ನೀವು ಒಂದು ಹೊಸ ಆಫೀಸಿಗೆ ಸೇರಿದ್ದೀರಿ ಎಂದಿಟ್ಟುಕೊಳ್ಳಿ. ಪ್ರತಿಯೊಬ್ಬರೂ ಅಪರಿಚಿತರೆ. ಯಾರಿಗೂ ನಿಮ್ಮ ಬಗ್ಗೆ ಗೊತ್ತಿಲ್ಲ, ನಿಮ್ಮ ಹಿನ್ನೆಲೆ ತಿಳಿದಿಲ್ಲ. ನಿಮಗೂ ಅಷ್ಟೆ, ಯಾರೊಬ್ಬರ ಹಿನ್ನೆಲೆ, ಅವರು ಹೇಗೆ, ಏನು? ಏನು ಕೆಲಸ ಮಾಡ್ತಾರೆ ಅಂತ ಗೊತ್ತಿರುವುದಿಲ್ಲ. ನಿಮಗೆ ಗೊತ್ತಿರುವುದು ನಿಮ್ಮನ್ನು ಅಪಾಯಿಂಟ್ ಮಾಡಿಕೊಂಡ ಎಚ್‍ಆರ್ ಟೀಮ್, ಇಂಟರ್ ವ್ಯೂ ಮಾಡಿದ ವಿಭಾಗ ಮುಖ್ಯಸ್ಥರು ಅಷ್ಟೆ. ನಿಮ್ಮ ಬಗ್ಗೆ ಗೊತ್ತಿರುವುದು ಅವರಿಗೆ ಮಾತ್ರ.
ಏನೋ ದೊಡ್ಡ ಹುದ್ದೆಗೆ ನೇಮಕ ಆಗಿದ್ದರೆ ಆಫೀಸಿನಲ್ಲಿ ಎಲ್ಲರನ್ನೂ ಕರೆದು ನಿಮ್ಮ ಪರಿಚಯ ಮಾಡಬಹುದು. ಅಥವಾ ಎಲ್ಲರೂ ಬಂದು ನಿಮ್ಮಲ್ಲಿ ತಮ್ಮ ಪರಿಚಯ ಹೇಳಿಕೊಳ್ಳಬಹುದು. ಆದರೆ, ಒಂದು ಸಾಮಾನ್ಯ ಹುದ್ದೆಗೆ ಜಾಯಿನ್ ಆಗಿದ್ದರೆ ಅಂಥ ಪ್ರಕ್ರಿಯೆಗಳು ಕಡಿಮೆ. ಹೆಚ್ಚೆಂದರೆ ನಿಮ್ಮನ್ನು ಸೇರಿಸಿಕೊಂಡಿರುವ ವಿಭಾಗದ ಒಬ್ಬ ಸೀನಿಯರ್ ಗೆ ಇಂಟ್ರೊಡ್ಯೂಸ್ ಮಾಡಬಹುದು ಅಷ್ಟೆ.
ಇಂಥ ಸಂದರ್ಭದಲ್ಲಿ ಕಚೇರಿಯ ಉಳಿದ ಸಿಬ್ಬಂದಿ ಜತೆಗೆ ಒಮ್ಮಿಂದೊಮ್ಮೆಗೇ ಬೆರೆಯೋದು ತುಂಬ ಕಷ್ಟಾನೆ. ಹೇಗಪ್ಪಾ ಮಾತಾಡೋದು? ಯಾರು ಹೇಗೋ ಏನೋ? ಮಾತಾಡಿದ್ರೆ ಮಾತಾಡಿಸ್ತಾರೋ ಇಲ್ಲವೋ? ಈ ಆಫೀಸಲ್ಲಿ ಹಾಗೆಲ್ಲ ಮಾತನಾಡಿದ್ರೆ ತಪ್ಪಾದೀತಾ ಅನ್ನೋ ಪ್ರಶ್ನೆಗಳೆಲ್ಲ ಮೂಡುತ್ತವೆ. ಕಚೇರಿಗಳಲ್ಲಿ ಕೆಲವು ವ್ಯಕ್ತಿಗಳು ಈ ತರ ಹೊಸದಾಗಿ ಬಂದವರನ್ನು ತಾವೇ ಮಾತನಾಡಿಸಿ ಧೈರ್ಯ ತುಂಬುವವರು ಇರುತ್ತಾರೆ. ಆದರೆ, ಅವರ ಸಂಖ್ಯೆ ಕಡಿಮೆ. ತಾವೇ ಬಂದು ಮಾತನಾಡಿಸಲಿ ಎನ್ನುವವರ ಪ್ರಮಾಣವೇ ಜಾಸ್ತಿ.
