ಬೆಂಗಳೂರು: ಮಕ್ಕಳ ಮೇಲೆ ಅತೀ ಹೆಚ್ಚು ಪ್ರಭಾವ ಬೀರುವುದು ಹೆತ್ತವರು. ಆದ್ದರಿಂದಲೇ ಮನೆಯೇ ಮೊದಲ ಪಾಠ ಶಾಲೆ ಎಂದು ಕರೆಯಲಾಗುತ್ತದೆ. ಮಕ್ಕಳಿಗೆ ಬಾಲ್ಯದಲ್ಲೇ ಉತ್ತಮ ಜೀವನ ಪಾಠ ಹೇಳಿ ಕೊಡುವುದರಿಂದ ಅವರು ಅದನ್ನು ಜೀವನದುದ್ದಕ್ಕೂ ಪಾಲಿಸುತ್ತಾರೆ. ಮಕ್ಕಳಲ್ಲಿ ಆರ್ಥಿಕ ಸಾಕ್ಷರತೆಯನ್ನು (Financial literacy) ಮೂಡಿಸುವುದು ಅವರ ಭವಿಷ್ಯದ ಯಶಸ್ಸು ಮತ್ತು ಯೋಗಕ್ಷೇಮಕ್ಕೆ ಮುಖ್ಯ ಎನ್ನುತ್ತಾರೆ ತಜ್ಞರು. ಇದು ಹೇಗೆ ಎನ್ನುವುದ ವಿವರ ಮನಿಗೈಡ್ (Money Guide)ನಲ್ಲಿದೆ.
ಆರ್ಥಿಕ ಸಾಕ್ಷರತೆಯು ಮನೆಯಲ್ಲಿ ಪ್ರಾರಂಭವಾಗಬೇಕು. ಆದ್ದರಿಂದ ಮಕ್ಕಳಿಗೆ ಸಂಪಾದನೆ, ಖರ್ಚು ಮತ್ತು ಉಳಿತಾಯದಂತಹ ಮೂಲಭೂತ ಪರಿಕಲ್ಪನೆಗಳನ್ನು ಅರ್ಥ ಮಾಡಿಸುವುದು ಅಗತ್ಯ. ಆದಾಗ್ಯೂ ಹಣದ ಬಗ್ಗೆ ಮಾತನಾಡುವಾಗ ನಿಮ್ಮ ಮಗುವಿನ ವಯಸ್ಸು ಮತ್ತು ತಿಳುವಳಿಕೆಯನ್ನು ಗಮನದಲ್ಲಿಡಿ. ಕೆಲವು ಪರಿಕಲ್ಪನೆಗಳು ಚಿಕ್ಕ ಮಕ್ಕಳಿಗೆ ಗ್ರಹಿಸಲು ತುಂಬಾ ಕಷ್ಟವಾಗಬಹುದು. ಹೀಗಾಗಿ ನಿಮ್ಮ ಮಕ್ಕಳೊಂದಿಗೆ ತಾಳ್ಮೆಯಿಂದಿರಿ ಮತ್ತು ಅವರ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿ. ನಿಮ್ಮ ಮಕ್ಕಳು ರಾತ್ರೋರಾತ್ರಿ ಹಣಕಾಸು ತಜ್ಞರಾಗುತ್ತಾರೆ ಎನ್ನುವುದನ್ನು ನಿರೀಕ್ಷಿಸಬೇಡಿ. ಇಂದು ಮಕ್ಕಳ ದಿನವೂ ಆಗಿರುವುದರಿಂದ ಅವರಲ್ಲಿ ಆರ್ಥಿಕ ಶಿಸ್ತನ್ನು ಮೂಡಿಸುವುದು ಹೇಗೆ ಎನ್ನುವುದರ ಟಿಪ್ಸ್ ಇಲ್ಲಿದೆ.
ಹಣದ ಬಗ್ಗೆ ಧನಾತ್ಮಕ ಭಾವನೆ ತುಂಬಿ
ಹಣದ ಬಗ್ಗೆ ಋಣಾತ್ಮಕವಾಗಿ ಎಂದೂ ಮಕ್ಕಳ ಮುಂದೆ ಮಾತನಾಡಬೇಡಿ. ಹಣದ ಪ್ರಾಧಾನ್ಯತೆಯ ಬಗ್ಗೆ ವಿವರಿಸಿ. ಉತ್ತಮ ಜೀವನಕ್ಕೆ ಹಣ ಎಷ್ಟು ಅಗತ್ಯ ಎನ್ನುವುದರ ಬಗ್ಗೆ ಮಾತನಾಡಿ. ಹಣ ಸಂಪಾದನೆ, ಉಳಿತಾಯ ಮತ್ತು ಹೂಡಿಕೆಯಂತಹ ಮಾಹಿತಿಗಳನ್ನು ಸರಳವಾಗಿ ವಿವರಿಸಿ.
