ಕೃಷ್ಣ ಭಟ್ ಅಳದಂಗಡಿ- motivational story
ಅದು ಹಿಮ ಹೆಪ್ಪುಗಟ್ಟಿದ ಪರ್ವತ ಪ್ರದೇಶ. ದೇಶದ ಗಡಿ ಭಾಗವಾಗಿದ್ದರಿಂದ ಆಗಾಗ ಸೈನಿಕರ ಪ್ಯಾಟ್ರೋಲಿಂಗ್ ನಡೆಯುತ್ತಿತ್ತು. ಆವತ್ತು ಸೈನಿಕರ ತುಕಡಿಯೊಂದು ಅಲ್ಲಿ ನಡೆದುಹೋಗುತ್ತಿತ್ತು. ಜತೆಗೆ ಒಬ್ಬ ಕಮಾಂಡರ್ ಕೂಡಾ ಇದ್ದರು. ಆಗಲೇ ಕತ್ತಲಾಗಲು ಆರಂಭವಾಗಿತ್ತು, ಕೈಕಾಲು ಕೂಡಾ ಸೋತಿತ್ತು. ಎಲ್ಲಾದರೂ ಒಂದಿಷ್ಟು ವಿಶ್ರಾಂತಿ ಪಡೆಯಬೇಕು ಎಂದು ಯೋಚಿಸುವಾಗಲೇ ಅಲ್ಲೊಂದು ಚಹಾ ಅಂಗಡಿ ಕಂಡಿತು. ಅಲ್ಲಿ ಹೋಗಿ ನೋಡಿದರೆ ಬೀಗ ಹಾಕಿತ್ತು.
ಈಗೊಂದು ಕಪ್ ಚಹಾ ಸಿಕ್ಕಿದರೆ ಒಳ್ಳೆಯದಿತ್ತು ಎಂದು ಎಲ್ಲರೂ ಅಂದುಕೊಂಡರು. ಆದರೆ, ಬೀಗ ಹಾಕಿದೆಯಲ್ಲ ಏನು ಮಾಡುವುದು ಎಂದು ಎಲ್ಲರೂ ಯೋಚಿಸಿದರು. ಅವರಲ್ಲೊಬ್ಬ ಹೇಳಿದ: ಬೀಗ ಒಡೆಯುವ!
ʻʻಅಷ್ಟಕ್ಕೂ ನಾವು ಇಲ್ಲಿನ ಜನ ರಕ್ಷಣೆಯ ಕೆಲಸವನ್ನಲ್ಲವೇ ಮಾಡುತ್ತಿರುವುದು. ಒಂದು ಚಹಾ ಕುಡಿಯುವ ಹಕ್ಕೂ ನಮಗಿಲ್ಲವೇ? ನಾವೇನೂ ಕದಿಯುತ್ತಿಲ್ಲವಲ್ಲ. ಟೀ ಕುಡಿತೇವೆ ಅಷ್ಟೆ”- ಎನ್ನುತ್ತಾ ಬೀಗ ಒಡೆದೇ ಬಿಟ್ಟ.
ಒಳಗೆ ಹಾಲಿನ ಪೌಡರ್ ಇತ್ತು. ಎಲ್ಲರಿಗೂ ಟೀ ಮಾಡಿ ಕೊಡಲಾಯಿತು. ಬಿಸ್ಕೆಟ್ ಕೂಡಾ ಸಿಕ್ಕಿತು. ಚಹಾ ಕುಡಿದು ಖುಷಿಯಿಂದ ಹೊರಟರು.
ಬೆಳಗ್ಗೆ ಗೂಡಂಗಡಿ ಮಾಲೀಕ ಬಂದು ನೋಡುತ್ತಾನೆ. `ʻʻಅಯ್ಯೋ ದೇವರೆ.. ಮೊದಲೇ ನನ್ನ ಮಗುವಿಗೆ ಹುಷಾರಿಲ್ಲ. ಅವನನ್ನು ಆಸ್ಪತ್ರೆಗೆ ಕರೆದೊಯ್ಯಲು ದುಡ್ಡು ಹೊಂದಿಸಲಾಗದೆ ಕಷ್ಟುಪಡುತ್ತಿದ್ದೇನೆ. ಈಗ ನೋಡಿದರೆ ಅಂಗಡಿಯ ಬಾಗಿಲು ಒಡೆಯಲಾಗಿದೆ. ಎಲ್ಲವನ್ನೂ ದೋಚಿಕೊಂಡು ಹೋಗಿರಬಹುದು,” ಎಂದುಕೊಳ್ಳುತ್ತಾ ಒಳಗೆ ಹೋದರು.
+++++++++++++++++++++++++
ಆವತ್ತೇ ಸಂಜೆ ಪ್ಯಾಟ್ರೋಲಿಂಗ್ ಟೀಮ್ ಮತ್ತೆ ಅದೇ ದಾರಿಯಾಗಿ ವಾಪಸ್ ಬಂತು. ಅವರ್ಯಾರೂ ಹಿಂದಿನ ದಿನ ತಾವು ಬಾಗಿಲು ಒಡೆದು ಚಹಾ ಕುಡಿದುದನ್ನು ಹೇಳಲಿಲ್ಲ. ಸೈನಿಕರಾಗಿ ಈ ರೀತಿ ಮಾಡಬಾರದಿತ್ತು ಎಂಬ ತಪ್ಪಿತಸ್ಥ ಭಾವನೆಯೂ ಅವರಲ್ಲಿತ್ತು.
