Site icon Vistara News

ನಿಮಗೆ ನಿಜವಾಗ್ಲೂ ದುಡ್ಡು ಮಾಡಬೇಕೆಂಬ ಆಸೆ ಇದ್ಯಾ? ಹಾಗಿದ್ರೆ ವಾರೆನ್‌ ಬಫೆಟ್‌ ಅವರ ಈ ರೋಚಕ ಕಥೆ ಓದಿ ಸಾಕು!

warren buffet

ರಾಜೇಂದ್ರ ಭಟ್ ಕೆ. ಕಾರ್ಕಳ

ರಾಜೇಂದ್ರ ಭಟ್

‘ನನ್ನ ಜೀವನದ ಯಶಸ್ಸಿನ ಗುಟ್ಟು ಏನೆಂದರೆ Hoping for the BEST and preparing for the WORST!’
ಈ ಮಾತುಗಳನ್ನು ಹೇಳಿದ್ದು ಜಗತ್ತಿನ ನಾಲ್ಕನೇ ಅತ್ಯಂತ ಶ್ರೀಮಂತ ವ್ಯಕ್ತಿ!
ವರ್ತಮಾನದಲ್ಲಿ ಜಗತ್ತಿನ ಮಹೋನ್ನತ ಇನ್ವೆಸ್ಟರ್!‌ ಅಮೆರಿಕದ 75 ಬೃಹತ್ ಹೂಡಿಕೆ ಕಂಪೆನಿಗಳ ಸಿಇಓ!
ಆತ ಸ್ಥಾಪನೆ ಮಾಡಿದ ಕಂಪೆನಿಗಳ ಒಟ್ಟು ಮೌಲ್ಯ 9630 ಕೋಟಿ ಅಮೆರಿಕನ್ ಡಾಲರ್!
ಆತ ಸ್ಥಾಪನೆ ಮಾಡಿದ ‘ಬರ್ಕ್‌ಶೈರ್‌ ಹಾತ್ ವೇ ಕಂಪೆನಿ’ ಇಂದು ಜಗತ್ತಿನ ಅತೀ ದೊಡ್ಡ ಇನ್ವೆಸ್ಟ್ ಕಂಪೆನಿ!ಆತನೇ ಶೂನ್ಯದಿಂದ ತನ್ನ ಸಾಮ್ರಾಜ್ಯವನ್ನು ಕಟ್ಟಿದ ವಾರೆನ್ ಬಫೆಟ್!

ಆತ ಅಷ್ಟೊಂದು ದುಡ್ಡು ಮಾಡಿದ್ದು ಹೇಗೆ?

ವಾರೆನ್‌ ಬಫೆಟ್‌ ಮಗುವಾಗಿದ್ದಾಗ.

ನಾನಿಂದು ಬಹಳ ದೊಡ್ಡ ದೊಡ್ಡ ಫಿಗರ್ಸ್ ಹೇಳಿ ನಿಮ್ಮನ್ನು ಬೆಚ್ಚಿ ಬೀಳಿಸುವ ಕೆಲಸ ಮಾಡಲಾರೆ. ಯಾಕೆಂದರೆ ಆತನ ಯಶೋಗಾಥೆ ಆರಂಭ ಆಗುವುದು ಸೊನ್ನೆಯಿಂದ! ಆತ ಹೇಗೆ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಆದರು? ಆತ ಇಟ್ಟಿಗೆಯ ಮೇಲೆ ಇಟ್ಟಿಗೆ ಜೋಡಿಸುತ್ತ ಉದ್ಯಮ ಸಾಮ್ರಾಜ್ಯ ಕಟ್ಟಿದ್ದು ಹೇಗೆ? ಇಷ್ಟು ಮಾತ್ರ ನಿಮಗೆ ಹೇಳುವುದು ನನ್ನ ಉದ್ದೇಶ.

