ಕೃಷ್ಣ ಭಟ್ ಅಳದಂಗಡಿ- Motivational story
ವಿಶಾಲಾಕ್ಷಮ್ಮ ಅಮೆರಿಕಕ್ಕೆ ಹೊರಟಿದ್ದರು. ಜೀವನದಲ್ಲಿ ಮೊದಲ ಬಾರಿ ವಿಮಾನದಲ್ಲಿ ಪ್ರಯಾಣ. ಅವರದು ಬಡ ಕುಟುಂಬ. ಗಂಡ ಬೇಗನೆ ತೀರಿಕೊಂಡಿದ್ದರು. ಹಾಗಾಗಿ ಮಗನನ್ನು ತಾವೇ ಕಷ್ಟಪಟ್ಟು ಬೆಳೆಸಿದ್ದರು. ಅವನೂ ಚೆನ್ನಾಗಿ ಕಲಿತು ಅಮೆರಿಕದಲ್ಲಿ ಉದ್ಯೋಗವೂ ಸಿಕ್ಕಿತ್ತು.
ಕೆಲಸ ಸಿಕ್ಕಿ ಎರಡು ವರ್ಷವಾದರೂ ಒಂದು ಬಾರಿಯೂ ಊರಿಗೆ ಬರಲು ಆಗಲಿಲ್ಲ. ಹೀಗಾಗಿ ಅದೊಂದು ದಿನ ನೀನೇ ಬಂದು ಬಿಡಮ್ಮ.. ನಾನು ಇಲ್ಲಿ ವಿಮಾನ ನಿಲ್ದಾಣದಲ್ಲಿ ರಿಸೀವ್ ಮಾಡ್ತೇನೆ’ ಅಂದಿದ್ದ. ಪಕ್ಕದ ಮನೆಯ ಗೆಳೆಯ ವಿಶ್ವನಾಥ್ಗೆ ಹೇಳಿ ಪಾಸ್ಪೋರ್ಟ್, ವೀಸಾ ಎಲ್ಲ ರೆಡಿ ಮಾಡಿಸಿದ್ದ. ವಿಶ್ವನಾಥನೇ ಪ್ಯಾಕಿಂಗ್ ಮತ್ತಿತರ ಕೆಲಸ ಎಲ್ಲ ಮಾಡಿ ವಿಶಾಲಾಕ್ಷಮ್ಮನನ್ನು ವಿಮಾನ ಹತ್ತಿಸಿದ್ದ. ವಿಮಾನ ಹತ್ತಿದವರೇ ವಿಶಾಲಾಕ್ಷಮ್ಮ ಗಗನಸಖಿಯ ಸಹಾಯದಿಂದ ತಮ್ಮ ಸೀಟು ಗುರುತಿಸಿಕೊಂಡು ಕುಳಿತರು.
ಅದು ವಿಂಡೋ ಸೀಟ್. ಹೊರಗಿನ ಜಗತ್ತನ್ನು ಮೇಲಿಂದ ನೋಡಬಹುದು ಅಂತೆಲ್ಲ ಯೋಚಿಸುತ್ತಾ ಥ್ರಿಲ್ಲಾದರು ವಿಶಾಲಾಕ್ಷಮ್ಮ. ಅಷ್ಟು ಹೊತ್ತಿಗೆ ಅವರ ಪಕ್ಕದ ಸೀಟಿಗೆ ಒಬ್ಬ ದಢೂತಿ ಮತ್ತು ಒಳ್ಳೆ ಮೇಕಪ್ ಮಾಡಿಕೊಂಡಿದ್ದ ಮಹಿಳೆ ಬಂದರು. ಅವರು ವಿಶಾಲಾಕ್ಷಮ್ಮನನ್ನು ನೋಡಿದರು. ಕೂಡಲೇ ಗಗನ ಸಖಿಯನ್ನು ಕರೆದರು. ವಿಶಾಲಾಕ್ಷಮ್ಮ ಎಂದಿನಂತೆ ಸಾಧಾರಣ ಸೀರೆ ಉಟ್ಟಿದ್ದರು. ಅವರು ಎಂದೂ ಮುಖಕ್ಕೆ ಪೌಡರ್ ಕೂಡಾ ಹಾಕಿದವರಲ್ಲ. ಥೇಟ್ ಹಳ್ಳಿ ಹೆಂಗಸಿನಂತೆಯೇ ಇದ್ದರು.
