ಕೃಷ್ಣ ಭಟ್ ಅಳದಂಗಡಿ- motivational story
ವಿಶ್ವನಾಥ ರಾಯರು ಸೋಫಾದಲ್ಲಿ ಕುಳಿತಿದ್ದರು. ಮತ್ತೊಂದು ಸೋಫಾದಲ್ಲಿ ಮಗ ರಮಾಕಾಂತ್ ಕೂತಿದ್ದ. ರಾಯರಿಗೆ ಈಗ 82 ಕಳೆದು 83.ಮಗನಿಗೆ 45. 10 ವರ್ಷದ ಪುಟ್ಟ ಮಗನೂ ಇದ್ದಾನೆ. ರಮಾಕಾಂತ್‍ಗೆ ದೊಡ್ಡ ಕಂಪನಿಯಲ್ಲಿ ಉದ್ಯೋಗವಿತ್ತು.
ಹೀಗೆ ಹಾಲ್‍ನಲ್ಲಿ ಕುಳಿತಿದ್ದಾಗ ಹೊರಗಿನ ಗಾಜಿನ ಮೂಲಕ ಏನೋ ಕಂಡ ಹಾಗಾಯಿತು ರಾಯರಿಗೆ. `ಅದೇನು ಮಗಾ’ ಎಂದು ರಮಾಕಾಂತ್‍ನನ್ನು ಕೇಳಿದರು.
ಅದು `ಕಾಗೆ ಅಪ್ಪಾ- ಎಂದ ರಮಾಕಾಂತ್.
ಸ್ವಲ್ಪ ಹೊತ್ತಿನ ಬಳಿಕ ರಾಯರು ಮತ್ತೆ ಕೇಳಿದರು: ಅಲ್ಲಿ ಕೂತಿದೆಯಲ್ಲಪ್ಪಾ ಹಕ್ಕಿ.. ಅದೇನು ಮಗಾ?
ರಮಾಕಾಂತ್ ಸ್ವಲ್ಪ ಸಿಟ್ಟಿನಿಂದಲೇ ಹೇಳಿದ: ಅದು ಕಾಗೆ ಅಂತ ಹೇಳಿದ್ನಲ್ಲಾ..
ರಾಯರು ಕುಳಿತಲ್ಲಿಂದ ಹೋಗಿ ನೀರು ಕುಡಿದು ಬಂದರು. ಮತ್ತೊಮ್ಮೆ ಮಗನನ್ನು ಕೇಳಿದರು: ಮಗಾ ಅದೆಂಥ?
ಈಗ ರಮಾಕಾಂತ್‍ಗೆ ಸಿಟ್ಟು ನೆತ್ತಿಗೇರಿತು. “ನಿನಗೆ ಎಷ್ಟು ಸಲ ಹೇಳಬೇಕು.. ಅದು ಕಾಗೆ.. ಕಾಗೆ.. ಕಾಗೆ..
ಅಪ್ಪ ಹೇಳಿದರು: ಓ ಹೌದಾ? ನಂಗೆ ಸರಿ ಕಣ್ಣು ಕಾಣಿಸುವುದಿಲ್ಲ ಮಗಾ.. ಆಗ ಹೇಳಿದ್ದಿಯಲ್ಲಾ.. ಒಮ್ಮೆ… ಸ್ಸಾರಿ..
ರಮಾಕಾಂತ್ ಸಿಟ್ಟಿನಿಂದ ಹೇಳಿದ: ನಿನಗೆ ಅದೆಲ್ಲ ಅಧಿಕ ಪ್ರಸಂಗ ಯಾಕೆ? ಕಾಣದಿದ್ರೆ ಬೇಡ, ಸುಮ್ನೆ ಹೋಗಿ ಬಿದ್ಕೊಳ್ಳೋದಲ್ವಾ? ಸುಮ್ನೆ ತಲೆ ತಿನ್ನೋದು.