ನಾವು ಗಮನಿಸಿದ್ದೇವೆ, ಕೆಲವರು ಕಚೇರಿ ಸೇರಿ ಒಂದು ವಾರ ಆಗುವಷ್ಟರಲ್ಲಿ ಎಲ್ಲರ ಜತೆ ಬೆರೆತು ಹೋಗಿರುತ್ತಾರೆ. ಇನ್ನು ಕೆಲವರು ವರ್ಷಗಳ ಕಾಲ ಕೆಲಸ ಮಾಡಿದರೂ ಪಕ್ಕದ ಟೇಬಲ್‍ನವರ ಜತೆಗೂ ಮಾತನಾಡಿರುವುದಿಲ್ಲ.
ಹಾಗಿದ್ದರೆ, ಒಂದು ಕಚೇರಿಯಲ್ಲಿ ಹೊಸದಾಗಿ ಸೇರಿದಾಗ ಅಲ್ಲಿನ ಜನರ ಜತೆ ಕಮ್ಯುನಿಕೇಟ್ ಮಾಡುವುದು ಹೇಗೆ? ಇದಕ್ಕೆ ಸಿದ್ಧ ಸೂತ್ರ ಎನ್ನುವುದು ಯಾವುದೂ ಇಲ್ಲ. ಆದರೂ ಕೆಲವೊಂದು ಕಾಮನ್ ಪಾಯಿಂಟ್‍ಗಳಿವೆ. ಇವುಗಳನ್ನು ಸಕಾಲಿಕವಾಗಿ ಬಳಸಿದರೆ ಎಲ್ಲರ ಜತೆಗೆ ಬೆರೆಯುವುದಕ್ಕೆ ಒಂದು ಹಾದಿ ತೆರೆದುಕೊಳ್ಳಬಹುದು.
1. ಮುಗುಳ್ನಗುವೊಂದು ದಿವ್ಯ ಮಂತ್ರ
-ಪರಿಚಯ ಇದೆಯೋ ಇಲ್ಲವೋ ಗೊತ್ತಿಲ್ಲ, ಭಾಷೆ ಬರುತ್ತದೋ ಗೊತ್ತಿಲ್ಲ. ಯಾವ ಹುದ್ದೆಯೋ ಗೊತ್ತಿಲ್ಲ, ಯಾವ ಊರೋ ಗೊತ್ತಿಲ್ಲ.. ಹೀಗೆ ಏನೇನೂ ಗೊತ್ತಿಲ್ಲದಿದ್ದರೂ ಸುಮ್ಮನೆ ಏನೂ ಇಲ್ಲದೆ ಕಮ್ಯುನಿಕೇಟ್ ಮಾಡಬಲ್ಲ ದಿವ್ಯಾಸ್ತ್ರವೊಂದಿದೆ. ಅದುವೇ ಮುಗುಳುನಗು. ಒಂದು ಶಬ್ದ ಕೂಡಾ ಮಾತನಾಡದೆ ಹತ್ತಿರವಾಗಿಸಬಲ್ಲ ಶಕ್ತಿ ಇದಕ್ಕಿದೆ. ಎಲ್ಲರಿಗೂ ಒಂದು ಸಣ್ಣ ನಗು ಹಂಚಿಬಿಟ್ಟರೆ ಅದು ನಾವು ಕಮ್ಯುನಿಕೇಟ್ ಮಾಡಲು ಉತ್ಸಾಹ ಹೊಂದಿದ್ದೇವೆ ಎನ್ನುವುದನ್ನು ತೋರಿಸುತ್ತದೆ. ಕನಿಷ್ಠ ನಾಲ್ಕನೇ ಮುಗುಳ್ನಗೆಗಾದರೂ ಒಂದು ಮಾತಿನ ಹಾದಿ ತೆರೆದುಕೊಳ್ಳುತ್ತದೆ.
