ಕೃಷ್ಣ ಭಟ್ ಅಳದಂಗಡಿ- Motivational story
ಅದೊಂದು ಮಹಾಸಾಮ್ರಾಜ್ಯ. ಅದರ ಅಧಿಪತಿ ವೀರನೂ, ಶೂರನೂ, ಧೀರನೂ ಹೌದು. ಅವನು ಒಂದು ಮಹಾಯುದ್ಧವನ್ನು ಗೆದ್ದು ಮರಳಿ ತನ್ನ ಅರಮನೆಗೆ ಬರುತ್ತಿದ್ದ. ಅವನ ಜತೆಗೆ ಅವನ ಮಂತ್ರಿ ಮತ್ತು ಸೈನಿಕರು ಇದ್ದರು. ಮಹಾರಾಜ ಕುದುರೆ ಮೇಲೆ ಕುಳಿತುಕೊಂಡು ಹಮ್ಮಿನಿಂದ ತಲೆ ಎತ್ತಿಕೊಂಡು ರಸ್ತೆಯಲ್ಲಿ ಸಾಗುತ್ತಿದ್ದರೆ ಊರಿನ ಜನ ಉಘೇ ಉಘೇ ಎನ್ನುತ್ತಿದ್ದರು. ಜಯಘೋಷ ಕೂಗುತ್ತಿದ್ದರು.
ಹೀಗೆ ಸಾಗುತ್ತಿರುವಾಗ ದಾರಿಯಲ್ಲಿ ಒಬ್ಬ ಸನ್ಯಾಸಿ ಕುಳಿತಿರುವುದು ಅರಸನಿಗೆ ಕಂಡಿತು. ಅರಸ ಕೂಡಲೇ ಕುದುರೆಯ ಮೇಲಿಂದ ಇಳಿದು ಆ ಸನ್ಯಾನಿಯ ಬಳಿಗೆ ಹೋದ. ಅವನ ಮುಂದೆ ಅಡ್ಡಬಿದ್ದು, ತಲೆಯನ್ನು ಅವರ ಕಾಲುಗಳಿಗೆ ತಾಗಿಸಿದ. ಸನ್ಯಾಸಿಗಳು.. ಇನ್ನಷ್ಟು ಯುದ್ಧ ಗೆಲ್ಲು, ಬದುಕಿನಲ್ಲೂ ಗೆಲ್ಲುತ್ತಲೇ ಹೋಗು ಎಂದು ಆಶೀರ್ವಾದ ಮಾಡಿದರು.
ಆದರೆ, ಇದು ಅವನ ಜತೆಗಿದ್ದ ಮಂತ್ರಿಗೆ, ಕೆಲವು ಸೈನಿಕರಿಗೆ ಇಷ್ಟವಾಗಲಿಲ್ಲ. ಇಷ್ಟು ದೊಡ್ಡ ಯುದ್ಧವನ್ನು ಗೆದ್ದು ಬಂದ ಮಹಾರಾಜ, ಬೀದಿ ಬದಿಯಲ್ಲಿ ಕುಳಿತ ಆ ಭಿಕ್ಷುಕನ ಕಾಲಿಗೆ ಅಡ್ಡ ಬಿದ್ದದ್ದು ಸರಿಯಲ್ಲ ಎನ್ನುವ ಅಭಿಪ್ರಾಯಕ್ಕೆ ಬಂದರು. ಅರಮನೆಗೆ ಬಂದ ಕೂಡಲೇ ಮಂತ್ರಿ ಅದನ್ನು ಮಹಾರಾಜನಿಗೆ ಹೇಳಿಯೂ ಬಿಟ್ಟರು.
