Site icon Vistara News

Money Guide: ಈಗಷ್ಟೇ ಕೆಲಸಕ್ಕೆ ಸೇರಿದವರೂ ಹಣ ಉಳಿಸಬಹುದು; ಇಲ್ಲಿವೆ ಸರಳ ಸೂತ್ರಗಳು

savings

ನೀವು ಹೊಸದಾಗಿ ಮೊದಲ ಸಂಬಳ (First salary) ಪಡೆಯುತ್ತಿರುವವರೇ? ನೀವು ಮಿಲೇನಿಯಲ್ಸ್ (millennials) ಮತ್ತು GenZನವರಾ? ಹಾಗಿದ್ದರೆ ನೀವು ಚಿಂತಿಸಬೇಕಾದ್ದು ಇಲ್ಲಿದೆ. ಭವಿಷ್ಯದ ಗುರಿಗಳಿಗಾಗಿ ನೀವು ಯೋಜಿಸುತ್ತಿದ್ದರೆ ಹಣವನ್ನು ಉಳಿಸುವುದು (savings) ಬಹಳ ಮುಖ್ಯ. ಆದರೂ ಆಧುನಿಕ ಯುವ ಪೀಳಿಗೆ ಅಂದರೆ ಮಿಲೇನಿಯಲ್ಸ್ ಮತ್ತು Generation Z ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಇವರು ಭವಿಷ್ಯದ ಆರ್ಥಿಕ ಗುರಿಗಳನ್ನು ಕೇಂದ್ರೀಕರಿಸುವ ಬದಲು ಆ ಕ್ಷಣದ ಸಂತೋಷದ ಬಗ್ಗೆ ಹೆಚ್ಚಿನ ಗಮನವಿಡುತ್ತಾರೆ. ಉಳಿಸಲು ಬೇಕಾದಷ್ಟು ಹಣವಿಲ್ಲ ಎಂದು ಇವರು ಹೇಳುತ್ತಾರೆ. ಆದರೆ ಇದು ನಿಜವಲ್ಲ.

ಸಂಬಳದ ಅಥವಾ ಬೇರೆ ಆದಾಯಗಳ ಮೂಲಕ ಗಳಿಸಿದ ಹಣವನ್ನು ಉಳಿಸಲು (saving tips) ಬಹಳ ಪ್ರಯತ್ನಗಳು ಬೇಕು. ನಮ್ಮ ಸುತ್ತಲಿನ ಪರಿಸರ ವ್ಯವಸ್ಥೆ ಖಂಡಿತವಾಗಿಯೂ ಪ್ರಲೋಭನಕಾರಿ. “ಎರಡನ್ನು ಖರೀದಿಸಿ ಮೂರು ಉಚಿತ ಪಡೆಯಿರಿ” ಅಥವಾ “ಫ್ಲಾಟ್ 70 ಶೇಕಡಾ ರಿಯಾಯಿತಿ”ಯಂತಹ ಕೊಡುಗೆಗಳ ಆಮಿಷ ಮೀರುವುದು ಖಂಡಿತವಾಗಿಯೂ ಕಷ್ಟ. ಅದೇನೇ ಇದ್ದರೂ, ಹಣವನ್ನು ಉಳಿಸುವ ಅಭ್ಯಾಸಗಳನ್ನು (saving practices) ಬೆಳೆಸಿಕೊಳ್ಳುವುದರತ್ತ ನಾವು ಮನ ಮಾಡಬೇಕು. ಮಿಲೇನಿಯಲ್ಸ್ ಮತ್ತು GenZ ಹಣವನ್ನು ಉಳಿಸುವಲ್ಲಿ ಗಮನಿಸಬೇಕಾದ ಕೆಲವು ಸೂತ್ರಗಳು ಇಲ್ಲಿವೆ:

