Site icon Vistara News

Motivational story | ಬೆಟ್ಟದ ಮೇಲಿದ್ದಳು ಅನುಪಮ ಸುಂದರಿ, ಅವಳನ್ನು ಗೆಲ್ಲುವುದಕ್ಕೆ ಬೇಕಿತ್ತು ಸಾವಿರ ಮೆಟ್ಟಿಲ ಸವಾರಿ!

Motivation success

ಕೃಷ್ಣ ಭಟ್‌ ಅಳದಂಗಡಿ- Motivational story
ಇದೊಂದು ಒಂದಾನೊಂದು ಕಾಲದ ಕಥೆ. ಒಂದೂರಲ್ಲಿ ಒಬ್ಬ ಶ್ರೀಮಂತ ರಾಜನಿದ್ದ. ಅವನಿಗೆ ಒಬ್ಬಳೇ ಮಗಳು. ಅನುಪಮ ಸುಂದರಿ. ಆ ರಾಜನ ಅರಮನೆ ಇದ್ದಿದ್ದು ಕಡಿದಾದ ಬೆಟ್ಟದ ಮೇಲೆ. ರಾಜ ತನ್ನ ಮಗಳಿಗೆ ಮದುವೆ ಮಾಡಲು ನಿರ್ಧರಿಸಿದ. ತಾನು ಕಷ್ಟಪಟ್ಟು ಸಂಪಾದಿಸಿದ ಸಾಮ್ರಾಜ್ಯವನ್ನು ಉಳಿಸಿಕೊಳ್ಳಬಲ್ಲ ಒಬ್ಬ ಸಮರ್ಥ ಅಳಿಯ ಬೇಕು ಎನ್ನುವ ಆಸೆ ಅವನಿಗೆ. ಹೀಗಾಗಿ ಮಗಳ ಒಪ್ಪಿಗೆಯನ್ನೂ ಪಡೆದು ಒಂದು ಪಂಥಾಹ್ವಾನವನ್ನು ಮುಂದೊಡ್ಡಿದ.

ಪಂಥಾಹ್ವಾನದ ಪ್ರಕಾರ ರಾಜ ಎತ್ತರದ ಬೆಟ್ಟದಲ್ಲಿರುವ ಅರಮನೆಗೆ ತಳದಿಂದಲೇ ಸಾವಿರ ಮೆಟ್ಟಿಲುಗಳನ್ನು ನಿರ್ಮಿಸಲಾಗಿತ್ತು. ಮೆಟ್ಟಿಲುಗಳು ಸಣ್ಣವೇನಾಗಿರಲಿಲ್ಲ. ಒಂದೊಂದು ಹೆಜ್ಜೆ ಇಡಲೂ ಕಷ್ಟವಿತ್ತು. ಇದರ ಜತೆಗೆ ರಾಜಕುಮಾರಿಯನ್ನು ಮದುವೆಯಾಗಲು ಬಯಸುವ ಯುವಕ ಬೆನ್ನ ಮೇಲೆ ಅತಿ ಭಾರವಾದ, ಹಲವಾರು ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಬತ್ತಳಿಕೆಯನ್ನು ಹೊತ್ತುಕೊಂಡು ಮೇಲೆ ಹೋಗಬೇಕಾಗಿತ್ತು. ಅದರಲ್ಲಿದ್ದುದು ಲೋಹದಿಂದ ಮಾಡಿದ ಬಲಿಷ್ಠ ಆಯುಧಗಳು.

ರಾಜಕುಮಾರಿಯ ಮದುವೆಯ ವಿಷಯ ತಿಳಿದು ಸಾವಿರಾರು ಯುವಕರು ಧಾವಿಸಿ ಬಂದರು. ಹಲವು ದೇಶಗಳ ರಾಜಕುಮಾರರು ದಾಂಗುಡಿ ಇಟ್ಟರು. ಆದರೆ, ಹೆಚ್ಚಿನವರು ಬೆಟ್ಟದ ತುದಿವರೆಗಿನ ಮೆಟ್ಟಿಲುಗಳನ್ನು ನೋಡಿಯೇ ಬೆಚ್ಚಿಬಿದ್ದರು. ಕೆಲವು ಧೈರ್ಯ ಮಾಡಿ ಬತ್ತಳಿಕೆಯನ್ನು ತೊಡಲು ಮುಂದಾದರು. ಆದರೆ, ಅದರ ಭಾರಕ್ಕೆ ಕುಸಿದೇ ಹೋದರು. ಇನ್ನು ಕೆಲವರು ಮೊದಲ ಹೆಜ್ಜೆ ಇಡುವ ಮೊದಲು ಕೈಸೋತರು. ಕೆಲವು ಧೈರ್ಯಶಾಲಿ ಯುವಕರು ಒಂದೆರಡು ಮೆಟ್ಟಿಲು ಹತ್ತಿದರು. ಆದರೆ, ಬಳಿಕ ಕೈಸಾಗದೆ ಇಳಿದರು. ಅಂತೂ ಯಾರಿಗೂ ಮೂರಕ್ಕಿಂತ ಹೆಚ್ಚು ಮೆಟ್ಟಿಲು ಹತ್ತಲಾಗಲೇ ಇಲ್ಲ.

