ಕೃಷ್ಣ ಭಟ್ ಅಳದಂಗಡಿ-Motivational story
ಗೌತಮ ಬುದ್ಧ ಊರೂರು ಸಂಚಾರ ನಡೆಸುತ್ತಾ ಒಂದು ಗ್ರಾಮವನ್ನು ತಲುಪಿದರು. ಅಲ್ಲಿ ಅವರ ಮಾತುಗಳನ್ನು ಕೇಳಲು ಅರಳಿ ಕಟ್ಟೆಯ ಕೆಳಗೆ ಸಾಕಷ್ಟು ಜನರು ಸೇರಿದ್ದರು. ಗೌತಮ ಬುದ್ಧ ತಾಳ್ಮೆ ಮತ್ತು ಕ್ಷಮೆಯ ಬಗ್ಗೆ ಆವತ್ತು ಮಾತನಾಡಿದರು.
ʻʻಕೋಪ ಅನ್ನುವುದು ಬೆಂಕಿಯ ಹಾಗೆ. ಬೇರೆಯವರನ್ನು ಸುಡಬೇಕು ಅಂತ ನಾವು ಹಾಕೋ ಬೆಂಕಿ ನಮ್ಮನ್ನೇ ಸುಟ್ಟು ಭಸ್ಮ ಮಾಡುತ್ತದೆ. ಹಾಗಾಗಿ ಕೋಪವನ್ನು ನಾವೇ ತಣಿಸಿಕೊಳ್ಳಬೇಕು, ತಪ್ಪು ಮಾಡಿದವರನ್ನು ಕ್ಷಮಿಸುವ ಗುಣ ಬೆಳೆಸಿಕೊಳ್ಳಬೇಕು,ʼʼ ಎಂದು ಹೇಳಿದರು.
ಆ ಕಾರ್ಯಕ್ರಮದಲ್ಲಿ ಒಬ್ಬ ಮುಂಗೋಪಿ ಇದ್ದ. ಅವನಿಗೆ ಗೌತಮ ಬುದ್ಧ ಈ ಮಾತುಗಳನ್ನೆಲ್ಲ ತನಗೇ ಹೇಳುತ್ತಿದ್ದಾರೆ ಅನಿಸಿತು. ಅವನು ಎದ್ದು ನಿಂತು ʻʻನೀನೊಬ್ಬ ದೊಡ್ಡ ಆಷಾಢಭೂತಿ ಮನುಷ್ಯ. ನಿನ್ನ ಸ್ವಾರ್ಥಕ್ಕಾಗಿ ಸುಳ್ಳುಗಳನ್ನು ಹರಡುತ್ತಿದ್ದೀಯಾ.. ನೀನು ದೊಡ್ಡ ಮನುಷ್ಯ ಆಗಬೇಕು ಅಂತ ಈ ತರ ಜನರನ್ನು ಮರುಳು ಮಾಡುತ್ತಿದ್ದೀಯಾ? ಸಿಟ್ಟಿನಿಂದ ಅರಮನೆ ಬಿಟ್ಟು ಬಂದವನಲ್ಲವೇ ನೀನು.. ನಿಂಗೆ ನಾಚಿಕೆ ಆಗಲ್ವಾ?ʼʼ ಎಂದು ಕೇಳಿದ.
ಬುದ್ಧ ಇದನ್ನೆಲ್ಲ ಕೇಳಿದ ಬಳಿಕವೂ ಮುಗುಳ್ನಗುತ್ತಲೇ ಇದ್ದರು. ಇದರಿಂದ ಆ ವ್ಯಕ್ತಿಯ ಸಿಟ್ಟು ಇನ್ನಷ್ಟೂ ಹೆಚ್ಚಿತು. ಅವನು ಬುದ್ಧನ ಮುಖಕ್ಕೇ ಉಗುಳಿ ಹೊರಟುಹೋದ.
ಗೌತಮ ಬುದ್ಧರು ಇನ್ನೂ ನಗುತ್ತಲೇ ಇದ್ದರು. ಆ ಗ್ರಾಮದ ಪ್ರವಚನ ಮುಗಿಸಿ ಶಿಷ್ಯರೊಂದಿಗೆ ಮುಂದಿನ ಊರಿಗೆ ಪ್ರಯಾಣಿಸಿದರು
ಇತ್ತ ಮನೆಗೆ ಹೋದ ಮುಂಗೋಪಿಗೆ ಆ ರಾತ್ರಿ ನಿದ್ದೆಯೇ ಬರಲಿಲ್ಲ. ಸಿಟ್ಟೆಲ್ಲ ಇಳಿದ ಮೇಲೆ ಛೆ.. ನಾನು ಹಾಗೆಲ್ಲ ಮಾಡಬಾರದಿತ್ತು ಅನಿಸತೊಡಗಿತು. ಸಿಟ್ಟಿನ ಕೈಗೆ ಬುದ್ಧಿಯನ್ನು ಕೊಟ್ಟು ತಾನು ಅನುಭವಿಸಿದ ಸಂಕಷ್ಟಗಳೆಲ್ಲ ನೆನಪಾದವು. ಬುದ್ಧನನ್ನು ಭೇಟಿಯಾಗಿ ಕ್ಷಮೆ ಕೇಳಬೇಕು ಎಂದು ತೀರ್ಮಾನಿಸಿದ.
ಮರುದಿನ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಹಿಂದಿನ ದಿನ ಪ್ರವಚನ ನಡೆದಲ್ಲಿಗೆ ಹೋದ. ಆದರೆ, ಬುದ್ಧ ಅಲ್ಲಿರಲಿಲ್ಲ. ಪಕ್ಕದೂರಿಗೆ ಹೋಗಿದ್ದಾಗಿ ಅಲ್ಲಿನ ಜನ ಹೇಳಿದರು. ಇವನೂ ನಡೆದುಕೊಂಡೇ ಅಲ್ಲಿಗೆ ತಲುಪಿದ.
