ಕೃಷ್ಣ ಭಟ್ ಅಳದಂಗಡಿ- motivational stroy
ವಿಶ್ವನಾಥನ ತಂದೆ ಸಣ್ಣ ಊರಲ್ಲಿ ಒಂದು ವೆಲ್ಡಿಂಗ್ ಶಾಪ್ ಇಟ್ಟುಕೊಂಡಿದ್ದರು. 30 ವರ್ಷದ ಹಿಂದೆಲ್ಲ ವೆಲ್ಡಿಂಗ್ ಶಾಪ್‍ಗಳಿಗೆಲ್ಲ ಅಷ್ಟೊಂದು ಡಿಮ್ಯಾಂಡ್ ಇರಲಿಲ್ಲ. ದಿನಕ್ಕೆ ಹನ್ನೆರಡು ಗಂಟೆ ದುಡಿದರೂ ಸಂಸಾರ ಸಾಗಿಸುವಷ್ಟಕ್ಕೆ ಸಾಕಾಗುತ್ತಿತ್ತು.
ವಿಶ್ವನಾಥ್‍ಗೆ ತಾನು ಕಲಿತು ಡಾಕ್ಟರ್ ಆಗಬೇಕು ಎಂಬ ಆಸೆ ಇತ್ತು. ಆದರೆ, ಅವನಿಗೆ ಅಷ್ಟೇನೂ ದೊಡ್ಡ ಮಾರ್ಕ್ಸ್ ಬರುತ್ತಿರಲಿಲ್ಲ. ಹೀಗಾಗಿ ಡಾಕ್ಟರ್ ಕಲಿಯಲು ಸೀಟು ಸಿಗಲಿಲ್ಲ. ದೊಡ್ಡ ಮೊತ್ತದ ಡೊನೇಷನ್ ಕೊಟ್ಟು ಸೀಟು ಪಡೆಯುವಷ್ಟು ಅವನ ಅಪ್ಪನಲ್ಲಿ ಹಣವಿರಲಿಲ್ಲ. ಹೀಗಾಗಿ ಅವರು ಪದವಿಯನ್ನು ಸೇರಿಕೊಂಡ. ವಿದ್ಯಾಭ್ಯಾಸ ಮುಗಿದು ಒಂದು ಕಂಪನಿಯಲ್ಲಿ ಕೆಲಸ ಸಿಕ್ಕಿತು.
ಈ ಮಧ್ಯೆ ಹೆತ್ತವರು ಒಂದು ಹೆಣ್ಣು ಹುಡುಕಿ ವಿಶ್ವನಾಥನಿಗೆ ಮದುವೆ ಮಾಡಿದರು. ಇಬ್ಬರು ಪುಟ್ಟ ಗಂಡು ಮಕ್ಕಳಾದವು. ಅಪ್ಪ ಇನ್ನೂ ವೆಲ್ಡಿಂಗ್ ಶಾಪ್ ನಡೆಸುತ್ತಿರುವಾಗಲೇ ವಿಶ್ವನಾಥನ ಸಂಬಳವೂ ಹೆಚ್ಚಾಗಿ ಒಂದಿಷ್ಟು ಆರಾಮದಾಯಕ ಜೀವನಕ್ಕೆಕಾಲಿಟ್ಟ. ಆದರೆ ಯಾವಾಗ ಮಕ್ಕಳ ವಿದ್ಯಾಭ್ಯಾಸವೆಲ್ಲ ಆರಂಭವಾಯಿತೋ ಆಗ ಕೈಕಟ್ಟಲು ಆರಂಭವಾಯಿತು. ಸಂಬಳವನ್ನೆಲ್ಲ ನಿತ್ಯದ ಐಷಾರಾಮಿ ಜೀವನಕ್ಕೆ ಖರ್ಚು ಮಾಡಿದ್ದರಿಂದ ಉಳಿತಾಯವೇನೂ ಇರಲಿಲ್ಲ.
ಅಷ್ಟು ಹೊತ್ತಿಗೆ ಅಪ್ಪನಿಗೆ ವಯಸ್ಸಾಗಿತ್ತು. ವೆಲ್ಡಿಂಗ್ ಕೆಲಸ ಮಾಡುವ ಶಕ್ತಿ ಕಡಿಮೆಯಾಗಿತ್ತು. ಜತೆಗೆ ಅನಾರೋಗ್ಯ ಬೇರೆ. ಚಿಕಿತ್ಸೆಗಾಗಿ ಸ್ವಲ್ಪ ಹಣ ಕೊಡಬಹುದಾ ಮಗಾ ಎಂದು ವಿಶ್ವನಾಥನನ್ನು ಕೇಳಿದರು.
ಆದರೆ, ಈ ಮಾತು ಕೇಳಿ ಮೊದಲೇ ಹಣಕಾಸು ಮುಗ್ಗಟ್ಟಿನಲ್ಲಿದ್ದ ವಿಶ್ವನಾಥನಿಗೆ ಸಿಟ್ಟುಬಂತು. `ʻʻನೀವು ನನಗೆ ಸರಿಯಾದ ಶಿಕ್ಷಣ ಕೊಡಿಸಲಿಲ್ಲ. ದೊಡ್ಡ ಶಾಲೆಗೆ ಸೇರಿಸಲಿಲ್ಲ. ನನಗೆ ಸಾಧಾರಣ ಮಾರ್ಕ್ಸ್ ಬರುತ್ತಿದ್ದರೂ ಒಂದು ಟ್ಯೂಷನ್ ಕೊಡಿಸಲಿಲ್ಲ. ಹಾಗೆಲ್ಲ ಮಾಡಿದ್ದರೆ ನನಗೆ ಲಕ್ಷಾಂತರ ರೂ. ಸಂಬಳದ ಉದ್ಯೋಗ ಸಿಗುತ್ತಿತ್ತು. ಈಗ ನಾನೇ ಮುಗ್ಗಟ್ಟಿನಲ್ಲಿದ್ದೇನೆ, ನಿಮಗೆ ಎಲ್ಲಿಂದ ಕೊಡಲಿ. ಸ್ವಲ್ಪ ಜಾಗ ಮಾರಿ ನೀವೇ ನನಗೆ ಈಗ ಹಣ ಕೊಡಬೇಕು” ಎಂದು ಹೇಳಿದ.