ʻʻಅಲ್ಲ ಮಹಾರಾಜರೇ.. ನೀವೊಬ್ಬ ಸಾಮ್ರಾಟರು. ಅದೆಷ್ಟೋ ಯುದ್ಧಗಳನ್ನು ಗೆದ್ದಿದ್ದೀರಿ. ಎಲ್ಲರೂ ನಿಮ್ಮ ಮುಂದೆ ತಲೆಬಾಗುತ್ತಾರೆ. ನೀವು ಯಾವಾಗಲೂ ತಲೆ ಎತ್ತಿಕೊಂಡೇ ಇರಬೇಕು. ಹೋಗಿ ಹೋಗಿ ನೀವು ಆ ಬೀದಿ ಬದಿಯ ಸನ್ಯಾಸಿಯ ಮುಂದೆ ತಲೆ ಬಾಗಿಸಿದಿರಲ್ಲ.. ಇದು ನನಗೆ ಅಷ್ಟೊಂದು ಸರಿ ಹೋಗಲಿಲ್ಲʼʼ ಅಂದರು.
ರಾಜ ಏನೂ ಹೇಳಲಿಲ್ಲ.
ಮರುದಿನ ಬೆಳಗ್ಗೆ ಮಂತ್ರಿಯನ್ನು ಕರೆದರು: ಮಂತ್ರಿವರ್ಯರೇ, ಈ ಚೀಲದಲ್ಲಿ ನಾಲ್ಕು ವಸ್ತುಗಳಿವೆ. ನೀವು ಮಾರುಕಟ್ಟೆಗೆ ಹೋಗಿ ಈ ನಾಲ್ಕೂ ವಸ್ತುಗಳನ್ನು ಮಾರಾಟ ಮಾಡಿಕೊಂಡು ಬರಬೇಕು. ಇದಕ್ಕೆ ಸಂಬಂಧಪಟ್ಟು ಒಂದೇ ಒಂದು ಷರತ್ತು ಇದೆ. ಅದೇನೆಂದರೆ, ಮಾರುಕಟ್ಟೆ ತಲುಪುವ ವರೆಗೆ ಇದರಲ್ಲಿ ಏನಿದೆ ಅಂತ ನೋಡಬಾರದು.
ಮಂತ್ರಿಗಳು ಆಯಿತು ಎಂದು ಮಾರುಕಟ್ಟೆಗೆ ಹೊರಟರು. ದಾರಿ ಮಧ್ಯೆ ಹಲವು ಬಾರಿ ಏನಿದು ಅಂತ ನೋಡಿಬಿಡುವ ಹಂಬಲ ಉಂಟಾಯಿತಾದರೂ ತಡೆದುಕೊಂಡರು. ಕೊನೆಗೆ ಮಾರುಕಟ್ಟೆಗೆ ಹೋಗಿ ನೋಡಿದಾಗ ಒಮ್ಮೆಗೇ ಹೆದರಿಬಿಟ್ಟರು: ಅದರಲ್ಲಿ ಇದ್ದದ್ದು ನಾಲ್ಕು ತಲೆಗಳು! ಒಂದು ಕೋಳಿ ತಲೆ, ಇನ್ನೊಂದು ಮೀನು ತಲೆ, ಮೇಕೆ ತಲೆ ಮತ್ತು ಕೊನೆಯದು ಮನುಷ್ಯನ ತಲೆ!
ಅಯ್ಯೋ ಇದನ್ನು ಮಾರುವುದು ಹೇಗಪ್ಪಾ ಅಂತ ಚಿಂತೆಯಾಯಿತು. ಹಾಗಂತ ರಾಜಾಜ್ಞೆಯನ್ನು ಮೀರುವಂತಿಲ್ಲವಲ್ಲ! ಕೊನೆಗೆ ಹೇಗೋ ಮಾಡಿ, ಅವರಿವರ ಕಾಲು ಹಿಡಿದು ಮೂರು ತಲೆಗಳನ್ನು ಮಾರಾಟ ಮಾಡಿದರು. ಆದರೆ, ಮನುಷ್ಯನ ತಲೆಯನ್ನು ಮಾತ್ರ ಯಾರೂ ತೆಗೆದುಕೊಳ್ಳಲು ಮುಂದೆ ಬರಲೇ ಇಲ್ಲ.
