ಬೆಂಗಳೂರು: ಜೀವನದಲ್ಲಿ ನಾವು ಅಂದುಕೊಂಡಂತೆ ಎಲ್ಲವೂ ನಡೆಯುವುದಿಲ್ಲ. ನಾವು ಎಷ್ಟೇ ಪ್ಲ್ಯಾನ್ ಮಾಡಿಕೊಂಡರೂ ಕೆಲವೊಂದು ಘಟನೆಗಳು ಅನಿರೀಕ್ಷಿತವಾಗಿರುತ್ತವೆ. ಅದರಲ್ಲೂ ಕೆಲವೊಂದು ಅಪಘಾತ, ಆರೋಗ್ಯ ಸಮಸ್ಯೆಗಳು ವ್ಯಕ್ತಿಯನ್ನು ನಂಬಿಕೊಂಡಿರುವ ಕುಟುಂಬವನ್ನೇ ಬೀದಿ ಪಾಲು ಮಾಡಿ ಬಿಡುತ್ತದೆ. ಹೀಗಾಗಿ ಟರ್ಮ್ ಲೈಫ್ ಇನ್ಶೂರೆನ್ಸ್ (Term Life Insurance) ಅನ್ನು ಎಲ್ಲರೂ ಹೊಂದಿರಬೇಕು ಎನ್ನುತ್ತಾರೆ ತಜ್ಞರು. ಹಾಗಾದರೆ ಟರ್ಮ್ ಲೈಫ್ ಇನ್ಶೂರೆನ್ಸ್ ಎಂದರೇನು? ಇದು ಹೇಗೆ ನೆರವಾಗುತ್ತದೆ? ಮುಂತಾದ ಪ್ರಶ್ನೆಗಳಿಗೆ ಇಂದಿನ ಮನಿ ಗೈಡ್ (Money Guide) ಉತ್ತರಿಸಲಿದೆ.
ನಾವೆಲ್ಲ ಲೈಫ್ ಇನ್ಶೂರೆನ್ಸ್ ಮಾಡಿಸುತ್ತೇವೆ. ಇದರಲ್ಲಿ ನಿರ್ದಿಷ್ಟ ವರ್ಷಗಳಿಗೆ ಪ್ರೀಮಿಯಂ ಕಟ್ಟುತ್ತೇವೆ. ಅಷ್ಟು ಅವಧಿ ಮುಗಿದಾಗ ಕಟ್ಟಿ ಮೊತ್ತ ಲಭಿಸುತ್ತದೆ. ಒಂದು ವೇಳೆ ಪ್ರೀಮಿಯಂ ಮುಗಿಯುವ ಮೊದಲೇ ಸಮಸ್ಯೆ ಎದುರಾದರೆ ಒಂದಷ್ಟು ಹಣ ನಾಮಿನಿಗೆ ಲಿಗುತ್ತದೆ. ಟರ್ಮ್ ಇನ್ಶೂರೆನ್ಸ್ ಇದಕ್ಕಿಂತ ಸ್ವಲ್ಪ ಭಿನ್ನವಾಗಿ ಕೆಲಸ ಮಾಡುತ್ತದೆ. ಅದು ಹೇಗೆ ಎನ್ನುವುದನ್ನು ನೋಡೋಣ.
ಟರ್ಮ್ ಇನ್ಶೂರೆನ್ಸ್ ಹೇಗೆ ಕೆಲಸ ಮಾಡುತ್ತದೆ?
ಒಂದು ದೊಡ್ಡ ಮೊತ್ತದ ಹಣಕ್ಕೆ ಇಂತಿಷ್ಟು ವರ್ಷ ಪ್ರೀಮಿಯಂ ಪಾವತಿಸಬೇಕು. ಒಂದು ವೇಳೆ ಪಾಲಿಸಿ ಮಾಡಿದಾತನಿಗೆ ಏನಾದರೂ ಸಮಸ್ಯೆಯಾದರೆ ಮಾತ್ರ ಹಣ ಸಿಗುತ್ತದೆ. ಉದಾಹರಣೆಗೆ 1 ಕೋಟಿ ರೂ. ಮೊತ್ತದ ಟರ್ಮ್ ಇನ್ಶೂರೆನ್ಸ್ ಅನ್ನು 60 ವರ್ಷದವರೆಗೆ ವ್ಯಕ್ತಿಯೊಬ್ಬ ಕಟ್ಟುವ ಪ್ಲ್ಯಾನ್ ಆಯ್ಕೆ ಮಾಡಿಕೊಂಡಿದ್ದಾನೆ ಎಂದಿಟ್ಟುಕೊಳ್ಳೋಣ. ಈ ಮಧ್ಯೆ ಆತನಿಗೆ ಏನಾದರು ಸಮಸ್ಯೆಯಾದರೆ ಅಷ್ಟು ದೊಡ್ಡ ಮೊತ್ತ ಆತನ ಕುಟುಂಬಕ್ಕೆ ಸಿಗಲಿದೆ. ಏನೂ ಆಗಿಲ್ಲ ಎಂದರೆ ಹಣ ಸಿಗುವುದಿಲ್ಲ. ಈ ಇನ್ಶೂರೆನ್ಸ್‌ನ ಬಹುದೊಡ್ಡ ಅನುಕೂಲ ಎಂದರೆ ಪಾಲಿಸಿ ಮಾಡಿದಾತ ದೊಡ್ಡ ಮೊತ್ತದ ಸಾಲ ಮಾಡಿಕೊಂಡಿದ್ದರೆ ಆತನ ಮರಣಾನಂತರ ಕುಟುಂಬ ಬೀದಿಗೆ ಬೀಳುವುದು ತಪ್ಪುತ್ತದೆ.
