ಕೃಷ್ಣ ಭಟ್ ಅಳದಂಗಡಿ- motivational story
ನಾನು ಇತ್ತೀಚೆಗಷ್ಟೇ ಶ್ರೀನಗರದಿಂದ ಜಯನಗರಕ್ಕೆ ಮನೆ ಶಿಫ್ಟ್ ಮಾಡಿದ್ದೆ. ಹಾಗಾಗಿ, ರೇಷನ್, ತರಕಾರಿ ಎಲ್ಲ ಎಲ್ಲಿಂದ ತರೋದು ಅನ್ನೋದರ ಬಗ್ಗೆ ಹುಡುಕಾಟ ಮಾಡಬೇಕಿತ್ತು. ಒಂದೆರಡು ಅಂಗಡಿಗಳನ್ನು ಚೆಕ್ ಮಾಡಿ ಇಲ್ಲಿಂದ ಓಕೆ ಅಂತ ಫೈನಲ್ ಆಗಿತ್ತು. ಬಟ್ಟೆ ವಾಷ್‍ಗೆ ಕೊಡುವುದು ಎಲ್ಲಿ ಅನ್ನೋದರ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಆಗಿರಲಿಲ್ಲ.
ಶ್ರೀನಗರದಲ್ಲಿದ್ದಾಗ ನಮಗೊಬ್ಬ ಒಳ್ಳೆಯ ದೋಭಿ ಸಿಕ್ಕಿದ್ದ. ಸಮಯಕ್ಕೆ ಸರಿಯಾಗಿ ಕೊಡ್ತಿದ್ದ. ಒಂದು ರೀತಿಯಲ್ಲಿ ಫ್ಯಾಮಿಲಿಗೇ ಆತ್ಮೀಯವಾಗಿದ್ದ. ಇಲ್ಲಿ ಯಾರಿಗೆ ಕೊಡುವುದು ಅಂತ ಯೋಚನೆ ಮಾಡ್ತಾ ಹುಡುಕ್ತಾ ಇದ್ದೆ. ಆವತ್ತು ಒಂದಿಷ್ಟು ಬಟ್ಟೆ ಹಿಡಿದುಕೊಂಡು ಒಂದು ಅಂಗಡಿಗೆ ಹೋದೆ. ತುಂಬ ದಿನದಿಂದ ವಾಷ್ ಮಾಡದೆ ಬಟ್ಟೆಗಳೆಲ್ಲ ಖಾಲಿ ಆಗಿದ್ದವು. `ಸ್ವಾಮೀ ಇದಿಷ್ಟನ್ನು ನಾಳೆಗೆ ವಾಷ್ ಮಾಡಿಕೊಡಬಹುದಾ?’ ಎಂದು ನನ್ನ ಸಮಸ್ಯೆಯನ್ನು ಹೇಳಿದೆ. ಅಲ್ಲಿ ಕೆಲಸ ಮಾಡುತ್ತಿದ್ದವನು ನನ್ನ ಮಾತಿನ ಬಗ್ಗೆ ಹೆಚ್ಚು ಗಮನ ಕೊಟ್ಟಂತೆ ಕಾಣಿಸಲಿಲ್ಲ. ಮತ್ತೊಮ್ಮೆ ಕೇಳಿದೆ. ಆಗ ಅವನು ʻಈಗ ಕೆಲಸಕ್ಕೆಲ್ಲ ಜನ ಸಿಗುದಿಲ್ಲರಿ. ನಾಳೆ ಕೊಡ್ಲಿಕೆ ಆಗುವುದಿಲ್ಲ. ಎರಡು ದಿನ ಬಿಟ್ಟು ಬನ್ನಿ’ ಅಂದ. ಒಂದೆರಡಾದರೂ ಕೊಡಬಹುದಾ ನೋಡಿ ಅಂತ ಮತ್ತೆ ಕೇಳಿಕೊಂಡೆ. ಅವನು ನನ್ನ ಕಡೆಗೆ ನಿರ್ಲಕ್ಷ್ಯದ ನೋಟ ಬೀರಿದ. `ಆಗಲೇ ʻಹೇಳಿದ್ದು ಕೇಳಿಸಲಿಲ್ವಾ’ ಅನ್ನೋ ತರ ಇತ್ತು ಅವನ ಧ್ವನಿ.
ಏನು ಮಾಡೋದಪ್ಪಾ.. ನಾಳೆಗೆ ಡ್ರೆಸ್ ಆಗಬೇಕು ಅಂತ ಯೋಚನೆ ಮಾಡ್ತಾ ಮುಂದೆ ಹೋದೆ. ಇನ್ನೊಂದು ಬೋರ್ಡ್ ಕಂಡಿತು. ಅಲ್ಲಿ ಹೋಗಿ ಎದುರು ನಿಂತು ವಿಷಯ ಹೇಳಬೇಕು ಅನ್ನುವಷ್ಟರಲ್ಲಿ ಒಳಗಿನಿಂದ ʻಗುಡ್ ಆಫ್ಟರ್ ನೂನ್ ಸರ್’ ಅಂತ ಯುವಕನೊಬ್ಬನ ಧ್ವನಿ. ನಾನು ಮರು ನಮಸ್ಕಾರ ಹೇಳುವಷ್ಟರಲ್ಲಿ ʻಹೇಗಿದಿರಾ ಸರ್’ ಅಂದ. ನಾನು ಬಟ್ಟೆಗಳನ್ನು ಕೌಂಟರ್ ಟೇಬಲ್ ಮೇಲೆ ಇಡುತ್ತಿದ್ದಂತೆಯೇ ʻನಿಮ್ಮನ್ನು ಮೊದಲು ನೋಡಿದ ಹಾಗಿಲ್ಲ. ನೀವು ನಮ್ಮ ಅಂಗಡಿಗೆ ಬರುತ್ತಿರುವುದು ಫಸ್ಟ್ ಟೈಮಾ ಸರ್’ ಅಂತ ಅವನೇ ಕೇಳಿದ. ನಾನು ʻಹೌದು, ಪಕ್ಕದ ಬೀದಿಗೆ ಕೆಲವು ದಿನದ ಹಿಂದಷ್ಟೇ ಬಂದೆʼ ಅಂದೆ.
