ಕೃಷ್ಣ ಭಟ್ ಅಳದಂಗಡಿ- motivational story
ಒಂದೂರಿನಲ್ಲಿ ಒಬ್ಬ ರೈತರಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳು. ವಿದ್ಯಾನಂದ ಮತ್ತು ಸದಾನಂದ. ತಂದೆಯ ಮರಣಾನಂತರ ಅವರಿಬ್ಬರೂ ಭೂಮಿಯನ್ನು ಸಮಪಾಲು ಮಾಡಿಕೊಂಡು ಕೃಷಿ ಚಟುವಟಿಕೆ ನಡೆಸಿಕೊಂಡು ಅನ್ಯೋನ್ಯವಾಗಿಯೇ ಇದ್ದರು.
ಕಾಲ ಕಳೆಯುತ್ತಿದ್ದಂತೆಯೇ, ವಿದ್ಯಾನಂದನಿಗೆ ಮದುವೆಯಾಯಿತು, ಮಕ್ಕಳೂ ಆದವು. ಆದರೆ, ಕಾರಣಾಂತರಗಳಿಂದ ಸದಾನಂದ ಒಂಟಿಯಾಗಿಯೇ ಉಳಿದ. ವಿದ್ಯಾನಂದ ತಮ್ಮನಿಗೆ ಮದುವೆ ಮಾಡಿಸಲು ಪ್ರಯತ್ನ ಮಾಡಿದರೂ ಫಲಿಸಲಿಲ್ಲ.
ಅದೊಂದು ದಿನ ಕಟಾವು ಮುಗಿಸಿ ಎಲ್ಲ ಧಾನ್ಯವನ್ನು ಗೋದಾಮಿಗೆ ಹಾಕಿ ಬಂದಿದ್ದ ಸದಾನಂದ. ರಾತ್ರಿ ಒಂಟಿಯಾಗಿ ಮನೆಯಂಗಳದಲ್ಲಿ ಆಕಾಶ ನೋಡುತ್ತಾ ಮಲಗಿದ್ದ. ಥಟ್ಟನೆ ಅವನಿಗನಿಸಿತು. ನಮಗಿಬ್ಬರಿಗೂ ಒಂದೇ ಪ್ರಮಾಣದ ಭೂಮಿ ಇದೆ. ಅಣ್ಣನಿಗೆ ಆರು ಜನ ಮಕ್ಕಳು. ಅವರೆಲ್ಲರಿಗೆ ಅದೇ ಭೂಮಿಯಿಂದ ಬರುವ ಫಲದಿಂದ ಅನ್ನ ನೀಡಬೇಕು. ನಾನಾದರೋ ಒಂಟಿ ಜೀವ. ಹೇಗಾದರೂ ಬದುಕಬಹುದು. ಅವನಿಗೆ ಸ್ವಲ್ಪ ಜಾಸ್ತಿ ಭೂಮಿ ಇದ್ದಿದ್ದರೆ ಚೆನ್ನಾಗಿತ್ತು. ಅವನಿಗೆ ಸ್ವಲ್ಪ ಜಾಸ್ತಿ ಧಾನ್ಯ ಸಿಕ್ಕಿದರೂ ಆದೀತಲ್ವಾ?” ಎಂದು ಯೋಚನೆ ಮಾಡಿದ.
ಈ ಯೋಚನೆ ಬಂದ ಬಳಿಕ ಅವನಿಗೆ ನಿದ್ದೆ ಬರಲಿಲ್ಲ. ಧಿಗ್ಗನೆ ಎದ್ದವನೇ ಗದ್ದೆಯ ತುದಿಯಲ್ಲಿದ್ದ ತನ್ನ ಗೋದಾಮಿನಿಂದ ದೊಡ್ಡದೊಂದು ಚೀಲ ಜೋಳವನ್ನು ಪಕ್ಕದಲ್ಲಿದ್ದ ಅಣ್ಣನ ಗೋದಾಮಿಗೆ ಸೇರಿಸಿ ಬಂದ. ಮನಸು ತುಂಬ ನಿರುಮ್ಮಳವಾಯಿತು.