ರಾಯರು ಮತ್ತೊಮ್ಮೆ ಸ್ವಲ್ಪ ನೀರು ಕುಡಿದು ಒಳಗೆ ಹೋಗಿ ಮಲಗಿದರು.
ರಮಾಕಾಂತ ಏನೋ ಹುಡುಕುತ್ತಾ ಹಳೆ ರ್ಯಾಕ್‍ಗೆ ಕೈಹಾಕಿದ. ಆಗ ಅಲ್ಲಿಂದ ಒಂದು ಸಣ್ಣ ಡೈರಿ ಕೆಳಗೆ ಬಿತ್ತು. ಅದು ಅಪ್ಪನ ಡೈರಿ. ಅದರಲ್ಲಿ ಒಂದು ಪುಟ ತೆರೆದುಕೊಂಡಿತ್ತು. ಕುತೂಹಲದಿಂದ ನೋಡಿದ.
ಅದರಲ್ಲಿ ಹೀಗೆ ಬರೆದಿತ್ತು.
ದಿನಾಂಕ: 19-06-1980, ಭಾನುವಾರ
ಇವತ್ತು ನಾನು ಮತ್ತು ನನ್ನ ಪುಟ್ಟ ಮಗ ಸೋಫಾದ ಮೇಲೆ ಕೂತಿದ್ದೆವು. ಆಗ ಅಲ್ಲೊಂದು ಹಕ್ಕಿ ಕಾಣಿಸಿತು.
ಮಗ ತೊದಲು ಮಾತಲ್ಲಿ ಕೇಳಿದ: ಅದೇನಪ್ಪಾ?
ನಾನು ಹೇಳಿದೆ: ಅದು ಕಾಗೆ ಕಣಪ್ಪಾ..
ಸ್ವಲ್ಪ ಹೊತ್ತಿನ ಮೇಲೆ ಮಗ ಮತ್ತೊಮ್ಮೆ ಕೇಳಿದ: ಅದೆಂಥ ಅಪ್ಪಾ..
ನಾನು ಹೇಳಿದೆ: ಮಗಾ ಅದು ಕಾಗೆ.. ಕ್ರೋ..
ಎರಡು ನಿಮಿಷ ಬಿಟ್ಟು ಮತ್ತೆ ಬಂದು ಕೇಳಿದ: ಅಪ್ಪಾ ಏನು ಹಕ್ಕಿ ಅದು?
ನಾನು ಹೇಳಿದೆ: ಅದಕ್ಕೆ ಕಾಗೆ ಅಂತಾರೆ.. ಕ್ರೋ ಕ್ರೋ ಕ್ರೋ!
ಆಗ ಅವನೂ ಕ್ರೋ.. ಕ್ರೋ.. ಕ್ರೋ ಅಂತ ಕುಣಿದಾಡಿದ.
ಹೀಗೆ ಕೆಲವೇ ಹೊತ್ತಲ್ಲಿ 23 ಸಲ ಬಂದು ಕೇಳಿದ: ಅಪ್ಪಾ ಅದೆಂಥ, ಅಪ್ಪಾ ಅದೆಂಥ.
ಅವನು ಪ್ರತಿ ಬಾರಿ ಕೇಳಿದಾಗಲೂ ನನಗೆ ಖುಷಿಯಾಗ್ತಾ ಇತ್ತು..ಕೊನೆಗೆ ನಾನೇ ಕೇಳಲು ಶುರು ಮಾಡಿದೆ: ಮಗಾ ಅದೆಂಥ?
ಆಗ ಅವನು ಹೇಳಿದ: ಕಾಗೆ.. ಕ್ರೋ..ಕ್ರೋ..ಕ್ರೋ..
ಕೊನೆಗೆ ನಾನು ಮತ್ತು ಅವನು ಇಬ್ಬರೂ `ಕ್ರೋ.. ಕ್ರೋ.. ಕ್ರೋ..’ ಅಂತ ಹೇಳುತ್ತಾ ಕುಣಿಯತೊಡಗಿದೆವು.
