ಬೆಂಗಳೂರು: ಪ್ರಸ್ತುತ ನಾವು ಉದ್ಯೋಗ ಮಾಡುವುದರ ಜತೆಗೆ ಒಳಿತಾಯ ಮಾಡುವುದು, ವಿಮೆ ಮಾಡಿಸುವುದು ಕೂಡ ಅತ್ಯಗತ್ಯ. ಅದರಲ್ಲೂ ನಮ್ಮನ್ನು ನಂಬಿಕೊಂಡು ಒಂದು ಕುಟುಂಬ ಇದೆ ಎಂದಾದರೆ ಹೆಲ್ತ್ ಇನ್ಶೂರೆನ್ಸ್, ಲೈಫ್ ಇನ್ಶೂರೆನ್ಸ್ ಕಡ್ಡಾಯವಾಗಿ ಇರಲೇ ಬೇಕು. ಆದರೆ ಬರುವ ಕಡಿಮೆ ಆದಾಯದಲ್ಲಿ ಇದಕ್ಕಾಗಿ ಖರ್ಚು ಮಾಡಲು ಸಾಧ್ಯವಿಲ್ಲ ಎಂದು ಕೊರಗುವವರು ತಿಳಿದುಕೊಳ್ಳಲೇ ಬೇಕಾದ ಮಾಹಿತಿಯನ್ನು ಮನಿಗೈಡ್ (Money Guide) ತಿಳಿಸಿಕೊಡುತ್ತಿದೆ.
ವರ್ಷಕ್ಕೆ ಕೇವಲ 299 ರೂ. ಖರ್ಚು ಮಾಡಿದರೆ ಸಾಕು!
ಈ ಇನ್ಶೂರೆನ್ಸ್ ಪಾಲಿಸಿಯಲ್ಲಿ ವರ್ಷಕ್ಕೆ ಕೇವಲ 399 ರೂ. ಹೂಡಿಕೆ ಮಾಡಿದರೆ 10 ಲಕ್ಷ ರೂ. ಕವರೇಜ್ ಸಿಗುತ್ತದೆ. 399 ರೂ. ಮೌಲ್ಯ ಅಧಿಕವಾಯಿತು ಎನ್ನುವವರಿಗೆ ಇದೇ ಪಾಲಿಸಿ 299 ರೂ.ಗೆ ಲಭಿಸುತ್ತದೆ ಎಂದು ನಂಬುತ್ತೀರಾ? ಹೌದು, ಅಂತಹ ಪೋಸ್ಟ್ ಆಫೀಸ್‌ನ ಅದ್ಭುತ ಯೋಜನೆ ಬಗ್ಗೆ ಮಾಹಿತಿ ಇಲ್ಲಿದೆ. ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ವತಿಯಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.
ಏನಿದು ಯೋಜನೆ?
ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (India Post Payments Bank) ಮತ್ತು ಟಾಟಾ ಎಐಜಿ ಇನ್ಶೂರೆನ್ಸ್ (TATA AIG Insurance) ಸಹಯೋಗದಲ್ಲಿ ಗ್ರೂಪ್ ಆಕ್ಸಿಡೆಂಡ್ ಇನ್ಶೂರೆನ್ಸ್ (Group Accident Insurance) ಎನ್ನುವ ಯೋಜನೆಯನ್ನು ಪರಿಚಯಿಸಲಾಗಿದೆ. ಒಂದು ವೇಳೆ ನೀವು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಅಕೌಂಟ್ ಹೊಂದಿದ್ದರೆ ಈ ಅನುಕೂಲ ಸಿಗುತ್ತದೆ. ವರ್ಷಕ್ಕೆ 299 ರೂ. ಅಥವಾ 399 ರೂ. ಪಾವತಿಸಿ 10 ಲಕ್ಷ ರೂ. ಕವರೇಜ್ ಪಡೆಯಬಹುದು.
ಬೇಸಿಕ್ ಮತ್ತು ಪ್ರೀಮಿಯಂ ಆಯ್ಕೆ
ಇದರಲ್ಲಿ ಬೇಸಿಕ್ ಮತ್ತು ಪ್ರೀಮಿಯಂ ಎಂಬ 2 ಆಯ್ಕೆಗಳಿವೆ. ಬೇಸಿಕ್ ಆಯ್ಕೆ 299 ರೂ.ಗೆ ಮತ್ತು ಪ್ರೀಮಿಯಂ ಆಯ್ಕೆ 399 ರೂ.ಗೆ ದೊರೆಯುತ್ತದೆ. ಪ್ರೀಮಿಯಂ ಆಯ್ಕೆಯ ಅನುಕೂಲಗಳೇನು ಎನ್ನುವುದನ್ನು ನೋಡೋಣ. ಒಂದು ವೇಳೆ ಈ ಪಾಲಿಸಿ ಮಾಡಿದಾತ ಅಪಘಾತದಿಂದ ಮೃತಪಟ್ಟರೆ ಆತನ ಕುಟುಂಬಕ್ಕೆ 10 ಲಕ್ಷ ರೂ. ಸಿಗಲಿದೆ. ಮಾತ್ರವಲ್ಲ ಶಾಶ್ವತ ಅಂಗವಿಕಲತೆ, ಎದ್ದು ಓಡಾಡಲು ಸಾಧ್ಯವಾಗದ ಸ್ಥಿತಿ, ಅಲ್ಪ ಪ್ರಮಾಣದ, ತಾತ್ಕಾಲಿಕ ಅಂಗವಿಕತೆ ಎದುರಾದರೂ 10 ಲಕ್ಷ ರೂ. ದೊರೆಯುತ್ತದೆ.