೧)ಅವನು ಗಣಿತದಲ್ಲಿ ಬಹಳ ಬುದ್ಧಿವಂತ ಆಗಿದ್ದ. ಅವನ ಪ್ರೋಗ್ರೆಸ್ ಕಾರ್ಡ್‌ನಲ್ಲಿ ಶಿಕ್ಷಕರು ಬರೆಯುತ್ತಿದ್ದ ಕಾಮೆಂಟ್ Good in Maths, Fit for INVESTOR!

೨) ತನ್ನ ತಂದೆಯ ಸಣ್ಣ ಬ್ರೋಕರೇಜ್ ಅಂಗಡಿಯಲ್ಲಿ ಕೂತು ಗ್ರಾಹಕರ ಮಾತುಗಳನ್ನು ತಾಳ್ಮೆಯಿಂದ ಆಲಿಸುತ್ತಿದ್ದರು. ಬಿಡುವಿನ ವೇಳೆಯಲ್ಲಿ ಪೇಪರ್ ಮಾರುವುದು, ಬಾಟಲ್ ಸಂಗ್ರಹಿಸಿ ಮಾರುವುದು, ಕಾರ್ ವಾಶ್ ಮಾಡುವುದು…. ಮೊದಲಾದ ಸಣ್ಣ ಸಣ್ಣ ಕೆಲಸಗಳನ್ನು ಮಾಡಿ ಸ್ವಲ್ಪ ದುಡ್ಡು ಗಳಿಸುತ್ತಿದ್ದರು.

೩) ಏಳನೆಯ ತರಗತಿಯಲ್ಲಿ ಇದ್ದಾಗಲೇ ಆತ ಓದಿ ಮುಗಿಸಿದ ಪುಸ್ತಕ – One thousand ways to make one thousand dollars!

೪) ತನ್ನ ಹತ್ತನೆಯ ವಯಸ್ಸಿಗೆ ನ್ಯೂಯಾರ್ಕ್ ನಗರದ ಸ್ಟಾಕ್ ಎಕ್ಸ್‌ಚೇಂಜ್ ಪ್ರಧಾನ ಕಚೇರಿಗೆ ಹೋಗಿ ಬಂದಿದ್ದರು!

೫) ತನ್ನ ಹನ್ನೊಂದನೇ ವಯಸ್ಸಿಗೆ ಒಂದು ಕಂಪೆನಿಯ ಮೂರು ಶೇರ್‌ಗಳನ್ನು ಖರೀದಿ ಮಾಡಿದ್ದರು!

೬) ಹದಿನಾರನೆಯ ವಯಸ್ಸಿಗೆ ಆದಾಯ ತೆರಿಗೆ ಕಟ್ಟಿದ್ದರು!

೭)ಹೈಸ್ಕೂಲ್ ಓದುವಾಗ 25 ಡಾಲರ್ ವೆಚ್ಚದ ‘ಪಿನ್ ಬಾಲ್ ಮೆಷಿನ್ ‘ ಮಾರಾಟ ಮಾಡಿ ಹಣ ಗಳಿಸುತ್ತಿದ್ದರು!

೮) ತನ್ನ ಮೂವತ್ತನೆ ವಯಸ್ಸಿನ ಒಳಗೆ ಕೋಟಿ ಡಾಲರ್ ಸಂಪಾದನೆಯನ್ನು ಮಾಡುತ್ತೇನೆ. ಇಲ್ಲದಿದ್ದರೆ ಎತ್ತರವಾದ ಕಟ್ಟಡದ ಮೇಲಿಂದ ಜಿಗಿದು ಖಂಡಿತವಾಗಿ ಆತ್ಮಹತ್ಯೆ ಮಾಡುತ್ತೇನೆ ಎಂದು ತನಗೆ ತಾನೇ ಸವಾಲು ಹಾಕಿದ್ದರು ಮತ್ತು ಆ ಸವಾಲನ್ನು ಗೆದ್ದು ತೋರಿಸಿದ್ದರು!