2. ಹಾಯ್ ಎನ್ನುವ ಎರಡಕ್ಷರ
ಕಚೇರಿಯಲ್ಲಿ ಯಾರೇ ಕಂಡರೂ ಹಾಯ್ ಅಂತಲೋ, ಸಮಯಕ್ಕೆ ತಕ್ಕಂತೆ ಗುಡ್ ಮಾರ್ನಿಂಗ್, ಗುಡ್ ಆಫ್ಟರ್ ನೂನ್ ಅಂತಲೋ ಹೇಳಿದರೆ ಒಂದೆರಡು ದಿನ ಬಿಟ್ಟು ಅದು ಮತ್ತೊಂದು ಕಡೆಯಿಂದ ರೆಸಿಪ್ರೊಕೇಟ್ ಆಗುತ್ತದೆ. ಯಾವುದೇ ವ್ಯಕ್ತಿಗೆ ನೀವು ಬಿಟ್ಟೂ ಬಿಡದೆ ನಾಲ್ಕು ದಿನ ಗುಡ್ ಮಾರ್ನಿಂಗ್ ಹೇಳಿದರೆ ಐದನೇ ದಿನ ಅವರು ಅದಕ್ಕಾಗಿ ಕಾಯುತ್ತಾರೆ ಅಥವಾ ನಮಗಿಂತ ಮೊದಲು ಅವರೇ ಗುಡ್ ಮಾರ್ನಿಂಗ್ ಅಂತಾರೆ.
3. ಪರಿಚಯಿಸಿಕೊಳ್ಳಲು ಹಿಂಜರಿಕೆ ಬೇಡ
ತುಂಬ ಕಡೆಗಳಲ್ಲಿ ಯಾರು ಯಾರನ್ನೂ ಪರಿಚಯಿಸುವುದಿಲ್ಲ. ನಾವು ಯಾರು ಅಂತ ನಾವೇ ಹೇಳಿಕೊಳ್ಳಬೇಕು. ಹಾಗಂತ ಅದನ್ನು ಅವರ ವರ್ಕ್ ಪ್ಲೇಸ್‍ಗೆ ಹೋಗಿ ಹೇಳಬೇಕಾಗಿಲ್ಲ. ಯಾರೋ ವಾಷ್ ರೂಂ ಹತ್ರ ಸಿಕ್ತಾರೆ, ಇನ್ಯಾರೋ ನೀರು ಕುಡಿಯುವಾಗ, ಊಟಕ್ಕೆ ಹೋಗುವಾಗ, ಮೀಟಿಂಗ್‍ನಲ್ಲಿ ಸಿಕ್ತಾರೆ.. ಆಗ ನಾನು ಹೊಸಬ ಎಂದು ಹೇಳುತ್ತಲೇ ಅವರ ಬಗ್ಗೆ ತಿಳಿದುಕೊಳ್ಳಬಹುದು. ನಮ್ಮ ಬಗ್ಗೆ ಹೇಳಿಕೊಳ್ಳುವಾಗ ಅತ್ಯಂತ ಕಡಿಮೆ ಪದ ಬಳಸಿದರೆ ಉತ್ತಮ.
4.ಹೆಸರು ನೆನಪಲ್ಲಿಟ್ಟುಕೊಂಡರೆ ಉತ್ತಮ
ನಾವು ಯಾರಲ್ಲಾದರೂ ಮಾತನಾಡಿದರೆ ಅವರ ಹೆಸರು ಮತ್ತು ಊರು ಎರಡನ್ನೂ ಕೇಳಿದರೆ ಉತ್ತಮ. ಮತ್ತು ಹೆಸರನ್ನು ಯಾವತ್ತೂ ಮರೆಯದೆ ಇನ್ನೊಮ್ಮೆ ಎದುರಾಗುವಾಗಲೆಲ್ಲ ಬಳಸಿದರೆ ಹೆಚ್ಚು ಇಷ್ಟಪಡುತ್ತಾರೆ. ಊರಿನ ಬಗ್ಗೆ ಪ್ರೀತಿಯಿಂದ ಮಾತನಾಡಿದರೆ ಖುಷಿಪಡುತ್ತಾರೆ.
5. ಮೇಜು ಬಿಟ್ಟು ಸ್ವಲ್ಪ ಓಡಾಡಿ
ಸಾಮಾನ್ಯವಾಗಿ ಕೆಲವರು ಕೆಲಸಕ್ಕೆ ಸೇರಿದಾಗ ಸೀನಿಯರ್ಸ್ ಬಂದು ಯಾವ ಕುರ್ಚಿಯಲ್ಲಿ ಕೂರಿಸಿರುತ್ತಾರೋ ಆ ಕುರ್ಚಿ ಬಿಟ್ಟು ಏಳುವುದಿಲ್ಲ. ದಿನಕ್ಕೆ ಒಂದೆರಡು ಸಲವಾದರೂ ಆಚೀಚೆ ಓಡಾಡುವ ಅಭ್ಯಾಸವಿದ್ದರೆ ಇತರರೊಂದಿಗೆ ಕನೆಕ್ಟ್ ಆಗುತ್ತದೆ. ಕೆಲವರು ಊಟವನ್ನು ಕೂಡಾ ಕುಳಿತ ಜಾಗದಲ್ಲೇ ಮಾಡುತ್ತಾರೆ. ಇದು ಪ್ರೊಡಕ್ಟಿವಿಟಿಗೆ ಒಳ್ಳೆಯದೇನೋ.. ಆದರೆ, ನಮ್ಮ ಕನೆಕ್ಟಿವಿಟಿಗೆ ಅಷ್ಟೇನೂ ಒಳ್ಳೆಯದಲ್ಲ.