ಆಗ ಜನರು, ಈ ಅರಸನಿಗೆ ಮಗಳನ್ನು ಮದುವೆ ಮಾಡಿಕೊಡಲು ಮನಸ್ಸಿಲ್ಲ.. ಹೀಗಾಗಿ ಮನುಷ್ಯರಿಗೆ ಅಸಾಧ್ಯವಾದ ಈ ಸವಾಲನ್ನು ಇಟ್ಟಿದ್ದಾನೆ ಎಂದು ಮಾತನಾಡಿಕೊಂಡರು. ಒಮ್ಮೆ ರಾಜಕುಮಾರಿಗೂ ಹೀಗೇ ಅನಿಸಿತು. ಯಾಕೆಂದರೆ, ಎಂಥೆಂಥ ಪರ್ವತಗಳನ್ನು ಹತ್ತಿಳಿದ ಯೋಧರಿಗೆ, ಪರ್ವತಾರೋಹಿಗಳಿಗೆ, ಕ್ರೀಡಾಳುಗಳಿಗೂ ಇದು ಕಷ್ಟವೇ ಆಗಿತ್ತು. ಒಂದು ಕಡೆ ಮೆಟ್ಟಿಲು ಇನ್ನೊಂದು ಕಡೆ ಬೆನ್ನಲ್ಲಿ ಅತಿ ಭಾರದ ಬತ್ತಳಿಕೆ. ಮ್ಯಾನೇಜ್‌ ಮಾಡುವುದೇ ಕಷ್ಟವಾಗಿತ್ತು. ಬತ್ತಳಿಕೆ ಕಳಚಿಟ್ಟರೆ ಹೇಗೋ ಮ್ಯಾನೇಜ್‌ ಮಾಡಬಹುದು ಅನಿಸಿತು. ಆದರೆ, ಅದಕ್ಕೆ ಅವಕಾಶವಿರಲಿಲ್ಲ.

ಎಲ್ಲರೂ ಕೈಸೋತು ಮುಂದೇನು ಎಂದು ಕಾಯುತ್ತಿದ್ದಾಗ ಒಬ್ಬ ಸಾಮಾನ್ಯ ಯುವಕ ನಾನೊಂದು ಪ್ರಯತ್ನ ಮಾಡಬಹುದೇ ಎಂದು ಕೇಳಿದ. ಅಷ್ಟೇನೂ ದೃಢಕಾಯನಲ್ಲದ, ಬಲಿಷ್ಠನಲ್ಲದ ಯುವಕನಿಂದ ಇದು ಸಾಧ್ಯವೇ ಇಲ್ಲ ಎಂದು ಎಲ್ಲರಿಗೂ ಅನಿಸಿತು. ಆದರೂ ಯಾರಿಗೂ ಅವಕಾಶ ನಿರಾಕರಿಸುವಂತಿರಲಿಲ್ಲ. ಹೀಗಾಗಿ ಬತ್ತಳಿಕೆಯನ್ನು ಬೆನ್ನಿಗೆ ಹಾಕಿದರು. ಯುವಕ ಅಷ್ಟಕ್ಕೇ ಕುಸಿದು ಬೀಳುವಂತಾದ. ಆದರೂ ಸಾವರಿಸಿಕೊಂಡು ಮೊದಲ ಹೆಜ್ಜೆ ಇಟ್ಟ.

ಕೆಲವರಿಗೆ ಆಶ್ಚರ್ಯ ಆಯಿತು. ಯುವಕ ಏದುಸಿರು ಬಿಡುತ್ತಲೇ ಹೇಗೋ ಎರಡನೇ ಮೆಟ್ಟಿಲಿಗೆ ಕಾಲಿಟ್ಟ. ಅವನಿಗೂ ಮೂರನೇ ಹೆಜ್ಜೆ ಸಾಧ್ಯವಿಲ್ಲ ಅನಿಸಿತು. ಆದರೂ ಅಲ್ಲೇ ಕುಳಿತು ದೀರ್ಘವಾದ ಉಸಿರುಬಿಟ್ಟ. ಮನಸು ಮತ್ತು ದೇಹವನ್ನು ನಿರಾಳಗೊಳಿಸುತ್ತಾ ಮೂರನೇ ಮೆಟ್ಟಿಲು ಹತ್ತಿಯೇಬಿಟ್ಟ. ಅಲ್ಲೂ ಒಂದಿಷ್ಟು ಟೈಮ್‌ ತೆಗೆದುಕೊಂಡ. ಸ್ವಲ್ಪ ಧೈರ್ಯ ಬಂದ ಹಾಗಾಯಿತು… ನಾಲ್ಕು ಐದನೆ ಮೆಟ್ಟಿಲು ಹತ್ತಿದ. ನಿಡಿದಾದ ಉಸಿರು ತೆಗೆದುಕೊಳ್ಳುತ್ತಾ, ಮನಸ್ಸಿಗೆ ಶಕ್ತಿ ತುಂಬಿಕೊಳ್ಳುತ್ತಾ ದೇಹವನ್ನೂ ಶಾಂತಗೊಳಿಸುತ್ತಾ ಆತ ಒಂದೊಂದೇ ಮೆಟ್ಟಿಲು ಹತ್ತತೊಡಗಿದ.