೯) ಪದವಿ ಮುಗಿಸಿ ಕಾಲೇಜಿನಿಂದ ಹೊರಬರುವಾಗ ಅವನ ಖಾತೆಯಲ್ಲಿ 9,800 ಡಾಲರ್ ಉಳಿತಾಯ ಇತ್ತು. ಅದರ ಜೊತೆ 40 ಎಕರೆ ಜಮೀನು ಕೂಡ ಖರೀದಿ ಮಾಡಿದ್ದರು!

೧೦)1955ರ ಹೊತ್ತಿಗೆ ಅವರು ತನ್ನ ‘ಬರ್ಕ್‌ಶೈರ್ ಹಾತ್ ವೇ’ ಎಂಬ ಹೆಸರಿನ ಕಂಪೆನಿಯನ್ನು ತೆರೆದರು. ಅದರ ಮೂಲಕ ತನ್ನ ಗ್ರಾಹಕರ ವಿಶ್ವಾಸವನ್ನು ಗೆದ್ದುಕೊಂಡರು. ಹೆಚ್ಚು ದುಡ್ಡು ಹೂಡಿಕೆ ಮಾಡುವಂತೆ ನಾಗರಿಕರನ್ನು ಮೋಟಿವೇಟ್ ಮಾಡಿದರು. ಕಂಪೆನಿಯ ಅರ್ಧವಾರ್ಷಿಕ ಮತ್ತು ವಾರ್ಷಿಕ ಬ್ಯಾಲೆನ್ಸ್ ಶೀಟ್‌ಗಳನ್ನು ಪಾರದರ್ಶಕವಾಗಿ ಪ್ರಕಟಿಸಿದರು. ಎಲ್ಲ ವ್ಯವಹಾರವನ್ನು ಬ್ಯಾಂಕ್ ಖಾತೆಯ ಮೂಲಕವೇ ನಡೆಸಿದರು.

೧೧) ಕಂಪೆನಿ ಸಿಇಒ ಆಗಿ ತಾನು ಅತ್ಯಂತ ಕಡಿಮೆ ಸಂಬಳ ತೆಗೆದುಕೊಳ್ಳುತ್ತಿದ್ದರು. ಇಂದಿಗೂ ಅವರ ವಾರ್ಷಿಕ ಸಂಬಳ ಒಂದು ಲಕ್ಷ ಡಾಲರ್ ಮಾತ್ರ!

೧೨) ಉದ್ಯೋಗಿಗಳಿಗೆ ಉತ್ತಮ ಸಂಬಳ ಕೊಡುತ್ತಿದ್ದರು. ಆತನ ಕಂಪನಿಯಲ್ಲಿ ಇರುವ ಒಟ್ಟು ಉದ್ಯೋಗಿಗಳ ಸಂಖ್ಯೆ ನಾಲ್ಕು ಲಕ್ಷ ! ಅವರ ಪ್ರಕಾರ ಒಳ್ಳೆಯ ಸಂಬಳ ಕೊಡುವ ಕಂಪೆನಿಗೆ PRO ಅಗತ್ಯ ಇಲ್ಲ!

೧೩) ಆತನ ಕಂಪೆನಿಯು ಆರಂಭದಿಂದಲೂ ಪ್ರತೀ ವರ್ಷ 19% ವ್ಯವಹಾರ ಬೆಳವಣಿಗೆ ಹೊಂದಿದೆ. ಯಾವ ಬಿಕ್ಕಟ್ಟು ಬಂದರೂ ಲಾಭಾಂಶ ಕಡಿಮೆ ಆಗಿಲ್ಲ!

