Site icon Vistara News

Motivational story: ನಾವು ಮಾಡಿದ ಕೆಲಸದ ಫಲ ನಮಗೇ ಸಿಗುತ್ತಲ್ವಾ?

ಕೃಷ್ಣ ಭಟ್‌ ಅಳದಂಗಡಿ- Motivational stroy
ಒಬ್ಬ ಕಟ್ಟಡ ಕಟ್ಟುವ ವಾಸ್ತುಶಿಲ್ಪಿ ನಿವೃತ್ತಿಯ ಕೊನೆಯ ಹಂತಕ್ಕೆ ಬಂದಿದ್ದ. ಇನ್ನೇನು ಕೆಲವೇ ದಿನ, ನಾನು ಸಂಪೂರ್ಣ ಸ್ವತಂತ್ರನಾಗುತ್ತೇನೆ. ಯಾವುದೇ ಜಂಜಾಟಗಳಿಲ್ಲ. ನನಗೆ ಖುಷಿಬಂದಂತೆ ಇರಬಹುದು ಎಂದು ಎಲ್ಲ ಸಹೋದ್ಯೋಗಿಗಳಲ್ಲಿ ಹೇಳಿಕೊಳ್ಳುತ್ತಿದ್ದ. ಒಳ್ಳೆಯ ಕೆಲಸಗಾರನಾಗಿದ್ದ, ಪ್ಲ್ಯಾನರ್ ಆಗಿದ್ದ ಆತ ಬಿಟ್ಟುಹೋಗುವ ಬಗ್ಗೆ ಕಂಪನಿಯಲ್ಲೂ ಬೇಸರವಿತ್ತು. ಆದರೆ, ನಿವೃತ್ತಿ ಕಡ್ಡಾಯವಾಗಿತ್ತು.

ಅದೊಂದು ದಿನ ಕಂಪನಿಯ ಮಾಲೀಕ ಶಿಲ್ಪಿಯನ್ನು ಕರೆದು, ನೀವು ಕೊನೆಯದಾಗಿ ಇದೊಂದು ಪ್ರಾಜೆಕ್ಟ್ ಮಾಡಿಕೊಡಬೇಕು. ಒಂದೊಳ್ಳೆ ಮನೆ ಕಟ್ಟಿಕೊಡಬೇಕು,” ಎಂದು ಕೇಳಿಕೊಂಡರು. ಆಯ್ಯೋ ನಿವೃತ್ತಿಗೆ ಕೆಲವೇ ದಿನಗಳು ಇರುವಾಗ ಇದೆಂಥ ಕಿರಿಕಿರಿ, ಹೋಗುವಾಗಲೂ ನೆಮ್ಮದಿಯಾಗಿ ಇರಲು ಬಿಡುವುದಿಲ್ಲ ಅಂದುಕೊಳ್ಳುತ್ತಲೇ ಕೆಲಸ ಆರಂಭಿಸಿದರು.

ಬೇಗನೆ ಕೆಲಸ ಮುಗಿಸುವ ಅವಸರದಲ್ಲಿ ಸರಿಯಾಗಿ ಪ್ಲ್ಯಾನ್ ಮಾಡಲಿಲ್ಲ, ಒಳ್ಳೆಯ ಸಾಮಗ್ರಿಗಳನ್ನು ಬಳಸಲಿಲ್ಲ. ಸ್ವಿಮ್ಮಿಂಗ್ ಪೂಲ್ ಕಟ್ಟಲಿಲ್ಲ. ಅವಸರಕ್ಕೊಂದು ಮನೆ ಕಟ್ಟಿ ಒಪ್ಪಿಸಿಬಿಟ್ಟರು.

ಅದೇ ದಿನ ಕಂಪನಿಯ ಮಾಲೀಕರು ಒಂದು ಸಮಾರಂಭ ಏರ್ಪಡಿಸಿದರು. ಅದು ಈ ವಾಸ್ತು ಶಿಲ್ಪಿಯ ಬೀಳ್ಕೊಡುಗೆ. ಅದರಲ್ಲಿ ಮಾಲೀಕರು, ಹೊಸದಾಗಿ ಕಟ್ಟಿರುವ ಈ ಮನೆಯನ್ನು ಅವರಿಗೆ ಕೊಡುಗೆಯಾಗಿ ನೀಡುವುದಾಗಿ ಪ್ರಕಟಿಸಿದರು. ಶಿಲ್ಪಿ ಪಶ್ಚಾತ್ತಾಪದಿಂದ ನರಳಿದರು.

ಕೆಲವೊಮ್ಮೆ ನಾವೂ ಹಾಗೇ ಅಲ್ವಾ? ನಾವು ಯಾರಿಗೋ ಕೆಲಸ ಮಾಡ್ತೇವೆ ಅಂದುಕೊಳ್ತೇವೆ. ಯಾಕೆ ಕಷ್ಟಪಡಬೇಕು ಅಂತ ಉದಾಸೀನ ಮಾಡ್ತೇವೆ. ನಾವು ಮಾಡಿದ ಕೆಲಸದ ಫಲ ಒಂದಲ್ಲ ಒಂದು ದಿನ ನಮಗೇ ಮರಳಿ ಬಂದೀತು ಅಂತ ಯೋಚನೆ ಮಾಡುವುದಿಲ್ಲ. ಮಾಡಿದರೆ ಇನ್ನಷ್ಟು ಚಂದಕ್ಕೆ ಮಾಡಬಹುದು ಅಲ್ವಾ?

ಇದನ್ನೂ ಓದಿ| Motivational story: ಕಾಡು ದಾರಿಯಲ್ಲಿ ಕಾಲಿಗೆ ಮುಳ್ಳು ಚುಚ್ಚಿದಾಗ ಕಂಡ ದೇವರು

Exit mobile version