ಗಗನ ಸಖಿಯನ್ನು ಕರೆದ ದಢೂತಿ ಹೆಂಗಸು: ಏನೂಂತ ತಿಳ್ಕೊಂಡಿದ್ದೀರಿ.. ನಾನು ಈ ಗಮಾರ ಹೆಂಗಸಿನ ಜತೆ ಇಪ್ಪತ್ತನಾಲ್ಕು ತಾಸು ಪ್ರಯಾಣ ಮಾಡಬೇಕಾ? ಕಾಮನ್ ಸೆನ್ಸ್ ಇಲ್ವಾ? ನನ್ನ ಸೀಟ್ ಚೇಂಜ್ ಮಾಡಿಕೊಡಿ- ಅಂದರು. ಗಗನಸಖಿ ಹೇಳಿದರು: ಮೇಡಂ ಇಲ್ಲೇ ಬೇರೆ ಸೀಟು ಇದ್ದರೆ ಟ್ರೈ ಮಾಡ್ತೇನೆ. ವೇಟ್ ಮಾಡಿ. ವಿಶಾಲಾಕ್ಷಮ್ಮನವರಿಗೆ ಇವರೇನು ಮಾತನಾಡುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತಿರಲಿಲ್ಲ. ಯಾಕೆಂದರೆ ಅವರಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಗೊತ್ತಿರಲಿಲ್ಲ. ಇವರು ಮಾತನಾಡಿದ್ದು ಇಂಗ್ಲಿಷ್ ನಲ್ಲಿ.
ಅಷ್ಟು ಹೊತ್ತಿಗೆ ಮರಳಿ ಬಂದ ಗಗನಸಖಿ, ಅರೇಂಜ್ ಆಗ್ತಿಲ್ಲ ಮೇಡಂ.. ಎಲ್ಲ ಸೀಟ್ ಫಿಲ್ ಆಗಿದೆ. ಬೇರೆ ಸೀಟಿನಲ್ಲಿರುವವರು ಅವರ ಸೀಟಲ್ಲೇ ಕಂಫರ್ಟ್ ಇದ್ದಾರೆ. ನೋಡ್ತೀನಿ.. ಇನ್ನೊಂದು ರೌಂಡ್ ಟ್ರೈ ಮಾಡ್ತೀನಿ” ಅಂದರು. ದಢೂತಿ ಹೆಂಗಸು ಯಾವ ಮಾತನ್ನೂ ಕೇಳಲು ರೆಡಿ ಇರಲಿಲ್ಲ. `ಒಂದೋ ಸೀಟ್ ಚೇಂಜ್ ಮಾಡಿಕೊಡಿ. ಇಲ್ಲದಿದ್ದರೆ ಬೇರೆ ಫ್ಲೈಟಲ್ಲಿ ಅರೇಂಜ್ ಮಾಡಿಕೊಡಿ’ ಅಂತ ಹಠ.
ಗಗನ ಸಖಿ ಹೇಳಿದರು: ನೋಡೋಣ ಕ್ಯಾಪ್ಟನ್ ಅವರನ್ನು ಕೇಳ್ತೇನೆ. ಬ್ಯುಸಿನೆಸ್ ಕ್ಲಾಸಲ್ಲಿ ಸೀಟು ಇದೆಯಾ ಅಂತ. ಏನಾದ್ರೂ ಅರೇಂಜ್ ಮಾಡ್ತೇನೆ ಮೇಡಂ.
ಸ್ವಲ್ಪ ಹೊತ್ತಿನಲ್ಲಿ ಗಗನ ಸಖಿ ಮರಳಿ ಬಂದರು: ಮೇಡಂ ಒಮ್ಮೆ ಸೀಟು ಬುಕ್ ಮಾಡಿದ ಮೇಲೆ ವಿಶೇಷ ಸಂದರ್ಭ ಬಿಟ್ಟರೆ ಬದಲಾವಣೆ ಮಾಡಲ್ಲ. ಆದರೂ ನಿಮ್ಮ ಕಂಫರ್ಟ್‌ಗೆ ತೊಂದರೆ ಆಗಬಾರದು ಅಂತ ಇಷ್ಟು ಪ್ರಯತ್ನ ಪಟ್ಟಿದ್ದೇನೆ. ನಿಜವೆಂದರೆ ಇಕಾನಮಿ ಕ್ಲಾಸ್ನಿಂದ ಬ್ಯುಸಿನೆಸ್ ಕ್ಲಾಸ್‌ಗೆ ಶಿಫ್ಟ್ ಮಾಡುವ ಹಾಗಿಲ್ಲ. ಯಾಕೆಂದರೆ ದರ ವ್ಯತ್ಯಾಸವೂ ತುಂಬ ಇರ್ತದೆ. ಆದರೂ ವಿಶೇಷವಾಗಿ ಪರಿಗಣಿಸಿ ಬ್ಯುಸಿನೆಸ್ ಕ್ಲಾಸ್ನಲ್ಲಿ ಒಂದು ಸೀಟು ಅರೇಂಜ್ ಮಾಡಿದ್ದೇನೆ-ಅಂದರು.