೧೪) ಬಹಳ ಸರಳವಾಗಿ ಬದುಕುವುದನ್ನು ಅವರು ಅಭ್ಯಾಸ ಮಾಡ್ಕೊಂಡಿದ್ದಾರೆ. 1967ರಲ್ಲಿ ಖರೀದಿಸಿದ ಪುಟ್ಟದಾದ ಮನೆಯಲ್ಲಿಯೇ ಇಂದಿಗೂ ಇದ್ದಾರೆ. ಇವತ್ತಿಗೂ ಅವರ ಹತ್ತಿರ ಆಂಡ್ರಾಯ್ಡ್ ಮೊಬೈಲ್ ಇಲ್ಲ. ಲ್ಯಾಂಡ್‌ ಫೋನ್ ಮೂಲಕ ಅವರ ಹೆಚ್ಚಿನ ವ್ಯವಹಾರಗಳು ನಡೆಯುತ್ತವೆ!

೧೫) ಶೇರ್ ಮಾರ್ಕೆಟಿನ ನಾಡಿಮಿಡಿತವನ್ನು ಬಹಳ ಚೆನ್ನಾಗಿ ಅಧ್ಯಯನ ಮಾಡಿದ್ದಾರೆ. ತನ್ನ ಪ್ರತೀ ಒಬ್ಬ ಗ್ರಾಹಕರಿಗೂ ಸರಿಯಾದ ಸಲಹೆ ಕೊಡುತ್ತಾರೆ ಮತ್ತು ಅವರಿಗೆ ಒಂದಿಷ್ಟೂ ನಷ್ಟ ಆಗದ ಹಾಗೆ ನೋಡಿಕೊಳ್ಳುತ್ತಾರೆ.

೧೬) ಅವರು ಈಗ ೭೫ ಹೂಡಿಕೆ ಕಂಪೆನಿಗಳ ಸರಣಿಯನ್ನು ಹೊಂದಿದ್ದಾರೆ. ಅವುಗಳಿಗೆ ವರ್ಷಕ್ಕೊಮ್ಮೆ ಮಾತ್ರ ಭೇಟಿ ಕೊಡುತ್ತಾರೆ. ಹೋದಾಗ ಹಿಂದಿನ ವರ್ಷದ ಬ್ಯಾಲೆನ್ಸ್ ಶೀಟ್ ಓದುತ್ತಾರೆ ಮತ್ತು ಮುಂದಿನ ವರ್ಷದ ಟಾರ್ಗೆಟ್ ನೀಡಿ ಹಿಂದೆ ಬರುತ್ತಾರೆ. ಮತ್ತೆ ಆ ಕಂಪೆನಿಗೆ ಭೇಟಿಯನ್ನು ಕೊಡುವುದು ಮುಂದಿನ ವರ್ಷವೇ!

೧೭) 60 ವರ್ಷಗಳಿಂದ ಅವರ ಬಿಸಿನೆಸ್ ಪಾರ್ಟನರ್ ಚಾರ್ಲಿ ಮುಂಗರ್ ಎಂಬವರು. ವಾರೆನ್ ಬಫೆಟ್ ಹಲವು ಬಾರಿ ತನ್ನ ಹೆಂಡತಿಯರನ್ನು ಬದಲಾವಣೆ ಮಾಡಿದ್ಧಾರೆ. ಆದರೆ ಅವರ ಬಿಸಿನೆಸ್ ಪಾರ್ಟ್ನರ್ ಬದಲಾಗಿಲ್ಲ! ವಾರೆನ್ ಬಫೆಟ್ ಪ್ರಕಾರ ಪಾರ್ಟನರ್ ಬದಲಾವಣೆ ಅಂದರೆ ತಮಗೆ ಒಬ್ಬ ಸ್ಪರ್ಧಿಯನ್ನು ಹುಟ್ಟಿಸಿದ ಹಾಗೆ. ಅಂದ ಹಾಗೆ ಚಾರ್ಲಿ ಮುಂಗರ್ ವಯಸ್ಸು ಈಗ 96 ವರ್ಷ! ಬಫೆಟ್ ವಯಸ್ಸು 92 ವರ್ಷ! ಅವರ ಮಧ್ಯೆ ಇದುವರೆಗೂ ಯಾವ ಭಿನ್ನಮತ ಬಂದಿಲ್ಲ. ಏಕೆಂದರೆ ಅವರು ವರ್ಷಕ್ಕೆ ಒಂದೆರಡು ಬಾರಿ ಮಾತ್ರ ಭೇಟಿ ಆಗುತ್ತಾರೆ!