ʻಹೌದಾ ಸರ್.. ನಮ್ಮ ಅಂಗಡಿಗೆ ಬಂದಿದ್ದು ಖುಷಿ ಆಯ್ತು ಸರ್. ಎಷ್ಟಿದೆ ಸರ್ ಬಟ್ಟೆ.. ಯಾವಾಗಕ್ಕೆ ಬೇಕು, ತಕ್ಷಣಕ್ಕೆ ಯಾವುದಾದರೂ ಬೇಕಾ’ ಎಂದು ನನ್ನ ಮನದಿಂಗಿತ ಅರಿತಂತೆ ಅವನೇ ಕೇಳಿದ.
ನಾನು ಅವನ ಅವನ ಅಂಗಡಿಗೆ ಹೋಗಿ ಇನ್ನೂ ಒಂದು ನಿಮಿಷ ಆಗಿಲ್ಲ. ಆದರೆ, ಅವನು ನನ್ನನ್ನು ಜನ್ಮಾಂತರದ ಗೆಳೆಯನೇನೋ ಎಂಬಂತೆ ವಿಚಾರಿಸಿಕೊಳ್ಳುತ್ತಿದ್ದ! ನಂಗೂ ಹಿತ ಅನಿಸಿತು. `ʻಸುಮ್ನೆ ನೋಡ್ಕೊಂಡು ಹೋಗುವಾಂತ ಬಂದೆ. ಇನ್ನೂ ಇದೆ.. ಮುಂದಿನ ಸಲ ತರ್ತೇನೆ. ನಂಗೆ ಒಂದು ಸೆಟ್ ಡ್ರೆಸ್ ನಾಳೆ ಸಂಜೆ ಒಳಗೆ ಕೊಡ್ಬೋದಾ’ ಎಂದು ಕೇಳಿದೆ.
ʻಡೋಂಟ್ ವರಿ ಸರ್.. ಎಲ್ಲವನ್ನೂ ನಾಳೆ ಸಂಜೆ ಒಳಗೇ ಕೊಡೋಕೆ ಟ್ರೈ ಮಾಡ್ತೇನೆ. ಇಲ್ಲ ಅಂದ್ರೂ ನೀವು ಹೇಳಿದ ಆ ಸೆಟ್ ರೆಡಿ ಇರುತ್ತೆ. ಯೋಚಿಸ್ಬೇಡಿ’ ಅಂದ. ನಾನು ನಿರಾಳನಾದೆ.
ಕೊನೆಗೆ ಬಟ್ಟೆಗಳನ್ನು ಪಡೆದು ಒಂದು ಚೀಟಿಯಲ್ಲಿ ನಮೂದಿಸಿ ಯಾವುದಕ್ಕೆ ಎಷ್ಟು ಎಂದು ಬಿಲ್ ಹಾಕಿದ. ಬಿಲ್ ನನ್ನ ಕೈಗೆ ಕೊಡ್ತಾ ʻನೀವು ಫಸ್ಟ್ ಟೈಮ್ ಬರ್ತಾ ಇರೋದ್ರಿಂದ ನಿಮಗೆ ಬಿಲ್‍ನಲ್ಲಿ 10% ಡಿಸ್ಕೌಂಟ್ ಹಾಕ್ತೇನೆ ಸರ್. ನಾಳೆ ಬರುವಾಗ ಉಳಿದ ಬಟ್ಟೆನೂ ತನ್ನಿ. ಅದಕ್ಕೂ ಡಿಸ್ಕೌಂಟ್ ಅಪ್ಲೈ ಆಗ್ತದೆ’ ಅಂದ.
ನಾನು ಖುಷಿಯಿಂದ ಹೊರಗೆ ಬಂದೆ. ಮನೆಗೆ ಹೋಗಿ ಯಾವ ರೀತಿಯ ಜನರೆಲ್ಲ ಇರ್ತಾರೆ ಅಂತ ಹೆಂಡ್ತಿ ಹತ್ರ ಹೇಳಬೇಕು ಅಂದ್ಕೊಂಡೆ. ಜತೆಗೆ, ಇನ್ನೂ ನಾಲ್ಕು ಜನ ಫ್ರೆಂಡ್ಸ್ ಗೂ ಇದನ್ನು ಹೇಳಬೇಕು ನಾನು.
ಇದನ್ನೂ ಓದಿ| Motivational story | ಒಂದು ವೇಳೆ ನಂಗೇ ಹೀಗಾಗಿದ್ರೆ, ಮರೆತುಬಿಡು ಅಂದಿದ್ದರೆ ಮರೆತು ಬಿಡ್ತಿದ್ಯಾ ನೀನು?