ಸಂಜೆ ಮನುಷ್ಯನ ತಲೆಯೊಂದಿಗೆ ಮಂತ್ರಿ ಅರಮನೆಗೆ ಮರಳಿ ಅರಸನಿಗೆ ವಿಷಯ ತಿಳಿಸಿದರು. ಆಗ ಅರಸ, ʻʻಏನೂ ಸಮಸ್ಯೆ ಇಲ್ಲ ಮಂತ್ರಿಗಳೇ.. ನಾಳೆ ಇನ್ನೊಮ್ಮೆ ಪ್ರಯತ್ನ ಮಾಡಿ.. ಯಾರಿಗಾದರೂ ಉಚಿತವಾಗಿ ಕೊಟ್ಟುಬನ್ನಿ. ಮಾರಾಟಕ್ಕೆ ಅಂತ ಬೇಡʼ ಎಂದರು. ಮಂತ್ರಿ ಮರುದಿನವೂ ಮಾರುಕಟ್ಟೆಗೆ ಹೋದರು. ಅಲ್ಲಿ ಧರ್ಮಕ್ಕೆ ಕೊಡುತ್ತೇನೆ ಎಂದರೂ ಯಾರೂ ಮನುಷ್ಯನ ತಲೆಯನ್ನು ತೆಗೆದುಕೊಳ್ಳಲೇ ಇಲ್ಲ!
ಮಂತ್ರಿ ಅರಮನೆಗೆ ಬಂದು ಅರಸನಲ್ಲಿ ವಿಷಯವನ್ನು ತಿಳಿಸಿದರು. ಕೊನೆಗೆ ರಾಜ ಕೇಳಿದ: ಮಂತ್ರಿಗಳೇ ನನ್ನ ಸಾವಿನ ಬಳಿಕ ನನ್ನ ತಲೆಯನ್ನು ನೀವು ಇಟ್ಟುಕೊಳ್ಳುವಿರಾ?
ಮಂತ್ರಿ ಬೇಸರ, ತಪ್ಪಿತಸ್ಥ ಭಾವನೆಯಿಂದ ತಲೆ ತಗ್ಗಿಸಿದ.
ಅರಸ ಹೇಳಿದ: ಮಂತ್ರಿಗಳೇ ನಿಮಗೆ ಅಪಮಾನವಾಗಲಿ ಎಂದು ಇದನ್ನು ನಾನು ಮಾಡಿದ್ದಲ್ಲ. ಒಂದು ಪೈಸೆಗೂ ಬೆಲೆ ಇಲ್ಲದ ಈ ತಲೆಯನ್ನು ನಾನು ಒಬ್ಬ ಸನ್ಯಾಸಿಯ ಪದತಲಕ್ಕಿಟ್ಟಿದ್ದೇನೆ. ಅದರಿಂದ ಯಾವ ನಷ್ಟವೂ ಆಗಲಿಲ್ಲ. ನಿಜವೆಂದರೆ, ಅವರ ಆಶೀರ್ವಾದ ನನಗೆ ಸಿಕ್ಕಿತು. ಹಮ್ಮು ಬಿಮ್ಮು ಅಹಂಕಾರಗಳೆಲ್ಲ ನಮಗೆ ಬೇಕಿಲ್ಲ. ಯಾರ ಮುಂದೆ ತಲೆ ಎತ್ತಬೇಕೋ ಅವರ ಮುಂದೆ ತಲೆ ಎತ್ತಿ ಬದುಕೋಣ, ಯಾರ ಮುಂದೆ ತಲೆ ಬಾಗಬೇಕೋ, ಅವರ ಮುಂದೆ ಬಾಗೋಣ.
ಇದನ್ನೂ ಓದಿ | Motivational story | ಆ ಅಂಗಡಿಯಲ್ಲಿ ಹಣ್ಣುಗಳ ಬೆಲೆ ಅಷ್ಟೊಂದು ವ್ಯತ್ಯಾಸ ಯಾಕೆ? ತಿಳಿದಾಗ ಗ್ರಾಹಕ ಕಣ್ಣೀರಾದ!