ವಾರೆನ್‌ ಬಫೆಟ್‌ ಮತ್ತು ಚಾರ್ಲಿ ಮುಂಗರ್

೧೯) ಎಂಟು ವರ್ಷಗಳ ಹಿಂದೆ ಅವರಿಗೆ ಕ್ಯಾನ್ಸರ್ ಬಂದಿತ್ತು. ಆಗ “ನನ್ನ ಬಗ್ಗೆ ಯೋಚನೆ ಮಾಡಬೇಡಿ. ನಾನು ಖಂಡಿತ ಬದುಕಿ ಬರುವೆ “ಎಂದರು. ಹಾಗೆಯೇ ಕ್ಯಾನ್ಸರನ್ನು ಗೆದ್ದು ಬಂದರು. ಕ್ಯಾನ್ಸರ್ ಕೂಡ ಅವರ ಪ್ರಬಲ ಇಚ್ಛಾಶಕ್ತಿಗೆ ಶರಣಾಯಿತು!

೨೦) ಅವರ ಪ್ರಮುಖವಾದ ಸಲಹೆ ಏನೆಂದರೆ “ಯಾರು ಹಣವನ್ನು ಪ್ರೀತಿ ಮಾಡುವರೋ ಅವರು ಮಾತ್ರ ದುಡ್ಡನ್ನು ಗಳಿಸುತ್ತಾರೆ. ಜೀವನದ ಯಾವುದೇ ಹಂತದಲ್ಲಿ ಕೂಡ ರಿಸ್ಕ್ ತೆಗೆದುಕೊಳ್ಳಲು ಹಿಂಜರಿಕೆ ಮಾಡಬೇಡಿ. ನಾನು ಸಾಯುವ ದಿನ ಕೂಡ ಒಂದು ಹೊಸ ಕಂಪನಿಯನ್ನು ಆರಂಭಿಸಲು ಬಯಸುತ್ತೇನೆ!”

೨೧) ತಾನು ದಿನಕ್ಕೆ ಆರು ಗಂಟೆ ಓದುತ್ತೇನೆ ಎಂದು ಅವರು ಒಂದು ಸಂದರ್ಶನದಲ್ಲಿ ಹೇಳಿದ್ದಾರೆ. ಅವರ ದಿನಚರಿಯಲ್ಲಿ ಆರು ಗಂಟೆ ಅಧ್ಯಯನ ಇದ್ದೇ ಇರುತ್ತದೆ!

ದುಡ್ಡನ್ನು ಪ್ರೀತಿಸುವವರು ಮಾತ್ರ ದುಡ್ಡು ಮಾಡುತ್ತಾರೆ!

ಅವರ ಜೀವನದಲ್ಲಿ ಬಹಳ ಹಿಂದೆ ನಡೆದ ಒಂದು ಘಟನೆ ನಾನು ನಿಮಗೆ ಹೇಳಲೇ ಬೇಕು. ಅವರಿಗೆ ಒಬ್ಬಾಕೆ ಪ್ರೀತಿಯ ಮಗಳು. ಒಂದು ದಿನ ಅವಳು ತನ್ನ ಅಪ್ಪನ ಬಳಿ ಬಂದು “ಡ್ಯಾಡ್, ನನ್ನ ಕ್ಲಾಸ್ಮೆಟ್ಸ್‌ ಎಲ್ಲಾ ಯುರೋಪ್ ಪ್ರವಾಸಕ್ಕೆ ಹೋಗುತ್ತಿದ್ದಾರೆ. ನಾನೂ ಹೋಗಬೇಕು. ನನಗೆ 2000 ಡಾಲರ್ ಬೇಕು” ಎಂದಳು. ಬಫೆಟ್ ಅನುಮತಿ ಕೊಟ್ಟರು ಮತ್ತು ತನ್ನ ಚೆಕ್ ಪುಸ್ತಕ ಹೊರತೆಗೆದು ಅದರಲ್ಲಿ 2000 ಡಾಲರ್ ಚೆಕ್ ಬರೆದು ಅವಳಿಗೆ ಕೊಡುತ್ತಾರೆ.

