದಿಂದ ಹಣ ಉಳಿತಾಯ ಮಾಡಬೇಕು ಎಂದು ಆಲೋಚಿಸುತ್ತಿರುವವರಿಗೆ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಲು ಇದು ಉತ್ತಮ ಸಮಯವೂ ಹೌದು. ನಮ್ಮ ಭವಿಷ್ಯತ್ತಿನ ದೃಷ್ಟಿಯಿಂದ, ಉತ್ತಮ ನಾಳೆಗಾಗಿ ಒಂದಷ್ಟು ಹಣ ಕೂಡಿಡುವುದು ಇಂದಿನ ದಿನಗಳಲ್ಲಿ ಅನಿವಾರ್ಯ ಎಂದು ಆರ್ಥಿಕ ತಜ್ಞರು ಕೂಡ ಸಲಹೆ ನೀಡುತ್ತಾರೆ. ಹೀಗಾಗಿ ಯಾವೆಲ್ಲ ರೀತಿಯಲ್ಲಿ ಹಣ ಉಳಿತಾಯ ಮಾಡಬಹುದು ಎಂಬುದರ (Money Guide) ಕಿರು ಮಾಹಿತಿ ಇಲ್ಲಿದೆ.
ಬಜೆಟ್ ತಯಾರಿಸಿ
ನಮ್ಮ ಖರ್ಚನ್ನು ಸರಿದೂಗಿಸಲು, ಹಣವನ್ನು ಸರಿಯಾದ ರೀತಿಯಲ್ಲಿ ಸರಿದೂಗಿಸಲು ಬಜೆಟ್ ಎನ್ನುವುದು ಅತ್ಯವಶ್ಯ. ಇದೇ ಕಾರಣಕ್ಕೆ ಸರ್ಕಾರಗಳು ಬಜೆಟ್‌ಗೆ ಪ್ರಾಮುಖ್ಯತೆ ನೀಡುತ್ತವೆ. ನೀವು ತಿಂಗಳಿನ ಲೆಕ್ಕದಲ್ಲಿ ಬಜೆಟ್ ತಯಾರಿಸಬಹುದು. ಎಷ್ಟು ಆದಾಯ ಬರುತ್ತದೆ, ಯಾವುದಕ್ಕೆ ಎಷ್ಟು ಖರ್ಚು ಮಾಡಬೇಕು ಎನ್ನುವುದನ್ನು ಮೊದಲೇ ಲೆಕ್ಕ ಹಾಕುವ ಆರ್ಥಿಕ ಶಿಸ್ತನ್ನು ಮೈಗೂಡಿಸಿಕೊಳ್ಳಿ. ಜತೆಗೆ ಪ್ರತಿದಿನ ಎಷ್ಟು, ಯಾವುದಕ್ಕೆ ಖರ್ಚಾಗುತ್ತದೆ ಎನ್ನುವುದನ್ನು ನೋಟ್ ಮಾಡಿಟ್ಟುಕೊಳ್ಳಿ. ಇದರಿಂದ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಬಹುದು.
ಕಂಡದ್ದನ್ನೆಲ್ಲ ಕೊಳ್ಳುವ ಅಭ್ಯಾಸ ಬಿಟ್ಟುಬಿಡಿ
ಯಾವುದಾದರೂ ಮಾಲ್‌ಗೆ ಹೋಗಿದ್ದಗ ಅಥವಾ ಆನ್‌ಲೈನ್ ಶಾಪಿಂಗ್ ಆ್ಯಪ್‌ನಲ್ಲಿ ಆಫರ್ ಇದೆ ಎಂದು ಕಂಡದ್ದನ್ನೆಲ್ಲ ಕೊಂಡು ಗುಡ್ಡೆ ಹಾಕುವುದನ್ನು ಬಿಟ್ಟು ಬಿಡಿ. ಯಾವುದೇ ವಸ್ತುವನ್ನು ಖರೀದಿಸುವ ಮುನ್ನ ಇದು ತೀರಾ ಅವಶ್ಯವೇ ಎನ್ನುವುದನ್ನು ಯೋಚಿಸಿ. ತೀರಾ ಅಪರೂಪಕ್ಕೆ ಉಪಯೋಗಿಸುವ, ಐಷಾರಾಮಿ ವಸ್ತುಗಳನ್ನು ಕೊಂಡಿಕೊಳ್ಳುವುದನ್ನು ತಪ್ಪಿಸಿ.
