ಬೆಂಗಳೂರು: ಶಿಸ್ತು ಎನ್ನುವುದು ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆರ್ಥಿಕವಾಗಿ ಆಗಿರಲಿ, ಸಾಮಾಜಿಕವಾಗಿಯೇ ಆಗಿರಲಿ ಕ್ರಮಬದ್ಧ ಜೀವನ ಶೈಲಿ ರೂಢಿಸಿಕೊಳ್ಳುವುದು ಮುಖ್ಯ. ಅದರಲ್ಲೂ ಬದಲಾದ ಜೀವನ ಶೈಲಿಯ ಈ ಕಾಲಘಟ್ಟದಲ್ಲಿ ಆರ್ಥಿಕವಾಗಿ ನಾವು ತುಂಬ ಎಚ್ಚರಿಕೆಯಿಂದ ಇರಬೇಕಾದುದು ಅತೀ ಅಗತ್ಯ ಎಂದು ತಜ್ಞರು ಪದೇ ಪದೆ ನೆನಪಿಸುತ್ತಾರೆ. ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ದೇಶದ ಜನತೆಯಲ್ಲಿ ಹೆಚ್ಚುತ್ತಿರುವ ಸಾಲದ ಪ್ರವೃತ್ತಿ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ವ್ಯಕ್ತಿಯೊಬ್ಬನ ಜೀವನದ ಆರ್ಥಿಕ ಶಿಸ್ತು ಆತ ಮಾತ್ರವಲ್ಲದೆ ಇಡೀ ಕುಟುಂಬದ ಭವಿಷ್ಯವನ್ನು ಸುಸ್ಥಿರವಾಗಿಸಬಲ್ಲದು ಎನ್ನುತ್ತಾರೆ ತಜ್ಞರು. ಹಾಗಾದರೆ ಯಾವ ರೀತಿಯ ಶಿಸ್ತನ್ನು ರೂಢಿಸಿಕೊಳ್ಳಬೇಕು? ಆರ್ಥಿಕವಾಗಿ ಹೇಗೆ ಸದೃಢವಾಗಬಹುದು? ಎನ್ನುವುದರ ವಿವರ ಮನಿಗೈಡ್ (Money Guide)ನಲ್ಲಿದೆ.
1.ಆರಂಭದಲ್ಲೇ ಹೂಡಿಕೆ ಮಾಡಿ
ಆರ್ಥಿಕವಾಗಿ ಸದೃಢರಾಗಲು ಆರಂಭದಲ್ಲೇ ಹೂಡಿಕೆ ಮಾಡುವತ್ತ ಗಮನ ಹರಿಸಿ. ಉಳಿತಾಯ ಮಾಡುವ ಜತೆಗೆ ಸುರಕ್ಷಿತ ಮಾರ್ಗದಲ್ಲಿ ಹೂಡಿಕೆ ಮಾಡುವುದು ಕೂಡ ಅತೀ ಅಗತ್ಯ. ಇದರಿಂದ ಸಾಧಾರಣ ಕೊಡುಗೆಗಳು ಸಹ ಕಾಲಾನಂತರದಲ್ಲಿ ಗಣನೀಯ ಸಂಪತ್ತನ್ನು ನೀಡಬಹುದು. ಆರ್ಥಿಕವಾಗಿ ಸದೃಢವಾಗುವ ನಿಮ್ಮ ಕನಸಿನ ಮೊದಲ ಮೆಟ್ಟಿಲಾಗಿ ಉದ್ಯೋಗಕ್ಕೆ ಸೇರಿದ ಆರಂಭದಲ್ಲಿ ಹೂಡಿಕೆ ಆರಂಭಿಸಿ ಎಂದು ತಜ್ಞರು ಸಲಹೆ ನೀಡುತ್ತಾರೆ. ಇದಕ್ಕಾಗಿ ಉಳಿತಾಯ ಖಾತೆಗಳು, ಮ್ಯೂಚುವಲ್ ಫಂಡ್‌ಗಳು ಮತ್ತು ಸಾರ್ವಜನಿಕ ಭವಿಷ್ಯ ನಿಧಿಗಳು ಸೇರಿದಂತೆ ವಿವಿಧ ಉಳಿತಾಯ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬಹುದು.
2.ತುರ್ತು ನಿಧಿ
ಮೂರರಿಂದ ಆರು ತಿಂಗಳ ಜೀವನ ವೆಚ್ಚಗಳನ್ನು ಭರಿಸುವ ಸಾಮರ್ಥ್ಯವಿರುವ ತುರ್ತು ನಿಧಿಯನ್ನು ಸ್ಥಾಪಿಸಿ. ಈ ಹಣಕಾಸು ಸುರಕ್ಷತಾ ಜಾಲವು ಅನಿರೀಕ್ಷಿತ ವೆಚ್ಚಗಳ ಆಘಾತದಿಂದ ನಿಮ್ಮನ್ನು ರಕ್ಷಿಸುತ್ತದೆ. ಇದರಿಂದ ತುರ್ತು ಸಂದರ್ಭದಲ್ಲಿ ಸಾಲಕ್ಕಾಗಿ ಇನ್ನೊಬ್ಬರ ಮುಂದೆ ಕೈ ಚಾಚಬೇಕಾದ ಸಂದರ್ಭ ಉದ್ಭವಿಸುವುದಿಲ್ಲ.