6. ಒಬ್ಬರಿಗೇ ಅಂಟಿಕೊಂಡಿರಬೇಡಿ..
ಕೆಲವರು ಕಚೇರಿಯಲ್ಲಿ ಮೊದಲ ಬಾರಿ ಪರಿಚಯ ಆದವರನ್ನೇ ಜೀವಮಾನದ ಗೆಳೆಯ/ ಗೆಳತಿ ಏನೋ ಎಂಬಂತೆ ಅಂದುಕೊಂಡುಬಿಡುತ್ತಾರೆ. ಅವರ ಜತೆ ಮಾತ್ರ ಮಾತನಾಡುವುದು, ಅವರ ಜತೆಗೇ ಊಟ, ತಿಂಡಿಗೆ ಹೋಗುವುದು. ಈ ರೀತಿ ಮಾಡುವುದರಿಂದ ಬೇರೆಯವರ ಜತೆಗೆ ಬೆರೆಯುವ ಅವಕಾಶವೇ ತಪ್ಪಿಹೋಗುತ್ತವೆ. ಅಥವಾ ಅದಕ್ಕಿಂತಲೂ ಡೇಂಜರ್ ಆದ ಸಂಗತಿ ಎಂದರೆ ನಾವು ಸ್ನೇಹ ಮಾಡಿಕೊಂಡಿರುವ ವ್ಯಕ್ತಿ ಬಗ್ಗೆ ಕಚೇರಿಯಲ್ಲಿ ಒಳ್ಳೆಯ ಅಭಿಪ್ರಾಯ ಇಲ್ಲದೆ ಇರಬಹುದು. ಇದು ನಮ್ಮ ಮೇಲೂ ಪರಿಣಾಮ ಬೀರುತ್ತದೆ.
7. ಒಳ್ಳೆಯ ಡ್ರೆಸ್ ಸೆನ್ಸ್ ಇರಲಿ
ಯಾವುದೇ ಹೊಸ ಕಚೇರಿಗೆ ಹೋದಾಗ ಮೊದಲಿಗೆ ಗಮನಿಸುವುದು ನಮ್ಮ ಡ್ರೆಸ್ಸನ್ನು. ನಮ್ಮ ಕೆಲಸದ ಕ್ವಾಲಿಟಿಯೆಲ್ಲ ಆಮೇಲೆ. ಹೀಗಾಗಿ ಒಳ್ಳೆಯ ರೀತಿಯಲ್ಲಿ ಡ್ರೆಸ್ ಮಾಡಿಕೊಳ್ಳುವುದು, ಕುಳಿತುಕೊಳ್ಳುವ ಜಾಗವನ್ನು ಅಚ್ಚುಕಟ್ಟಾಗಿಡುವುದು ಆಕರ್ಷಣೆಯ ಸರಳ ಸೂತ್ರಗಳು.
8. ಸಹಾಯ ಕೇಳಿ
ಕಚೇರಿಯಲ್ಲಿ ಬೇರೆಯವರ ಜತೆ ಬೆರೆಯುವುದಕ್ಕೆ ಅತ್ಯಂತ ಸುಲಭದ ದಾರಿ ಎಂದರೆ ಸಹಾಯ ಕೇಳುವುದು. ಹೊಸ ಜಾಗದಲ್ಲಿ ನಮಗೆ ಹಲವಾರು ವಿಷಯ ಗೊತ್ತಿರುವುದಿಲ್ಲ. ನೀರು ಎಲ್ಲಿದೆ, ವಾಷ್ ರೂಂ ಎಲ್ಲಿದೆ, ಮಧ್ಯಾಹ್ನದ ಊಟ ಎಲ್ಲಿ ಮಾಡಬಹುದು, ಎಷ್ಟು ಹೊತ್ತಿಗೆ ಟೀ ಬರ್ತದೆ ಮೊದಲಾದ ಸಣ್ಣ ಸಣ್ಣ ಸಂಗತಿಗಳ ಮೂಲಕ ಮಾತನ್ನು ಬೆಳೆಸಬಹುದು. ಕೆಲಸದ ವಿಚಾರದಲ್ಲೂ ಸಹಾಯ ಯಾಚಿಸಿದಾಗ ಕೆಲವರಿಗೆ ತುಂಬ ಇಷ್ಟವಾಗುತ್ತದೆ. ಹಾಗಂತ, ಹೋದ ಕೂಡಲೇ ಯಾರಲ್ಲೋ ದುಡ್ಡು ಕೇಳುವುದು ಮೊದಲಾದವು ಕೆಟ್ಟ ಚಾಳಿ ಆಗುತ್ತದೆ!