ಅಚ್ಚರಿ ಎಂದರೆ, ಮೇಲೆ ಮೇಲೆ ಹೋಗುತ್ತಲೇ ಮೆಟ್ಟಿಲುಗಳು ಮೊದಲಿನಷ್ಟು ದೊಡ್ಡದಾಗಿರಲಿಲ್ಲ. ಹೆಜ್ಜೆ ಎತ್ತಿಡಲು ಕಷ್ಟವಾಗುತ್ತಿರಲಿಲ್ಲ. ಇನ್ನಷ್ಟು ಅಚ್ಚರಿ ಎಂದರೆ ಬೆನ್ನ ಮೇಲಿನ ಬತ್ತಳಿಕೆಯ ಭಾರವೂ ಕಡಿಮೆಯಾಗುತ್ತಿದೆ ಅನಿಸತೊಡಗಿತು. ಹೀಗಾಗಿ ಅವನು ವೇಗವಾಗಿ ಹೆಜ್ಜೆ ಹಾಕುತ್ತಲೇ ಬೆಟ್ಟ ತುತ್ತತುದಿಯನ್ನು ಏರಿ ಅರಮನೆಯ ಮುಂದೆ ನಿಂತೇ ಬಿಟ್ಟ!

ಮಹಾರಾಜ ಮೊದಲೇ ಘೋಷಿಸಿದಂತೆ ರಾಜಕುಮಾರಿಯನ್ನು ಯುವಕನಿಗೆ ಮದುವೆ ಮಾಡಿಕೊಟ್ಟ. ಆವತ್ತು ರಾತ್ರಿ ಶಯನಕ್ಕೆ ಹೋಗುವ ಮೊದಲು ಯುವಕ ತನ್ನ ಮಾವನಲ್ಲಿ ಕೇಳಿದ: ಅಲ್ಲ ಮಾವಯ್ಯ, ಈ ಮೆಟ್ಟಿಲು ಹತ್ತುವ ಆಪರೇಷನ್‌ ಆರಂಭದಲ್ಲಿ ತುಂಬ ಕಷ್ಟವಾಗಿತ್ತು. ಕೊನೆಗೆ ಸುಲಭವಾಯಿತು ಅದು ಹೇಗೆ?

ಅದಕ್ಕೆ ಮಹಾರಾಜ ಹೇಳಿದ: ಅಳೀಮಯ್ಯ, ನನಗೆ ಆರಂಭ ಶೂರರು ಅಳಿಯನಾಗಿ ಬೇಕಾಗಿರಲಿಲ್ಲ. ಕಷ್ಟವಿದೆ ಅಂತ ಮೊದಲ ಹಂತದಲ್ಲೇ ಕೈ ಚೆಲ್ಲುವವರೂ ಬೇಕಾಗಿರಲಿಲ್ಲ. ಬದುಕಿನ ಆರಂಭದಲ್ಲಿ ಬರುವ ಕಷ್ಟದ ಕ್ಷಣಗಳನ್ನು ನಿಭಾಯಿಸಿಕೊಂಡು ಮುಂದೆ ಸಾಗುವವರು ಬೇಕಾಗಿದ್ದರು. ಈ ಪರೀಕ್ಷೆಯಲ್ಲಿ ನೀನು ಗೆದ್ದಿದ್ದೀಯಾ? ನಿನ್ನ ಇಚ್ಛಾಶಕ್ತಿಯಿಂದ ಇದು ಸುಲಭವಾಯಿತು.

ಅಳಿಯ ಕೇಳಿದ: ಅಲ್ಲ ಮಾವ, ಕೊನೆ ಕೊನೆಗೆ ಬತ್ತಳಿಕೆ ಭಾರವೇ ಇಲ್ಲದಂತೆ ಇತ್ತಲ್ಲ ಅದು ಹೇಗೆ?
ಮಾವ ಹೇಳಿದರು: ಅದಾ? ನಾನು ಬೆಟ್ಟದ ಮೇಲೆ ನಾನು ಒಂದು ಅಯಸ್ಕಾಂತವನ್ನು ಇಟ್ಟಿದ್ದೆ. ನೀನು ಮೇಲೆ ಹತ್ತುತ್ತಿದ್ದಂತೆಯೇ ಅದು ಬತ್ತಳಿಕೆಯನ್ನು ತಾನೇ ಮೇಲೆ ಸೆಳೆಯುತ್ತಿತ್ತು. ಹೀಗಾಗಿ ನಿನ್ನ ಮೇಲಿನ ಭಾರ ಕಡಿಮೆಯಾಗುತ್ತಿತ್ತು.

ಇದನ್ನೂ ಓದಿ | Motivational story: ಕಾಡು ದಾರಿಯಲ್ಲಿ ಕಾಲಿಗೆ ಮುಳ್ಳು ಚುಚ್ಚಿದಾಗ ಕಂಡ ದೇವರು

Exit mobile version