ಆದರೆ ಗೂಡಂಗಡಿ ಮಾಲೀಕ ಸಿಕ್ಕಾಪಟ್ಟೆ ಖುಷಿಯಾಗಿದ್ದರು. ಇದನ್ನು ನೋಡಿ ಸೈನಿಕರಿಗೆ ಆಶ್ಚರ್ಯವಾಯಿತು. ಅಲ್ಲ ನಿನ್ನೆ ಅಂಗಡಿಯ ಅಷ್ಟು ವಸ್ತುಗಳು ಖಾಲಿಯಾಗಿದ್ದರೂ ಈ ಮನುಷ್ಯ ಇಷ್ಟು ಖುಷಿಯಾಗಿರುವುದು ಹೇಗೆ ಎಂದು ಕೇಳಿಕೊಂಡರು. ಕೊನೆಗೆ ಒಬ್ಬ ಸೈನಿಕ ಕೇಳಿಯೇಬಿಟ್ಟ: ಏನು ಸ್ವಾಮೀ ಭಾರಿ ಖುಷಿಯಲ್ಲಿರುವಂತಿದೆ?
ಅದಕ್ಕೆ ಗೂಡಂಗಡಿ ಮಾಲೀಕ ಹೇಳಿದ: ಏನು ಹೇಳಬೇಕೋ ಗೊತ್ತಾಗ್ತಿಲ್ಲ ಸರ್. ನೀವು ನಂಬುತ್ತೀರೋ ಬಿಡ್ತೀರೋ. ನಿನ್ನೆ ರಾತ್ರಿ ನನ್ನ ಅಂಗಡಿಗೆ ದೇವರು ಬಂದಿದ್ದ ಸ್ವಾಮಿ.
ಸೈನಿಕರು ಒಂದೇ ಧ್ವನಿಯಲ್ಲಿ ಕೇಳಿದರು: ಏನು ದೇವರಾ?
ಗೂಡಂಗಡಿ ಮಾಲೀಕ ಹೇಳಿದ: ʻʻಹೌದು ಸ್ವಾಮಿ ದೇವರೇ.. ನನ್ನ ಮಗನಿಗೆ ಕಳೆದ ಕೆಲವು ದಿನಗಳಿಂದ ಹುಷಾರಿಲ್ಲ. ಮದ್ದು ತರಲು ದುಡ್ಡಿಲ್ಲ. ಹಾಗೆ ಚಿಂತೆಯಿಂದಲೇ ನಿನ್ನೆ ಮನೆಗೆ ಹೋಗಿದ್ದೆ. ಕೊನೆಯ ಪ್ರಯತ್ನವಾಗಿ ಅಂಗಡಿಯನ್ನೇ ಮಾರುವುದು ಅಂತ ತೀರ್ಮಾನ ಮಾಡಿ, ದೇವರ ಮುಂದೆ ಹೇಳಿಕೊಂಡಿದ್ದೆ.”
ʻʻಇವತ್ತು ಬೆಳಗ್ಗೆ ಬಂದು ನೋಡಿದಾಗ ಮೊದಲು ನನ್ನ ಎದೆಯೊಡೆದೇಹೋಯಿತು. ಮೊದಲೇ ಕಷ್ಟದಲ್ಲಿರುವ ನನಗೆ ಇನ್ನೊಂದು ಶಿಕ್ಷೆಯಾ ಅಂತ. ಆದರೆ, ಒಳಗೆ ಹೋಗಿ ನೋಡುತ್ತೇನೆ ನನ್ನ ಕಣ್ಣನ್ನೇ ನಾನು ನಂಬಲಿಲ್ಲ: ಎದುರಿಗೆ ಐನೂರರ ಎರಡು ನೋಟಿತ್ತು. ನನ್ನ ಮಗನ ಟ್ರೀಟ್ಮೆಂಟ್‍ಗೆ ಬೇಕಾದಷ್ಟೇ ಹಣ. ನಂಗೆ ಸ್ಪಷ್ಟವಾಗಿ ಹೋಯಿತು. ದೇವರೇ ಬಂದು ಚಹಾ ಕುಡಿದು ದುಡ್ಡಿಟ್ಟು ಹೋಗಿದ್ದಾನೆ ಅಂತ.ʼʼ
ಅಷ್ಟು ಹೊತ್ತಿಗೆ ಎಲ್ಲರೂ ದೂರದಲ್ಲಿ ನಿಂತಿದ್ದ ಕಮಾಂಡರ್ ಮುಖವನ್ನು ನೋಡಿದರು. ಅವರ ಕಣ್ಣುಗಳಲ್ಲಿ ನೀರಿಳಿಯುತ್ತಿತ್ತು.
ಇದನ್ನೂ ಓದಿ | motivational story | ತುಂಬ ಸಲ ಹೀಗಾಗುತ್ತೆ, ನಮ್ಮನ್ನು ಪರೀಕ್ಷಿಸುವ ಮಾನದಂಡಗಳೇ ಸರಿ ಇರುವುದಿಲ್ಲ!