9. ಇನ್ನೊಬ್ಬರಿಗೆ ಸಹಾಯ ಮಾಡಿ
ಯಾವುದಾದರೂ ಸಮಸ್ಯೆ ಎದುರಾದರೆ ಅದಕ್ಕೆ ನಿಮ್ಮಲ್ಲಿ ಪರಿಹಾರವಿದೆ ಅನಿಸಿದರೆ ಯಾವುದೇ ಮುಜುಗರ ಇಲ್ಲದೆಸಹಾಯ ಮಾಡಿ. ಇದನ್ನು ದೀರ್ಘಕಾಲ ಜನರು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಸಹಾಯ ಅಂದರೆ ದೊಡ್ಡದೇ ಆಗಿರಬೇಕಾಗಿಲ್ಲ. ಬಿದ್ದಿರುವ ಪೆನ್ನನ್ನೋ, ತುಂಡು ಕಾಗದವನ್ನು ಎತ್ತಿಕೊಡುವುದೂ ಸಹಾಯವೆ. ಯಾರೋ ಬ್ಯುಸಿ ಇದ್ದರೆ ಏನಾದರೂ ಸಹಾಯ ಮಾಡ್ಲಾ ಎಂದು ಕೇಳಿದರೆ ನಮ್ಮ ಬಗ್ಗೆ ಒಳಿತಿನ ಭಾವ ಮೂಡುತ್ತದೆ.
10. ಬೇರೆಯವರ ಬಗ್ಗೆ ಗೌರವದ ಮಾತಿರಲಿ
ಕಚೇರಿಯಲ್ಲಿ ಇನ್ನೊಬ್ಬರ ಬಗ್ಗೆ, ಅವರ ಅಭಿರುಚಿಗಳ ಬಗ್ಗೆ, ಡ್ರೆಸ್ ಬಗ್ಗೆ ಗೌರವದ ಮಾತು ಆಡಿದಾಗ ಎಲ್ಲರಿಗೂ ಹಿತವಾಗುತ್ತದೆ. ಯಾವುದೋ ಒಂದು ಸಹಾಯ ಮಾಡಿದಾಗ ಅದನ್ನು ಮುಕ್ತವಾಗಿ ಹೇಳುವುದರಿಂದ ಅವರಿಗೂ ಸಾರ್ಥಕ ಭಾವ ಬರುತ್ತದೆ. ಇನ್ನಷ್ಟು ಸಹಾಯ ಮಾಡಲು ಮನಸು ಬರುತ್ತದೆ.
11. ತುಂಬ ಸೌಂಡ್ ಮಾಡಬೇಕಾಗಿಲ್ಲ
ಕೆಲವರು ತಾವು ಕಚೇರಿಗೆ ಸೇರಿದ್ದೇವೆ ಎಂಬುದನ್ನು ಸಾರಲೋ ಎಂಬಂತೆ ದೊಡ್ಡದಾಗಿ ಮಾತನಾಡುವ ಮೂಲಕ, ಎಲ್ಲದರಲ್ಲಿ ಮೂಗು ತೂರಿಸುವ ಮೂಲಕ ಪ್ರಯತ್ನ ಮಾಡುತ್ತಾರೆ. ಇದು attention seeking ಪ್ರವೃತ್ತಿ ಅನಿಸುತ್ತದೆ. ಇದರಿಂದ ಲಾಭವೇನೂ ಆಗುವುದಿಲ್ಲ.
NEERAJ CHOPRA ಎಂಬ ಏಕಲವ್ಯನಿಗೆ ಗುರುವಾದ ದ್ರೋಣಾಚಾರ್ಯ ಯಾರು?