3.ನಿರ್ದಿಷ್ಟ ಗುರಿ ಇರಲಿ
ನಿರ್ದಿಷ್ಟ ಗುರಿ ಇಟ್ಟುಕೊಂಡು ಅದನ್ನು ನನಸು ಮಾಡಲು ಪ್ರಯತ್ನಿಸಿ. ಉದಾಹರಣೆಗೆ ಮನೆ ಖರೀದಿ / ನಿರ್ಮಾಣ, ಉನ್ನತ ಶಿಕ್ಷಣ ಅಥವಾ ನಿವೃತ್ತಿಗಾಗಿ ಆದಾಯ ಮಾರ್ಗ ಕಂಡುಕೊಳ್ಳುವುದು ಹೀಗೆ… ಈ ಗುರಿ ಸಾಧಿಸಲು ಅಗತ್ಯವಾದ ಹೂಡಿಕೆಯ ವಿಧಾನವನ್ನು ಆಯ್ಕೆ ಮಾಡಿ.
4.ಶೈಕ್ಷಣಿಕ ಸಾಲದ ಸದುಪಯೋಗ
ಉನ್ನತ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಶೈಕ್ಷಣಿಕ ಸಾಲದ ಸದುಪಯೋಗಪಡಿಸಿಕೊಳ್ಳಿ. ಸಾಲದ ಮರುಪಾವತಿಯನ್ನು ಶ್ರದ್ಧೆಯಿಂದ ನಿರ್ವಹಿಸುವುದು ಕೂಡ ಅಗತ್ಯ. ನಿಮ್ಮ ಒಟ್ಟಾರೆ ಹಣಕಾಸು ಸ್ಥಿತಿಗೆ ಹೊಂದಿಕೆಯಾಗುವ ಮರುಪಾವತಿ ಆಯ್ಕೆಯನ್ನು ಆರಿಸಿಕೊಳ್ಳುವುದು ಅತಿ ಮುಖ್ಯ.
5.ರಿಸ್ಕ್ ಮ್ಯಾನೇಜ್‌ಮೆಂಟ್
ನಿಮ್ಮ ಎಲ್ಲ ಹಣವನ್ನು ಒಂದೇ ಹೂಡಿಕೆ ಅಥವಾ ಆಸ್ತಿ ವರ್ಗದಲ್ಲಿ ಕೇಂದ್ರೀಕರಿಸುವುದನ್ನು ತಪ್ಪಿಸಿ. ಅಪಾಯವನ್ನು ತಗ್ಗಿಸಲು ನಿಮ್ಮ ಹೂಡಿಕೆಯನ್ನು ವೈವಿಧ್ಯಗೊಳಿಸಿ. ಸ್ಟಾಕ್, ಬಾಂಡ್ ಮತ್ತು ರಿಯಲ್ ಎಸ್ಟೇಟ್‌ನಂತಹ ಆಯ್ಕೆಗಳನ್ನು ಆಯ್ದುಕೊಳ್ಳಿ. ಅಲ್ಲದೆ ಜೀವವಿಮೆ, ಆರೋಗ್ಯ ವಿಮೆ ಮಾಡಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.
ಇದನ್ನೂ ಓದಿ: Money Guide: ಸಾಲ ನೀಡದಂತೆ ಬಜಾಜ್ ಫೈನಾನ್ಸ್‌ಗೆ ಆರ್‌ಬಿಐ ತಾಕೀತು! ಗ್ರಾಹಕರ ಮೇಲೇನು ಪರಿಣಾಮ?
6.ಬಾಕಿ ಇರುವ ಸಾಲಗಳನ್ನು ತ್ವರಿತವಾಗಿ ಮುಗಿಸಿ
ಸಾಲವು ಗಮನಾರ್ಹ ಆರ್ಥಿಕ ಹೊರೆಯನ್ನು ಉಂಟು ಮಾಡಬಹುದು ಎಂಬುದು ನಿಮ್ಮ ಗಮನದಲ್ಲಿರಲಿ. ಹೀಗಾಗಿ ಸಾಲದ ತ್ವರಿತ ಮರುಪಾವತಿಗೆ ಆದ್ಯತೆ ನೀಡಿ. ಸಾಲ ಮರುಪಾವತಿ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಹೆಚ್ಚುವರಿ ಪಾವತಿಗಳನ್ನು ಮಾಡುವುದು, ಸಾಲವನ್ನು ಕ್ರೋಢೀಕರಿಸುವುದು ಮತ್ತು ಕಡಿಮೆ ಬಡ್ಡಿದರಗಳ ಮಾತುಕತೆಯಂತಹ ವಿವಿಧ ತಂತ್ರಗಳನ್ನು ಬಳಸಿ.
ಹಣಕಾಸಿನ ಯೋಜನೆ ಒಂದು ಕ್ರಿಯಾತ್ಮಕ ಪ್ರಕ್ರಿಯೆ. ನಿಮ್ಮ ಹಣಕಾಸಿನ ಪರಿಸ್ಥಿತಿ, ಗುರಿ ಮತ್ತು ಮಾರುಕಟ್ಟೆ ಪರಿಸ್ಥಿತಿಗಳಲ್ಲಿನ ಬದಲಾವಣೆಗಳ ಆಧಾರದ ಮೇಲೆ ಯೋಜನೆಯನ್ನು ನಿಯಮಿತವಾಗಿ ಪರಿಶೀಲಿಸುವುದು ಮತ್ತು ಸರಿಹೊಂದಿಸುವುದು ಬಹಳ ಮುಖ್ಯ. ಇದಕ್ಕಾಗಿ ಆರ್ಥಿಕ ತಜ್ಞರ ಸಲಹೆ ಪಡೆಯಬಹುದು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