ಇದನ್ನೂ ಓದಿ: Money Guide: ಪಿಎಂ ಕಿಸಾನ್ ಸಮ್ಮಾನ್ ನಿಧಿಗೆ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಮಾಹಿತಿ
ಸಲಹೆಗಳು
ಟರ್ಮ್ ಇನ್ಶೂರೆನ್ಸ್ ಮಾಡುವವರಿಗೆ ಕೆಲವೊಂದು ಉಪಯುಕ್ತ ಸಲಹೆಗಳು ಇಲ್ಲಿವೆ.
- ಕಡಿಮೆ ವಯಸ್ಸಿನಲ್ಲಿ ಇನ್ಶೂರೆನ್ಸ್ ಪಡೆದರೆ ಪ್ರೀಮಿಯಂ ಮೊತ್ತ ಕೂಡ ಕಡಿಮೆ ಇರುತ್ತದೆ.
- ಇನ್ಶೂರೆನ್ಸ್ ಕಂಪನಿಯ ಕ್ಲೈಮ್ ಸೆಟಲ್ಮೆಂಟ್ ರ್ಯಾಶ್ಯೋ(Claim Settlement Ratio) ಉತ್ತಮವಾಗಿರಬೇಕು. 100 ಕ್ಲೈಮ್ ಬಂದಾಗ ಕಂಪೆನಿ ಎಷ್ಟನ್ನು ಕ್ಲಿಯರ್ ಮಾಡಿದೆ ಎನ್ನುವುದನ್ನು ಇದು ಸೂಚಿಸುತ್ತದೆ. ಹೀಗಾಗಿ ಪಾಲಿಸಿ ಖರೀದಿಸುವ ಮುನ್ನ ಈ ಅಂಶದತ್ತ ಗಮನ ಹರಿಸಿ.
- ಆ್ಯಡ್ ಆನ್ ಬೆನೆಫಿಟ್ ಅನ್ನು ಕೂಡ ಗಮನಿಸಿ. ಅಂದರೆ ಹೆಚ್ಚುವರಿಯಾಗಿ ಆಕ್ಸಿಡೆಂಟ್ ಕವರ್ ಮಾಡಿಸಬಹುದು. ಇದಕ್ಕೆ ಪ್ರತ್ಯೇಕ ಪ್ರೀಮಿಯಂ ಕಟ್ಟಬೇಕು. ಒಂದು ವೇಳೆ ಅಪಘಾತದಿಂದ ಮೃತಪಟ್ಟರೆ ಟರ್ಮ್ ಇನ್ಶೂರೆನ್ಸ್ ಜತೆಗೆ ಇನ್ನೂ ಹೆಚ್ಚಿನ ಮೊತ್ತ ಸಿಗುತ್ತದೆ. ಮಾರಕ ಕಾಯಿಲೆಗೂ ಇದು ಅನ್ವಯವಾಗುತ್ತದೆ. ಪಾಲಿಸಿದಾರ ಶಾಶ್ವತ ವಿಶೇಷಚೇತನರಾದರೆ ಪ್ರೀಮಿಯಂ ಅನ್ನು ರದ್ದು ಪಡಿಸುವ ಆಯ್ಕೆಯೂ ಇದೆ.
ಎಷ್ಟು ಮೊತ್ತಕ್ಕೆ ಟರ್ಮ್ ಇನ್ಶೂರೆನ್ಸ್ ಮಾಡಿಸಬೇಕು?
ನೀವು ದೊಡ್ಡ ಮೊತ್ತದ ಸಾಲ ಮಾಡಿದ್ದರೆ ಆ ಮೊತ್ತ ಮತ್ತು ಕುಟುಂಬದ ಸುಮಾರು 20 ವರ್ಷಗಳ ಖರ್ಚು ಅಂದಾಜು ಲೆಕ್ಕ ಹಾಕಿ ಅಷ್ಟು ಮೊತ್ತಕ್ಕೆ ವಿಮಾ ಮೊತ್ತ ಮಾಡಿಸಿ.