ಹೂಡಿಕೆ ಮಾಡಿ
ಫಿಕ್ಸೆಡ್ ಡೆಪಾಸಿಟ್, ಪಿಒ ಸ್ಕೀಮ್, ಎಲ್ಐಸಿ, ಮ್ಯೂಚುವಲ್ ಫಂಡ್ ಮುಂತಾದ ವಿವಿಧ ಆಯ್ಕೆಗಳಲ್ಲಿ ನೀವು ಹೂಡಿಕೆ ಮಾಡಬಹುದು. ಒಂದಲ್ಲ ಅನೇಕ ಹೂಡಿಕೆ ಆಯ್ಕೆಗಳನ್ನು ಆರಿಸುವುದರಿಂದ ಹಣವನ್ನು ಹೆಚ್ಚು ಉಳಿತಾಯ ಮಾಡಬಹುದು. ಅಲ್ಲದೆ ನಿಮ್ಮ ಆರೋಗ್ಯ ವಿಮಾ ಪಾಲಿಸಿಗಳು ರದ್ದಾಗದಂತೆ ಗಮನಹರಿಸಿ. ಯಾವುದೇ ಸಮಯದಲ್ಲಿ ಅನಾರೋಗ್ಯಕ್ಕೆ ತುತ್ತಾಗಬಹುದು. ಆಗ ವರ್ಷವಿಡೀ ಉಳಿಸಿದ ಹಣ ನೀರಿನಂತೆ ಖರ್ಚಾಗಬಹುದು. ಹೀಗಾಗಿ ಉತ್ತಮ ಆರೋಗ್ಯ ವಿಮಾ ಪಾಲಿಸಿ ಮಾಡಿಸಿ ರದ್ದಾಗದಂತೆ ನೋಡಿಕೊಳ್ಳಿ.
ಬ್ಯಾಂಕ್ ಅಕೌಂಟ್‌ನಲ್ಲಿ ಮಿನಿಮಮ್ ಬ್ಯಾಲೆನ್ಸ್ ಇರಲಿ
ನೀವು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಹೊಂದಿದ್ದರೆ ಎಲ್ಲದರಲ್ಲೂ ಮಿನಿಮಮ್ ಬ್ಯಾಲೆನ್ಸ್ ಇದೆ ಎನ್ನುವುದನ್ನು ಖಾತರಿಪಡಿಸಿಕೊಳ್ಳಿ. ಒಂದು ವೇಳೆ ಮಿನಿಮಮ್ ಬ್ಯಾಲೆನ್ಸ್ ಇಲ್ಲ ಎಂದರೆ ಬ್ಯಾಂಕ್‌ನಿಂದ ದಂಡ ವಿಧಿಸಲಾಗುತ್ತದೆ. ಅಕೌಂಟ್ ಮತ್ತೆ ಸಕ್ರಿಯವಾದಾಗ ದಂಡದ ಶುಲ್ಕ ಕಟ್ ಆಗುವುದರಿಂದ ಹೊರೆ ಬೀಳುವ ಸಾಧ್ಯತೆ ಇದೆ. ಅಲ್ಲದೆ ಗಾಡಿಯ ಇನ್ಶೂರೆನ್ಸ್ ಮೊತ್ತ ಕಾಲಕಾಲಕ್ಕೆ ಪಾವತಿಸಿ, ಎಮಿಷನ್ ಟೆಸ್ಟ್ ನಿಯಮಿತವಾಗಿ ಮಾಡಿಸುವುದು, ಟ್ರಾಫಿಕ್ ರೂಲ್ಸ್ ಸಮರ್ಪಕವಾಗಿ ಪಾಲಿಸುವುದು ಮುಂತಾದ ಶಿಸ್ತನ್ನು ರೂಢಿಸಿಕೊಳ್ಳುವುದರಿಂದ ದಂಡ ಪಾವತಿಯಂತಹ ಬೀಸುವ ದೊಣ್ಣೆಯಿಂದ ಪಾರಾಗಬಹುದು.
ಬಿಲ್ ಪಾವತಿಗೆ ಸಾಲ ಮಾಡಬೇಡಿ
ಕ್ರೆಡಿಟ್ ಕಾರ್ಡ್ ಬಿಲ್‌ಗಳು ಮತ್ತು ಇತರೆ ಯುಟಿಲಿಟಿ ಬಿಲ್‌ಗಳ ಪಾವತಿಗೆ ನಿಮ್ಮ ಸಂಬಳದಲ್ಲೇ ಉಳಿತಾಯ ಮಾಡಿ. ಅದಕ್ಕಾಗಿ ಸಾಲ ಮಾಡುವುದನ್ನು ತಪ್ಪಿಸಿ. ಇದರಿಂದ ನಿಮ್ಮ ಮಾಸಿಕ ಖರ್ಚು ಹೆಚ್ಚಾಗುವುದನ್ನು ತಪ್ಪಿಸಬಹುದು. ಹಿರಿಯರು ಹೇಳಿದಂತೆ ʼಹಾಸಿಗೆ ಇದ್ದಷ್ಟೇ ಕಾಲು ಚಾಚುʼ ಗಾದೆ ಮಾತನ್ನು ಅನುಸರಿಸಿ.