ಅಲ್ಲಿ ಗೌತಮ ಬುದ್ಧ ಪ್ರವಚನ ನೀಡುತ್ತಿದ್ದರು. ಮುಂಗೋಪಿ ವ್ಯಕ್ತಿ ಓಡಿ ಹೋಗಿ ಅವರ ಕಾಲು ಹಿಡಿದುಕೊಂಡ, ನಾನು ಮಾಡಿದ್ದು ತಪ್ಪಾಯಿತು, ಕ್ಷಮಿಸಿ ಬಿಡಿ ಎಂದು ಕೇಳಿದ.
ಗೌತಮ ಬುದ್ಧರು ಆಶ್ಚರ್ಯದಿಂದ ಕೇಳಿದರು: ಯಾರಪ್ಪಾ ನೀನು, ನನ್ನ ಕಾಲು ಯಾಕೆ ಹಿಡಿದುಕೊಂಡಿದ್ದೀಯಾ? ನಾನೇಕೆ ಕ್ಷಮಿಸಬೇಕು, ಎದ್ದೇಳು ಕಂದಾ..
ಆಗ ಮುಂಗೋಪಿ ಕೇಳಿದ: ನಿಮಗೆ ನನ್ನ ಪರಿಚಯ ಇಲ್ವೇ? ನಿನ್ನೆ ಪಕ್ಕದೂರಿನಲ್ಲಿ ನಿಮ್ಮ ಜತೆ ಕೆಟ್ಟದಾಗಿ ನಡೆದುಕೊಂಡೆನಲ್ಲಾ.. ಅವನು ಸ್ವಾಮಿ ನಾನು. ನಾನು ಮಾಡಿದ್ದು ತಪ್ಪು ಅಂತ ಗೊತ್ತಾಯಿತು. ನಿನ್ನ ಕ್ಷಮೆ ಕೇಳಲು ಬಂದಿದ್ದೇನೆ.
ಆಗ ಗೌತಮ ಬುದ್ಧರು ಶಾಂತವಾಗಿ ಹೇಳಿದರು: ನೀನು ಮಾತನಾಡುತ್ತಿರುವ ನಿನ್ನೆ ಎನ್ನುವುದಿದೆಯಲ್ಲಾ.. ಅದು ಕಳೆದು ಹೋಗಿದೆ ತಮ್ಮಾ.. ನಾನಂತೂ ಆ ಎಲ್ಲ ಘಟನೆಗಳನ್ನು ಮರೆತು ಮುಂದೆ ಬಂದಿದ್ದೇನೆ. ನಾನು ವರ್ತಮಾನದಲ್ಲಿದ್ದೇನೆ. ನೀನ್ಯಾಕೆ ಇನ್ನೂ ನಿನ್ನೆಯಲ್ಲೇ ಕಳೆದುಹೋಗಿದ್ದಿ? ನಿನಗೆ ನಿನ್ನೆಯ ಘಟನೆಗಳ ಬಗ್ಗೆ ನಿಜಕ್ಕೂ ಪಶ್ಚಾತ್ತಾಪ ಇದ್ದರೆ ನಿನ್ನ ಹೃದಯ ಪರಿಶುದ್ಧವಾಗಿದೆ ಎಂದೇ ಅರ್ಥ. ಅದನ್ನು ಬಿಟ್ಟು ಬಿಡು, ಇವತ್ತು ಒಳ್ಳೆಯವನಾಗಿದ್ದೀಯಲ್ಲಾ.. ಅದನ್ನು ಉಳಿಸಿಕೋ.. ಅಷ್ಟೇ ಸಾಕು. ನಿನ್ನೆ ಆಗಿ ಹೋಗಿದ್ದನ್ನು ನೆನಪಿಸಿಕೊಂಡು ಯಾಕೆ ಈಗಿರುವ ಸಂತೋಷ ಹಾಳು ಮಾಡಿಕೊಳ್ಳುತ್ತೀಯಾ?
ಗೌತಮ ಬುದ್ಧರ ಮಾತು ಕೇಳಿ ಆ ವ್ಯಕ್ತಿಯ ಕಣ್ಣಲ್ಲಿ ಧಾರಾಕಾರ ನೀರು ಸುರಿಯಿತು. ʻʻಇಲ್ಲ ಸ್ವಾಮಿ.. ಇನ್ಯಾವತ್ತೂ ಅನಗತ್ಯವಾಗಿ ಸಿಟ್ಟು ಮಾಡಿಕೊಳ್ಳುವುದಿಲ್ಲ. ಪ್ರೀತಿ, ಕರುಣೆಗೆ ನನ್ನ ಹೃದಯದಲ್ಲಿ ಜಾಗ ಕೊಡುತ್ತೇನೆ. ನನ್ನ ಬದುಕನ್ನು ಸುಂದರಗೊಳಿಸಿಕೊಳ್ಳುತ್ತೇನೆ. ಪಶ್ಚಾತ್ತಾಪಪಡುವ ಯಾವ ಕೆಲಸವನ್ನೂ ಮಾಡುವುದಿಲ್ಲʼʼ ಎಂದು ಮಂಡಿಯೂರಿದ.
ಇದನ್ನೂ ಓದಿ | Motivational story | ಮಾಸಿ ಹೋದ ಬಟ್ಟೆ ಧರಿಸಿ ಬಂದಿದ್ದ ಅವರು ಮುಂದೆ ಮಹಾಶಿಕ್ಷಣ ಸಂಸ್ಥೆ ಕಟ್ಟಿದರು!