  1. ಬಜೆಟ್ ಮಾಡಿಕೊಳ್ಳಿ, ಅದಕ್ಕೇ ಅಂಟಿಕೊಳ್ಳಿ

ಹಣವನ್ನು ಉಳಿಸುವ ಮೊದಲ ಹೆಜ್ಜೆ ಬಜೆಟ್ ಮಾಡಿಕೊಳ್ಳುವುದು. ನಿಮ್ಮ ಮಾಸಿಕ ಆದಾಯವನ್ನು ಅವಲಂಬಿಸಿ, ಬಜೆಟ್ ತಯಾರಿಸಲು ಮರೆಯದಿರಿ. ನಿಮ್ಮ ಆದಾಯದ ಕನಿಷ್ಠ 20 ಪ್ರತಿಶತವನ್ನು ಪ್ರತ್ಯೇಕ ಖಾತೆಯಲ್ಲಿ ಕಟ್ಟುನಿಟ್ಟಾಗಿ ಇಡಬೇಕು. ಆನ್‌ಲೈನ್‌ನಲ್ಲಿ ಲಭ್ಯವಿರುವ ಯಾವುದೇ ಅಪ್ಲಿಕೇಶನ್‌ಬಳಸಿಕೊಂಡು ನಿಮ್ಮ ದೈನಂದಿನ ಹಣಕಾಸು ವೆಚ್ಚಗಳನ್ನು ಟ್ರ್ಯಾಕ್ ಮಾಡಿ, ಅಗತ್ಯವಿದ್ದರೆ ತಿದ್ದುಪಡಿಗಳನ್ನು ಮಾಡಿ. ಆರಂಭದಲ್ಲಿ ನೀವು ಬಜೆಟ್‌ನೊಳಗೆ ಬದುಕಲು ಇಷ್ಟಪಡದಿರಬಹುದು. ಆದರೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಕಾಲಾನಂತರದಲ್ಲಿ ಹೆಚ್ಚಾದಂತೆ, ನೀವು ಆ ಸಾಧನೆಯನ್ನು ಸುಖವನ್ನು ಅನುಭವಿಸುವಿರಿ.

  1. ಆರು ತಿಂಗಳ ಖರ್ಚುಗಳನ್ನು ಸ್ಕ್ಯಾನ್ ಮಾಡಿ

ಹೆಚ್ಚು ಉಳಿಸಲು ನೀವು ಎರಡು ಮಾರ್ಗಗಳಲ್ಲಿ ಒಂದನ್ನು ಅಳವಡಿಸಿಕೊಳ್ಳಬಹುದು. ಒಂದೋ ಹೆಚ್ಚು ಸಂಪಾದಿಸಿ ಅಥವಾ ಕಡಿಮೆ ಖರ್ಚು ಮಾಡಿ. ಹಣವನ್ನು ಗಳಿಸುವುದು ನೆಟ್‌ಫ್ಲಿಕ್ಸ್ ನೋಡುವಷ್ಟು ಸುಲಭವಲ್ಲ. ಆದ್ದರಿಂದ, ಸ್ಪಷ್ಟ ಗಮನವು ಎರಡನೆಯದರ ಮೇಲೆ ಬೀಳುತ್ತದೆ. ಅಂದರೆ ಕಡಿಮೆ ಖರ್ಚು ಮಾಡುವುದು ಅಥವಾ ಲೆಕ್ಕಾಚಾರದ ರೀತಿಯಲ್ಲಿ ಖರ್ಚು ಮಾಡುವುದು.

ಕನಿಷ್ಠ ಕಳೆದ ಆರು ತಿಂಗಳ ನಿಮ್ಮ ವೆಚ್ಚಗಳ ಮಾದರಿಯನ್ನು ಗಮನಿಸಿ. ಅದರಿಂದ ನೀವು ಎಲ್ಲಿ ವೆಚ್ಚ ಮೊಟಕುಗೊಳಿಸಬಹುದು ಎಂಬುದನ್ನು ಕಾಣಬಹುದು. ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ಆಗಾಗ್ಗೆ ಬಳಸುವ ಎಲ್ಲರಿಗೂ ಇದು ಅತ್ಯಂತ ಉಪಯುಕ್ತ. ಕಳೆದ ಕೆಲವು ತಿಂಗಳುಗಳ ಸ್ಟೇಟ್‌ಮೆಂಟ್‌ ಹೊರತೆಗೆದು ನೋಡಿದರೆ ನೀವು ಹೆಚ್ಚುವರಿ ಹಣವನ್ನು ಎಲ್ಲಿ ಖರ್ಚು ಮಾಡಿದ್ದೀರಿ ಎಂದು ನಿಮಗೆ ತಿಳಿಯುತ್ತದೆ!

ಅನಗತ್ಯ ಖರ್ಚು ಎಂದರೇನು? ನೀವು ಸುಲಭವಾಗಿ ತಪ್ಪಿಸಬಹುದಾದ ವೆಚ್ಚಗಳು ಇವು. ಉದಾಹರಣೆಗೆ, ನೀವು ಕೇವಲ 600 ಮೀಟರ್ ದೂರ ಪ್ರಯಾಣಿಸಲು ರಿಕ್ಷಾ ಹಿಡಿಯುವುದು; ಅಥವಾ 2.5 ಕಿಮೀ ಪ್ರಯಾಣಕ್ಕಾಗಿ ಓಲಾ ಅಥವಾ ಉಬರ್ ಬುಕ್ ಮಾಡುವುದು ಇತ್ಯಾದಿ. ಈ ಮೊತ್ತವು ಚಿಕ್ಕದಾಗಿ ಕಾಣಿಸಬಹುದು. ಆದರೆ ಪ್ರತಿ ಬಾರಿ ಇದೇ ಕೆಲಸವನ್ನು ನೀವು ಮಾಡಿದಾಗ ಒಟ್ಟು ಮೊತ್ತ ಬಹಳಷ್ಟು ಹೆಚ್ಚಾಗುತ್ತದೆ. 80 ರೂ.ಗೆ 14 ಸಲ ಉಬರ್ ರೈಡ್‌ ಮಾಡಿದರೆ ಅದರ ಮೊತ್ತ 1000ಕ್ಕಿಂತ ಅಧಿಕವಾಗುತ್ತದೆ. ನೀವು ಸ್ವಲ್ಪ ಜಾಗರೂಕರಾಗಿದ್ದರೆ ಈ ಮೊತ್ತವನ್ನು ಸುಲಭವಾಗಿ ಉಳಿಸಬಹುದಿತ್ತು. ಆ ಮೊತ್ತದೊಂದಿಗೆ ನೀವು SIP ಅನ್ನು ಪ್ರಾರಂಭಿಸಬಹುದಿತ್ತು.