ಸೇವಿಂಗ್ಸ್ ಅಕೌಂಟ್ ಓಪನ್ ಮಾಡಿ
ಮಕ್ಕಳ ಹೆಸರಿನಲ್ಲಿ ಸೇವಿಂಗ್ಸ್ ಅಕೌಂಟ್ ಓಪನ್ ಮಾಡಿ. ಪೋಸ್ಟ್ ಆಫೀಸ್‌ನಲ್ಲಿಯೂ ಖಾತೆ ತೆರೆಯಬಹುದು. ಅದರಲ್ಲಿ ನಿಯಮಿತವಾಗಿ ಠೇವಣಿ ಇಡಲು ಹೇಳಿ. ನೀವು ಅವರ ಅಕೌಂಟ್‌ಗೆ ಹಣ ಹಾಕುವುದಕ್ಕಿಂತ ಈ ಕೆಲಸವನ್ನು ಸ್ವತಃ ಅವರೇ ನಿರ್ವಹಿಸಲಿ. ಇದರಿಂದ ಅವರಿಗೆ ಉಳಿತಾಯದ ಪ್ರಾಧಾನ್ಯತೆ ಅರಿವಾಗುತ್ತದೆ.
ಪಿಗ್ಗಿ ಬ್ಯಾಂಕ್ ಒದಗಿಸಿ
ಬ್ಯಾಂಕ್ ಅಕೌಂಟ್ ತೆರೆಯುವ ಹೊರತಾಗಿ ಮನೆಯಲ್ಲಿಯೇ ಉಳಿತಾಯ ಮಾಡಲು ಪಿಗ್ಗಿ ಬ್ಯಾಂಕ್‌ನಂತಹ ವ್ಯವಸ್ಥೆ ಜಾರಿಗೊಳಿಸಿ. ಭವಿಷ್ಯದ ಗುರಿಗಳಿಗಾಗಿ ಉಳಿತಾಯದ ಪ್ರಾಮುಖ್ಯತೆ ಮತ್ತು ಕಾಲಾನಂತರದಲ್ಲಿ ಸಣ್ಣ ಮೊತ್ತಗಳು ಹೇಗೆ ಉತ್ತಮ ಸಂಗ್ರಹವಾಗಿ ಬದಲಾಗಬಹುದು ಎಂಬುದರ ಪ್ರಾಕ್ಟಿಕಲ್ ಮಾಹಿತಿ ಮಕ್ಕಳಿಗೆ ನೀಡಿ. ಉದಾಹರಣೆಗೆ ಅವರು ಸೈಕಲ್‌ಗೆ ಬೇಡಿಕೆ ಇಟ್ಟರೆ ಕೂಡಲೆ ತಂದು ಕೊಡಬೇಡಿ. ಅವರ ಉಳಿತಾಯದ ಹಣದಿಂದ ಕಂಡುಕೊಳ್ಳುವ ಬಗ್ಗೆ ಪ್ರಸ್ತಾವಿಸಿ ಮತ್ತು ನಿರ್ದಿಷ್ಟ ಸಮಯದವರೆಗೆ ಹಣ ಉಳಿಸಿದರೆ ಹೇಗೆ ನಮ್ಮ ಅಗತ್ಯಗಳನ್ನು ಪೂರೈಸಬಹುದು ಎನ್ನುವದನ್ನು ಅವರಿಗೆ ಮನದಟ್ಟು ಮಾಡಿ.
ಹೂಡಿಕೆಯ ಪ್ರಾಧಾನ್ಯತೆ
ಹೂಡಿಕೆಯ ಪ್ರಾಧಾನ್ಯತೆಯ ಬಗ್ಗೆ ಮಕ್ಕಳಿಗೆ ವಿವರಿಸಿ. ಸಂಪತ್ತು ವೃದ್ಧಿಗೆ ಹೂಡಿಕೆ ಎನ್ನುವುದು ಅತ್ಯುತ್ತಮ ಮಾರ್ಗ ಎನ್ನವುದನ್ನು ತಿಳಿಸಿ. ಹೂಡಿಕೆಗೆ ವಿವಿಧ ವಿಧಾನಗಳಿದ್ದರೂ ಸುರಕ್ಷಿತ ಮಾರ್ಗವನ್ನು ಆಯ್ದುಕೊಳ್ಳುವ ಬಗ್ಗೆ ತಿಳಿಸಿ.