ಡೈರಿಯನ್ನು ಹಾಗೇ ಮುಚ್ಚಿಟ್ಟ ರಮಾಕಾಂತ್ ಅಪ್ಪ ಮಲಗಿದಲ್ಲಿಗೆ ಬಂದ. ವಿಶ್ವನಾಥ ರಾಯರಿಗೆ ಸಣ್ಣ ನಿದ್ದೆ. ಅವರ ಕೈ ಹಿಡಿದುಕೊಂದು `ಸ್ಸಾರಿ’ ಅಪ್ಪಾ ಅಂದ.
ರಾಯರಿಗೆ ಎಚ್ಚರವಾಗಿ `ಯಾಕೋ ಸಾರಿ ಕೇಳ್ತೀಯಾ.. ಏನಾಯ್ತು’ ಅಂತ ಕೇಳಿದರು.
ನೀನು ಪದೇಪದೆ ಕಾಗೆಯನ್ನು ತೋರಿಸಿ ಅದೆಂಥ ಅದೆಂಥ ಅಂತ ಕೇಳಿದಾಗ ನನಗೆ ಸಿಟ್ಟು ಬಂತು.. ಬೈದ್ನಲ್ಲ.. ಅದಕೆ ಸ್ಸಾರಿ..: ರಮಾಕಾಂತ್ ಹೇಳಿದ.
ವಿಶ್ವನಾಥ ರಾಯರು ಆಶ್ಚರ್ಯದಿಂದ ಕೇಳಿದರು: ಹೌದಾ? ಕಾಗೆನಾ, ನಾನು ಕೇಳಿದ್ನಾ? ಯಾವಾಗ ಮಗು?
ಅಷ್ಟು ಹೊತ್ತಿಗೆ ರಮಾಕಾಂತನ ಹತ್ತು ವರ್ಷದ ಮಗ ಅಲ್ಲಿಗೆ ಬಂದು ಕೇಳಿದ: ಅಪ್ಪಾ.. ಡೆಮೆನ್ಷಿಯಾ ಅಂದ್ರೇನು?
ರಮಾಕಾಂತ ಅಪ್ಪನ ಕೈಗಳನ್ನೇ ಗಟ್ಟಿಯಾಗಿ ಹಿಡಿದುಕೊಂಡು ಹೇಳಿದ: ಅದು ಮರೆವಿನ ರೋಗ ಮಗಾ..
ಇದನ್ನೂ ಓದಿ| Motivational story: ಅತ್ತೆಗೆ ಕೊಡಬೇಕಾಗಿರುವುದು ವಿಷ ಅಲ್ಲ ಮಗಳೇ, ಪ್ರೀತಿ
ಇದನ್ನೂ ಓದಿ| Motivational story: ಸೋಲಿನ ಕೊನೆ ಮನೆಯಲ್ಲೂ ಗೆಲ್ಲಿಸುವ ಶಕ್ತಿಯೊಂದು ಇರ್ತದಲ್ವಾ? ಇದನ್ನೂ ಓದಿ| Motivational story: ಬಡತನ ತೋರಿಸಲು ಹೋದರೆ ಮಗನಿಗೆ ಕಂಡದ್ದು ಶ್ರೀಮಂತಿಕೆ!
ಇದನ್ನೂ ಓದಿ| motivational story: ನಾವಾಡಿದ ಮಾತೇ ನಮಗೆ ತಿರುಗಿ ಕೇಳೋದು ಮಗಾ..!
ಇದನ್ನೂ ಓದಿ | Motivational story: ಇದರಲ್ಲಿ ನಾವೇನು? ಆಲೂನಾ, ಮೊಟ್ಟೆನಾ? ಕಾಫಿ ಬೀಜಾನಾ?