ಆಗ ಅವರ ಆಪ್ತ ಸಹಾಯಕ ಹೇಳಿದರು. ” ಸರ್, ನಿಮ್ಮ ಕಪಾಟಿನಲ್ಲಿ ನಗದು ಹಣ ಇತ್ತು ಆಲ್ವಾ? ಮಗಳಿಗೆ ಕ್ಯಾಷ್ ಕೊಡಬಹುದಿತ್ತು. ಅಲ್ವಾ ಸರ್?”

ಅದಕ್ಕೆ ವಾರೆನ್ ಬಫೆಟ್ ಕೊಟ್ಟ ಉತ್ತರ ಕೇಳಿ: “ಅವಳು ನನ್ನ ಮಗಳಾಗಿ ಇರಬಹುದು. ಆದರೆ ಅವಳು ಎಲ್ಲರ ಹಾಗೆ ಬ್ಯಾಂಕಿಗೆ ಹೋಗಿ ಕ್ಯೂ ನಿಂತು ಕಷ್ಟ ಪಡಬೇಕು. ಆಗ ಅವಳಿಗೆ ದುಡ್ಡಿನ ಮಹತ್ವ ಅರ್ಥ ಆಗ್ತದೆ. ಆಗ ಅವಳು ಜಾಗ್ರತೆಯಿಂದ ಖರ್ಚು ಮಾಡುತ್ತಾಳೆ!”

ಇಂತಹ ಪಾಲಿಸಿಗಳಿಂದಲೆ ಈಗ ಅವರು ಭಾರೀ ಶ್ರೀಮಂತ ಆಗಿದ್ದಾರೆ. ಈಗ ಅಮೆರಿಕಾದಲ್ಲಿ ವಾರೆನ್ ಬಫೆಟ್ ಅತ್ಯಂತ ಜನಪ್ರಿಯ ವ್ಯಕ್ತಿ ಕೂಡ ಹೌದು. 42 ಲೇಖಕರು ಅವರ ಬಗ್ಗೆ ಪುಸ್ತಕಗಳನ್ನು ಬರೆದಿದ್ದಾರೆ!

ತನ್ನ ಸಾವಿನ ನಂತರ ತನ್ನ ಒಟ್ಟು ಆಸ್ತಿಯ 99% ಭಾಗವನ್ನು ಚಾರಿಟಿಯ ಉದ್ದೇಶಕ್ಕೆ ಬಳಸಬೇಕು ಎಂದು ಬಫೆಟ್ ತನ್ನ ವೀಲ್ ಬರೆದಿದ್ದಾರೆ ಮತ್ತು ಈಗಾಗಲೇ 24.6 ಬಿಲಿಯನ್ ಡಾಲರನಷ್ಟು ಹಣವನ್ನು ಬಿಲ್ ಗೇಟ್ಸ್ ಫೌಂಡೇಶನ್ ಸಂಸ್ಥೆಗೆ ಅವರು ದಾನ ಮಾಡಿದ್ದಾರೆ.

ಈಗ ಹೇಳಿ, ವಾರೆನ್ ಬಫೆಟ್ ಗ್ರೇಟ್ ಹೌದಾ?

(ಲೇಖಕರು ಗಣಿತ ಶಿಕ್ಷಕರು ಮತ್ತು ಜೇಸಿ ಅಂತಾರಾಷ್ಟ್ರೀಯ ತರಬೇತುದಾರರು)

Exit mobile version