Site icon Vistara News

Motivational story | ಪ್ರತಿ ನೆಗೆಟಿವ್‌ನಲ್ಲೂ ಹಲವು ಪಾಸಿಟೀವ್‌ ಇರ್ತದೆ ಅಂದ ಆ ಕಲಾವಿದ! ಒಂಟಿ ಕಣ್ಣಿನ ರಾಜನೂ ಅಲ್ಲಿ ಮಿಂಚಿದ್ದ!

king and art

ಕೃಷ್ಣ ಭಟ್‌ ಅಳದಂಗಡಿ- Motivational story
ಅದೊಂದು ಸಾಮ್ರಾಜ್ಯ. ಅಲ್ಲೊಬ್ಬ ದೊರೆ ಇದ್ದ. ಆ ಮಹಾರಾಜನಿಗೆ ಒಂದು ಕಾಲು ಇರಲಿಲ್ಲ. ಒಂದು ಕಣ್ಣೂ ಇರಲಿಲ್ಲ. ನೋಡಲು ಸುಂದರವೂ ಆಗಿರಲಿಲ್ಲ. ಹಾಗಂತ ಅವನೇನೂ ದುರ್ಬಲನಲ್ಲ. ತುಂಬ ಬುದ್ಧಿವಂತನಿದ್ದ ಮತ್ತು ಕರುಣಾಮಯಿ ಆಡಳಿತಗಾರನೂ ಹೌದು. ಅವನ ಆಡಳಿತದಲ್ಲಿ ಪ್ರತಿಯೊಬ್ಬರೂ ನೆಮ್ಮದಿಯಿಂದ, ಆರೋಗ್ಯದಿಂದ ಇದ್ದರು.

ಅದೊಂದು ದಿನ ಅವನು ತನ್ನ ಅರಮನೆಯ ಪಡಸಾಲೆಯಲ್ಲಿ ಸಾಗುತ್ತಿದ್ದ. ಅಲ್ಲಿ ಆ ಮಹಾಸಾಮ್ರಾಜ್ಯವನ್ನು ಆಳಿದ ಹಿರಿಯರ ಸುಂದರವಾದ ಬೃಹತ್‌ ಚಿತ್ರಗಳನ್ನು ಹಾಕಲಾಗಿತ್ತು. ಅದನ್ನೆಲ್ಲ ನೋಡುತ್ತಿದ್ದಂತೆಯೇ ಅವನಿಗೊಂದು ಆಸೆಯಾಯಿತು. ಮುಂದೆ ಯಾವತ್ತಾದರೂ ಇದೇ ರೀತಿ ನನ್ನ ಮಕ್ಕಳು, ಮೊಮ್ಮಕ್ಕಳು ಈ ಪಡಸಾಲೆಯನ್ನು ದಾಟಿ ಹೋಗುವಾಗ ಅವರಿಗೂ ಕಾಣೋ ಹಾಗೆ ನನ್ನದೊಂದು ಚಿತ್ರ ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು ಅಲ್ವಾ? ಅಂತ ಯೋಚಿಸಿದ.

ಆದರೆ, ಅವನ ಯಾವ ಕಲಾಕೃತಿಯನ್ನೂ ಅದುವರೆಗೆ ಮಾಡಿಸಿರಲಿಲ್ಲ. ಅವನ ದೈಹಿಕ ನ್ಯೂನತೆಯಿಂದಾಗಿ ಚಿತ್ರ ಚೆನ್ನಾಗಿ ಬರುತ್ತದೆ ಎಂಬ ನಂಬಿಕೆಗೆ ಅವನಿಗೆ ಇರಲಿಲ್ಲ. ಹೇಳಿಸಿಕೊಂಡು ಅಪಮಾನ ಮಾಡಿಸಿಕೊಳ್ಳುವುದು ಯಾಕೆ ಎಂದು ಆತನೂ ಸುಮ್ಮನಿದ್ದ. ಆದರೆ, ಈ ಬಾರಿ ಒಂದು ಚಿತ್ರ ಮಾಡಿಸಿಯೇ ಬಿಡೋಣ ಎಂದು ತೀರ್ಮಾನಿಸಿದ.

ಹೀಗೆ ತನ್ನ ನಾಡಿನ ಮಾತ್ರವಲ್ಲ ಪಕ್ಕದ ರಾಜ್ಯದ ಕಲಾವಿದರಿಗೂ ಆಹ್ವಾನವನ್ನು ನೀಡಿದ. ರಾಜನ ಆಹ್ವಾನವನ್ನು ನೋಡಿ ತುಂಬಾ ಜನ ಇದು ಆಗುವ ಹೋಗುವ ಕೆಲಸ ಅಲ್ಲ ಎಂದು ತಪ್ಪಿಸಿಕೊಂಡರು. ಕೆಲವರು ಅರಮನೆಗೆ ಬಂದರು. ಬಂದವರಲ್ಲೂ ತುಂಬ ಅಳುಕಿತ್ತು. ಇಷ್ಟು ನ್ಯೂನತೆಗಳನ್ನು ಹೊಂದಿರುವ ರಾಜನ ಚಿತ್ರವನ್ನು ಹಾಗೇ ಬಿಡಿಸಬೇಕಾ? ಬಿಡಿಸಿದರೆ ಅವರಿಗೆ ಬೇಸರವಾಗುವುದಿಲ್ಲವೇ? ಇಲ್ಲಸಲ್ಲದ ರೀತಿಯಲ್ಲಿ ಬಿಡಿಸಲು ಕಷ್ಟ, ಯಾಕೆಂದರೆ, ಇದೊಂದು ಭಾವಚಿತ್ರವಲ್ಲವೇ? ಎಂದು ಯೋಚಿಸಿದರು.

