ಕೃಷ್ಣ ಭಟ್ ಅಳದಂಗಡಿ- Motivational story
ವಿಶ್ವನಾಥ್ ಮಲ್ಯ ಅವರು ಒಬ್ಬ ಯಶಸ್ವೀ ಉದ್ಯಮಿ. ರಂಗು ರಂಗಿನ ಬದುಕಿನಲ್ಲಿ ಮಿಂದೆದ್ದ ಅವರಿಗೆ ನಾಲ್ವರು ಪತ್ನಿಯರು. ಒಂದೇ ದೊಡ್ಡ ಬಂಗಲೆಯಲ್ಲಿ ಅವರೆಲ್ಲರೂ ಪ್ರತ್ಯೇಕವಾಗಿ ವಾಸವಾಗಿದ್ದರು. ನಾಲ್ಕೂ ಪತ್ನಿಯರ ನಡುವೆ ಒಂದು ಸೌಹಾರ್ದದ ಸಂಬಂಧವನ್ನು ಹೊಂದಿದ್ದದ್ದು ಉದ್ಯಮದ ಯಶಸ್ಸಿಗಿಂತಲೂ ದೊಡ್ಡದು ಎಂದು ಜನ ಮಾತನಾಡಿಕೊಳ್ಳುತ್ತಿದ್ದರು.
ಅವರ ನಾಲ್ಕೂ ಪತ್ನಿಯರ ನಡೆ-ನುಡಿಗಳು ಬೇರೆ ಬೇರೆ. ಮಲ್ಯ ಅವರು ತಮ್ಮ ನಾಲ್ಕನೇ ಪತ್ನಿಯನ್ನು ತುಂಬ ಪ್ರೀತಿಸುತ್ತಿದ್ದರು. ಆಕೆ ತುಂಬ ಸ್ಟೈಲಿಷ್ ಮತ್ತು ಮಹತ್ವಾಕಾಂಕ್ಷೆ ಹೊಂದಿದಾಕೆ. ಹಾಗಾಗಿ, ಅತ್ಯಂತ ಲೇಟೆಸ್ಟ್ ಡ್ರೆಸ್‍ಗಳನ್ನು ಕೊಡಿಸುತ್ತಿದ್ದರು. ದೊಡ್ಡ ದೊಡ್ಡ ಹೋಟೆಲ್‍ಗಳಲ್ಲಿ ನಡೆಯುವ ಪಾರ್ಟಿ, ಡಿನ್ನರ್ ಗಳಿಗೆ ಮಲ್ಯರ ಜತೆ ಸಾಥ್ ನೀಡುತ್ತಿದ್ದುದು ನಾಲ್ಕನೇ ಹೆಂಡತಿಯೇ. ಮಲ್ಯರ ಶೋಕಿ ಬದುಕಿಗೆ ಆಕೆ ಸರಿಯಾದ ಜೋಡಿ ಎನ್ನುವುದು ಪಾರ್ಟಿಗಳಲ್ಲಿ ಆಗಾಗ ಕೇಳಿ ಬರುತ್ತಿದ್ದ ಮಾತು.
ತಮ್ಮ ಮೂರನೇ ಪತ್ನಿ ಬಗ್ಗೆ ಮಲ್ಯರಿಗೆ ವಿಪರೀತವಾದ ಅಭಿಮಾನ. ಸ್ನೇಹಿತರು ಮತ್ತು ಇತರರ ಜತೆಗೆ ತುಂಬ ಗೌರವದಿಂದ ಮಾತನಾಡುತ್ತಿದ್ದರು. ಅವಳು ಬಂದ ಮೇಲೆಯೇ ನಾನು ಇಷ್ಟೊಂದು ಶ್ರೀಮಂತನಾಗಿದ್ದು. ಹೊಸ ಹೊಸ ಪ್ರಾಜೆಕ್ಟ್ ಗಳು ಕೈ ಹಿಡಿದದ್ದು. ಅವಳು ನನ್ನ ಪಾಲಿಗೆ ಅದೃಷ್ಟ ದೇವತೆ ಎನ್ನುತ್ತಿದ್ದರು ಮಲ್ಯರು. ಇಷ್ಟೆಲ್ಲ ಇದ್ದರೂ ಮಲ್ಯರಿಗೆ ಆಕೆಯ ಬಗ್ಗೆ ಒಂದು ಸಣ್ಣ ಅನುಮಾನ. ಆಕೆ ಬೇರೆ ಯಾರ ಜತೆಗಾದರೂ ಓಡಿ ಹೋಗಬಹುದಾ ಎಂದು. ಹಾಗಾಗಿ, ಆಕೆಯನ್ನು ತುಂಬ ಆರಾಧನೆ ಮಾಡುತ್ತಿದ್ದರು.
