ಬೆಂಗಳೂರು: ತಿಂಗಳ ಸಂಬಳದಲ್ಲಿ ಉಳಿತಾಯ ಮಾಡಬೇಕು ಎಂದರೆ ನೀವು ಪೋಸ್ಟ್ ಆಫೀಸ್ ಉಳಿತಾಯ ಯೋಜನೆ (Post Office Savings Schemes-POSS)ಯತ್ತ ಗಮನ ಹರಿಸಬಹುದು. ವಿವಿಧ ಆದಾಯ ಗುಂಪುಗಳ ಹೂಡಿಕೆದಾರರಿಗೆ ಹಣಕಾಸು ಪ್ರಯೋಜನಗಳನ್ನು ಒದಗಿಸುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಗಳು ಸುರಕ್ಷಿತ ಮತ್ತು ಸರ್ಕಾರ ಬೆಂಬಲ ಇರುವ ಕಾರಣ ಉತ್ತಮ ಆದಾಯವನ್ನು ನೀಡುತ್ತವೆ. ನಿವೃತ್ತಿಯ ನಂತರ ನಿಯಮಿತ ಆದಾಯದ ತಂದು ಕೊಡಲು ಪೋಸ್ಟ್ ಆಫೀಸ್ ಉಳಿತಾಯ ಯೋಜನೆ ಉತ್ತಮ ಆಯ್ಕೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಮನಿಗೈಡ್ (Money Guide)ನಲ್ಲಿದೆ.
ಮಾಸಿಕ ಆದಾಯ ಲಭಿಸುವ ಯೋಜನೆ
ನೀವು ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (Post Office Monthly Income Scheme-POMIS)ಯಲ್ಲಿ ಹೂಡಿಕೆ ಮಾಡಿ ನಿವೃತ್ತಿಯ ನಂತರ ಪ್ರತಿ ತಿಂಗಳು ಉತ್ತಮ ಆದಾಯವನ್ನು ಗಳಿಸಬಹುದು. ಇದರಲ್ಲಿ ನಿಮ್ಮ ಸಂಗಾತಿಯೊಂದಿಗೆ ಜಂಟಿಯಾಗಿ ಖಾತೆ ತೆರೆಯುವ ಆಯ್ಕೆಯೂ ಇದೆ. 9 ಲಕ್ಷ ರೂ. ಹೂಡಿಕೆ ಮಾಡಿದರೆ ಪ್ರತಿ ತಿಂಗಳು 9,250 ರೂ. ನಿಮ್ಮ ಕೈ ಸೇರಲಿದೆ. ಸಂಗಾತಿಯೊಂದಿಗೆ ಜಂಟಿ ಖಾತೆ ತೆರೆದರೆ ಪ್ರತಿ ತಿಂಗಳು ಈ ಮೊತ್ತ ಲಭಿಸಲು 15 ಲಕ್ಷ ರೂ. ಹೂಡಿಕೆ ಮಾಡಬೇಕಾಗುತ್ತದೆ. ಪ್ರಸ್ತುತ ಈ ಯೋಜನೆಯು ಶೇ. 7.4ರಷ್ಟು ವಾರ್ಷಿಕ ಬಡ್ಡಿದರವನ್ನು ನೀಡುತ್ತದೆ.
ಪಿಒಎಂಐಎಸ್ ಯೋಜನೆಯ ಅನುಕೂಲಗಳು
- ಪ್ರತಿ ತಿಂಗಳು ಖಚಿತ ಆದಾಯ.
- ಇತರ ಫಿಕ್ಸೆಡ್ ಡೆಪಾಸಿಡ್ (FD)ಗಳಿಗಿಂತ ಹೆಚ್ಚಿನ ಬಡ್ಡಿ ದರ.
- ಕನಿಷ್ಠ 1,000 ರೂ. ಮೂಲಕ ಹೂಡಿಕೆ ಆರಂಭಿಸಬಹುದು.
- ಐದು ವರ್ಷಗಳ ಲಾಕ್-ಇನ್ ಅವಧಿಯ ನಂತರ ಕಾರ್ಪಸ್ ಅನ್ನು ಮರುಹೂಡಿಕೆ ಮಾಡಬಹುದು.