ಒಂದು ವೇಳೆ ಚಿತ್ರ ಚೆನ್ನಾಗಿ ಬಾರದೆ ಇದ್ದಲ್ಲಿ ರಾಜನಿಗೆ ಬೇಸರವಾಗಬಹುದು, ಶಿಕ್ಷೆಯನ್ನೂ ಕೊಡಬಹುದು ಎನ್ನುವ ಆತಂಕವೂ ಅವರಿಗೆ ಇತ್ತು. ಹೀಗಾಗಿ ಬಂದವರೆಲ್ಲರೂ ಒಂದೊಂದು ನೆಪ ಹೇಳಿ ಹಿಂದೆ ಸರಿಯಲು ಆರಂಭಿಸಿದರು. ಇದರ ನಡುವೆ, ಒಬ್ಬ ಯುವಕ ಮಾತ್ರ ನಾನು ಮಾಡ್ತೀನಿ ಮಹಾರಾಜ ಎಂದು ಧೈರ್ಯದಿಂದ ಹೇಳಿದ.

ಮಹಾರಾಜನಿಗೆ ಈ ಕಲಾವಿದರೆಲ್ಲ ಯಾಕೆ ಹಿಂದೆ ಸರಿದರು ಎನ್ನುವುದರ ಅರಿವಿತ್ತು. ಹಾಗಂತ ಅವನು ಅವರ ನಡೆಗಳನ್ನು ಆಕ್ಷೇಪಿಸಲಿಲ್ಲ. ತಾನಿರುವುದೇ ಹೀಗಲ್ವಾ? ಅವರನ್ನು ಯಾಕೆ ಶಪಿಸೋದು ಎಂದು ಸುಮ್ಮನಿದ್ದ. ಕೊನೆಗೆ ಒಬ್ಬನಾದರೂ ಚಿತ್ರ ಬಿಡಿಸಲು ಮುಂದಾಗಿದ್ದನ್ನು ನೋಡಿ ಖುಷಿಪಟ್ಟ.

ಯುವಕ ಚಿತ್ರ ಬಿಡಿಸಲು ಮುಂದಾಗಿದ್ದನ್ನು ನೋಡಿ ಉಳಿದ ಕಲಾವಿದರಿಗೆ ಕುತೂಹಲ ಉಂಟಾಯಿತು. ಕಾಲಿಲ್ಲದ, ಕಣ್ಣಿಲ್ಲದ, ದೈಹಿಕ ಊನತೆಗಳಿರುವ ರಾಜನ ಚಿತ್ರವನ್ನು ಅವನಿಗೆ ಇಷ್ಟವಾಗುವಂತೆ ಈ ಕಲಾವಿದ ಹೇಗೆ ಬಿಡಿಸಬಲ್ಲ ಎನ್ನುವುದು ಅವರಿಗೆ ಅಚ್ಚರಿಯಾಗಿ ಕಾಡಿತ್ತು. ಒಂದು ವೇಳೆ ಚಿತ್ರ ಚೆನ್ನಾಗಿ ಬರದಿದ್ದರೆ ಆ ಕಲಾವಿದನಿಗೆ ಏನು ಕಾದಿದೆಯೋ ಎಂಬ ಭಯವೂ ಒಂದು ಕಡೆ.

ಆದರೆ, ಯುವಕ ಮಾತ್ರ ತುಂಬ ತಣ್ಣಗೆ ತನ್ನ ಕೆಲಸ ಮಾಡಲು ಆರಂಭಿಸಿದ. ಕೊನೆಗೆ ಒಂದು ಚಿತ್ರವನ್ನು ಪೂರ್ಣಗೊಳಿಸಿದ. ಅದನ್ನು ತಂದು ರಾಜ ಮತ್ತು ಇತರರ ಮುಂದೆ ಇಟ್ಟ. ಅದನ್ನು ನೋಡಿ ಸ್ವತಃ ರಾಜನೇ ಸ್ತಂಭೀಭೂತನಾದ!