ಬಜೆಟ್ ತಯಾರಿಸುವುದನ್ನು ಹೇಳಿಕೊಡಿ
ಬಜೆಟ್ ಯಾಕೆ ಮುಖ್ಯ ಎನ್ನುವದರ ಕುರಿತು ಮಾಹಿತಿ ನೀಡಿ. ಇದಕ್ಕಾಗಿ ಕೇಂದ್ರ, ರಾಜ್ಯ ಸರ್ಕಾರಗಳು ಮಂಡಿಸುವ ಬಜೆಟ್‌ನ ಉದಾಹರಣೆ ಕೊಡಬಹುದು. ಬಳಿಕ ಅವರೇ ಬಜೆಟ್ ತಯಾರಿಸಲಿ. ಅವರ ಬಳಿ ಇರುವ ಪಾಕೆಟ್ ಮನಿ, ಉಡುಗೊರೆ ಸಿಕ್ಕ ಹಣವನ್ನು ಆಟದ ವಸ್ತು ಖರೀದಿ, ತಿಂಡಿ ಖರೀದಿ ಮತ್ತು ಉಳಿತಾಯಕ್ಕೆ ಹೇಗೆ ಹಂಚಿಕೆ ಮಾಡಬಹುದು ಎನ್ನುವುದನ್ನು ಅವರೇ ಹಂಚಿಕೆ ಮಾಡಿಕೊಳ್ಳಲಿ. ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ.
ಇದನ್ನೂ ಓದಿ: Money Guide: ಕೋಟ್ಯಧಿಪತಿಯಾಗಬೇಕೆ? ಈ ಯೋಜನೆಯಲ್ಲಿ ಹೂಡಿಕೆ ಮಾಡಿ
ಪ್ರಾಕ್ಟಿಕಲ್ ನಾಲೆಡ್ಜ್ ಒದಗಿಸಿ
ನೀವು ಮಕ್ಕಳಿಗೆ ವಿವರಣೆ ನೀಡುವುದರ ಜತೆಗೆ ಅವರಿಗೆ ಪ್ರಾಕ್ಟಿಕಲ್ ಅನುಭವ ಒದಗಿಸಿ. ಇದಕ್ಕಾಗಿ ನಿಮ್ಮ ಮನೆಯದ್ದೇ ಉದಾಹರಣೆ ಕೊಡಬಹುದು. ಮನೆ ಸಾಮಗ್ರಿ ಖರೀದಿಗೆ ಹೋದಾಗ ಕೈಯಲ್ಲಿ ಇರುವ ಹಣದಿಂದ ಹೇಗೆ ನಮ್ಮ ಅಗತ್ಯಗಳನ್ನು ಪೂರೈಸಬಹುದು ಎನ್ನುವುದು ಅವರ ಗಮನಕ್ಕೆ ಬರಲಿ. ನೆನಪಿಡಿ ಮಕ್ಕಳು ನಿಮ್ಮನ್ನು ನೋಡಿ ಕಲಿಯುವುದರಿಂದ, ನಿಮ್ಮ ಪ್ರಭಾವ ಹೆಚ್ಚೇ ಬೀರುವುದರಿಂದ ನೀವು ಕೂಡ ಆರ್ಥಿಕ ಶಿಸ್ತನ್ನು ರೂಢಿಸಿಕೊಳ್ಳಿ. ಬಿಲ್‌ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಿ, ಭವಿಷ್ಯಕ್ಕಾಗಿ ಉಳಿತಾಯ ಮಾಡಿ. ಎಲ್ಲದಕ್ಕಿಂತ ಮುಖ್ಯವಾಗಿ ಹಾಸಿಗೆ ಇದ್ದಷ್ಟೇ ಕಾಲು ಚಾಚುವುದನ್ನು ರೂಢಿಸಿಕೊಳ್ಳಿ. ಅಂದರೆ ನಿಮ್ಮ ಸಾಮರ್ಥ್ಯಕ್ಕೆ ಮೀರಿದ ವಸ್ತುಗಳ ಖರೀದಿಗೆ ಮುಂದಾಗಬೇಡಿ. ಜತೆಗೆ ಹಣದುಬ್ಬರದ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳಲು ಮಕ್ಕಳಿಗೆ ಸಹಾಯ ಮಾಡಿ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