ಉಳಿತಾಯ ಮಾಡಲೇಬೇಕು-ಸಂಕಲ್ಪ ತೊಡಿ
ತಿಂಗಳ ಬಜೆಟ್ ತಯಾರಿಸುವಾಗ ಇಂತಿಷ್ಟು ಉಳಿತಾಯಕ್ಕೆ ಬೇಕೇ ಬೇಕು ಎನ್ನುವುದನ್ನು ನಿರ್ಧರಿಸಿ. ಏನೇ ಆದರೂ ಪ್ರತಿ ತಿಂಗಳು ಈ ನಿರ್ಧಿಷ್ಟ ಮೊತ್ತ ಉಳಿಸುತ್ತೇನೆ ಎನ್ನುವ ʼಬೀಷ್ಮ ಪ್ರತಿಜ್ಞೆʼಯನ್ನು ಕೈಗೊಳ್ಳಿ. ಇದರಿಂದ ಅನಗತ್ಯ ಖರ್ಚು ಮಾಡಲು ಕೈ ಮುಂದೆ ಬರುವುದಿಲ್ಲ. ಇನ್ನೊಂದು ಅಕೌಂಟ್ ಕ್ರಿಯೇಟ್ ಮಾಡಿ ಅದಕ್ಕೆ ಪ್ರತಿ ತಿಂಗಳು ಹಣ ಜಮೆ ಮಾಡಲೂಬಹುದು.
ಅನಗತ್ಯ ಸೇವೆಗಳನ್ನು ಕಡಿತಗೊಳಿಸಿ
ಕೆಲವೊಂದು ಸೇವೆಗಳು ಅನಗತ್ಯ ಎಂದರೆ ಅದನ್ನು ಕಡಿತಗೊಳಿಸುವುದು ಜಾಣತನ. ಜಾಸ್ತಿ ಬಳಸದ ಕೆಲವು ಸಬ್‌ಸ್ಕ್ರಿಪ್ಷನ್‌ಗಳನ್ನು ರದ್ದುಗೊಳಿಸಿ. ಉದಾಹರಣೆಗೆ ಅಮೆಜಾನ್‌ನಂತಹ ಒಟಿಟಿ ಪ್ಲಾಟ್‌ಫಾರ್ಮ್‌ಅನ್ನು ನೀವು ಹೆಚ್ಚು ಬಳಸಲ್ಲ ಎಂದಿದ್ದರೆ 1 ವರ್ಷದಂತಹ ದೀರ್ಘ ಪ್ಲ್ಯಾನ್ ಆಯ್ಕೆ ಮಾಡಬೇಡಿ.
ಇದನ್ನೂ ಓದಿ: Money Guide: 250 ರೂ. ಉಳಿಸಿ; ನಿವೃತ್ತಿ ಬಳಿಕ ಪ್ರತಿ ತಿಂಗಳು 5 ಸಾವಿರ ರೂ. ಪೆನ್ಶನ್ ಗಳಿಸಿ
ಮೊದಲೇ ಟಿಕೆಟ್ ಬುಕ್ ಮಾಡಿ
ನೀವು ರಜಾ ದಿನಗಳಲ್ಲಿ ಪ್ರವಾಸ ಮಾಡುವ ಯೋಜನೆ ರೂಪಿಸಿದ್ದರೆ 2-3 ತಿಂಗಳ ಮೊದಲೇ ವಾಹನ, ಹೋಟೆಲ್ ಬುಕ್ ಮಾಡಬಹುದು. ಇದರಿಂದ ಸಾಕಷ್ಟು ಹಣ ಉಳಿತಾಯವಾಗುತ್ತದೆ. ಅಲ್ಲದೆ ಕೊನೆಯ ಗಳಿಗೆಯಲ್ಲಾಗುವ ಗೊಂದಲ, ತಳಮಳವನ್ನೂ ತಪ್ಪಿಸಬಹುದು.
ಬಿಲ್ ಮೊತ್ತ ಕಡಿಮೆ ಬರಲಿ
ಸಾರ್ವಜನಿಕ ಸಾರಿಗೆಗಳಾದ ಬಸ್, ಮೆಟ್ರೋ ಮುಂತಾದವು ನಿಮಗೆ ಅನುಕೂಲ ಎಂದಾದರೆ ಇದರಿಂದ ಇಂಧನ ಖರ್ಚನ್ನು ಸಾಕಷ್ಟು ಉಳಿಸಬಹುದು. ಅಲ್ಲದೆ ವಿದ್ಯುತ್, ನೀರನ್ನು ಮಿತವಾಗಿ ಬಳಸುವುದರಿಂದ ಬಿಲ್ ಕಡಿಮೆಯಾಗಿಸುವ ಜತೆಗೆ ಪರಿಸರಕ್ಕೂ ಉತ್ತಮ ಕೊಡುಗೆ ನೀಡಬಹುದು.