ಇನ್ನು ಆಕ್ಸಿಡೆಂಟಲ್ ಮೆಡಿಕಲ್ ಎಕ್ಸ್‌ಪೆನ್ಸಸ್ ಐಪಿಡಿ (Accidental Medical Expenses IPD) ವರ್ಗಕ್ಕೆ 60 ಸಾವಿರ ರೂ. ಅಥವಾ ಆಸ್ಪತ್ರೆಯ ಬಿಲ್ ಯಾವುದು ಕಡಿಮೆ ಇರುತ್ತದೆಯೋ ಅದು ದೊರೆಯುತ್ತದೆ. ಉದಾಹರಣೆಗೆ ಆಸ್ಪತ್ರೆ ಬಿಲ್ 65 ಸಾವಿರ ರೂ. ಆಗಿದ್ದರೆ 60 ಸಾವಿರ ರೂ. ದೊರೆಯುತ್ತದೆ. ಒಂದು ವೇಳೆ ಬಿಲ್ 40 ಸಾವಿರ ರೂ. ಆಗಿದ್ದರೆ ಅಷ್ಟು ಮಾತ್ರ ಸಿಗಲಿದೆ. ಇನ್ನು ಆಕ್ಸಿಡೆಂಟಲ್ ಮೆಡಿಕಲ್ ಎಕ್ಸ್‌ಪೆನ್ಸಸ್ ಒಪಿಡಿ (Accidental Medical Expenses OPD) ವರ್ಗಕ್ಕೆ 30 ಸಾವಿರ ರೂ. ಮಿತಿ. ಇಲ್ಲೂ ಯಾವುದು ಕಡಿಮೆ ಮೊತ್ತವೋ ಅದನ್ನು ನೀಡಲಾಗುತ್ತದೆ.
ಎಜ್ಯುಕೇಷನಲ್ ಬೆನಿಫಿಟ್ (Education Benefit)
ಈ ಪಾಲಿಸಿಯ ಇನ್ನೊಂದು ಮುಖ್ಯ ಅಂಶ ಎಂದರೆ ಪಾಲಸಿದಾರರಿಗೆ ಸಮಸ್ಯೆ ಉಂಟಾದರೆ ಅವರ ಮಕ್ಕಳಿಗೆ 1 ಲಕ್ಷ ರೂ.ವರೆಗೆ ಶಿಕ್ಷಣಕ್ಕಾಗಿ ನೆರವು ಸಿಗಲಿದೆ. ಈಗಾಗಲೇ ಅಡ್ಮಿಷನ್ ಆಗಿರುವ ಮಕ್ಕಳಿಗೆ ಮಾತ್ರ ಈ ನೆರವು ಲಭಿಸಲಿದೆ.
ಇನ್ ಹಾಸ್ಪಿಟಲ್ ಡೈಲಿ ಕ್ಯಾಶ್ (In-Hospital Daily Cash)
ಇದು ಪ್ರೀಮಿಯಂ ಪಾಲಿಸಿಯ ಇನ್ನೊಂದು ಅನುಕೂಲ. ಅಂದರೆ ಹಾಸ್ಪಿಟಲ್‌ನಲ್ಲಿ ಅಡ್ಮಿಟ್ ಆಗಿರುವ ವಿಮೆದಾರರಿಗೆ ಸುಮಾರು 10 ದಿನಗಳ ಕಾಲ ಪ್ರತಿದಿನ 1 ಸಾವಿರ ರೂ. ಪಾವತಿಸಲಾಗುತ್ತದೆ. ಜತೆಗೆ ಫ್ಯಾಮಿಲಿ ಟ್ರಾನ್ಸ್‌ಪೊರ್ಟೇಷನ್ ಬೆನೆಫಿಟ್ಸ್ (Family Transportation Benefits) ಎನ್ನುವ ಇನ್ನೊಂದು ಅಂಶವೂ ಇದರಲ್ಲಿದೆ. ಅಪಘಾತಕ್ಕೀಡಾದವರನ್ನು ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್‌ಗೆ ಮಾಡಿದ ಖರ್ಚಿನಲ್ಲಿ ಗರಿಷ್ಠ 25 ಸಾವಿರ ರೂ. ತನಕ ಸಿಗಲಿದೆ. ಮಾತ್ರವಲ್ಲ ಈ ಪಾಲಿಸಿ ಮಾಡಿಕೊಂಡವರು ಮರಣ ಹೊಂದಿದರೆ ಅಂತ್ಯ ಸಂಸ್ಕಾರಕ್ಕಾಗಿ ಸುಮಾರು 5 ಸಾವಿರ ರೂ. ಲಭಿಸುತ್ತದೆ.