ಆ ಕಲಾವಿದ ರಾಜ ಕುದುರೆ ಸವಾರಿ ಮಾಡುವಂತೆ ಚಿತ್ರವನ್ನು ಬರೆದಿದ್ದ. ಕುದುರೆ ಮೇಲೆ ಕುಳಿತ ರಾಜನ ಒಂದು ಕಾಲು ಮಾತ್ರ ಚಿತ್ರದಲ್ಲಿ ಕಾಣುತ್ತಿತ್ತು! ರಾಜ ಕುದುರೆ ಸವಾರಿ ಮಾಡುತ್ತಲೇ ಯಾವುದೋ ದೂರದ ಗುರಿಗೆ ಬಾಣ ಬಿಡುವಂತೆ ಚಿತ್ರಿಸಲಾಗಿತ್ತು. ರಾಜ ತನ್ನ ಒಂದು ಕಣ್ಣನ್ನು ಮುಚ್ಚಿ ಬಾಣವನ್ನು ಎಳೆದು ಗುರಿ ಇಟ್ಟ ಚಿತ್ರವದು!

ಕಲಾವಿದ ರಾಜನಿಗಿದ್ದ ಎಲ್ಲ ದೈಹಿಕ ನ್ಯೂನತೆಗಳನ್ನು ಬಳಸಿಕೊಂಡೇ ಅಲ್ಲೊಂದು ಸುಂದರ ಚಿತ್ರ ಬರೆದಿದ್ದ. ಅವನು ಯಾವ ನ್ಯೂನತೆಯನ್ನೂ ಮುಚ್ಚಿ ಹಾಕಿರಲಿಲ್ಲ. ಆದರೆ ಅದನ್ನೇ ಶಕ್ತಿಯಾಗಿ ಬಳಸಿಕೊಂಡು ಕಲಾಕೃತಿಯನ್ನು ರೂಪಿಸಿದ್ದ. ರಾಜನಿಗೆ ತನ್ನ ಚಿತ್ರವೇ ಇದು ಎನ್ನಿಸುವಷ್ಟು ಹೆಮ್ಮೆಯಾಯಿತು. ತನ್ನ ವೈಕಲ್ಯಗಳನ್ನು ಕೂಡಾ ಇಷ್ಟೊಂದು ಸುಂದರವಾಗಿ ಪ್ರಸ್ತುತಪಡಿಸುತ್ತಲೇ ಚಂದದ ಚಿತ್ರ ಬರೆದ ಕಲಾವಿದನನ್ನು ಅಭಿಮಾನದಿಂದ ಗೌರವಿಸಿದ.

ಕೊನೆಗೊಂದು ಪ್ರಶ್ನೆ ಕೇಳಿದ ರಾಜ: ನಾನು ಇಷ್ಟು ಊನತೆಗಳನ್ನು ಹೊಂದಿದ್ದೇನೆ. ಆದರೂ ಇಷ್ಟೊಂದು ಚಂದದ ಚಿತ್ರ ಬರೆಯುವ ಕಲ್ಪನೆ ನಿಮಗೆ ಹೇಗೆ ಬಂತು?

ಕಲಾವಿದ ಉತ್ತರಿಸಿದ: ನಾನು ಯಾವುದೇ ವ್ಯಕ್ತಿಯಲ್ಲಿರುವ ನೇತ್ಯಾತ್ಮಕ ಅಂಶಗಳ ಕಡೆಗೆ ಹೆಚ್ಚು ಗಮನ ಕೊಡುವುದಿಲ್ಲ. ಒಂದು ವೇಳೆ ಗಮನಕ್ಕೆ ಬಂದರೂ ಅದನ್ನು ಹೇಗೆ ಪಾಸಿಟೀವ್‌ ಆಗಿ ನೋಡಬಹುದು ಎಂದು ಯೋಚನೆ ಮಾಡುತ್ತೇನೆ. ಹಾಗಂತ ನಾನು ಯಾವುದನ್ನೂ ಮುಚ್ಚಿ ಹಾಕಿ ವೈಭವೀಕರಿಸುವುದಿಲ್ಲ. ಅವುಗಳನ್ನು ಬಳಸಿಕೊಂಡೇ ವ್ಯಕ್ತಿಯ ಶಕ್ತಿಯನ್ನು ವಿಜೃಂಭಿಸುತ್ತೇನೆ. ಪ್ರತಿಯೊಂದು ನೆಗೆಟಿವ್‌ನಲ್ಲೂ ಹಲವು ಪಾಸಿಟೀವ್‌ಗಳಿರುತ್ತವೆ ಎನ್ನುವುದು ನನ್ನ ನಂಬಿಕೆ.

ಇಡೀ ಆಸ್ಥಾನ ಚಪ್ಪಾಳೆಗಳಿಂದ ತುಂಬಿ ಹೋಯಿತು. ಚಪ್ಪಾಳೆ ಬಿದ್ದಿದ್ದು ಕೇವಲ ಆ ಚಿತ್ರಕ್ಕಾಗಿ ಅಲ್ಲ, ಆ ಕಲಾವಿದನ ಪಾಸಿಟೀವ್‌ ಯೋಚನೆಗೆ.

ಇದನ್ನೂ ಓದಿ | Motivational story | ಬೆಟ್ಟದ ಮೇಲಿದ್ದಳು ಅನುಪಮ ಸುಂದರಿ, ಅವಳನ್ನು ಗೆಲ್ಲುವುದಕ್ಕೆ ಬೇಕಿತ್ತು ಸಾವಿರ ಮೆಟ್ಟಿಲ ಸವಾರಿ!

Exit mobile version