ಅದೇ ಹೊತ್ತಿಗೆ ಇತ್ತ ಹೆಂಡತಿ ಮತ್ತು ಮಕ್ಕಳೊಂದಿಗೆ ಮಲಗಿದ್ದ ವಿದ್ಯಾನಂದನ ತಲೆಯಲ್ಲಿ ಇನ್ನೇನೋ ಓಡುತ್ತಿತ್ತು. ನನಗೂ ನನ್ನ ತಮ್ಮನಿಗೂ ಒಂದೇ ಪ್ರಮಾಣದ ಭೂಮಿ ಇರುವುದು ಅಷ್ಟೇನೂ ಸರಿಯಾದ ಲೆಕ್ಕಾಚಾರವಲ್ಲ. ನನಗೆ ನನ್ನ ವೃದ್ಧಾಪ್ಯದಲ್ಲಿ ನೋಡಿಕೊಳ್ಳಲು ಹೆಂಡತಿ ಮಕ್ಕಳಾದರೂ ಇದ್ದಾರೆ. ಅವನಿಗೆ ಯಾರಿದ್ದಾರೆ. ಅವನಿಗೆ ಸ್ವಲ್ಪ ಜಾಸ್ತಿ ಧಾನ್ಯ ಸಿಕ್ಕಿದರೆ, ಅದನ್ನು ಮಾರಿ ಸ್ವಲ್ಪ ದುಡ್ಡು ಮಾಡಿಟ್ಟುಕೊಂಡರೆ ಕೈಸೋತಾಗ ಪ್ರಯೋಜನಕ್ಕೆ ಬರಬಹುದು,” ಅಂದುಕೊಂಡ.
ಯೋಚನೆ ಬಂದಿದ್ದೇ ತಡ ಎದ್ದು ಗದ್ದೆಯ ತುದಿಗೆ ಹೋಗಿ ಒಂದು ದೊಡ್ಡ ಚೀಲ ಜೋಳವನ್ನು ತನ್ನ ಗೋದಾಮಿನಿಂದ ತಮ್ಮನ ಗೋದಾಮಿಗೆ ಹಾಕಿಬಂದ.
ಬೆಳಗ್ಗೆ ಎದ್ದು ಬಂದು ನೋಡಿದಾಗ ಇಬ್ಬರಿಗೂ ಆಶ್ಚರ್ಯವಾಗಿತ್ತು. ಹಿಂದಿನ ದಿನ ಎಷ್ಟಿತ್ತೋ ಅಷ್ಟೇ ಚೀಲಗಳಿವೆ. ಅವರಿಬ್ಬರೂ ಯೋಚನೆ ಮಾಡಿದರು. `ಇವತ್ತು ರಾತ್ರಿ ಐದು ಚೀಲ ಜೋಳ’ ಹಾಕಬೇಕು ಅಂತ. ಹಾಗೆಯೇ ಇಬ್ಬರೂ ಒಬ್ಬನ ಗೋದಾಮಿನಿಂದ ಇನ್ನೊಬ್ಬನ ಗೋದಾಮಿಗೆ ಹಾಕಿಬಂದರು.
ಎರಡನೇ ದಿನವೂ ಒಟ್ಟಾರೆ ಚೀಲಗಳ ಸಂಖ್ಯೆ ಅಷ್ಟೇ ಇದ್ದಿದ್ದು ನೋಡಿ ಇಬ್ಬರಿಗೂ ಅಚ್ಚರಿ.
ಮೂರನೇ ರಾತ್ರಿ ತಮ್ಮ ಮನೆಯಿಂದಲೇ ದೊಡ್ಡದೊಂದು ಗಾಡಿಯಲ್ಲಿ ಜೋಳ ಪೇರಿಸಿಕೊಂಡು ಗೋದಾಮಿನ ಕಡೆಗೆ ಬಂದ. ಅಣ್ಣ ವಿದ್ಯಾನಂದನೂ ಯಾಕೋ ಅದೇ ಪ್ಲ್ಯಾನ್ ಮಾಡಿದ್ದ. ತಮ್ಮ ಮೊದಲು ಬಂದಿದ್ದ. ತನ್ನ ಗೋದಾಮಿನ ಕಡೆಗೆ ಯಾರೋ ಹೋಗುತ್ತಿರುವುದನ್ನು ನೋಡಿ ವೇಗವಾಗಿ ಗಾಡಿ ಓಡಿಸಿದ. ಹತ್ತಿರವಾದಾಗ ಇಬ್ಬರೂ ಮುಖ ಮುಖ ನೋಡಿಕೊಂಡರು. ಏನೂ ಮಾತನಾಡದೆ ಇಬ್ಬರೂ ತಬ್ಬಿಕೊಂಡು ಕಣ್ಣೀರಾದರು.
ಇದನ್ನೂ ಓದಿ| Motivational story: ಸ್ವಲ್ಪ ನೋವು ಸಹಿಸಿಕೊಂಡಿದ್ದರೆ ನೀನೇ ಮೂರ್ತಿಯಾಗುತ್ತಿದ್ದೆ!