ಬೇಸಿಕ್ ಆಯ್ಕೆಯಲ್ಲೇನಿದೆ?
ಪ್ರತಿ ವರ್ಷ 299 ರೂ. ಕಟ್ಟಿದರೆ ಬೇಸಿಕ್ ಆಯ್ಕೆ ಲಭಿಸುತ್ತದೆ. ಇದರಲ್ಲೂ ಸಾಕಷ್ಟು ಅನುಕೂಲಗಳಿವೆ. ಆಕ್ಸಿಡೆಂಟಲ್ ಡೆತ್‌ಗೆ 10 ಲಕ್ಷ ರೂ., ಶಾಶ್ವತ ಅಂಗವಿಕಲತೆಗೆ 10 ಲಕ್ಷ ರೂ., ಗಂಭೀರ ಗಾಯಕ್ಕೆ 10 ಲಕ್ಷ ರೂ. ಲಭಿಸುತ್ತದೆ. ಆಕ್ಸಿಡೆಂಟಲ್ ಮೆಡಿಕಲ್ ಎಕ್ಸ್‌ಪೆನ್ಸಸ್ ಐಪಿಡಿ ವರ್ಗಕ್ಕೆ 60 ಸಾವಿರ ರೂ. ಅಥವಾ ಬಿಲ್ ಎರಡರಲ್ಲಿ ಯಾವುದು ಕಡಿಮೆ ಇದೆಯೋ ಅದು ಲಭಿಸುತ್ತದೆ. ಆಕ್ಸಿಡೆಂಟಲ್ ಮೆಡಿಕಲ್ ಎಕ್ಸ್‌ಪೆನ್ಸಸ್ ಒಪಿಡಿ ವರ್ಗಕ್ಕೆ 30 ಸಾವಿರ ರೂ. ಅಥವಾ ಕಡಿಮೆ ಬಿಲ್‌ನ ಮೊತ್ತ ಕ್ಲೈಮ್ ಆಗುತ್ತದೆ.
ನಿಯಮಗಳೇನು?
ಅಪಘಾತವಾಗಿ 1 ವರ್ಷದೊಳಗೆ ಮರಣ ಹೊಂದಿದರೆ 10 ಲಕ್ಷ ರೂ. ದೊರೆಯುತ್ತದೆ. ಶಾಶ್ವತ ಅಂಗವಿಕಲತೆ, ಎಜ್ಯುಕೇಷನ್ ಬೆನಿಫಿಟ್ ಮತ್ತಿತರ ಅನುಕೂಲಗಳು 1 ವರ್ಷದೊಳಗೆ ಸಿಗುತ್ತದೆ. ಚಿಕಿತ್ಸೆಗಾಗಿ 150 ಕಿ.ಮೀ. ಸಂಚರಿಸಿದರೆ ಮಾತ್ರ ಫ್ಯಾಮಿಲಿ ಟ್ರಾನ್ಸ್‌ಪೊರ್ಟೇಷನ್ ಬೆನಿಫಿಟ್ಸ್ ಸಿಗಲಿದೆ. 18 ವರ್ಷಗಳಿಂದ ಮೇಲ್ಪಟ್ಟು 60 ವರ್ಷಗಳಿಗಿಂತ ಒಳಗಿನವರು ಮಾತ್ರ ಈ ವಿಮೆಗೆ ಅರ್ಹರು. 1 ವರ್ಷ ಈ ಪಾಲಿಸಿಯ ಕಾಲಾವಧಿ.
ಯಾವುದಕ್ಕೆಲ್ಲ ಅಪ್ಲೈ ಆಗುವುದಿಲ್ಲ?
ಆತ್ಮಹತ್ಯೆ, ಮಿಲಿಟರಿ ಸರ್ವಿಸ್, ಯುದ್ಧ, ಅಕ್ರಮ ಚಟುವಟಿಕೆ, ಬ್ಯಾಕ್ಟೀರಿಯಾ ಸೋಂಕು, ಕಾಯಿಲೆ, ಏಡ್ಸ್, ಅಪಾಯಕಾರಿ ಕ್ರೀಡೆ ಈ ಸಂದರ್ಭಗಳಲ್ಲಿ ಈ ಪಾಲಿಸಿ ಅಪ್ಲೈ ಆಗುವುದಿಲ್ಲ.
ಇದನ್ನೂ ಓದಿ: Money Guide: ದುರ್ಬಲ ವರ್ಗಕ್ಕೆ ಆರ್ಥಿಕ ಶಕ್ತಿ ನೀಡುವ ಜನ ಧನ್ ಯೋಜನೆ; ಏನಿದರ ವೈಶಿಷ್ಟ್ಯ?