ಎರಡನೇ ಪತ್ನಿಯ ಬಗ್ಗೆ ಅವರಿಗೆ ತುಂಬ ಪ್ರೀತಿ. ಭಾವನೆಗಳನ್ನು ಅರ್ಥ ಮಾಡಿಕೊಳ್ಳಬಲ್ಲ ಆಕೆಯ ಜತೆ ತಮ್ಮ ನೋವು, ನಲಿವುಗಳನ್ನೆಲ್ಲ ಹಂಚಿಕೊಳ್ಳುತ್ತಿದ್ದರು. ಏನೇ ಸಮಸ್ಯೆ ಬಂದರೂ, ಮನಸಿಗೆ ಕಿರಿಕಿರಿಯಾದರೂ ಅವರು ಎರಡನೇ ಪತ್ನಿಯ ಸಹಕಾರ ಬಯಸುತ್ತಿದ್ದರು. ಆಕೆಯೂ ತುಂಬ ಗಟ್ಟಿ ಹೆಣ್ಮಗಳು. ಹಾಗಾಗಿ ಗಂಡನ ಕಷ್ಟಗಳನ್ನು ಅರಿತು ಪಾರಾಗುವ ತಂತ್ರಗಳನ್ನು ತನಗೆ ತಿಳಿದಂತೆ ಹೇಳುತ್ತಿದ್ದಳು.
ಇನ್ನುಳಿದದ್ದು ಮೊದಲ ಪತ್ನಿ. ಮಲ್ಯರ ಆಸ್ತಿಪಾಸ್ತಿ, ಸಂಪತ್ತು ಯಾವುದರ ಕಡೆಗೂ ಗಮನ ನೀಡದೆ ಗೌರವಾನ್ವಿತವಾಗಿ ಸಪ್ತಪದಿ ತುಳಿದು ಬಂದಾಕೆ. ಅತ್ಯಂತ ನಿಷ್ಠಾವಂತ ಪತ್ನಿ ಆಕೆ. ಆದರೆ ಹೊಸ ಹೊಸ ಹೆಂಡತಿಯರ ಖಯಾಲಿಯಿಂದಾಗಿ ಮಲ್ಯರಿಗೆ ಆಕೆಯ ಬಗ್ಗೆ ಸ್ವಲ್ಪ ನಿರಾಸಕ್ತಿ.. ಬಿದ್ದಿರ್ತಾಳೆ ಬಿಡು ಎನ್ನುವ ಹಾಗೆ. ಹಾಗಾಗಿ, ಮೊದಲ ಹೆಂಡತಿ ಬಗ್ಗೆ ಮಲ್ಯರು ಹೆಚ್ಚು ಗಮನವನ್ನೇ ಕೊಟ್ಟಿರಲಿಲ್ಲ. ಸಮಯವನ್ನೂ ಕಳೆದಿರಲಿಲ್ಲ.
ಇದೆಲ್ಲ ಆಗಿ ಶೋಕಿಯ ಕಾಲವೆಲ್ಲ ಮುಗಿಯುತ್ತಾ ಬಂತು. ಮಲ್ಯರಿಗೆ ಅನಾರೋಗ್ಯ ಕಾಡಿತು. ಮಂಚ ಸೇರಿದರು. ಈಗ ಕೊನೆಯ ದಿನಗಳನ್ನು ಎಣಿಸುವ ಹೊತ್ತು. ಮಲ್ಯರು ತುಂಬ ಒಳ್ಳೆಯ ಮನುಷ್ಯ ಆಗಿದ್ದ ಕಾರಣಕ್ಕೋ ಏನೋ ಈ ಹೊತ್ತಿನಲ್ಲೂ ನಾಲ್ಕೂ ಜನ ಹೆಂಡತಿಯರು ಮಂಚದ ಪಕ್ಕದಲ್ಲಿ ಸೇವೆಗೆ ನಿಂತಿದ್ದರು.