ದಡೂತಿ ಹೆಂಗಸಿಗೆ ಸಿಕ್ಕಾಪಟ್ಟೆ ಖುಷಿ ಆಯಿತು. ಯಾರಿಗುಂಟು ಯಾರಿಗಿಲ್ಲ.. ಬ್ಯುಸಿನೆಸ್ ಕ್ಲಾಸ್ ಭಾಗ್ಯ. ತಾನು ಜಗಳ ಮಾಡಿದ್ದರಿಂದ ಎಷ್ಟೊಂದು ಲಾಭ ಆಯಿತು ಅಂತ ಮನಸ್ಸಲ್ಲೇ ಅಂದುಕೊಂಡು ಬ್ಯಾಗ್ಗಳನ್ನು ಜೋಡಿಸತೊಡಗಿದರು. ಅವರು ಬ್ಯಾಗ್ ಹಿಡಿದು ಎದ್ದು ನಿಲ್ಲುತ್ತಿದ್ದಂತೆಯೇ ಗಗನ ಸಖಿ ಹೇಳಿದರು: ಮೇಡಂ, ನೀವು ಸ್ವಲ್ಪ ಬದಿಗೆ ನಿಲ್ಲಿ, ವಿಶಾಲಾಕ್ಷಮ್ಮ ನೀವು ನಿಮ್ಮ ಬ್ಯಾಗ್ ಹಿಡಿದುಕೊಂಡು ನನ್ನ ಜತೆಗೆ ಬ್ಯುಸಿನೆಸ್ ಕ್ಲಾಸ್ಗೆ ಬನ್ನಿ!
ದಢೂತಿ ಮಹಿಳೆ ಸಿಟ್ಟು ಬಂತು. ಸೀಟು ಚೇಂಜ್ ಕೇಳಿದ್ದು ನಾನು, ಅವರನ್ನು ಯಾಕೆ ಕರ್ಕೊಂಡು ಹೊಗ್ತಾ ಇದ್ದೀರಿ ಎಂದರು.
ಆಗ ಗಗನಸಖಿ ತಾಳ್ಮೆಯಿಂದ ಹೇಳಿದರು: ಮೇಡಂ, ನೀವು ಡಿಸ್ ಕಂಫರ್ಟ್ ಆಗಿರುವುದು ಅವರು ಪಕ್ಕದಲ್ಲಿ ಇರುವುದರಿಂದ ಅಲ್ವೇ? ನಿಮಗ್ಯಾಕೆ ತಲೆಬಿಸಿ. ವಿ ವಿಲ್ ಮೇಕ್ ಅರೇಂಜ್ಮೆಂಟ್ಸ್.
ಗಗನಸಖಿ ವಿಶಾಲಾಕ್ಷಮ್ಮನ ಕೈಹಿಡಿದು ಕರೆದುಕೊಂಡು ಹೋಗುತ್ತಿದ್ದರೆ ಇಡೀ ವಿಮಾನದಲ್ಲಿದ್ದವರು ಎದ್ದು ನಿಂತು ಚಪ್ಪಾಳೆ ತಟ್ಟಿದರು.. ಗಗನ ಸಖಿ ತೋರಿದ ಆ ಅಪೂರ್ವ ಸಮಯಪ್ರಜ್ಞೆಗೆ ಮತ್ತು ಸೂಕ್ಷ್ಮ ಸಂವೇದನೆಗೆ.
ಇದನ್ನೂ ಓದಿ | Motivational story: ಕಿವಿ ಕೇಳಿಸದ್ದು ಯಾರಿಗೆ? ಹೆಂಡತಿಗಾ, ಗಂಡನಿಗಾ?
ಇದನ್ನೂ ಓದಿ| Motivational story: ಕುಂಟ ನಾಯಿ ಮರಿಯ ನೋವು ಆ ಮಗುವಿಗಷ್ಟೇ ಅರ್ಥವಾಯ್ತು…