  1. ಸ್ವಯಂಚಾಲಿತ ಪೇಮೆಂಟ್‌ಗಳು

ನೀವು ಪ್ರತಿದಿನ ಬಳಸುವ ಪಾಪ್-ಅಪ್ ಟೋಸ್ಟರ್ ಅಥವಾ ನಿಮಿಷಗಳಲ್ಲಿ ಆಹಾರವನ್ನು ಬಿಸಿ ಮಾಡುವ ಉಪಯುಕ್ತ ಮೈಕ್ರೋವೇವ್ ಓವನ್‌ ಗಮನಿಸಿರಬಹುದು. ಕಡಿಮೆ ಮಾನವ ಹಸ್ತಕ್ಷೇಪದ ಇಂತಹ ಅಭ್ಯಾಸಗಳು ವಾಸ್ತವವಾಗಿ ಜೀವನವನ್ನು ಸುಲಭಗೊಳಿಸಿವೆ. ಹಣಕಾಸಿನ ಹೂಡಿಕೆಯ ವಿಷಯದಲ್ಲೂ ಇದನ್ನೇ ಏಕೆ ಕಾರ್ಯಗತಗೊಳಿಸಬಾರದು? ಅಂದರೆ ಉಳಿತಾಯವನ್ನೂ ಸ್ವಯಂಚಾಲಿತವಾಗಿ ಮಾಡಿ. ನಿಮ್ಮ ಮಾಸಿಕ SIPಗಳು ಸ್ವಯಂ- ಡೆಬಿಟ್ ಆಗುವಂತೆ ನಿಮ್ಮ ಬ್ಯಾಂಕ್‌ಗೆ ಸೂಚಿಸಿ.

ಇದು ಯಾಕೆ ಮುಖ್ಯ ಎಂದರೆ, ಪಾವತಿಗೆ ಡೆಡ್‌ಲೈನ್‌ಗಿಂತ ಒಂದೊಂದು ದಿನ ಹೆಚ್ಚಾದರೂ ಬಡ್ಡಿ ಅಥವಾ ದಂಡ ಬೀಳುತ್ತದೆ. ಸ್ವಯಂ ಪಾವತಿ ಇದ್ದರೆ ತನ್ನಷ್ಟಕ್ಕೇ ಕಡಿತಗೊಳ್ಳುತ್ತದೆ. 12 ತಿಂಗಳ ಅಂತ್ಯದಲ್ಲಿ ನೀವು ವೆಚ್ಚ ಮಾಡಿದ ಒಟ್ಟು ಮೊತ್ತವನ್ನು ನೀವು ಗಮನಿಸಬಹುದು.

ಹಣವನ್ನು ಉಳಿಸಲು ಕೂಡ ಅದನ್ನು ಗಳಿಸುವಷ್ಟೇ ಶ್ರಮ ಬೇಕಾಗುತ್ತದೆ. ಮೇಲಿನ ಸಲಹೆಗಳನ್ನು ಜಾರಿ ಮಾಡಲು ಆಳವಾದ ಆರ್ಥಿಕ ಜ್ಞಾನದ ಅಗತ್ಯವಿಲ್ಲ. ನೀವು ಮಾಡಬೇಕಾಗಿರುವುದು ನಿಮ್ಮ ಹಣಕಾಸಿನ ಯೋಜನೆಯಲ್ಲಿ ಸ್ವಲ್ಪ ಜಾಗರೂಕರಾಗಿರುವುದು ಮತ್ತು ಈ ಮೂಲಕ ಸುರಕ್ಷಿತ ಭವಿಷ್ಯವನ್ನು ಖಚಿತಪಡಿಸಿಕೊಳ್ಳುವುದು.

ಇದನ್ನೂ ಓದಿ: Money Guide: ಪಿಪಿಎಫ್‌, ಅಂಚೆ ಕಚೇರಿ; ಮಧ್ಯಮ ವರ್ಗದವರ ಹೂಡಿಕೆಗೆ ಇವು ಬೆಸ್ಟ್‌ ಪ್ಲಾನ್‌ಗಳು!

Exit mobile version