ನವದೆಹಲಿ: ದೇಶದ ಕೃಷಿಕರಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ 2೦19ರಲ್ಲಿ ಜಾರಿಗೆ ತಂದ ಯೋಜನೆಯೇ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ. ಈ ಯೋಜನೆ ಮೂಲಕ ಪ್ರತಿ ವರ್ಷ ರೈತರ ಖಾತೆಗೆ 6,000 ರೂ. ಜಮೆ ಮಾಡಲಾಗುತ್ತದೆ. ಈ ಯೋಜನೆಗೆ ಹೆಸರು ನೋಂದಾಯಿಸುವುದು ಹೇಗೆ? ಕಂತು ಪಾವತಿ ಬಗ್ಗೆ ಪರಿಶೀಲನೆ ನಡೆಸುವುದು ಹೇಗೆ? ಮುಂತಾದ ಮಾಹಿತಿಯನ್ನು ಮನಿಗೈಡ್(Money Guide) ಹೊತ್ತು ತಂದಿದೆ.
ಸದ್ಯ ಫಲಾನುಭವಿ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 15ನೇ ಕಂತಿಗಾಗಿ ಕಾಯುತ್ತಿದ್ದಾರೆ. ವರದಿಗಳ ಪ್ರಕಾರ, ಪಿಎಂ-ಕಿಸಾನ್ ಸಮ್ಮಾನ್ ಯೋಜನೆಯ 15ನೇ ಕಂತು ನವೆಂಬರ್ ಕೊನೆಯ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. 14ನೇ ಕಂತನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ವರ್ಷದ ಜುಲೈನಲ್ಲಿ ಬಿಡುಗಡೆ ಮಾಡಿದ್ದರು.
3 ಕಂತುಗಳಲ್ಲಿ ಪಾವತಿ
ಪಿಎಂ-ಕಿಸಾನ್ ಸಮ್ಮಾನ್ ಯೋಜನೆಯ ಹಣವನ್ನು ನಾಲ್ಕು ತಿಂಗಳಿಗೊಮ್ಮೆ 2,000 ರೂ.ಗಳಂತೆ ವರ್ಷಕ್ಕೆ 3 ಬಾರಿ ಪಾವತಿಸಲಾಗುತ್ತದೆ. ಎಪ್ರಿಲ್-ಜುಲೈ, ಆಗಸ್ಟ್-ನವೆಂಬರ್ ಮತ್ತು ಡಿಸೆಂಬರ್-ಮಾರ್ಚ್ ಎಂಬ ಮೂರು ಕಂತುಗಳಲ್ಲಿ ಹಣವನ್ನು ಒದಗಿಸಲಾಗುತ್ತದೆ. ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಯೋಜನೆ ಆರಂಭವಾಗಿ 4 ವರ್ಷಗಳಲ್ಲಿ ಕೇಂದ್ರ ಇಲ್ಲಿಯವರೆಗೆ ಸುಮಾರು 2.50 ಲಕ್ಷ ಕೋಟಿ ರೂ.ಗಳನ್ನು ಫಲಾನುಭವಿಗಳ ಖಾತೆಗಳಿಗೆ ವರ್ಗಾಯಿಸಿದೆ.
ಹೀಗೆ ಚೆಕ್ ಮಾಡಿ
ನೀವು ಈ ಯೋಜನೆಯ ಫಲಾನುಭವಿಯಾಗಿದ್ದರೆ, ಹಣ ನಿಮ್ಮ ಖಾತೆಗೆ ಜಮೆ ಆಗಿದೆಯೇ ಎನ್ನುವುದನ್ನು ಆನ್‌ಲೈನ್ ಮೂಲಕ ನಿಮಗೇ ಪರಿಶೀಲಿಸಲು ಸಾಧ್ಯವಿದೆ. ಅದು ಹೇಗೆ ಎನ್ನುವುದರ ಮಾಹಿತಿ ಇಲ್ಲಿದೆ.
- ಅಧಿಕೃತ ವೆಬ್ಸೈಟ್ pmkisan.gov.in ಭೇಟಿ ನೀಡಿ
- ಆಗ ಓಪನ್ ಆಗುವ ಪೇಜ್ನ ಬಲ ಬದಿಯಲ್ಲಿರುವ ‘Know Your Status’ ಆಯ್ಕೆ ಮೇಲೆ ಕ್ಲಿಕ್ ಮಾಡಿ
- ರಿಜಿಸ್ಟ್ರೇಷನ್ ನಂಬರ್ ನಮೂದಿಸಿ, ಕ್ಯಾಪ್ಚ ಕೋಡ್ ಭರ್ತಿ ಮಾಡಿ ‘Get Data’ ಆಯ್ಕೆಯನ್ನು ಸೆಲೆಕ್ಟ್ ಮಾಡಿ
- ಈಗ ಫಲಾನುಭವಿಯ ವಿವರ, ಹಣ ಜಮೆಯಾದ ಮಾಹಿತಿ ಸ್ಕ್ರೀನ್ ಮೇಲೆ ಮೂಡುತ್ತದೆ
ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸುವ ವಿಧಾನ
- ಅಧಿಕೃತ ವೆಬ್ಸೈಟ್ www.pmkisan.gov.inಗೆ ಭೇಟಿ ನೀಡಿ
- ಆಗ ತೆರೆದುಕೊಳ್ಳುವ ಪುಟದಲ್ಲಿನ ‘Beneficiary list’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
- ನಿಮ್ಮ ರಾಜ್ಯ, ಜಿಲ್ಲೆ, ಉಪಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆ ಮಾಡಿ
- ‘Get report’ ಆಯ್ಕೆಯನ್ನು ಸೆಲೆಕ್ಟ್ ಮಾಡಿ
ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಹೆಸರು ನೋಂದಾಯಿಸುವ ವಿಧಾನ
- ಅಧಿಕೃತ ವೆಬ್ಸೈಟ್ pmkisan.gov.in ಭೇಟಿ ನೀಡಿ
- ‘New Farmer Registration’ ಆಯ್ಕೆ ಮೇಲೆ ಕಲಿಕ್ ಮಾಡಿ ಮತ್ತು ಆಧಾರ್ ಕಾರ್ಡ್ ನಂಬರ್ ನಮೂದಿಸಿ ಕ್ಯಾಪ್ಚ ಕೋಡ್ ಭರ್ತಿ ಮಾಡಿ
- ಅಗತ್ಯ ಮಾಹಿತಿ ತುಂಬಿ ‘Yes’ ಬಟನ್ ಕ್ಲಿಕ್ ಮಾಡಿ
- ಅರ್ಜಿ ಫಾರಂ ತುಂಬಿ, ಸೇವ್ ಮಾಡಿ ಭವಿಷ್ಯದ ಅಗತ್ಯಗಳಿಗಾಗಿ ಪ್ರಿಂಟ್ ಔಟ್ ತೆಗೆದಿಡಿ
ಹೆಚ್ಚಿನ ಮಾಹಿತಿಗೆ ಹೆಲ್ಪ್‌ಲೈನ್ ನಂಬರ್ 155261 ಮತ್ತು 011-24300606 ಅನ್ನು ಸಂಪರ್ಕಿಸಿ.
ಇದನ್ನೂ ಓದಿ: Money Guide: ಹೆಲ್ತ್ ಇನ್ಶೂರೆನ್ಸ್ ಕೊಳ್ಳುವಾಗ ಈ ತಪ್ಪುಗಳನ್ನು ಮಾಡಬೇಡಿ