ವಿಶ್ವನಾಥನ ಅಪ್ಪ-ಅಮ್ಮನಿಗೆ ಮಾತೇ ಬರಲಿಲ್ಲ. ಮಗ ಬೆಳೆದು ನಿಂತು ಆಸರೆಯಾಗುತ್ತಾನೆ ಎಂಬ ಆಸೆ ಕಮರಿ ಹೋಗಿತ್ತು.
ಇದಾಗಿ ಕೆಲವು ದಿನ ಕಳೆದಿತ್ತು. ವಿಶ್ವನಾಥ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಸುಮಾರು ಹತ್ತು ವರ್ಷದ ಬಾಲಕನೊಬ್ಬ ಮಾರ್ಗದ ಬದಿಯಲ್ಲಿ ನಿಂತು ಪೆನ್ನುಗಳನ್ನು ಮಾರಾಟ ಮಾಡುತ್ತಿದ್ದ. ವಿಶ್ವನಾಥನ ಬಳಿಗೆ ಬಂದು ʻʻಪೆನ್ನು ತಗೊಳ್ಳಿ ಸರ್ʼʼ ಎಂದ. ಆಗ ವಿಶ್ವನಾಥ `ʻಶಾಲೆಗೆ ಹೋಗಲ್ವಾ ನೀನು? ಈ ವಯಸ್ಸಲ್ಲಿ ಕೆಲಸ ಮಾಡೋದು ತಪ್ಪು. ನಿನ್ನ ಅಪ್ಪ-ಅಮ್ಮ ಏನು ಮಾಡ್ತಾರೆ’ ಎಂದು ಕೇಳಿದ.
ಹುಡುಗ ಹೇಳಿದ: ನನ್ನ ತಂದೆಗೆ ಒಂದು ವರ್ಷದ ಹಿಂದೆ ಒಂದು ಅಪಘಾತ ಆಯಿತು. ಅದರಲ್ಲಿ ಅವರ ಒಂದು ಕೈಯೇ ಕತ್ತರಿಸಿಹೋಯ್ತು. ಅವರಿಗೆ ಕೆಲಸ ಮಾಡಲು ಆಗುವುದಿಲ್ಲ. ನನ್ನ ಅಮ್ಮ ಕೆಲವು ಮನೆಗಳಲ್ಲಿ ಕಸಮುಸುರೆ ಮಾಡ್ತಾರೆ. ನಾನು ಶಾಲೆ ಮುಗಿಸಿ ಸಂಜೆ ಐದರಿಂದ ಎಂಟು ಗಂಟೆವರೆಗೆ ಪೆನ್ನು, ಗೊಂಬೆಗಳನ್ನು ಮಾರಾಟ ಮಾಡ್ತೇನೆ. ರಾತ್ರಿ ಹೋಗಿ ಓದ್ತೇನೆ- ಅಂದ.
ವಿಶ್ವನಾಥನಿಗೆ ನಾಚಿಕೆ ಆಯಿತು. ತಾನು ಬೆಳೆದು ಇಷ್ಟು ದೊಡ್ಡವನಾದರೂ ಅಪ್ಪ-ಅಮ್ಮನಿಗೆ ಆಸರೆಯಾಗಿ ನಿಲ್ಲಲಿಲ್ಲ. ಇಷ್ಟು ಸಣ್ಣ ಹುಡುಗ ಕಲಿಕೆಯ ಜತೆಗೆ ಕೆಲಸ ಮಾಡ್ತಾ ಸಹಾಯ ಮಾಡ್ತಾ ಇದ್ದಾನೆ. ನಾನು ಇನ್ನು ಕೂಡಾ ನನಗೆ ಸರಿಯಾದ ವಿದ್ಯಾಭ್ಯಾಸ ಕೊಡಿಸಲಿಲ್ಲ ಎಂದು ದೂರುತ್ತಲೇ ಕಳೆದುಹೋಗುತ್ತಿದ್ದೇನೆ ಎಂದು ಭಾವಿಸಿ ನೊಂದುಕೊಂಡ. ಹುಡುಗನ ಕೈಯಿಂದ ಕೆಲವು ಪೆನ್ನು ಖರೀದಿಸಿ ಮಕ್ಕಳಿಗೆ ಕೊಟ್ಟ. ʻʻನಾಳೆನೇ ಊರಿಗೆ ಹೋಗೋಣ್ವಾ.. ಅಪ್ಪ-ಅಮ್ಮನನ್ನು ನೋಡಬೇಕು ಅನಿಸ್ತಾ ಇದೆʼʼ ಅಂತ ಹೆಂಡತಿಗೆ ಹೇಳಿದ.
ಇದನ್ನೂ ಓದಿ | Motivational story | ಸಂಭ್ರಮಿಸಲು ಸಾಧ್ಯವಾಗದ್ದು ಸಾಧನೆಯೇ ಅಂತ ಅನಿಸೋ ಹೊತ್ತಿಗೆ ಎಲ್ಲವೂ ಮುಗಿದಿತ್ತು!