ಈಗ ಮಲ್ಯರು ಒಂದು ಪ್ರಶ್ನೆ ಕೇಳಿದರು: ನನ್ನ ಜೀವನದಲ್ಲಿ ತುಂಬ ಪ್ರೀತಿ ಕೊಟ್ಟವರು ನೀವು. ನಾನೀಗ ಅಂತಿಮ ಪಯಣಕ್ಕೆ ಹೊರಡಬೇಕಾಗಿದೆ. ನಿಮ್ಮಲ್ಲಿ ಯಾರಾದರೂ ನನ್ನ ಜತೆ ಬರ್ತೀರಾ ಪ್ಲೀಸ್ ಎಂದು ಕೇಳಿದರು. ಯಾರೂ ತಲೆ ಎತ್ತಲಿಲ್ಲ.
ಆಗ ಮಲ್ಯರೇ ನಾಲ್ಕನೇ ಪತ್ನಿಯನ್ನು ಕೇಳಿದರು: ನಾನು ನಿನ್ನನ್ನು ತುಂಬ ಚೆಂದ ನೋಡಿಕೊಂಡೆ. ತುಂಬ ಆರೈಕೆ ಮಾಡಿದೆ. ನೀನು ನನ್ನ ಜತೆಗೆ ಬರ್ತೀಯಾ?
ಆಕೆ ಯಾವ ಮಾತನ್ನೂ ಆಡದೆ ಸಾಧ್ಯವಿಲ್ಲ ಎನ್ನುವಂತೆ ಹೊರಟು ಹೋದಳು.
ʻನಾನು ನಿನ್ನನ್ನು ಪಡೆಯುವುದಕ್ಕಾಗಿ ಎಷ್ಟೊಂದು ಕಷ್ಟಪಟ್ಟೆ ಎನ್ನುವುದು ನಿನಗೆ ಗೊತ್ತು. ಅತ್ಯಂತ ಪ್ರೀತಿಯಿಂದ ಕಾಪಾಡಿದೆ. ಜತೆಗಿರುವೆಯಾ’ ಎಂದು ಮೂರನೇ ಪತ್ನಿಯನ್ನು ಕೇಳಿದರು ಮಲ್ಯ. `ʻಬದುಕು ತುಂಬ ನಶ್ವರ. ಒಬ್ಬರನ್ನು ಅನುಸರಿಸಿ ಇನ್ನೊಬ್ಬರು ಹೋಗುವ ರೂಢಿ ಇಲ್ಲ. ನಿನ್ನ ನಿರ್ಗಮನದ ಬಳಿಕ ನಾನು ಬೇರೆ ಯಾರನ್ನಾದರೂ ಸೇರುತ್ತೇನೆ. ನನಗಾಗಿ ಕಾತರಿಸುವ ಕೋಟ್ಯಂತರ ಜನರಿದ್ದಾರೆ’ ಎಂದಳು.
ಎರಡನೇ ಪತ್ನಿಯತ್ತ ಮುಖ ತಿರುಗಿಸುತ್ತಿದ್ದಂತೆಯೇ ಆಕೆ, ʻನಿಮ್ಮ ಮೇಲೆ ಪ್ರೀತಿ ಇದೆ ನಿಜ. ಅದಕ್ಕಾಗಿ ನಿಮ್ಮ ಸಮಾಧಿ ವರೆಗೆ ಬರಬಲ್ಲೆ. ಅದರಾಚೆಗೆ ಕಷ್ಟ’ ಎಂದಳು.
ನಾನು ಬರ್ತೇನೆ ಕಣ್ರೀ..’- ಧ್ವನಿಯೊಂದು ತೂರಿಬಂತು. ಆಕೆ ಮೊದಲ ಹೆಂಡತಿ. ಮಲ್ಯರು ಮಂಜಾಗುತ್ತಿದ್ದ ಕಣ್ಣುಗಳಿಂದಲೇ ಆಕೆಯನ್ನು ನೋಡಿದರು. ತುಂಬ ತೆಳ್ಳಗಿನ, ದುರ್ಬಲ ಜೀವ ಅದಾಗಿತ್ತು. ನಾನು ಆಕೆಯ ಬಗ್ಗೆ ಗಮನವನ್ನೇ ಕೊಡಲಿಲ್ಲ. ಊಟ ಮಾಡಿದಳೋ ಎಂದು ಕೇಳಲಿಲ್ಲ, ಏನನ್ನೂ ಕೊಡಿಸಲಿಲ್ಲ. ಪ್ರೀತಿಯಿಂದ ಮಾತನಾಡಿಸಲಿಲ್ಲ. ಆದರೂ ಆಕೆ.., ಮಲ್ಯರು ಗದ್ಗದಗೊಂಡರು. ಇನ್ನೊಂದು ಅವಕಾಶವಿದ್ದರೆ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಆಶಿಸಿದರು.
ಅಷ್ಟು ಹೊತ್ತಿಗೆ ಯಮನ ಪಾಶ ಮಲ್ಯರ ಕೊರಳಿಗೆ ಬಿತ್ತು.
ದಾರಿಯಲ್ಲಿ ಹೋಗುತ್ತಾ ಚಿತ್ರ ಗುಪ್ತ ಹೇಳಿದ: ಉದ್ಯಮಿ ಮಲ್ಯರೇ ನಿಮಗೆ ಮಾತ್ರ ಅಲ್ಲ, ಜಗತ್ತಿನಲ್ಲಿ ಎಲ್ಲರಿಗೂ ನಾಲ್ವರು ಹೆಂಡತಿಯರು ಇರುತ್ತಾರೆ.
-ನಾಲ್ಕನೇ ಹೆಂಡತಿ ನಮ್ಮ ದೇಹ. ಅದನ್ನು ಎಷ್ಟೇ ಆರೈಕೆ ಮಾಡಿದರೂ, ಅಲಂಕಾರ ಮಾಡಿದರೂ ಸಾವಿನ ಸಂದರ್ಭದಲ್ಲಿ ಅದನ್ನು ಬಿಟ್ಟುಹೋಗಲೇಬೇಕು.
-ಮೂರನೇ ಪತ್ನಿ ಎಂದರೆ ನಾವು ಸಂಗ್ರಹಿಸುವ ಸಂಪತ್ತು, ಆಸ್ತಿಪಾಸ್ತಿ. ಜೀವನವಿಡೀ ನಾವು ಇದಕ್ಕಾಗಿ ತಹತಹಿಸುತ್ತೇವೆ. ಆದರೆ, ಹೊರಡುವಾಗ ಅವ್ಯಾವುದೂ ನಮ್ಮ ಜತೆ ಬರುವುದಿಲ್ಲ.
– ಎರಡನೇ ಹೆಂಡತಿ ಎಂದರೆ ನಮ್ಮ ಕುಟುಂಬ, ಗೆಳೆಯರು ಎಲ್ಲ. ಅವರು ಬದುಕಿರುವಾಗ ನಮ್ಮ ಜತೆಗಿರುತ್ತಾರೆ. ಅವರು ಸಮಾಧಿಯವರೆಗಷ್ಟೇ ಬರಬಲ್ಲರು.
ಹಾಗಿದ್ದರೆ ನನ್ನ ಜತೆ ಬರುತ್ತೇನೆ ಅಂದ ಮೊದಲ ಹೆಂಡತಿ ಯಾರು? ಮಲ್ಯರು ಕುತೂಹಲದಿಂದ ಕೇಳಿದರು.
– ಮೊದಲ ಹೆಂಡತಿ ಎಂದರೆ ನಮ್ಮ ಆತ್ಮ. ಯಾವತ್ತೂ ನಮ್ಮ ಜತೆಗಿರುವ ಅದನ್ನು ನಾವು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡುತ್ತೇವೆ. ಇತರ ಮೂರು ಆಸೆಗಳ ಬೆನ್ನುಹತ್ತಿ ನಮ್ಮನ್ನು ನಾವು ನಿರ್ಲಕ್ಷ್ಯ ಮಾಡುವುದೇ ಹೆಚ್ಚು. ನಿಜವಾಗಿ ನಾವು ಹೆಚ್ಚು ಆಪ್ತವಾಗಿರಬೇಕಾದ್ದು ಮೊದಲ ಹೆಂಡತಿ ಜತೆ. ಈಗ ನಿಮಗೂ ಗೊತ್ತಾಗಿರಬೇಕಲ್ಲ.. ನೀವು ಮೊದಲ ಹೆಂಡತಿಯನ್ನು ತುಂಬ ನಿರ್ಲಕ್ಷ್ಯ ಮಾಡಿದಿರಿ ಅಂತ.
ಮಲ್ಯರು ಹೌದೆಂದರು.. ಮೊದಲ ಹೆಂಡತಿಯ ಕೈಯನ್ನೊಮ್ಮೆ ಜೋರಾಗಿ ಅಮುಕಿದರು.
ಇದನ್ನೂ ಓದಿ| Motivational story | ನಮಗಾಗಿ, ನಮ್ಮನ್ನು ಜತನದಿಂದ ಕಾಪಾಡುವುದಕ್ಕಾಗಿ ಧರೆಗಿಳಿದ ಆ ದೇವತೆಯ ಹೆಸರೇ…