ಹೂಡಿಕೆ ಅವಧಿ
ಪಿಒಎಂಐಎಸ್ ಯೋಜನೆಯ ಮೆಚ್ಯೂರಿಟಿ ಅವಧಿ 5 ವರ್ಷಗಳು. ನಿಮ್ಮ ಆದ್ಯತೆಯನ್ನು ಅವಲಂಬಿಸಿ ನೀವು ಯೋಜನೆಯನ್ನು 5ರಿಂದ 15 ವರ್ಷಗಳವರೆಗೆ ವಿಸ್ತರಿಸಬಹುದು. ಜತೆಗೆ ನೀವು ಮೂವರು ವ್ಯಕ್ತಿಗಳೊಂದಿಗೆ ಜಂಟಿ ಖಾತೆಯನ್ನು ತೆರೆಯಬಹುದು. ಈ ಹಣವನ್ನು ಮೂವರ ಮಧ್ಯೆ ಸಮಾನವಾಗಿ ವಿತರಿಸಲಾಗುತ್ತದೆ.
ಇದನ್ನು ಗಮನಿಸಿ
ಇದಲ್ಲದೆ ನೀವು ಅವಧಿಗೆ ಹೂಡಿಕೆಯನ್ನು ಮುನ್ನವೇ ಕ್ಲೋಸ್ ಮಾಡಬಹದಾದ ಆಯ್ಕೆಯೂ ಲಭ್ಯ. ಖಾತೆ ತೆರೆದ ಒಂದು ವರ್ಷದ ನಂತರ ಬೇಕಾದರೆ ನೀವು ಹಣವನ್ನು ಹಿಂಪಡೆಯಬಹುದು. ಆದಾಗ್ಯೂ ನೀವು ಒಂದರಿಂದ ಮೂರು ವರ್ಷಗಳ ನಡುವೆ ಹಣವನ್ನು ಹಿಂತೆಗೆದುಕೊಂಡರೆ ಠೇವಣಿ ಮಾಡಿದ ಮೊತ್ತದ ಮೇಲೆ ನೀವು ಶೇ. 2ರಷ್ಟು ದಂಡವನ್ನು ಪಾವತಿಸಬೇಕಾಗುತ್ತದೆ. ಮೂರು ವರ್ಷಗಳ ನಂತರ ನೀವು ಶೇ. 1ರಷ್ಟು ಕಡಿತದೊಂದಿಗೆ ಹಣ ಸ್ವೀಕರಿಸಬಹುದು.
ಹೂಡಿಕೆ ಮಾಡುವ ವಿಧಾನ
18 ವರ್ಷ ದಾಟಿದ ಯಾರೂ ಬೇಕಾದರೂ ಪಿಒಎಂಐಎಸ್‌ನಲ್ಲಿ ಹೂಡಿಕೆ ಮಾಡಬಹುದು. ಇದಕ್ಕಾಗಿ ನೀವು ಅನುಸರಿಸಬೇಕಾದ ಮಾರ್ಗ:
- ಪೋಸ್ಟ್ ಆಫೀಸ್ ಸೇವಿಂಗ್ಸ್ ಅಕೌಂಟ್ (Post Office savings account) ಹೊಂದುವುದು ಕಡ್ಡಾಯ
- ಪೋಸ್ಟ್ ಆಫೀಸ್ಗೆ ತೆರಳಿ ಪಿಒಎಂಐಎಸ್ ಅರ್ಜಿ ಪಡೆದುಕೊಳ್ಳಿ
- ಫಾರಂ ಫಿಲ್ ಮಾಡಿ ಸೆಲ್ಫ್ ಎಟೆಸ್ಟ್ ಮಾಡಿರುವ ಡಾಕ್ಯುಮೆಂಟ್ ಪ್ರತಿ ಲಗತ್ತಿಸಿ. ಪರಿಶೀಲನೆ ಸಂದರ್ಭದಲ್ಲಿ ಮೂಲ ದಾಖಲೆ ಹಾಜರುಪಡಿಸಿ
- ನಾಮಿನಿಯ ಹೆಸರು, ಹುಟ್ಟಿದ ದಿನಾಂಕ, ಮೊಬೈಲ್ ನಂಬರ್ ನಮೂದಿಸಿ
- ಆರಂಭದಲ್ಲಿ ಕನಿಷ್ಠ 1,000 ರೂ. ಹೂಡಿಕೆ ಮಾಡಿ
ಇದನ್ನೂ ಓದಿ: Money Guide: 20 ವರ್ಷಗಳ ಮನೆ ಸಾಲವನ್ನು 10 ವರ್ಷಗಳಲ್ಲೇ ತೀರಿಸಬಹುದು! ಹೀಗೆ ಮಾಡಿ…